“ನನ್ನ ತಂಗಿ ಈಡಾ” ಪುಸ್ತಕ ಪರಿಚಯ – ಡಾ.ಶೈಲಜಾ ಎನ್

ಕಾರೋಲಿನ್ ವಾಲ್ ಅವರ “೨೨ ಬಾನೆನ್” ಅವರ ಕಾದಂಬರಿಯನ್ನು ಕನ್ನಡಕ್ಕೆ ಅನುವಾದ ಮಾಡಿದವರು ಹರ್ಷ ರಘುರಾಮ್, ಪುಸ್ತಕದ ಹೆಸರು “ನನ್ನ ತಂಗಿ ಈಡಾ”. ಈ ಪುಸ್ತಕದ ಕುರಿತು ಲೇಖಕಿ ಡಾ.ಶೈಲಜಾ ಎನ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ :ನನ್ನ ತಂಗಿ ಈಡಾ
ಮೂಲ ಲೇಖಕರು : ಕಾರೋಲಿನ್ ವಾಲ್
ಕನ್ನಡಕ್ಕೆ : ಹರ್ಷ ರಘುರಾಮ್
ಬೆಲೆ : ೨೩೧
ಪ್ರಕಾರ : ಅನುವಾದ

ಈ ಕಾದಂಬರಿಯನ್ನು ಜರ್ಮನ್ ಲೇಖಕಿ ಕಾರೋಲಿನ್ ವಾಲ್ ಅವರು ಬರೆದಿದ್ದು, ಇದರ ಮೂಲ ಹೆಸರು “೨೨ ಬಾನೆನ್”. ಇದನ್ನು ಕನ್ನಡಕ್ಕೆ ಹರ್ಷ ರಘುರಾಮ್ ಅವರು ಅನುವಾದಿಸಿದ್ದಾರೆ. ಈ ಕಾದಂಬರಿ ೨೦೨೩-೨೪ನೇ ಸಾಲಿನ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಜರ್ಮನಿಯಿಂದ ನೇರವಾಗಿ ಕನ್ನಡಕ್ಕೆ ಅನುವಾದ ವಾದದ್ದು ಇದೊಂದು ವಿಶೇಷ. ಜರ್ಮನಿ ಮತ್ತು ಕನ್ನಡದ ನಂಟು ಈ ಮೊದಲಿನಿಂದಲೂ ಇದೆ. ಫರ್ಡಿನ್ಯಾಂಡ್ ಕಿಟಲ್ ರ ಹೆಸರು ಕೇಳದ ಕಿವಿಗಳಿಲ್ಲ. ಕನ್ನಡ ನಿಘಂಟು ರಚಿಸಿ ಕನ್ನಡಿಗರಿಗೆ ಅಮೂಲ್ಯವಾದ ಕೊಡುಗೆಯನ್ನು ನೀಡಿದವರು ಇವರು ಜರ್ಮನ್ ದವರು .ಆ ನೆಲದ ಪ್ರತಿಭೆಯೊಂದು ರಚಿಸಿದ ಕೌಟಂಬಿಕ ಕಾದಂಬರಿಯನ್ನು, ಕನ್ನಡದ ಸಾಹಿತ್ಯಾಸಕ್ತ ಮನಸ್ಸು ಅನುವಾದ ಮಾಡಿ ಕನ್ನಡಿಗರಿಗೆ ನೀಡಿದ್ದು ಅಪರೂಪವೆ ಸರಿ. ಹರ್ಷ ಅವರು ವೃತ್ತಿಯಲ್ಲಿ ಇಂಜಿನಿಯರ್ ಆಗಿ ಪ್ರವೃತ್ತಿಯಲ್ಲಿ ಅನುವಾದಕ, ಸಂಗೀತಗಾರರು ಹೌದು. ಈ ರೀತಿಯ ಅಭಿರುಚಿಯನ್ನು ಹೊಂದಿರುವ ಕನ್ನಡಿಗರು ಪ್ರಸ್ತುತ ವಿದೇಶದಲ್ಲಿ ನೆಲೆನಿಂತವರು ಈ ರೀತಿ ಅನ್ಯ ಭಾಷೆಯ ಕೃತಿಗಳನ್ನು ಅನುವಾದ ಮಾಡಿದರೆ ನಮ್ಮ ಕನ್ನಡಕ್ಕೆ ಹಲವು ಮೌಲಿಕ ಕೃತಿಗಳು ಪರಿಚಯವಾಗುತ್ತವೆ. ಕನ್ನಡಿಗರ ಓದಿನ ಹರವು ವಿಸ್ತರಿಸುತ್ತದೆ .ಹಲವು ಭಾಷೆಗಳ ಅನುವಾದ ಸಾಹಿತ್ಯ ಓದಿನೊಂದಿಗೆ ಹಲವು ಸಂಸ್ಕೃತಿ, ಸಂಪ್ರದಾಯ ಪರಿಚಯವಾಗುವುದು. ಕೊಡುಕೊಳ್ಳುವಿಕೆ ಸಾಹಿತ್ಯದ ಮೂಲಕ ಇನ್ನಷ್ಟು ಆಗಬೇಕಿದೆ.ಇಂತಹ ಸ್ತುತ್ಯಾರ್ಹ ಕಾರ್ಯ ಹರ್ಷ ಅವರು ಮಾಡಿದ್ದಾರೆ.

ಕಥಾವಸ್ತು- ಜರ್ಮನಿಯ ಗ್ರಾಮೀಣ ಭಾಗದಲ್ಲಿನ ಒಂದು ಸಾಧಾರಣ ಚಿಕ್ಕ ಕುಟುಂಬ. ಅಲ್ಲಿ ತಾಯಿ ಮಾಮಾ, ಮಕ್ಕಳು ಟಿಲ್ಡಾ ಮತ್ತು ಈಡಾ ವಾಸವಾಗಿರುತ್ತಾರೆ.ಅವರ ತಾಯಿ ಅತಿಯಾದ ಕುಡಿತದ ಚಟಕ್ಕೆ ದಾಸಳಾಗಿ ಮನೆಯ ಯಾವುದೇ ಜವಾಬ್ದಾರಿ ನಿರ್ವಹಿಸದೆ, ಕುಡಿತದ ಅಮಲಿನಲ್ಲಿ ಮಕ್ಕಳಿಗೆ ತೊಂದರೆ ಕೊಡುವುದೆ ಅವಳ ಕಾಯಕವಾಗಿರುತ್ತದೆ.ಆದರೆ ಮಗಳಾದ ಟಿಲ್ಡಾ ಮನೆಯ ಜವಾಬ್ದಾರಿ ಮತ್ತು ಚಿಕ್ಕತಂಗಿ ಈಡಾಳ ಆರೈಕೆಯೊಂದಿಗೆ ತನ್ನ ಉನ್ನತ ಶಿಕ್ಷಣವನ್ನು ಪೂರೈಸುತ್ತಿರುತ್ತಾಳೆ.ಸೂಪರ್ ಬಜಾರ್ ನಲ್ಲಿ ಕೆಲಸ ಮಾಡುತ್ತ ಕುಟುಂಬಕ್ಕೆ ಹೆಗಲೆಣೆಯಾಗಿರುತ್ತಾಳೆ.ಅವಳಿಗೆ ಗಣಿತದಲ್ಲಿ ತೀವ್ರ ವಾದ ಆಸಕ್ತಿ ಇರುತ್ತದೆ.ಸದಾ ಅದರ ಗುಂಗಿನಲ್ಲಿ,ಎಲ್ಲದರಲ್ಲೂ ಲೆಕ್ಕಾಚಾರ ಮಾಡುತ್ತಿರುತ್ತಾಳೆ.

‌‌ ಟಿಲ್ಡಾಗೆ ಗಣಿತದಲ್ಲಿ ಸಂಶೋಧನೆ ಮಾಡಬೇಕೆಂಬ ಬಯಕೆ, ಅದಕ್ಕಾಗಿ ಬರ್ಲಿನ್ ಹೋಗುವ ತಯಾರಿಯಲ್ಲಿ ಇರುತ್ತಾಳೆ.ಆದರೆ ಮನೆಯಲ್ಲಿ ಅದಕ್ಕೆ ಪೂರಕವಾದ ವಾತಾವರಣ ಇರುವುದಿಲ್ಲ. ತಾಯಿ ಅತಿಯಾಗಿ ಕುಡಿದು ಈಡಾಳನ್ನು ಹಿಂಸಿಸುವುದು,ಇಲ್ಲವೇ ಖಿನ್ನತೆಗೆ ಒಳಗಾಗಿ ಯಾವುದೇ ಜವಾಬ್ದಾರಿಯನ್ನು ವಹಿಸದೆ ಬೇಜವಾಬ್ದಾರಿಯಿಂದ ವರ್ತಿಸುವುದು ,ಹಾಗಾಗಿ ಹತ್ತು ವರ್ಷದ ತಂಗಿಯನ್ನು ಬಿಟ್ಟು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬರ್ಲಿನ್ ಗೆ ಹೋಗಲು ಚಿಂತಿತಳಾಗಿರುತ್ತಾಳೆ.ಅದೇ ಸಂದರ್ಬದಲ್ಲಿ ವಿಕ್ಟೋರ್ ಎಂಬ ರಷ್ಯನ್‌ ಯುವಕ ಇವಳಿಗೆ ಬೆನ್ನೆಲುಬಾಗಿ ನಿಲ್ಲುತ್ತಾನೆ. ಆತನ ಕುಟುಂಬದ ಎಲ್ಲಾ ಸದಸ್ಯರು ರಸ್ತೆ ಅಪಘಾತದಲ್ಲಿ ಮೃತರಾಗಿರುತ್ತಾರೆ.ಏಕಾಂಗಿಯಾದ ವಿಕ್ಟೋರ್ ಈಡಾ ಮತ್ತು ಟಿಲ್ಡಾಳಿಗೆ ನೆರವಾಗುತ್ತಾನೆ.ಆತನ ನೈತಿಕ ಬೆಂಬಲ ಟಿಲ್ಡಾಳಿಗೆ ಬರ್ಲಿನ್ ಹೋಗಿ ಸಂಶೋಧನೆ ಮಾಡುವ ಕನಸು ಮತ್ತೆ ಚಿಗುರೊಡೆಯುವುದರೊಂದಿಗೆ ಕಾದಂಬರಿ ಮುಕ್ತಾಯವಾಗುತ್ತದೆ.

ಕಾದಂಬರಿ ಮಹತ್ವವಾಗಿ ಕಾಣುವುದು ಈಡಾ ಮತ್ತು ಟಿಲ್ಡಾ ನಡುವಿನ ಸಂಬಂಧ. ಅಕ್ಕನಿಗೆ ತಂಗಿಯ ಕುರಿತಾದ ಕಾಳಜಿ,ಕಕ್ಕುಲಾತಿ ಅದರಲ್ಲೂ ಟಿಲ್ಡಾ ತಂಗಿಗೆ ಎರಡನೇ ತಾಯಿಯಂತೆ ಅವಳ ಎಲ್ಲಾ ಬೇಡಿಕೆಗಳನ್ನು ಪೂರೈಸಲು ಹೆಣಗುತ್ತಿರುತ್ತಾಳೆ.ಒಂದೇ ತಂದೆಯ ಮಕ್ಕಳು ಅವರಾಗಿರದೆ, ಇಲ್ಲಿ ರಕ್ತ ಸಂಬಂಧಕ್ಕಿಂತ ಮಾನವೀಯ ಅಂತಃಕರಣವೇ ಹೆಚ್ಚಾಗಿ ಕಾಣುತ್ತೇವೆ. ಟಿಲ್ಡಾ ತಂಗಿಯ ಭವಿಷ್ಯಕ್ಕಾಗಿ ತನ್ನ ಓದನ್ನು ಮೊಟಕುಗೊಳಿಸಬೇಕೆಂದು ಆಲೋಚಿಸುತ್ತಿರುತ್ತಾಳೆ.ಅವಳಿಗೆ ಮಾನಸಿಕವಾಗಿ ಗಟ್ಟಿ ಮಾಡಲು ಏನೆಲ್ಲಾ ಪ್ರಯತ್ನ ಮಾಡುತ್ತಾಳೆ. ಅವಳ ಚಿತ್ರ ಬಿಡಿಸುವ ಹವ್ಯಾಸಕ್ಕೆ ಪ್ರೊತ್ಸಾಹ, ಈಜು ಕಲಿಸಲು ಪ್ರೇರಣೆ ನೀಡಿ ದಿನವು ಕತೆಗಳನ್ನು ಹೇಳುತ್ತಾ ತಾನಿಲ್ಲದೆ ಇದ್ದಾಗಲು ಬದುಕಲು ಅವಳನ್ನು ಸಿದ್ದ ಗೊಳಿಸಲು ಯತ್ನಿಸುವಳು.ವಿದೇಶದ ಜನರೆಂದರೆ ಯಾವುದೇ ಸಂಬಂಧ ಗಳನ್ನು ಪಾಲಿಸದೆ ಮನಬಂದಂತೆ ಬದುಕುವ ಸ್ವೆಚ್ಛಾಚಾರಿಗಳೆಂದು ಭಾವಿಸುವ ನಮಗೆ ಈಡಾ ಮತ್ತು ಟಿಲ್ಡಾಳ ನಂಟು ಸೋಜಿಗ ಎನ್ನಿಸದೆ ಇರದು.

ಇನ್ನು ಜರ್ಮನ್ ನಲ್ಲಿನ ಶಿಕ್ಷಣ,ಅಲ್ಲಿನ ಆಹಾರ ಪದ್ದತಿ,ಕುಟುಂಬ ವ್ಯವಸ್ಥೆ, ಹವಾಮಾನ,ಈಜು ಮಾಡುವ ಹುಕಿ,ಅನ್ನಾ,ಮಾರ್ಲೆನ್ ಎಂಬ ಗೆಳತಿಯರ ಬದುಕಿನ ವಿಧಾನ ಅವರ ಕುಟುಂಬ ಎಲ್ಲ ಸಂಗತಿಗಳು ಅರಿಯುವಂತದ್ದೆ.ಅಲ್ಲಿನ ಯುವ ಸಮುದಾಯ ಮುಕ್ತವಾಗಿ ಕುಡಿಯುತ್ತ, ಗಾಂಜಾ ಸೇದುತ್ತ ಡ್ರಗ್ ಸೇವಿಸುವುದನ್ನು ಕಂಡಾಗ ದಿಗಿಲಾಗುವುದು.ಹದಿ ಹರೆಯದ ಮಕ್ಕಳು ಪಾಲಕರ ಜೊತೆ ಇರಬೇಕೆಂಬ ನಿಬಂಧನೆಯಿಲ್ಲ.ಹಿರಿಯರನ್ನು ಸರ್ಕಾರ ನೋಡಿಕೊಳ್ಳುವ ನಿಯಮ,ವಯಸ್ಸಿಗೆ ಬಂದ ಮಕ್ಕಳು ತಮ್ಮ ಜೀವನೋಪಾಯಕ್ಕಾಗಿ ಏನಾದರೂ ಕೆಲಸ ಮಾಡುತ್ತ ಓದು ಮುಂದುವರಿಸವ ರೀತಿ ಭಾರತೀಯರಿಗೆ ಈ ಎಲ್ಲಾ ವಿಷಯ ಅರಗಿಸಿಕೊಳ್ಳುವುದು ಕಷ್ಟ. ಆದರೆ ಈ ಎಲ್ಲಾ ಮುಕ್ತತೆಯ ಮಧ್ಯೆ ತಂಗಿಗಾಗಿ ಮಿಡಿಯುವ ಅಕ್ಕ,ಅಕ್ಕನ ಕನಸುಗಳಿಗೆ ಅಡ್ಡಿಯಾಗದೆ ಅವಳ ಎಲ್ಲದಕ್ಕೂ ಸಾತ್ ನೀಡುವ ತಂಗಿ ಇಬ್ಬರ ನಡುವಿನ ನಂಟು ಆದರ್ಶವಾಗಿ ಕಾಣುವುದು. ಅಂತಃಕರಣದ ಸಂಬಂಧ ಸೀಮೆಯನ್ನು ಮೀರಿದ್ದು. ಜಗತ್ತಿನ ಯಾವ ಮೂಲೆಗೆ ಹೋದರು ಭಾಷೆ, ಬಣ್ಣ, ಆಹಾರ- ವಿಹಾರ ಏನೆಲ್ಲಾ ವೈವಿಧ್ಯತೆ ಕಾಣಬಹುದು ಆದರೆ ಸಂಬಂಧದ ನಂಟಿನಲ್ಲಿ,ಸಹೋದರತೆಯ ವಾತ್ಸಲ್ಯದಲ್ಲಿ ವ್ಯತ್ಯಾಸ ಕಾಣದು.ಇಂತಹ ಒಂದು ಸೂಕ್ಷ್ಮ ಸಂವೇದನೆಯ ಎಳೆಯನ್ನು ಇಟ್ಟುಕೊಂಡು ಒಂದು ಸುಂದರ ಕತೆ ಹೆಣದಿದ್ದಾರೆ ಕಾರೊಲಿನ್.ಅದನ್ನು ಅನುವಾದದ ಮೂಲಕ ಕನ್ನಡ ಮನಸ್ಸುಗಳಿಗೆ ಉಣಬಡಿಸಿದ್ದಾರೆ ಹರ್ಷ ಅವರು.ಸರಳವಾದ ಬಾಷೆ,ಸಂವಾದಗಳ ಸಂದರ್ಬದಲ್ಲಿ ಪಾತ್ರಗಳು ಮಾತನಾಡುವ ತಂತ್ರಗಾರಿಕೆ,ಅಲ್ಲಲ್ಲಿ ಜರ್ಮನ್ ಪದ ಪ್ರಯೋಗ,ಖುಷಿ ಇಲ್ಲದ ಕುಟುಂಬ ಖುಷಿ ಎಂಬ ರಸ್ತೆಯಲ್ಲಿ ಬದುಕುವುದು ಎಲ್ಲವೂ ಸಾಂಕೇತಿಕ. ಟಿಲ್ಡಾಳ ಈಜು ಕೂಡ ಚಲನೆಯ ಸಂಕೇತವಾಗಿ ಗ್ರಹಿಸಬಹುದು ಒಟ್ಟಾರೆ ಮೂಲ ಮತ್ತು ಅನುವಾದಿತ ಲೇಖಕರಿಗೆ ತುಂಬು ಹೃದಯದ ಡಾಂಕೆ.


  • ಡಾ.ಶೈಲಜಾ ಎನ್ – ಬಾಗೇವಾಡಿ , ಕಲಬುರಗಿ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW