ಮಾನಸ….ಇದು ಮನಸಿನ ಮಾತು (ಭಾಗ-೧೯)

ಅಂದು ಹೆಣ್ಣುಮಕ್ಕಳು ಕದ್ದು ಮುಚ್ಚಿ ಧೂಮಪಾನ ಮಾಡುತ್ತಿದ್ದರು. ಆದರೆ ಇಂದು ಮುಕ್ತವಾಗಿ ಹೆಣ್ಣು ಮಕ್ಕಳು ಕಾಫಿ ಡೇ ಅಥವಾ ಮತ್ಯಾವುದೇ ರೆಸ್ಟೊರೆಂಟ್ ಗಳಲ್ಲಿ ಧೂಮಪಾನ ಮಧ್ಯಪಾನ ಮಾಡುತ್ತಾರೆ. ಅವರ ಜೀವನ ಅವರದು ಅವರ ಮರಣವೂ ಅವರದೇ. ಆಪ್ತ ಸಮಾಲೋಚಕಿ ಚಂಪಾ ಚಿನಿವಾರ್ ಅವರ ‘ಮಾನಸ….ಇದು ಮನಸಿನ ಮಾತು’ ಅಂಕಣದಲ್ಲಿ ‘ಒಂದು ಬೀಡಿಯ ಕಥೆ’ ತಪ್ಪದೆ ಮುಂದೆ ಓದಿ…

ಈ ಘಟನೆ ಹೆಚ್ಚು ಕಡಿಮೆ 1980/81 ರ ಆಸುಪಾಸಿನಲ್ಲಿ ಇರಬಹುದು. ನಾನಾಗ ಇನ್ನೂ ಮಿಡಲ್ ಸ್ಕೂಲ್ ಓದುತ್ತಿದ್ದೆ. ನಮ್ಮ ಮನೆಗೆ ಚಂದ್ರಮ್ಮ ಅಂತ ಒಬ್ಬರು ಬರುತ್ತಿದ್ದರು. ನಾವು ಚಂದ್ರಮ್ಮ ಅಜ್ಜಿ ಎಂದು ಪ್ರೀತಿಯಿಂದ ಕರೆಯುತ್ತಿದ್ದೆವು. ಅವರು ನಮ್ಮ ಅಜ್ಜಿಯ ಬಳಿ ನಿಮಗೆ ಎಷ್ಟು ಒಳ್ಳೆಯ ಮೊಮ್ಮಕ್ಕಳು ಸೀತಮ್ಮ. ಯಾರೇ ಬಂದರೂ ಎಷ್ಟು ಚೆನ್ನಾಗಿ ಮಾತನಾಡಿಸುತ್ತಾರೆ ಎಂದು ಹೇಳಿ ತಮ್ಮ ಮೊಮ್ಮಕ್ಕಳನ್ನು ಬೈದುಕೊಂಡು, ಮಗ ಸೊಸೆಯ ಮೇಲೆ ಚಾಡಿ ಹೇಳಿಕೊಂಡು ಕೂತಿರುತಿದ್ದರು. ಹತ್ತು ನಿಮಿಷ ಮಾತನಾಡಿ ಸೀತಮ್ಮ ನಾನು ಮಹಡಿ ಮೇಲೆ ಹೋಗಿ ಬರ್ತೀನಿ ಅಂತ ಎದ್ದು ಮಹಡಿ ಏರಿ ಹೋಗಿ ಅರ್ಧ ಗಂಟೆಯಾದ ಮೇಲೆ ಕೆಳಗೆ ಬರುತಿದ್ದರು. ಮನೆಯಲ್ಲಿ ನಮ್ಮ ತಾತ, ತಂದೆ, ಚಿಕ್ಕಪ್ಪ ಯಾರೇ ಇದ್ದರೂ ಬಂದು ಹೋಗುತ್ತಿದ್ದರು. ತುಂಬಾ ವಿಶ್ವಾಸದಿಂದ ಇರುತಿದ್ದರು. ಅವರು ಬಂದರೆ ಮನೆಯವರ್ಯಾರೂ ಏನೂ ಮಾತನಾಡುತ್ತಿರಲಿಲ್ಲ.

ನಾನು ಚಿಕ್ಕವಳು ಇನ್ನೂ, ನಮ್ಮ ಅಮ್ಮನಿಗೆ ಕೇಳುತಿದ್ದೆ ಅದೇನು ಚಂದ್ರಮ್ಮಾ ಅಜ್ಜಿ ಬಂದಾಗಲೆಲ್ಲ ಮೇಲೆ ಹೋಗಿ ಬರ್ತಾರೆ ಎಂದು ಕೇಳುತಿದ್ದೆ. ನಮ್ಮ ಅಮ್ಮ, ಏನೋ ನಿನಗ್ಯಾಕೆ ಸುಮ್ನಿರು ಅದೆಲ್ಲ ಕೇಳಬಾರದು ಅನ್ನುತಿದ್ದರು. ಆದರೂ ಕುತೂಹಲ ನನಗೆ. ಹೀಗೆ ವಾರಕ್ಕೊಮ್ಮೆ ಬಂದು ಹೋಗುತಿದ್ದರು. ಕೆಲವೊಮ್ಮೆ ವಾರಕ್ಕೆರಡು ಬಾರಿ ಬಂದು ಹೋಗುತಿದ್ದರು ಅಥವಾ ನಾನು ಸ್ಕೂಲಿಗೆ ಹೋಗಿದ್ದಾಗ ಎಷ್ಟು ಸಲ ಬರುತಿದ್ದರೋ ತಿಳಿಯದು. ಹೀಗೊಂದು ಬೇಸಿಗೆಯ ರಜಾ ದಿನದಲ್ಲಿ ಬಂದರು, ನಮ್ಮ ಅಜ್ಜಿಯ ಜೊತೆ ಮಾತು ಕತೆಯ ನಂತರ ಮಹಡಿಗೆ ಹೋದರು. ನನಗೇ ತುಂಬಾ ಕುತೂಹಲ, ಅವರು ಯಾಕೆ ಹೋಗುತ್ತಾರೆಂದು ತಿಳಿಯಲೇ ಬೇಕು ಅಂತ ಶಪಥ ತೊಟ್ಟು ಅವರು ಹೋದ ಸ್ವಲ್ಪ ಸಮಯದ ನಂತರ ಯಾರಿಗೂ ತಿಳಿಯದ ಹಾಗೆ ಮೇಲೆ ಹೋದೆ, ಅಲ್ಲಿ ರೂಮಿನ ಹಿಂಭಾಗಕ್ಕೆ ತಾರಸಿ ಇತ್ತು ಅಲ್ಲಿ ಬಾಗಿಲಿಗೆ ಬೆನ್ನು ಮಾಡಿಕೊಂಡು ಕೂತಿದ್ದರು. ಬಾಯಿಂದ ಹೊಗೆ ಬಿಡುತಿದ್ದರು….. ನನಗೆ ತಿಳಿದು ಬಿಟ್ಟಿತು, ಬೇಗ ಬೇಗ ಮೆಟ್ಟಿಲಿಳಿದು ಕೆಳಗೆ ಬಂದು ಕುಳಿತುಬಿಟ್ಟೆ. ನಾನು ಬಂದ ಹತ್ತು ನಿಮಿಷಕ್ಕೆ ಅವರು ಇಳಿದು ಬಂದು…..ಸೀತಮ್ಮ ಬರ್ತೀನಿ ಎಂದು ಹೇಳಿ ಹೊರಟು ಬಿಟ್ಟರು.

ನಾನು ನಮ್ಮ ಅಜ್ಜಿ, ಅಮ್ಮನಿಗೆ…..ನನಗೆ ಗೊತ್ತಾಯ್ತು ಅವರು ಯಾಕೆ ಮಹಡಿ ಗೆ ಹೋಗುತ್ತಾರೆಂದು ಎಂದು ಹೇಳಿ ಜೋರಾಗಿ ನಗತೊಡಗಿದೆ…..ಬೀಡಿ ಸೇದ್ತಾರೆ ಚಂದ್ರಮ್ಮ ಅಜ್ಜಿ ಎಂದೆ…ಚಿಕ್ಕಮ್ಮ, ಸೋದರತ್ತೆ ಎಲ್ಲರೂ ಸೇರಿ ನಗತೊಡಗಿದರು. ಮನೆಯಲ್ಲಿ ದೊಡ್ಡವರಿಗೆಲ್ಲಾ ಗೊತ್ತಿತ್ತು ಈ ವಿಷಯ. ನಮ್ಮ ಅಮ್ಮ ಮಾತ್ರ ಬೈದರು ಹೋಗಬೇಡ ಅಂದ್ರೂ ಹೋಗಿದ್ಯಾ ಅಂತ. ಯಾರಿಗೂ ಹೇಳಬೇಡ ಅಂದರು. ನನಗೋ ಏನೋ ಸಾಧಿಸಿಬಿಟ್ಟೆ ಎಂಬ ಖುಷಿ. ಅಂದಿನಿಂದ ನಾನಿಟ್ಟ ಹೆಸರು ಬೀಡಿ ಚಂದ್ರಮ್ಮಾ ಅಂತ. ಅಜ್ಜಿಯನ್ನು ಕೇಳಿದೆ ಯಾಕೆ ಅವರು ಬೀಡಿ ಸೇದುತ್ತಾರೆ ಅಂತ…..ಏನೋ ಅಭ್ಯಾಸ ಮಾಡಿಕೊಂಡು ಬಂದಿದಾರೆ ಮನೆಯಲ್ಲಿ ಮಗ ಸೊಸೆ ಜೊತೆ ಜಗಳವಾಡಿಕೊಂಡು ಹೀಗೆ ಬಂದು ಸೇದುತ್ತಾರೆ ಅಂದರು.

ವಿಷಯ ಏನೆಂದರೆ ಕಾಲ ಬದಲಾಗಿದೆ, ಕೆಟ್ಟು ಹೋಗಿದೆ ಅಂತ ಹೇಳ್ತೀವಿ….ಎಲ್ಲಾ ಕಾಲ ಒಂದೇ ಎನಿಸುತ್ತದೆ. ಚಂದ್ರಮ್ಮನಂಥ ಎಷ್ಟೋ ಜನವಿದ್ದಿರಬಹುದು ಈಗಲೂ ಇದಾರೆ. ಆದರೆ ಅದು ಜನರ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎಂದು ತಿಳಿಯಬೇಕಾಗುತ್ತದೆ. ಅಂದು ಕದ್ದು ಮುಚ್ಚಿ ಮಾಡುತಿದ್ದರು, ಇಂದು ಮುಕ್ತವಾಗಿ ಹೆಣ್ಣು ಮಕ್ಕಳು ಕಾಫಿ ಡೇ ಅಥವಾ ಮತ್ಯಾವುದೇ ರೆಸ್ಟೊರೆಂಟ್ ಗಳಲ್ಲಿ ಧೂಮಪಾನ ಮಧ್ಯಪಾನ ಮಾಡುತ್ತಾರೆ. ಅದು ಅವರ ವೈಯಕ್ತಿಕ ವಿಷಯ ಎಂದು ಯಾರೂ ಪ್ರಶ್ನೆ ಮಾಡುವ ಹಾಗಿಲ್ಲ. ಪರಿಸ್ಥಿತಿ ಹೀಗಿರುವಾಗ ನಾವೇನಾದರೂ ಕೆಟ್ಟದ್ದು ಅದು ಮಾಡಬೇಡಿ ಎಂದಾಗ, ಯಾವ ಆಧಾರದ ಮೇಲೆ ಹೇಳ್ತೀರ, ನಿಮಗೆ ಅನುಭವ ಆಗಿದೆಯಾ ಎಂದು ಕೇಳುವವರಿದ್ದಾರೆ ಅಥವಾ ಇರುವವರೆಗು ಇದ್ದು ಮಜ ಮಾಡಿಕೊಂಡು ಹೋಗಬೇಕು ಎನ್ನುತ್ತಾರೆ.

ಬೇರೆ ಊರುಗಳಲ್ಲಿ ಹೇಗೋ ತಿಳಿಯದು ಬೆಂಗಳೂರಿನಲ್ಲಿ ಯೂನಿವರ್ಸಿಟಿ ಬಳಿ ಹೆಣ್ಣು ಮಕ್ಕಳು ಗಂಡು ಮಕ್ಕಳ ಜೊತೆ ಒಟ್ಟಿಗೆ ಸಿಗರೇಟ್ ಸೇದುವ ದೃಶ್ಯ ಸರ್ವೇ ಸಾಮಾನ್ಯವಾಗಿದೆ. ಆ ದೃಶ್ಯ ನೋಡುವವರೇ ತಲೆ ತಗ್ಗಿಸಿಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ. ಬೇರೆ ರಾಜ್ಯದಿಂದ ಬಂದ ಹೆಣ್ಣು ಮಕ್ಕಳೇ ಹೆಚ್ಚಾಗಿ ದುಶ್ಟಟಕ್ಕೆ ಬಲಿಯಾಗಿದ್ದಾರೆ. ಇದರಿಂದ ನಮ್ಮ ಕರುನಾಡ ಹೆಣ್ಣು ಮಕ್ಕಳು ಅವರಿಂದ ಪ್ರೇರಿತರಾಗಿ ದುಶ್ಚಟಕ್ಕೆ ಬಲಿಯಾಗುತಿದ್ದಾರೆ. ಇದು ಸಮಾಜದ ಜವಾಬ್ದಾರಿ. ಹೇಗೆ ಸರಿಪಡಿಸಬಹುದು ಎಂಬುದೇ ದೊಡ್ಡ ಸವಾಲಾಗಿದೆ.

ಈ ಸೂಕ್ಷ್ಮವಾದ ವಿಷಯದಲ್ಲಿ ನಾವು ಬುದ್ಧಿ ಹೇಳಿದರೂ ಪ್ರಯೋಜನವಿಲ್ಲ. ನೋಡಿಕೊಂಡು ಸುಮ್ಮನಿರಲೂ ಆಗುವುದಿಲ್ಲ. ಅವರ ಜೀವನ ಅವರದು ಅವರ ಮರಣವೂ ಅವರದೇ. ಮಿತಿ ಮೀರುವ ಮುನ್ನ ಮಿತವಾಗಿ ಬದುಕು ಸಾಗಿಸಿಕೊಂಡು ಹೋಗಲಿ ಎಂಬುದೇ ಸಮಾಜದ ಆಶಯ. ಗಂಡು ಮಕ್ಕಳಿಗೆ ಸರಿಸಮ ಅಂತ ಇಂತಹುದೆಲ್ಲ ಅಭ್ಯಾಸ ಮಾಡಿಕೊಂಡು ಬಿಡುತ್ತಾರೆ. ಗಂಡು ಮಕ್ಕಳಿಗೂ ಆರೋಗ್ಯ ಹಾಳು ಆದರೆ ಹೆಣ್ಣು ಮಕ್ಕಳಿಗೆ ಅವರಿಗೂ ಸೇರಿ ಮುಂದೆ ಹುಟ್ಟಲಿರುವ ಮಗುವಿನ ಮೇಲೂ ಸಹ ಪರಿಣಾಮ ಬೀರುತ್ತದೆ.

ಬದುಕು ಸುಂದರವಾಗಿದೆ ಹಾಗಾಗಿ ನಾವು ಯಾವ ದುಶ್ಚಟಗಳಿಗೆ ದಾಸರಾಗದೆ ಸುಂದರವಾಗಿ ಬದುಕಬೇಕು. ಎಂಥಹ ಪರಿಸ್ಥಿಯನ್ನು ಆದರೂ ಎದುರಿಸಿ ಬದುಕಬೇಕು.
ದುಶ್ಚಟಗಳಿಗೆ ದಾಸರಾಗುವ ಬದಲು ಸತ್ಕಾರ್ಯ ಮಾಡವ ಪ್ರಯತ್ನ ಮಾಡೋಣ.

ಮಾನಸ….ಇದು  ಮನಸಿನ ಮಾತು ಅಂಕಣದ ಹಿಂದಿನ ಸಂಚಿಕೆಗಳು :


  • ಚಂಪಾ ಚಿನಿವಾರ್ –  ಆಪ್ತಸಮಾಲೋಚಕಿ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading