80ರ ದಶಕ ಮತ್ತೆ ಬಂತು, ರೆಟ್ರೋ ಟ್ರೆಂಡ್‌ಗೆ ಹೊಸ ಟಚ್!

ಯುವಜನತೆ ಟ್ರೆಂಡ್‌ಗಳತ್ತ ಮಾರುಹೋಗುವ ವೇಗ ನೋಡಿದರೆ, ಅದನ್ನು ಒಂದು ರೀತಿಯ ‘ಟ್ರೆಂಡ್ ಹುಚ್ಚು’ ಎಂದರೂ ತಪ್ಪಾಗಲಾರದು. ಇದೀಗ ಇದೇ ಟ್ರೆಂಡ್‌ನ ಅಲೆಯಲ್ಲಿ 80ರ ದಶಕವೂ ಮತ್ತೆ ಹಿಂದಿರುಗಿದೆ. ಲೇಖಕರಾದ ವಾಣಿ ಮೈಸೂರು ಅವರು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…

ಅಂದಿನ ಸ್ಟೈಲ್‌ಗೆ ಇಂದಿನ ತಂತ್ರಜ್ಞಾನದ ಸ್ಪರ್ಶ; ಟ್ರೆಂಡ್‌ನ ಹಿಂದೆ ಓಡುವ ಮುನ್ನ ಖಾಸಗಿತನದ ಪ್ರಶ್ನೆ. ಇಂದಿನ ಡಿಜಿಟಲ್ ಜಗತ್ತಿನಲ್ಲಿ ಟ್ರೆಂಡ್‌ಗೆ ಆಯಸ್ಸು ಕಡಿಮೆ, ವೇಗ ಮಾತ್ರ ಹೆಚ್ಚು. ಬೆಳಿಗ್ಗೆ ಮೊಬೈಲ್ ತೆರೆದರೆ ಹೊಸ ಟ್ರೆಂಡ್; ಸಂಜೆ ವೇಳೆಗೆ ಅದೇ ಸಾವಿರಾರು ಜನರ ಸ್ಟೇಟಸ್‌, ರೀಲ್ಸ್‌ ಮತ್ತು ಪೋಸ್ಟ್‌ಗಳಲ್ಲಿ ಕಾಣಿಸಿಕೊಳ್ಳುತ್ತದೆ. ನಿನ್ನೆ ವೈರಲ್ ಆಗಿದ್ದ ವಿಷಯ ಇಂದು ಮರೆತುಹೋಗುತ್ತದೆ. ಆದರೂ ಹೊಸದಾಗಿ ಏನಾದರೂ ಬಂದರೆ ಅದನ್ನು ಮೊದಲು ಪ್ರಯತ್ನಿಸಬೇಕು ಎನ್ನುವ ಕುತೂಹಲ ಮಾತ್ರ ಕಡಿಮೆಯಾಗುವುದಿಲ್ಲ.

ವಿಶೇಷವಾಗಿ ಯುವಜನತೆ ಟ್ರೆಂಡ್‌ಗಳತ್ತ ಮಾರುಹೋಗುವ ವೇಗ ನೋಡಿದರೆ, ಅದನ್ನು ಒಂದು ರೀತಿಯ ‘ಟ್ರೆಂಡ್ ಹುಚ್ಚು’ ಎಂದರೂ ತಪ್ಪಾಗಲಾರದು. ಇದೀಗ ಇದೇ ಟ್ರೆಂಡ್‌ನ ಅಲೆಯಲ್ಲಿ 80ರ ದಶಕವೂ ಮತ್ತೆ ಹಿಂದಿರುಗಿದೆ.

ಅಂದಿನ ಉಡುಗೆ, ಹೇರ್‌ಸ್ಟೈಲ್‌, ಫ್ಯಾಷನ್‌, ಫೋಟೋಗಳ ಶೈಲಿ – ಒಮ್ಮೆ ಹಳೆಯ ನೆನಪುಗಳ ಭಾಗವಾಗಿದ್ದ ಇವೆಲ್ಲವೂ ಇಂದು ಹೊಸ ರೂಪದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಿವೆ. “ಅಂದಿನ ಸ್ಟೈಲ್, ಇಂದಿನ ಟ್ರೆಂಡ್” ಎನ್ನುವಂತೆ 80ರ ದಶಕದ ರೆಟ್ರೋ ಲುಕ್‌ಗೆ ಹೊಸ ಪೀಳಿಗೆಯೂ ಮಾರುಹೋಗಿದೆ. “ಓಲ್ಡ್ ಇಸ್ ಗೋಲ್ಡ್” ಎನ್ನುವ ಮಾತು ಎಷ್ಟು ನಿಜ ಎಂಬುದನ್ನು ಈ ಟ್ರೆಂಡ್ ಮತ್ತೊಮ್ಮೆ ಸಾಬೀತುಪಡಿಸುತ್ತಿದೆ.

ಒಂದು ಕಾಲದಲ್ಲಿ ಮನೆಯ ಹಳೆಯ ಆಲ್ಬಂ ತೆರೆದು ನಮ್ಮ ಬಾಲ್ಯದ, ಯೌವನದ ಫೋಟೋಗಳನ್ನು ನೋಡಿ ನೆನಪು ಮಾಡಿಕೊಳ್ಳುತ್ತಿದ್ದೆವು. ಇಂದು ಅದೇ ನೆನಪುಗಳನ್ನು ತಂತ್ರಜ್ಞಾನ ಮತ್ತೊಂದು ರೀತಿಯಲ್ಲಿ ನಮ್ಮ ಮುಂದೆ ತರುತ್ತಿದೆ. ಒಂದು ಫೋಟೋವನ್ನು ಆ್ಯಪ್‌ಗೆ ನೀಡಿದರೆ ಸಾಕು—ನಾವು ಬೇರೆ ಕಾಲದಲ್ಲಿ ಹೇಗಿದ್ದಿರಬಹುದು ಎಂಬ ಕಲ್ಪನೆಗೆ ಅದು ಬಣ್ಣ ತುಂಬುತ್ತದೆ.

ಇದು ಖುಷಿ ಕೊಡುತ್ತದೆ. ಕುತೂಹಲ ಮೂಡಿಸುತ್ತದೆ. ನಮ್ಮ ಹಳೆಯ ನೆನಪುಗಳಿಗೆ ಹೊಸ ರೂಪ ನೀಡುತ್ತದೆ. ಆದರೆ ಇಲ್ಲಿಯೇ ಒಂದು ಪ್ರಶ್ನೆ ಎದುರಾಗುತ್ತದೆ—ಈ ಖುಷಿಗಾಗಿ ನಾವು ಕೊಡುವ ಬೆಲೆ ಏನು? ಟ್ರೆಂಡ್‌ನಲ್ಲಿ ಕಾಣಿಸಿಕೊಳ್ಳಬೇಕೆಂಬ ಆಸೆಯಲ್ಲಿ ನಮ್ಮ ವೈಯಕ್ತಿಕ ಫೋಟೋಗಳನ್ನು ಯಾವ ಆ್ಯಪ್‌ಗೆ ಬೇಕಾದರೂ ನೀಡುವುದು ಎಷ್ಟು ಸುರಕ್ಷಿತ? ನಾವು ಹಂಚಿಕೊಂಡ ಚಿತ್ರಗಳು ಮುಂದೆ ಹೇಗೆ ಬಳಕೆಯಾಗಬಹುದು? ಅವು ಎಲ್ಲಿಗೆ ಹೋಗುತ್ತವೆ? ಎಷ್ಟು ಕಾಲ ಉಳಿಯುತ್ತವೆ? ಎಂಬ ಪ್ರಶ್ನೆಗಳಿಗೆ ಉತ್ತರ ತಿಳಿಯದೇ ಕೇವಲ “ಎಲ್ಲರೂ ಮಾಡುತ್ತಿದ್ದಾರೆ, ನಾವೂ ಮಾಡೋಣ” ಎನ್ನುವುದು ಸರಿಯೇ?

ಇಲ್ಲಿ ಗಮನಿಸಬೇಕಾದದ್ದು ತಂತ್ರಜ್ಞಾನ ಕೆಟ್ಟದ್ದು ಎಂಬುದಲ್ಲ. ತಂತ್ರಜ್ಞಾನವನ್ನು ಯೋಚನೆ ಇಲ್ಲದೆ ಬಳಸುವ ನಮ್ಮ ಮನಸ್ಥಿತಿಯೇ ಪ್ರಶ್ನಾರ್ಹ. ಹೊಸತನವನ್ನು ಸ್ವೀಕರಿಸುವುದು ಆಧುನಿಕತೆ. ಆದರೆ ಅದರ ಪರಿಣಾಮವನ್ನು ಅರಿಯದೆ ಅನುಸರಿಸುವುದು ಆಧುನಿಕತೆ ಅಲ್ಲ.

ಕೆಲವರು ಅಪಾಯದ ಬಗ್ಗೆ ಯೋಚಿಸುತ್ತಾರೆ. “ವೈಯಕ್ತಿಕ ಫೋಟೋ ಕೊಟ್ಟರೆ ಮುಂದೆ ಏನಾದರೂ ತೊಂದರೆಯಾಗಬಹುದೇ?” ಎಂಬ ಆತಂಕವೂ ಅವರಲ್ಲಿದೆ. ಮತ್ತೊಂದೆಡೆ, “ನಮಗೇಕೆ ಇಷ್ಟೆಲ್ಲಾ ಯೋಚನೆ? ಟ್ರೆಂಡ್ ಇದೆ, ಮಾಡಿಬಿಡೋಣ” ಎನ್ನುವವರೂ ಇದ್ದಾರೆ. ಇನ್ನೂ ಕೆಲವರಿಗೆ ಟ್ರೆಂಡ್‌ನಲ್ಲಿರುವುದೇ ಒಂದು ರೀತಿಯ ಸಾಮಾಜಿಕ ಒತ್ತಡವಾಗಿದೆ. ತಾವು ಮಾಡದಿದ್ದರೆ ಹಿಂದೆ ಬಿದ್ದಂತೆ, ಇತರರಿಗಿಂತ ಕಡಿಮೆ ಎಂಬ ಭಾವನೆ ಮೂಡುತ್ತದೆ.

ಈ ಮನಸ್ಥಿತಿಯೇ ಹೆಚ್ಚು ಚಿಂತಿಸಬೇಕಾದದ್ದು. ನಮ್ಮ ಪುರಾಣದಲ್ಲೂ ಆಕರ್ಷಣೆಯ ಹಿಂದೆ ವಿವೇಕವನ್ನು ಕಳೆದುಕೊಳ್ಳುವ ಪ್ರಸಂಗವಿದೆ. ರಾಮಾಯಣದಲ್ಲಿ ಲಕ್ಷ್ಮಣನು ಹಾಕಿದ ಗೆರೆಯಿದ್ದರೂ, ಮಾಯಾ ಜಿಂಕೆಯ ಆಕರ್ಷಣೆಗೆ ಸೀತೆ ಮಾರುಹೋದ ಪ್ರಸಂಗ ನಮಗೆ ಗೊತ್ತೇ ಇದೆ. ಇಂದಿನ ಮಾಯಾ ಜಿಂಕೆ ಹೊಸ ರೂಪದಲ್ಲಿದೆ—ಅದು ಟ್ರೆಂಡ್‌ನ ಆಕರ್ಷಣೆ. ಗೆರೆಯೂ ಬದಲಾಗಿದೆ—ಅದು ನಮ್ಮ ಖಾಸಗಿತನ ಮತ್ತು ಸುರಕ್ಷತೆಯ ಗರೆ.

ಆಕರ್ಷಣೆ ತಪ್ಪಲ್ಲ. ಆದರೆ ಆಕರ್ಷಣೆಯ ಹಿಂದೆ ಹೋಗುವ ಮುನ್ನ ಒಂದು ಕ್ಷಣ ನಿಲ್ಲುವುದು ಅಗತ್ಯ. ಏಕೆಂದರೆ ಸಾಮಾಜಿಕ ಜಾಲತಾಣದ ಒಂದು ಪೋಸ್ಟ್‌ಗೆ ಸಿಗುವ ‘ಲೈಕ್‌’ಗಳು ಕೆಲವೇ ದಿನಗಳಲ್ಲಿ ಮರೆತುಹೋಗಬಹುದು. ಆದರೆ ನಾವು ಹಂಚಿಕೊಂಡ ವೈಯಕ್ತಿಕ ಮಾಹಿತಿ ನಮ್ಮ ಕೈತಪ್ಪಿದರೆ ಅದರ ಪರಿಣಾಮ ಎಷ್ಟು ದೂರ ಹೋಗಬಹುದು ಎಂಬುದನ್ನು ಊಹಿಸುವುದು ಕಷ್ಟ.

ಹಾಗಾಗಿ ರೆಟ್ರೋ ಟ್ರೆಂಡ್‌ನ್ನು ವಿರೋಧಿಸುವ ಅಗತ್ಯವಿಲ್ಲ. ಅಂದಿನ ಸ್ಟೈಲ್ ಮತ್ತೆ ಬರಲಿ. ಹಳೆಯ ನೆನಪುಗಳು ಹೊಸ ತಂತ್ರಜ್ಞಾನದ ಮೂಲಕ ಜೀವ ಪಡೆಯಲಿ. ಯುವಜನತೆ ಹೊಸತನವನ್ನು ಸಂಭ್ರಮಿಸಲಿ. ಆದರೆ ಹೊಸತನದ ಹೆಸರಿನಲ್ಲಿ ನಮ್ಮ ಖಾಸಗಿತನವನ್ನು ಪಣಕ್ಕಿಡುವುದು ಮಾತ್ರ ಬೇಡ.

ಟ್ರೆಂಡ್‌ಗಳು ಕ್ಷಣಿಕ. ಖಾಸಗಿತನ ಶಾಶ್ವತ ಮೌಲ್ಯ. ಜಗತ್ತು ಎಷ್ಟೇ ಮುಂದುವರಿಯಲಿ, ತಂತ್ರಜ್ಞಾನ ಎಷ್ಟೇ ವೇಗವಾಗಿ ಬದಲಾಗಲಿ, ಮನುಷ್ಯ ತನ್ನ ವಿವೇಕವನ್ನು ಕಳೆದುಕೊಳ್ಳಬಾರದು. ಯಾವುದನ್ನು ಅನುಸರಿಸಬೇಕು, ಯಾವುದರ ಬಗ್ಗೆ ಎಚ್ಚರಿಕೆ ವಹಿಸಬೇಕು, ಯಾವ ಗೆರೆಯ ಬಳಿ ನಿಲ್ಲಬೇಕು ಎಂಬ ಅರಿವೇ ನಿಜವಾದ ಪ್ರಗತಿ. ಅಂದಿನ ಸ್ಟೈಲ್ ಮತ್ತೆ ಬರಲಿ. ರೆಟ್ರೋ ನೆನಪುಗಳು ಮತ್ತೆ ಮಿಂಚಲಿ. ಹೊಸ ತಂತ್ರಜ್ಞಾನ ನಮ್ಮ ಕಲ್ಪನೆಗೆ ಬಣ್ಣ ತುಂಬಲಿ.

ಆದರೆ— “ಟ್ರೆಂಡ್‌ನ ಜೊತೆ ಹೆಜ್ಜೆ ಹಾಕೋಣ; ಕುರುಡಾಗಿ ಅದರ ಹಿಂದೆ ಓಡಬೇಡ. ಮಾಯಾ ಜಿಂಕೆ ಎಷ್ಟೇ ಆಕರ್ಷಕವಾಗಿರಲಿ, ನಮ್ಮ ಗೆರೆಯನ್ನು ಮಾತ್ರ ಮರೆಯದಿರೋಣ”


  • ವಾಣಿ ಮೈಸೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading