ಗುಲಾಬಿ ರಾಘವೇಂದ್ರ ಅವರ ‘ಮೌನ ಮೀಟಿದ ಪದಗಳು’ ಕವನ ಸಂಕಲನದ ಕುರಿತು ಲೇಖಕ, ಪತ್ರಕರ್ತರಾದ ವಾಯ್.ಎಂ.ಕೋಲಕಾರ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕವನ ಸಂಕಲನ : ಮೌನ ಮೀಟಿದ ಪದಗಳು
ಲೇಖಕರು : ಗುಲಾಬಿ ರಾಘವೇಂದ್ರ
ಪ್ರಕಾಶನ : ಕಥಾಬಿಂದು “ಕಲಾಶ್ರೀ”
ಪುಟಗಳು : 64. ಬೆಲೆ : 100
ಕೃತಿ ಬೇಕಿದ್ದಲ್ಲಿ ಸಂಪರ್ಕ : 8050599248
ವ್ಯಕ್ತಿಗಳಾದವರು ತಮ್ಮದೆಯಾದ ವ್ಯಕ್ತಿತ್ವದ ತಳಹದಿಯಲ್ಲಿ ನಿರಸಗೊಂಡವರು ಮಾತ್ರ ಕವಿಗಳಾಗಲು ಸಾಧ್ಯ, ಹೃದಯದ ಹಾಗೂ ಆಂತರಿಕ ವಿಭಿನ್ನ ಭಾಷೆ ಮತ್ತು ವಿವಿಧ ಪ್ರಕಾರದ ಬದ್ಧತೆಗಳನ್ನು ಅಪ್ಪಿ ಒಪ್ಪಿಕೊಂಡು ಬರೆಯುವರನ್ನು ನಾನು ಕವಿಗಳೆಂದು ಸಂಭೋಧಿಸುತ್ತೇನೆ. ಇಂತವರ ಚುರುಕುತನದ ಪಂಕ್ತಿಯಲ್ಲಿ ನಡೆಯುವುದೇ ಒಂದು ಸುಮಾರ್ಗವೆಂದು ತಿಳಿಯಬೇಕು.
ಕಾವ್ಯ ಕಟ್ಟುವುದು ಅದೊಂದು ಮಹತ್ವದ ಕಲೆ, ಕಂಡವರೆಲ್ಲರೂ ಕವಿಗಳಾಗಿದ್ದರೆ ಈ ಸಾಹಿತ್ಯ ಸಾಗರಕ್ಕೆ ಅರ್ಥನೇ ಇರುತ್ತಿರಲಿಲ್ಲ. ಮನದಲ್ಲಿ ಧುಮುಕುವ ಅನೇಕ ವೇದನೆ, ನಿವೇದನೆ, ಭಾವ ಪಲ್ಲವಿಗಳಂತಹ ಭೋರ್ಗರೆತಗಳನ್ನು ಬೆನ್ನಟ್ಟಿ ಕೆಲವರು ಓಡುತ್ತಿದ್ದರೆ, ಇನ್ನು ಕೆಲವರು ಸಮಾಜದ ಓರೆ ಕೋರೆಗಳನ್ನು ತಿದ್ದಿ ತೀಡುವಲ್ಲಿ ಮಿಂದೆಳುತ್ತಿದ್ದಾರೆ. ಹಲವರು ರಸಪಾಕಗಳನ್ನು ವ್ಯಕ್ತಪಡಿಸಿದರೆ, ಇನ್ನುಳಿದವರು ರಸದೌತಣವನ್ನೇ ಉಣಬಡಿಸುವತ್ತ ದಾಪುಗಾಲು ಹಾಕುತ್ತಿರುತ್ತಾರೆ. ಅನೇಕ ವಿಷಯಾಧಾರಿತವಾದಗಳಿಗೆ ಇಂಬು ನೀಡುತ್ತಲೇ ವಿಭಿನ್ನ ಹೋಲಿಕೆಗಳ ಸಮಾಲೆಯನ್ನೇ ಎಣೆದು ನಾಡಿನ ಓದುಗರ ಬಳಗದ ಜೊತೆ ಜೊತೆಗೆ ಬೆರೆಯುತ್ತಿರುವವರ ಸಾಲಿನಲ್ಲಿ ನಾಡಿನ ಚಿನ್ನದಗಣಿ ಎಂದೇ ಖ್ಯಾತಿ ಹೊಂದಿದ “ಕೋಲಾರ”ದ ಶಿಕ್ಷಕಿ, ಸಾಹಿತಿ ಶ್ರೀಮತಿ ಗುಲಾಬಿ ರಾಘವೇಂದ್ರ ಅವರೋರ್ವರು.

ಇವರ “ಮೌನ ಮೀಟಿದ ಪದಗಳು” ಎನ್ನುವ ಕವನ ಸಂಕಲನದಲ್ಲಿ ಸ್ಷಷ್ಟವಾದ ನಿಖರತೆಯ ಪ್ರಕಾರದ ಕವನಗಳು ಓದುಗರಿಗೆ ಮುದ ನೀಡುತ್ತಿವೆ. ಈ ಸಂಕಲನವು ಏಕಾಭಿಮುಖವಾಗಿಲ್ಲ, ವಿಶಿಷ್ಟ ವಿಷಯಗಳ ಮೇಲೆ ಬೆಳಕು ಚೆಲ್ಲುವತ್ತ ಹಾದಿ ಮಾಡಿ ಕೊಟ್ಟಿದೆ. ಸಾಹಿತ್ಯಕವಾಗಿ ಕವನ ಸಂಕಲನ ಹೇಗೆ ತನ್ನ ಕ್ರಮಬದ್ಧತೆಗೆ ಪೂರಕವಾಗಿರಬೇಕು ಎಂಬುದನ್ನು ಸಾರಿ ಹೇಳಿದೆ. ಇಲ್ಲಿ ಕವಿಗೆ ತನ್ನದೆಯಾದ ಕಾಲ್ಪನಿಕ ಮತ್ತು ವಾಸ್ತವಿಕ ಭಾವಜೀವದ ಹೋಲಿಕೆಗಳಿವೆ. ಬದಲಾದ ಈ ಪರಿಸರವನ್ನು ಬಾಚಿಕೊಂಡು ಎಣಿದಿರುವ ಕವನಗಳಿಗೇನು ಕೊರತೆಯಿಲ್ಲ. ಕವಯಿತ್ರಿಯ ಸದಾಶಯ ಮತ್ತು ಸದುದ್ಧೇಶ ಮಂತ್ರಕ್ಕೆ ಮಾವಿನಕಾಯಿ ಉದುರುವುದಿಲ್ಲ, ಹಿಂದೆ ಕ್ರಮಬದ್ಧ ಅಥವಾ ನೀತಿಬದ್ಧ ಸುದಾರಿಯಲ್ಲಿ ನಡೆದವರ ಮಾದರಿಯನ್ನು ನಾವೆಲ್ಲಾ ಅನುಸರಿಸಿಕೊಂಡು ಹೋಗಬೇಕು ಎಂಬ ತುಡಿತವನ್ನು ಶಿಕ್ಷಕಿ, ಕವಯಿತ್ರಿ ಗುಲಾಬಿ ರಾಘವೇಂದ್ರ ಅವರ ಅಪೇಕ್ಷೆಯ ಸಾರದ ಸಾಲುಗಳಿವೆ. ತಂದೆ, ತಾಯಿ, ಗುರು, ಹಿರಿಯರು, ಸಾಧು, ಸಂತರು, ಸತ್ಪುರುಷರ ನಡೆ, ನುಡಿಯಲ್ಲಿ ಮತ್ತು ನಮ್ಮ ಸುತ್ತಮುತ್ತ ಎಂತಹ ಪರಿಸರವನ್ನು ನಿರ್ಮಿಸಿಕೊಳ್ಳಬೇಕು ಎಂಬುದನ್ನು ಸವಿಸ್ತಾರವಾದ ಪದಪುಂಜಗಳಲ್ಲಿ ಈ ಕೃತಿಯಲ್ಲಿ ಹಿಡಿದಿಟ್ಟಿದ್ದಾರೆ. ಮನುಷ್ಯರಿಗೆ ಸಮಯ ಸಂದರ್ಭಗಳಲ್ಲಿ ಹುಟ್ಟುವ ಭಾವನೆಗಳು ಮತ್ತು ಏಕಾಚಿತ್ ಗೋಚರಿಸುವ ಹಲವು ಸಂಗತಿಗಳು ವಿವಿಧ ಆಯಾಮಗಳಲ್ಲಿ ಕವನದ ಸಾಲುಗಳಿಗೆ ಅರ್ಥಪೂರ್ಣ ಸತ್ವವನ್ನು ಕೊಟ್ಟಿರುವದು ಸಹ ಓದುಗರನ್ನು ಮತ್ತಷ್ಟು ಪ್ರೇರೇಪಿಸಿದಂತಾಗಿದೆ. ಪ್ರೀತಿ, ವಿಶ್ವಾಸ, ನಂಬಿಕೆಗಳು ಮರೆಮಾಚಿ, ನಮ್ಮೊಳಗೇ ನಾವು ಬೆತ್ತಲಾಗಿದ್ದೇವೆ ಎಂಬ ಕಳವಳದ ಮುಖವಾಡಗಳು ಹರಿದಾಡುತ್ತಲೇ ಬಹುಮುಖವಾಗಿವೆ. ಬದುಕನ್ನು ಕಟ್ಟಿಕೊಳ್ಳುವ ಪರಿ, ಈ ಮಾನವರು ನೈಜತೆಯ ಬದುಕನ್ನು ರೂಢಿಸಿಕೊಳ್ಳುವಲ್ಲಿ ದಾರಿ ತಪ್ಪುತ್ತಿದ್ದಾರೆ ಎನ್ನುವ ಅಳಲು ಕವಿಯತ್ರಿಗೆ ಕಾಡತೊಡಗಿವೆ. ಹೆಣ್ಣು, ಮಣ್ಣು, ಹೊನ್ನುಗಳೆಂಬ ಮಾಂತ್ರಿಕ ಬದುಕಿಗೆ ಲಗ್ಗೆ ಹಾಕುತ್ತಿರುವ ಇಂದಿನ ಮನುಷ್ಯರ ಗುಣ ಗೌಣ ನಮ್ಮ ಸಂಸ್ಕಾರ, ಸಂಸ್ಕೃತಿ, ಸಂಪ್ರದಾಯಗಳನ್ನು ತೂರಿ ಎಲ್ಲೆ ಮೀರುತ್ತಿದ್ದೇವೆ ಎನ್ನುವ ಮನದಾಳಕ್ಕೆ ಈ ಸಂಕಲನದಲ್ಲಿ ಇಂಬು ನೀಡುತ್ತಲೇ ಸ್ಪಷ್ಟ ಅಕ್ಷರಗಳ ಚಿತ್ರಣವನ್ನು ಸಾಲುಗಳಿಗೆ ಉಡಿತುಂಬಿದ್ದಾರೆ. ಕೃತಿ ಹಲವು ಮಹತ್ವದ ವಿಷಯಾಧಾರಿತ ಭಾವಗಳಿಗೆ ಸ್ಪರ್ಶ ನೀಡಿದೆ. ಕವಿಯತ್ರಿಯ ವೈಚಾರಿಕೆ ಚಿಂತನೆಗಳು ನಿಜಕ್ಕೂ ಭಿನ್ನವಲ್ಲದೇ ವಿಭಿನ್ನ ಲೋಕದಾಳಕ್ಕೆ ಕರೆದೋಯ್ಯುತ್ತಿವೆ. ಕವಿಯ ವಾಸ್ತವಿಕತೆ ಮತ್ತು ಕಲ್ಪನಾ ಭಾವಕ್ಕೆ ಪಾರವೇ ಇಲ್ಲವೆಂಬುದನ್ನು ನಾವಿಲ್ಲಿ ಒತ್ತಿ ಹೇಳಬಹುದು. ಅವರ ಸುಲಲಿತ ಬರೆಹದ ಶೈಲಿ ಓದುಗರನ್ನು ಮನಸೋ ಇಚ್ಛೆ ಓದಿಸಿಕೊಂಡು ಹೋಗುತ್ತದೆ.

“ಸ್ವಾಭಿಮಾನದ ಮುಷ್ಠಿ”
ಈ ತಲೆ ಬರೆಹದ ವಿಚಾರವಾಗಿ ನಾನು ಆಯ್ದ ಕೆಲವು ಸಾಲುಗಳು ಇಂತಿವೆ.
“ಸ್ವಾಭಿಮಾನದ ಸಮರವಿದು ನುಗ್ಗು ಮುಂದೆ
ಓಡಿಸುವ ಅರಿಗಳನು ಗಡಿಯಿಂದ ಇಂದೆ
ಶಕ್ತಿಯ ಯುವ ಜನರೇ ಸೇರಿರಿ ಪಡೆಯ
ವೈರಿಗಳ ಸದೆ ಬಡಿದು ಬಿಡಿಸೋಣ ಸೆರೆಯ”
ಇವು ನಮ್ಮ ದೇಶದ ಸಮರವೀರರಿಗೆ ಸಾರಿದ ಸಾಲುಗಳಿವು. ತರ್ಕಾಕಿವಾಗಿ ನಾವು ಅವಲೋಕಿಸಿದಾಗ ಹಿಂದೆ ದೇಶ ಹೇಗಿತ್ತು..? ಈಗ ದೇಶದಲ್ಲಿನ ಸೈನಿಕರು ಹೇಗಿದ್ದಾರೆ..? ಎಂಬ ಅರಿವಿನ ಉಚ್ಛರಣೆಯನ್ನು ನಾವು ಹೇಳಲೇ ಬೇಕು. ಹಿಂದೆ ಈ ದೇಶದ ಪ್ರಧಾನಿಯಾಗಿದ್ದ ಜವಹಾರಲಾಲ್ ನೆಹರು, ಇಂದಿರಾಗಾಂಧಿ ಅವರ ಕಾಲಾವಧಿ ಮತ್ತು ಪ್ರಸ್ತುತವೀಗಿನ ಮೋದಿ ಅವರ ಆಡಳಿತದ ಕಾರ್ಯ ವೈಖರಿ ಕುರಿತು ಹೇಳುವ ಧೀರತ್ವ ಸಮರವೀರರೇ ಹೇಳುತ್ತಿದ್ದಾರೆ. ಪ್ರಾಣ ಕೊಟ್ಟೆವು ಈ ದೇಶದ ಜಾಗವನ್ನು ಕಿಂಚಿತ್ತು ಕೊಡಲಾರೆವು ಎಂಬ ಸಂದೇಶ ಇತರೇ ನೆರೆಯ ದೇಶದವರಿಗೆ ರವಾನಿಸಿದ್ದಾಗಿದೆ ಮತ್ತು ಈ ಭರತ ಖಂಡದ ಗಂಡುಗಲಿಗಳ ಸಮರ ವೀರರ ಬಗೆಗೆ ಗೊತ್ತೇ ಆಗಿದೆ. ಸೈನಿಕರ ಸ್ವಾಭಿಮಾನ ಎಂತಹದ್ದು ಎಂದು ನಾವು ಹೇಳುವುದು ಕೊಂಚ ಎಲ್ಲೋ ಪುಷ್ಟಕರೀಸಿದ್ದಂತಾಗುತ್ತದೆ. ದೇಶಕ್ಕೆ ಅಂತಹ ಸಂದರ್ಭ ಬಂದಾಗ ಪ್ರಾಣ ಕೊಡುವುದು ಒಂದೇ ಗೊತ್ತು, ಇಂತಹ ಸ್ವಾಭಿಮಾನ ಭಾರತೀಯರಾದ ನಾವುಗಳೆಲ್ಲರೂ ನಮ್ಮ ಸೈನಿಕ ಸೇನಾನಿಗಳಿಗೆ ಧೈರ್ಯ ಮತ್ತು ಕೆಚ್ಚೆದಯ ಸ್ವಾಭಿಮಾನವನ್ನು ತುಂಬುವುದನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳುವುದು ಅತ್ಯಗತ್ಯ. ನಮ್ಮ ತ್ರೀವರ್ಣ ಬಣ್ಣಗಳಲ್ಲಿನ ಮೂರು ಚಕ್ರದಲ್ಲಿಯೇ ಒಂದಾಗಿರೋಣ ಎಂಬ ಸೃಜನಶೀಲತೆ, ಅಭಿಮಾನ ಹಾಗೂ ಗೌರವದಿಂದ ಬದುಕೋಣ ಎಂಬುದು ಈ ಶೀರ್ಷಿಕೆಯಲ್ಲಿನ ಕವನದ ಸಾಲಿನಲ್ಲಿನ ಸಾರವಾಗಿದೆ.
ಹೀಗೆ ಹಲವು ಸಾಮಾಜಿಕ ಕಳಕಳಿಗೆ ಪೂರಕವಾದ ಮತ್ತು ಬದ್ಧತೆಯನ್ನು ರೂಢಿಸಿಕೊಳ್ಳುವಂತಹ ಕವನಗಳು ಭೋರ್ಗರೆದಿವೆ ಎಂದು ನಾನು ಅಭಿಮತ ವ್ಯಕ್ತಪಡಿಸುತ್ತೇನೆ. ಈ ಸಂಕಲನ ಒಟ್ಟು 55 ಆಕರ್ಷಕ ಕವನಗಳಿವೆ. ಒಂದಕ್ಕಿಂತ ಇನ್ನೊಂದು ಕವನವು ಮನವನ್ನು ಸೂರೆಗೊಳ್ಳುವಂತೆ ಓದಿಸುತ್ತವೆ.
ಶ್ರೀಮತಿ ಗುಲಾಬಿ ರಾಘವೇಂದ್ರ ಅವರು ಈ ಸಾರಸ್ವತ ಲೋಕದಲ್ಲಿ ಇನ್ನಷ್ಟು ಗಟ್ಟಿತನದ ‘ಕೃಷಿ’ಯನ್ನು ಮಾಡಲಿ ಎಂಬ ಮನದ ಇಂಗಿತ ನನ್ನದಾಗಿದೆ. ಬಾನೆತ್ತರದ ಶಿಖರವನ್ನು ಏರುತ್ತಲೇ ಬೆಳಕಾಗಿ ಪಸರಿಸಲಿ, ಈ ಕನ್ನಡಮ್ಮನ ಸೇವೆಗೆ ಸದಾ ಸನ್ನದ್ಧರಾಗಿ ಇನ್ನಷ್ಟು ಕನ್ನಡ ಕೃತಿಗಳು ಅವರಿಂದ ಧಾವಿಸಲಿ, ಕನ್ನಡಮ್ಮನ ಸೇವಾ ಕಾಯಕ ನಿತ್ಯ ನಿರಂತರವಾಗಿ ಮುಂದುವರಿಯಲಿ ಎಂಬ ನನ್ನ ಮನದ ಹಾರೈಕೆ.
- ವಾಯ್.ಎಂ.ಕೋಲಕಾರ
