‘ಚೌಚೌ ಬಾತ್’ ಅಂಕಣ (ಭಾಗ – ೩೨)

ಹಲಸಿನ ಹಣ್ಣು ಅಂದಾಗ ಬಾಲ್ಯದ ಒಂದು ಘಟನೆ ನೆನಪಾಗುತ್ತದೆ. ಎಲ್ಲರೂ ತಿನ್ನುವಷ್ಟು ತಿಂದು ಮಿಕ್ಕಿದ ಹಣ್ಣುಗಳನ್ನು ನೆನೆಸಿದ ಅಕ್ಕಿಯೊಂದಿಗೆ ರುಬ್ಬಿ ಅಮ್ಮ ದೋಸೆ ಮಾಡುತ್ತಿದ್ದಳು. ಅಂಕಣಕಾರ್ತಿ ಸರ್ವಮಂಗಳ ಜಯರಾಮ್ ಅವರ ‘ಚೌಚೌ ಬಾತ್’ ಅಂಕಣದಲ್ಲಿ ‘ಭೂತಣ್ಣನ ಹಲಸಿನ ಹಣ್ಣು’ ಕುರಿತು ಬರೆದಿದ್ದಾರೆ ತಪ್ಪದೆ ಮುಂದೆ ಓದಿ….

ಬೇಸಿಗೆಕಾಲ ಬಂತೆಂದರೆ ಸಾಕು ಬಿಸಿಲಿನ ಝಳ, ಅಬ್ಬರ ಜೋರಾಗುತ್ತದೆ. ಹಿಂದೆಂದಿಗಿಂತಲೂ ಈ ಸಲ ಬೇಸಿಗೆಯಲ್ಲಿ ತುಸು ಹೆಚ್ಚೇ ಬಿಸಿಲಿತ್ತು ಎಂದು ಹೇಳಬಹುದು. ಈ ಬೇಸಿಗೆಯ ಧಗೆಯಲ್ಲಿ ಮನಕ್ಕೆ ಮುದ ನೀಡುವ ಮಲ್ಲಿಗೆಯ ಘಮವೂ, ನಾಲಿಗೆಗೆ ರುಚಿ ನೀಡುವ ಹಲಸು, ಮಾವುಗಳು ದೊರೆಯುತ್ತಿರುತ್ತವೆ. ಬೇಸಿಗೆ ಕಾಲವು ಬಿಸಿಲ ಬೇಗೆಯನ್ನಷ್ಟೇ ಅಲ್ಲದೆ ಮಲ್ಲಿಗೆಯ ಗಮಲನ್ನು ಉಣಿಸುವ, ರಸಭರಿತ ಹಲಸು ಮಾವುಗಳ ಮಧುರ ಸ್ವಾದವನ್ನು ನೀಡುವ ಅನುಪಮ ಕಾಲವೆಂದೇ ಹೇಳಬಹುದು. ಚಿಕ್ಕ ಮಕ್ಕಳಿಗಂತೂ ಬೇಸಿಗೆಕಾಲ ಸುವರ್ಣ ಕಾಲವಿದ್ದಂತೆ. ಶಾಲೆಗೆ ರಜೆ, ಆಟ ಆಡಲು ಮಜ. ನಮ್ಮ ಬಾಲ್ಯಕಾಲದಲ್ಲಿ ಹಳ್ಳಿಗಳಲ್ಲಿ ಮರಕೋತಿಯಾಟ, ಉಯ್ಯಾಲೆ ಜೀಕುವುದು, ಈಜಲು ಬಾವಿಗಳಿಗೆ ಹೋಗುವುದು, ತಿನ್ನಲು ಆಗಾಗ ಮಾವಿನ ಹಣ್ಣು ಹಲಸಿನ ಹಣ್ಣು ಯಥೇಚ್ಛವಾಗಿ ಸಿಗುತ್ತಿದ್ದವು. ಆಗ ಮಾವು ಹಲಸಿನ ರುಚಿ ಸೊಗಸಾಗಿರುತ್ತಿತ್ತು.

ಹಲಸಿನ ಹಣ್ಣು ಅಂದಾಗ ಬಾಲ್ಯದ ಒಂದು ಘಟನೆ ನೆನಪಾಗುತ್ತದೆ. ನಮ್ಮ ಹೊಸಕೆರೆ ಗ್ರಾಮಕ್ಕೆ ಹೊಂದಿಕೊಂಡಂತೆ ಎರಡು ಕೆರೆಗಳಿವೆ. ಒಂದು ದೊಡ್ಡ ಕೆರೆ ಇನ್ನೊಂದು ಚಿಕ್ಕಕೆರೆ. ದೊಡ್ಡ ಕೆರೆಯು ಮಧುಗಿರಿ ಕಡೆಯಿಂದ ನಮ್ಮ ಊರಿಗೆ ಬರುವ ಮುಖ್ಯ ರಸ್ತೆಯ ಪಕ್ಕದಲ್ಲಿ ಇದೆ. ಅಲ್ಲಿ ಕೆರೆ ಕೆಳಗಿನ ಜಮೀನಿನಲ್ಲಿ ಕೆರೆ ಏರಿಯ ಪಕ್ಕದಲ್ಲಿ ಸುಮಾರು ಏಳೆಂಟು ಕುಟುಂಬಗಳು ವಾಸವಾಗಿದ್ದವು. ಅಲ್ಲಿ ಅಡಿಕೆ ತೋಟ ತೆಂಗಿನ ತೋಟ ಮಾವು ಹಲಸಿನ ಗಿಡಗಳು ಹೇರಳವಾಗಿದ್ದವು. ಅಲ್ಲಿ ವಾಸವಾಗಿದ್ದ ತೋಟದ ಮಾಲೀಕ ಭೂತಣ್ಣ ನಮ್ಮ ಅಪ್ಪನಿಗೆ ಆತ್ಮೀಯ ಗೆಳೆಯರಾಗಿದ್ದರು. ಪ್ರತಿ ವರ್ಷ ಅವರ ತೋಟದಿಂದ ಮಾವಿನ ಹಣ್ಣು, ಹಲಸಿನ ಹಣ್ಣು ನೇರವಾಗಿ ನಮ್ಮ ಮನೆ ತಲುಪುತ್ತಿದ್ದವು. ನಮ್ಮ ಮನೆಯಲ್ಲಿ ಸುಮಾರು 10-12 ಮಂದಿ ಜನ ಇದ್ದಿದ್ದರಿಂದ ಭೂತಣ್ಣ ತುಂಬಾ ದೊಡ್ಡ ಹಲಸಿನಕಾಯಿಯನ್ನು ಕಳಿಸುತ್ತಿದ್ದರು. ಅದು ಗಾತ್ರದಲ್ಲಿ ಒಂದು ದೊಡ್ಡ ಹಂದಿಮರಿ ಯಷ್ಟು ಇರುತ್ತಿತ್ತು. ಹಲಸಿನ ಕಾಯನ್ನು ಒಂದು ಕತ್ತಲೆ ರೂಮಿನಲ್ಲಿ ಇಟ್ಟಿರುತ್ತಿದ್ದರು. ಎರಡು ಮೂರು ದಿನ ಕಳೆಯುತ್ತಿದ್ದಂತೆ ಹಲಸಿನ ಕಾಯಿ ಹಣ್ಣಾಗಿ ಘಮಾಡಿಸುತ್ತಿತ್ತು. ಆಗ ನಾವೆಲ್ಲ ಚಿಕ್ಕ ಮಕ್ಕಳು ಅದರ ಸುವಾಸನೆಗೆ ಮನಸೋತು “ಅಂಬರದಾಗೆ ಹಂದಿ ಕೊಯ್ತಾರೆ, ಬಾರ ಗಿಣಿ ಉಂಬಾಕ ಹೋಗೋಣ” ಎಂಬ ಗಾದೆ ಮಾತನ್ನು ಹೇಳಿಕೊಂಡು, ಏನು ಹಂಗಂದ್ರೆ ಹೇಳು ನೋಡೋಣ ಎಂದು ಒಬ್ಬರನ್ನೊಬ್ಬರು ಕೇಳಿಕೊಳ್ಳುತ್ತಿದ್ದೆವು. ಆಗ ನಮ್ಮ ಹಿರಿಯರು ನಮ್ಮ ಮಾತನ್ನು ಕೇಳಿಸಿಕೊಂಡು ಹಲಸಿನ ಹಣ್ಣನ್ನು ಕೊಯ್ಯುವ ಬಗ್ಗೆ ವಿಚಾರ ಮಾಡುತ್ತಿದ್ದರು. ಹಲಸಿನಕಾಯಿ ಹಣ್ಣಾಗಿದೆ ಎಂದು ತಿಳಿಸಲು ನಾವು ಆಗಾಗ ಈ ಗಾದೆ ಮಾತನ್ನು ಹೇಳಿಕೊಂಡು ಓಡಾಡುತ್ತಿದ್ದೆವು. ಹಲಸಿನ ಹಣ್ಣನ್ನು ಕೊಯ್ದ ದಿನ ನಮಗೆ ಹಬ್ಬವೋ ಹಬ್ಬ. ಬೆಳಗ್ಗೆಯಿಂದ ಸಂಜೆಯವರೆಗೂ ಹಣ್ಣು ತಿನ್ನುವುದೇ ಕೆಲಸ. ಮನೆಯಲ್ಲಿದ್ದ ಅಷ್ಟೂ ಜನರು ಎಷ್ಟು ತಿಂದರೂ ಹಣ್ಣು ಸವೆಯುತ್ತಿರಲಿಲ್ಲ. ಅಷ್ಟು ದೊಡ್ಡ ಹಲಸಿನಕಾಯಿಯನ್ನು ಕೊಡುತ್ತಿದ್ದರು.ಹಲಸಿನ ಬೀಜಗಳನ್ನು ಒಲೆಯ ಕೆಂಡದಲ್ಲಿ ಸುಟ್ಟು ಹದವಾಗಿ ಬೇಯಿಸಿ ತಿನ್ನುತ್ತಿದ್ದೆವು.

ಎಲ್ಲರೂ ತಿನ್ನುವಷ್ಟು ತಿಂದು ಮಿಕ್ಕಿದ ಹಣ್ಣುಗಳನ್ನು ನೆನೆಸಿದ ಅಕ್ಕಿಯೊಂದಿಗೆ ರುಬ್ಬಿ ಅಮ್ಮ ದೋಸೆ ಮಾಡುತ್ತಿದ್ದಳು. ಹಲಸಿನ ಹಣ್ಣಿನ ಮೃದುವಾದ ರುಚಿಕರವಾದ ದೋಸೆಗೆ ತೆಂಗಿನಕಾಯಿ ಚಟ್ನಿ ಸಕ್ಕತ್ ಒಳ್ಳೆಯ ಕಾಂಬಿನೇಷನ್. ಸಿಹಿ ಸಿಹಿ ದೋಸೆಗೆ ಕಾರ ಕಾರ ಚಟ್ನಿ ಒಳ್ಳೆ ರುಚಿಕರವಾಗಿರುತ್ತಿತ್ತು. ಮನೆಯಲ್ಲಿದ್ದ ಹತ್ತು ಹದಿನೈದು ಜನರಿಗೆ ದೋಸೆ ಮಾಡಲು ಏನಿಲ್ಲವೆಂದರೂ ಎರಡು ಮೂರು ಸೇರು ಅಕ್ಕಿ ಹಾಕಬೇಕಿತ್ತು. ಅಷ್ಟು ಅಕ್ಕಿಯನ್ನು ಒರಳು ಕಲ್ಲಿನಲ್ಲಿ ಅಮ್ಮ ರುಬ್ಬುತ್ತಿದ್ದಳು. ನಮ್ಮ ಮನೆಯವರಲ್ಲದೆ ಆಳುಕಾಳುಗಳು ನಾಲ್ಕೈದು ಮಂದಿಗೆ ನಮ್ಮ ಮನೆಯಲ್ಲಿ ದಿನನಿತ್ಯವೂ ಊಟ ತಿಂಡಿ ನಡೆಯುತ್ತಿತ್ತು. ಮನೆಯಲ್ಲಿ ನೀರು ತುಂಬಲು, ಪಾತ್ರೆ ತೊಳೆದು ನೆಲ ಒರೆಸಲು ಒಬ್ಬ ಮುಸ್ಲಿಂ ಮಹಿಳೆ ಇದ್ದಳು. ಇನ್ನು ವರ್ಕ್ ಶಾಪ್ ನಲ್ಲಿ ಕೆಲಸ ಮಾಡಲು ಇಬ್ಬರು ಆಳುಗಳು. ಹೀಗೆ ಹದಿನೈದರಿಂದ ಇಪ್ಪತ್ತು ಜನಕ್ಕೆ ಆಗುವಷ್ಟು ಅಡುಗೆ ತಿಂಡಿ ಅಮ್ಮ ಒಬ್ಬಳೇ ಮಾಡುತ್ತಿದ್ದಳು.

ಒಮ್ಮೆ ಹೀಗೆ ಹಲಸಿನ ಹಣ್ಣು ಕೊಯ್ದಿದ್ದರು. ಮನೆ ಮಂದಿಯೆಲ್ಲ ತಿಂದು ಸಾಕಷ್ಟು ಹಣ್ಣುಗಳು ಮಿಕ್ಕಿದ್ದವು.ಅಮ್ಮ ಬೆಳಗ್ಗೆ ಅಕ್ಕಿ ನೆನೆಸಿದ್ದಳು. ಸಂಜೆ ರುಬ್ಬೋಣ ಎಂದುಕೊಳ್ಳುತ್ತಿರುವಾಗಲೇ ಅಪ್ಪ ಬಂದು ಅಷ್ಟೊಂದು ಅಕ್ಕಿಯನ್ನು ಒಬ್ಬಳೇ ಯಾಕೆ ರುಬ್ಬುತ್ತೀಯ ಬಿಡು, ಹೋಟೆಲ್ಗೆ ಕಳಿಸೋಣ ಗ್ರೈಂಡರ್ ನಲ್ಲಿ ರುಬ್ಬಿ ಕಳಿಸುತ್ತಾರೆ. ಒಂದೆರಡು ರೂಪಾಯಿ ಕೊಟ್ರೆ ಆಯ್ತು ಎಂದರು. ಅಮ್ಮನಿಗೂ ಕೆಲಸ ಮಾಡಿ ಮಾಡಿ ಸಾಕಾಗಿತ್ತು, ಅಷ್ಟಕ್ಕೇ ಸುಮ್ಮನಾದಳು. ಅಣ್ಣನನ್ನು ಕರೆದು ನೆನೆಸಿದ ಅಕ್ಕಿ ಮತ್ತು ಹಲಸಿನ ಹಣ್ಣಿನ ತೊಳೆಗಳನ್ನು ಬೀಜದಿಂದ ಬೇರ್ಪಡಿಸಿ ಒಂದು ದೊಡ್ಡ ಸ್ಟೀಲ್ ಕ್ಯಾನ್ಗೆ ಹಾಕಿ ಕೊಟ್ಟಳು. ಅಣ್ಣ ಬಸ್ ಸ್ಟ್ಯಾಂಡಿನಲ್ಲಿದ್ದ ಸೋಮಣ್ಣನ ಇಡ್ಲಿ ಹೋಟೆಲ್ಗೆ ಹೋಗಿ ಅಕ್ಕಿ ರುಬ್ಬಲು ಕೊಟ್ಟಿದ್ದಾನೆ. ಹೋಟೆಲಿನವರು ಕ್ಯಾನ್ ಮುಚ್ಚಳ ತೆಗೆದು ಅಕ್ಕಿ ಜೊತೆ ಹಲಸಿನ ಹಣ್ಣು ಇರುವುದನ್ನು ನೋಡಿದ್ದಾರೆ. ಅಣ್ಣನಿಗೆ ಆಮೇಲೆ ಬಂದು ತೆಗೆದುಕೊಂಡು ಹೋಗುವಂತೆ ಹೇಳಿದ್ದಾರೆ.ಸರಿ ಅಂದುಕೊಂಡು ಅಣ್ಣ ಮನೆಗೆ ಬಂದಿದ್ದಾನೆ. ಅಮ್ಮ ಕೇಳಿದರೆ ರುಬ್ಬಿ ಇಟ್ಟಿರ್ತಾರಂತೆ ಆಮೇಲೆ ಹೋಗಿ ತೆಗೆದುಕೊಂಡು ಬರುತ್ತೇನೆ, ಎಂದು ಹೇಳಿದ್ದಾನೆ.

ಸ್ವಲ್ಪ ಸಮಯದ ನಂತರ ಅಣ್ಣ ಹೋಟೆಲ್ ಗೆ ಹೋಗಿ ಅಕ್ಕಿ ರುಬ್ಬಿದ ಹಿಟ್ಟನ್ನು ತಂದ. ಅಮ್ಮ ಮುಚ್ಚಳ ತೆರೆದು ನೋಡಿದರೆ ಹಿಟ್ಟು ಬೆಳ್ಳಗೆ ಇತ್ತು ಅವಳಿಗೆ ಆಗಲೇ ಅನುಮಾನ ಬಂದಿತ್ತು. ಇದೇನೋ ಹಿಟ್ಟು ಇಷ್ಟು ಬೆಳ್ಳಗಿದೆ ಹಲಸಿನ ಹಣ್ಣು ಸೇರಿಸಿ ರುಬ್ಬಿದ್ರೆ ಹಿಟ್ಟು ಹಳದಿ ಇರಬೇಕಲ್ವಾ ಅಂತ ಅನುಮಾನ ವ್ಯಕ್ತಪಡಿಸಿದ್ದಳು. ಆಗ ಅಪ್ಪ “ಇಲ್ಲ ರುಬ್ಬಿರ್ತಾರೆ ಬಿಡು, ಸುಮ್ಮನೆ ಅನುಮಾನ ಬೀಳ್ಬೇಡ” ಎಂದು ಅಮ್ಮನ ಬಾಯಿ ಮುಚ್ಚಿಸಿದ್ದರು.

ಆಮೇಲೆ ಅಮ್ಮ ಒಲೆಯ ಮೇಲೆ ಕಾವಲಿ ಇಟ್ಟು ದೋಸೆ ಹಿಟ್ಟು ಹರಡಿದರೆ ದೋಸೆ ಕೂಡ ಬೆಳ್ಳಗೆ ಇದ್ದವು. ಆ ಹಿಟ್ಟಿನಲ್ಲಿ ಹಲಸಿನ ಹಣ್ಣಿನ ಒಂದು ಚೂರು ವಾಸನೆಯೂ ಇರಲಿಲ್ಲ. ಅಕ್ಕಿಯಲ್ಲಿದ್ದ ಹಲಸಿನ ತೊಳೆಗಳನ್ನೆಲ್ಲ ಎತ್ತಿ ಹಾಕಿಕೊಂಡು ಬರಿ ಅಕ್ಕಿ ಮಾತ್ರ ರುಬ್ಬಿಕೊಟ್ಟಿದ್ದರು. ಅಪ್ಪನಿಗೆ ಹೇಳಿದರೆ ಅವರು ನಂಬುವ ಸ್ಥಿತಿಯಲ್ಲಿ ಇರಲಿಲ್ಲ. ಅಂದಿನಿಂದ ಅಮ್ಮ ಎಷ್ಟೇ ಕಷ್ಟವಾದರೂ ಸರಿ ಒರಳು ಕಲ್ಲಿನಲ್ಲಿ ಅಕ್ಕಿ ಮತ್ತು ಹಲಸಿನ ಹಣ್ಣನ್ನು ರುಬ್ಬಿ ದೋಸೆ ಮಾಡಿಕೊಡುತ್ತಿದ್ದಳು. ಅಂದು ಅಮ್ಮ ಮಾಡಿಕೊಡುತ್ತಿದ್ದ ಹಲಸಿನ ಹಣ್ಣಿನ ದೋಸೆ ಹಳದಿ ಹಳದಿಯಾಗಿ ಅದೆಷ್ಟು ರುಚಿಕರವಾಗಿರುತ್ತಿದ್ದವು. ದೋಸೆಯ ಮೇಲೊಂದಿಷ್ಟು ತುಪ್ಪ ಅಥವಾ ಬೆಣ್ಣೆ ಹಾಕಿಕೊಂಡು ತಿನ್ನುತ್ತಿದ್ದರೆ ಅದರ ಮಜವೇ ಬೇರೆ. ಈಗಲೂ ನೆನಪಿಸಿಕೊಂಡರೆ ಬಾಯಲ್ಲಿ ನೀರು ಇರುತ್ತದೆ.

ಅಂಕಣದ ಹಿಂದಿನ ಸಂಚಿಕೆಗಳು :


  • ಸರ್ವ ಮಂಗಳ ಜಯರಾಮ್ – ಶಿಕ್ಷಕಿ ಗೌರಿಬಿದನೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading