ಪತ್ರಕರ್ತರ ಬದುಕು ಹಳ್ಳ ಹಿಡಿಯುತ್ತಿರುವ ಹೊತ್ತಿನಲ್ಲಿ

ಎಂ.ಎ ಪತ್ರಿಕೋದ್ಯಮ ಅಥವಾ ಎಂಸಿಜೆ ಓದಿಕೊಂಡು ಬಂದ ಯುವಕ/ಯುವತಿ ಪತ್ರಕರ್ತರಾದರೆ ಅವರ ವೇತನ 8 ರಿಂದ 12 ಸಾವಿರ ರೂಪಾಯಿ ಇರುತ್ತದೆ. ಡಿ ಗ್ರೂಪ್ ಸರ್ಕಾರಿ ನೌಕರ ಅನಿರೀಕ್ಷಿತವಾಗಿ ಮೃತಪಟ್ಟರೆ ಅವನ ಕುಟುಂಬದ ಒಬ್ಬರಿಗೆ ಅನುಕಂಪಾಧಾರಿತ ಉದ್ಯೋಗ ಸಿಗುತ್ತದೆ. ಅದೇ ಪತ್ರಕರ್ತ ಸತ್ತರೆ ಪತ್ರಿಕೆಯಲ್ಲಿ ಸಿಂಗಲ್ ಕಾಲಂ ಸುದ್ದಿಯ ಸಂತಾಪ, ಚಾನೆಲ್ ನ ಟಿಕ್ಕರಿಂಗ್ ನಲ್ಲಿ ಒಂದು ಸಾಲಿನ ಸಂತಾಪ ಬಿಟ್ಟರೆ ಬೇರೇನೂ ಸಿಗಲ್ಲ…ತಪ್ಪದೆ ಮುಂದೆ ಓದಿ..

ಪತ್ರಿಕೋದ್ಯಮದಲ್ಲಿ ನನ್ನವು ಒಂದೂವರೆ ದಶಕಗಳ ಒಂದಷ್ಟು ಸಣ್ಣ ಅನುಭವಗಳಿವೆ. ಅವುಗಳನ್ನು ಹೇಳಿದ ಬಳಿಕ ಸಧ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುವ ಹಿರಿಯ ಪತ್ರಕರ್ತರಾದ ಶಶಿಧರ ಭಟ್ಟರ ವಿಚಾರಕ್ಕೆ ಬರುತ್ತೇನೆ.

ಹತ್ತು ವರ್ಷಗಳ ಹಿಂದೆ ರಾಜ್ಯದ ಪ್ರಮುಖ ಹಾಗೂ ಪ್ರತಿಷ್ಠಿತ ಪತ್ರಿಕೆಯೊಂದಕ್ಕೆ ಜಿಲ್ಲಾ ವರದಿಗಾರನಾಗಿದ್ದೆ. ಅಲ್ಲಿರುವಾಗ ನನ್ನ ತಂದೆಯ ಅನಾರೋಗ್ಯದಿಂದಾಗಿ ಆಸ್ಪತ್ರೆಯ ಖರ್ಚು, ಅವರ ಸಾವಿನ ನಂತರ ಉಂಟಾದ ಸಮಸ್ಯೆಗಳು. ಅದೇ ಸಂದರ್ಭದಲ್ಲಿ ನಾನು ಸಹ ಡೆಂಗ್ಯೂಯಿಂದಾಗಿ ನರಳಿ, ಬದುಕುಳಿದಿದ್ದೆ. ಆ ಸಂದರ್ಭದಲ್ಲಿ ನನಗೆ ನನ್ನ ಮೂಲ ಜಿಲ್ಲೆಯಾದ ಚಾಮರಾಜನಗರದ ಬದಲಿಗೆ ಬೇರೊಂದು ಜಿಲ್ಲೆಗೆ ವರ್ಗಾವಣೆ ಮಾಡಲಾಯಿತು. ಅದಕ್ಕೆ ಆಗ ಆಡಳಿತ ಮಂಡಳಿಯ ಆಯಕಟ್ಟಿನ ಜಾಗದಲ್ಲಿ ಇದ್ದವರು; ನೀವು ತುಂಬಾ ಸಾಲ ಮಾಡಿಕೊಂಡಿದ್ದೀರಂತೆ? ಸಾಲಗಾರರು ಆಫೀಸಿನ ಬಳಿಯೇ ಬರ್ತಾರಂತೆ? ಎಂಬಿತ್ಯಾದಿ ಪ್ರಶ್ನೆ ಕೇಳಿದ್ದರು. ‘ಅರೆ, ಸಾಲ ಮಾಡಿಕೊಂಡಿದ್ದರೆ ಅದು ನನ್ನ ವೈಯಕ್ತಿಕ. ಕಷ್ಟದಲ್ಲಿದ್ದಾಗ ಅಪರಿಚಿತರಿಂದ ಸಾಲ ಪಡೆಯದೇ ಪತ್ರಿಕೆಯ ಹೆಸರು ಹೇಳಿಕೊಂಡು ರೋಲ್ ಕಾಲ್ ಮಾಡಬೇಕಾಗಿತ್ತೆ?’ ಎಂದು ಮರುಪ್ರಶ್ನೆ ಹಾಕಿ, ಮುಲಾಜಿಲ್ಲದೇ ರಾಜೀನಾಮೆ ಬಿಸಾಕಿ ಹಮೀದ್ ಪಾಳ್ಯ ನೇತೃತ್ವದ ರಾಜ್ ಟಿವಿ ಸೇರಿದ್ದೆ.

ಖಾಸಗಿ ವಾಹಿನಿಯೊಂದರಲ್ಲಿ ಏಳು ವರ್ಷ ನಿರಾತಂಕವಾಗಿ ಕೆಲಸ ಮಾಡಿದ್ದೆ. ಎಂಟನೇ ವರ್ಷಕ್ಕೆ ಕಾಲಿಡುತ್ತಿದ್ದಂತೆ ಮ್ಯಾನೇಜ್ಮೆಂಟ್ ಚೇಂಜ್ ಆಗಿ ಪ್ರಧಾನ ಸಂಪಾದಕರು ಹುದ್ದೆಗೆ ರಾಜೀನಾಮೆ ನೀಡಿದ್ದರು. ಹೊಸ ಮ್ಯಾನೇಜ್ಮೆಂಟ್ ಎಂದು ಬಂದಂತಹ ರಕ್ಕಸರು, ಎಲ್ಲಾ ವರದಿಗಾರರ ಸಭೆ ಕರೆದರು. ಸಭೆಯಲ್ಲಿ ಔಪಚಾರಿಕವಾಗಿ ಒಂದಷ್ಟು ಮಾತನಾಡಿದರು. ಎಲ್ಲರಿಗೂ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡಿದರು. ನಾನು ಮಾತನಾಡುತ್ತಾ ಹೇಳಿದೆ. ‘ನಾನು ವಾಹಿನಿ ಸೇರಿದ ಆರಂಭದ ದಿನಗಳಲ್ಲಿ ನನ್ನ ಮನೆಯ ಬಾಡಿಗೆ ರೂ.3,500 ಇತ್ತು. ಈಗ ರೂ. 6,000 ಆಗಿದೆ. ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಳ ಆಗಿದೆ. ದಿನಸಿ ಪದಾರ್ಥಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. ಆದರೆ ನಮ್ಮ ಸಂಬಳದಲ್ಲಿ ಯಾವುದೇ ಹೆಚ್ಚಳವಾಗಿಲ್ಲ’ ಎಂದು ಸ್ವಲ್ಪ ಖಾರವಾಗಿಯೇ ಮಾತನಾಡಿದ್ದೆ. ಅಲ್ಲಿಯೇ ನನ್ನ ಟಾರ್ಗೆಟ್ ಶುರುವಾಯಿತು. ಜೊತೆಗೆ ತಿಂಗಳಿಗೆ ಇಂತಿಷ್ಟು ಕಮರ್ಷಿಯಲ್ ಮಾಡಿಕೊಟ್ಟರೆ ಮಾತ್ರ ನಿಮ್ಮೆಲ್ಲರಿಗೂ ಇಲ್ಲಿ ಕೆಲಸ. ಇಲ್ಲದಿದ್ದರೆ ನಿಮ್ಮ ದಾರಿ ನೀವು ನೋಡಿಕೊಳ್ಳಿ ಎನ್ನೋ ರೀತಿ ಇತ್ತು ಅಲ್ಲಿನವರ ವರ್ತನೆ. ಇದನ್ನ ಖಂಡಿಸಿದ್ದಕ್ಕೆ ನನ್ನನ್ನೂ ಸೇರಿದಂತೆ ನಾಲ್ಕೈದು ಜಿಲ್ಲಾ ವರದಿಗಾರರನ್ನು ಒಂದು ನೋಟಿಸ್ ಕೂಡ ನೀಡದೆ ಕೆಲಸದಿಂದ ಕಿತ್ತು ಹಾಕಲಾಯಿತು. ಪತ್ರಿಕೋದ್ಯೋಗದ ಅತಂತ್ರ ಪರಿಸ್ಥಿತಿಯನ್ನು ಮನಗಂಡೇ ನಾನು ಕಾನೂನು ಪದವಿ ಕಲಿಯಲು ಕಾಲೇಜು ಸೇರಬೇಕಾಯಿತು.

ಎರಡು ವರ್ಷದ ಹಿಂದೆ ಪ್ರಾದೇಶಿಕ ಪತ್ರಿಕೆಯೊಂದಕ್ಕೆ ಮತ್ತೆ ಜಿಲ್ಲಾ ವರದಿಗಾರನಾಗಿ ಸೇರಿದೆ. ಅವರು ನಿರೀಕ್ಷೆಯೇ ಮಾಡಿರದ ಮಟ್ಟಿಗೆ ಪತ್ರಿಕೆಗೆ ನಮ್ಮ ಜಿಲ್ಲೆಯಲ್ಲಿ ಹೆಚ್ಚು ಪ್ರಚಾರ ಸಿಗುವಂತೆ ನೋಡಿಕೊಂಡೆ. ನನ್ನ ಚಿಕ್ಕ ಮಗಳಿಗೆ ಶಸ್ತ್ರ ಚಿಕಿತ್ಸೆ ನಡೆದಿತ್ತು. ಅದಕ್ಕಾಗಿ ಒಂದು ವಾರ ರಜೆ ಹಾಕಿ ಮೈಸೂರಿನ ಆಸ್ಪತ್ರೆಯೊಂದರಲ್ಲಿ ಇದ್ದೆ. ನಾನಲ್ಲಿ ಇರುವಾಗಲೇ ಸೌಜನ್ಯ ಕ್ಕೂ ನನ್ನ ಗಮನಕ್ಕೆ ತಾರದೇ ನಾನು ನಿರ್ವಹಿಸುತ್ತಿದ್ದ ಜವಾಬ್ದಾರಿ ಸ್ಥಾನಕ್ಕೆ ಬೇರೊಬ್ಬರನ್ನು ನೇಮಿಸಿಕೊಂಡಿದ್ದರು. ಆಗ ನಾನು ಯಾಕೆ ಹೀಗೆ ಮಾಡಿದ್ರಿ ಎಂದು ಸಣ್ಣ ಪ್ರಶ್ನೆಯನ್ನೂ ಕೇಳಲಿಲ್ಲ. ಕಾರಣ ಪತ್ರಿಕೋದ್ಯಮ ಎಂತಹ ಕೃತಘ್ನ ಕ್ಷೇತ್ರ ಎಂಬುದು ನನಗೆ ಗೊತ್ತಿತ್ತು. ತಿಂಗಳಿಡೀ Exclusive ಸುದ್ದಿ ಕೊಟ್ಟು, ಒಂದು ದಿನ ಸಣ್ಣದೊಂದು ಸುದ್ದಿ ಮಿಸ್ ಆಗಿಬಿಟ್ಟರೆ ಸಂಪಾದಕರ ದೃಷ್ಟಿಯಲ್ಲಿ ಆ ವರದಿಗಾರ ಕೆಲಸಕ್ಕೆ ಬಾರದವ ಆಗಿಬಿಡ್ತಾನೆ!

ನಾನು ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಂದರ್ಭದಲ್ಲಿ ತಾಲೂಕು ಮಟ್ಟದ ಯಾವುದೇ ಕಾರ್ಯಕ್ರಮಕ್ಕೆ ಹೋದಾಗ ಹೇಳುತ್ತಿದ್ದುದು ಒಂದೇ ಮಾತು; ಎಸ್ಸೆಸ್ಸೆಲ್ಸಿ ಬಳಿಕ ಐಟಿಐ, ಡಿಪ್ಲೊಮಾ ಮಾಡಿಕೊಂಡು ಕ್ಯಾಂಪಸ್ ಇಂಟರ್ ವ್ಯೂ ನಲ್ಲಿ ಹುದ್ದೆಗೆ ಸೆಲೆಕ್ಟ್ ಆದರೆ ಕನಿಷ್ಠ ಮೂವತ್ತು ಸಾವಿರ ರೂ. ಸಂಬಳ ಕೊಡ್ತಾರೆ. ಆದರೆ ಎಂ.ಎ ಪತ್ರಿಕೋದ್ಯಮ ಅಥವಾ ಎಂಸಿಜೆ ಓದಿಕೊಂಡು ಬಂದ ಯುವಕ/ಯುವತಿ ಪತ್ರಕರ್ತರಾದರೆ ಅವರ ವೇತನ 8 ರಿಂದ 12 ಸಾವಿರ ರೂ. ಇರುತ್ತದೆ. ಡಿ ಗ್ರೂಪ್ ಸರ್ಕಾರಿ ನೌಕರ ಅನಿರೀಕ್ಷಿತವಾಗಿ ಮೃತಪಟ್ಟರೆ ಅವನ ಕುಟುಂಬದ ಒಬ್ಬರಿಗೆ ಅನುಕಂಪಾಧಾರಿತ ಉದ್ಯೋಗ ಸಿಗುತ್ತದೆ. ಅದೇ ಪತ್ರಕರ್ತ ಸತ್ತರೆ ಪತ್ರಿಕೆಯಲ್ಲಿ ಸಿಂಗಲ್ ಕಾಲಂ ಸುದ್ದಿಯ ಸಂತಾಪ, ಚಾನೆಲ್ ನ ಟಿಕ್ಕರಿಂಗ್ ನಲ್ಲಿ ಒಂದು ಸಾಲಿನ ಸಂತಾಪ ಬಿಟ್ಟರೆ ಬೇರೇನೂ ಸಿಗಲ್ಲ. ಆದ್ದರಿಂದ ಪತ್ರಕರ್ತರು ಪತ್ರಿಕೋದ್ಯಮದ ಜೊತೆಗೆ ಬೇರೆನಾದರೂ ಉಪವೃತ್ತಿಯನ್ನು ಅನುಸರಿಸಿ ಎಂದು ಅನುಭವದ ಮಾತುಗಳನ್ನು ಹೇಳುತ್ತಾ ಬಂದಿದ್ದೆ.

ಕಳೆದೆರಡು ದಿನಗಳಿಂದ ಹಿರಿಯ ಪತ್ರಕರ್ತರೂ, ನಮ್ಮ ಮಾರ್ಗದರ್ಶಕರೂ ಆದ ಶ್ರೀಯುತ ಶಶಿಧರ ಭಟ್ ಅವರ ಅನಾರೋಗ್ಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆಯುತ್ತಿವೆ. ಈಗ ಮೈಸೂರಿನ ಶಾಂತವೇರಿ ಗೋಪಾಲಗೌಡರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಭಟ್ಟರಿಗೆ ಸರ್ಕಾರದ ವತಿಯಿಂದ ಚಿಕಿತ್ಸೆಗೆ ಅಗತ್ಯ ವ್ಯವಸ್ಥೆ ಆಗಿದೆಯಂತೆ, ಸಂತೋಷ. ಆದರೆ ಹಿರಿಯ ಜೀವವೊಂದು ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿ ಬರೆದ ಒಂದು ಸಾಲು ನಿದ್ದೆಗೆಡಿಸಿದೆ.

ಎಲ್ಲಿಂದಲೋ ವರದಿಗಾರರಾಗಿ ಇನ್ನೆಲ್ಲಿಗೋ ಬಂದು ಕೋಟಿ ರೂ. ಬೆಲೆಬಾಳುವ ಮನೆ ಕಟ್ತಾರೆ. ಕಾರು ಕೊಂಡುಕೊಳ್ತಾರೆ. ಐಷಾರಾಮಿ ಬದುಕನ್ನ ಬದುಕ್ತಾರೆ. ವರ್ಷವಿಡೀ ವಿಮಾನದಲ್ಲಿ ವಿದೇಶ ಪ್ರವಾಸ ಮಾಡ್ಕೊಂಡ್ ಬದುಕೋ ಪತ್ರಕರ್ತರು ಇದ್ದಾರೆ. ಚಿಕಿತ್ಸೆಗೆ ಹಣವಿಲ್ಲದೇ ಕಣ್ಣೀರು ಹಾಕುವ ಪತ್ರಕರ್ತರೂ ಇದ್ದಾರೆ. ಹಾಗಾದ್ರೆ ಇಲ್ಲಿ ಯಾರ ನಡವಳಿಕೆ ಸರಿ, ಯಾರದು ತಪ್ಪು? ನಿಷ್ಠುರವಾದಿ ಪತ್ರಕರ್ತರಿಗಿದು ಕಾಲವಲ್ಲವೇ? ಬದುಕಲು ಬಕೆಟ್ ಹಿಡಿಯಲೇಬೇಕೆ? ಹಾಗಾದ್ರೆ ಪತ್ರಕರ್ತನ ಸೋಗು ಯಾಕೆ?


  • ಗೌಡಹಳ್ಳಿ ಮಹೇಶ್ – ವಕೀಲ/ಪತ್ರಕರ್ತ

 

3.5 2 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW