ಸಾಮಾಜಿಕ ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳು ವಿವಿಧ ವಿಷಯಗಳ ಬಗ್ಗೆ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದು. ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಪ್ರದರ್ಶಿಸಲು ಸಾಮಾಜಿಕ ಮಾಧ್ಯಮಗಳು ಉತ್ತಮ ವೇದಿಕೆಯಾಗಿವೆ. ಸಾಮಾಜಿಕ ಮಾಧ್ಯಮಗಳ ಕುರಿತು ಗಾಯತ್ರಿ ನಾಗೇಶ ಅವರು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯಿಂದ ಇಂದಿನ ಜಗತ್ತು ಬಹಳ ವೇಗವಾಗಿ ಬದಲಾಗುತ್ತಿದೆ. ಈ ಬದಲಾವಣೆಯಲ್ಲಿ ಸಾಮಾಜಿಕ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಮೊಬೈಲ್ ಮತ್ತು ಇಂಟರ್ನೆಟ್ ಮೂಲಕ ವಿದ್ಯಾರ್ಥಿಗಳು ಕ್ಷಣಾರ್ಧದಲ್ಲಿ ಜಗತ್ತಿನ ಯಾವುದೇ ಮಾಹಿತಿಯನ್ನು ಪಡೆಯಲು ಸಾಧ್ಯವಾಗಿದೆ. ಶಿಕ್ಷಣ, ಮನರಂಜನೆ, ಸಂವಹನ ಮತ್ತು ಜ್ಞಾನವರ್ಧನೆಗೆ ಸಾಮಾಜಿಕ ಮಾಧ್ಯಮಗಳು ಸಹಕಾರಿಯಾಗಿವೆ.ಇಂದಿನ ಆಧುನಿಕ ಯುಗದಲ್ಲಿ ಸಾಮಾಜಿಕ ಮಾಧ್ಯಮಗಳು ನಮ್ಮ ದೈನಂದಿನ ಜೀವನದ ಪ್ರಮುಖ ಭಾಗವಾಗಿವೆ. ಫೇಸ್ಬುಕ್, ಇನ್ಸ್ಟಾಗ್ರಾಂ, ಯೂಟ್ಯೂಬ್, ವಾಟ್ಸಾಪ್ ಮುಂತಾದ ಸಾಮಾಜಿಕ ಮಾಧ್ಯಮಗಳನ್ನು ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿದ್ದಾರೆ. ಇವು ವಿದ್ಯಾರ್ಥಿಗಳ ಶಿಕ್ಷಣ, ಜ್ಞಾನ, ಆಲೋಚನೆ ಮತ್ತು ಜೀವನಶೈಲಿಯ ಮೇಲೆ ಸಾಕಷ್ಟು ಪ್ರಭಾವ ಬೀರುತ್ತವೆ.
ಸಾಮಾಜಿಕ ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳು ವಿವಿಧ ವಿಷಯಗಳ ಬಗ್ಗೆ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದು. ಶೈಕ್ಷಣಿಕ ವಿಡಿಯೊಗಳು, ಆನ್ಲೈನ್ ತರಗತಿಗಳು, ಪರೀಕ್ಷಾ ಮಾಹಿತಿಗಳು ಹಾಗೂ ಪ್ರಸ್ತುತ ಘಟನೆಗಳ ಬಗ್ಗೆ ತಿಳಿದುಕೊಳ್ಳಲು ಇವು ಸಹಾಯಕವಾಗಿವೆ. ಅಲ್ಲದೆ, ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಪ್ರದರ್ಶಿಸಲು ಸಾಮಾಜಿಕ ಮಾಧ್ಯಮಗಳು ಉತ್ತಮ ವೇದಿಕೆಯಾಗಿವೆ. ಸ್ನೇಹಿತರು, ಶಿಕ್ಷಕರು ಹಾಗೂ ಇತರರೊಂದಿಗೆ ಸಂಪರ್ಕದಲ್ಲಿರಲು ಸಹ ಇದು ಸಹಾಯ ಮಾಡುತ್ತದೆ.

ಆದರೆ ಸಾಮಾಜಿಕ ಮಾಧ್ಯಮಗಳ ಅತಿಯಾದ ಬಳಕೆ ವಿದ್ಯಾರ್ಥಿಗಳ ಮೇಲೆ ನಕಾರಾತ್ಮಕ ಪರಿಣಾಮವನ್ನೂ ಬೀರುತ್ತದೆ. ಹೆಚ್ಚು ಸಮಯವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಕಳೆಯುವುದರಿಂದ ಓದಿನ ಮೇಲೆ ಗಮನ ಕಡಿಮೆಯಾಗಬಹುದು. ಸಮಯ ವ್ಯರ್ಥವಾಗುವುದು, ಮೊಬೈಲ್ ಬಳಕೆಯ ಅಭ್ಯಾಸ ಹೆಚ್ಚಾಗುವುದು ಮತ್ತು ನಿದ್ರೆಯ ಸಮಯದಲ್ಲಿ ವ್ಯತ್ಯಯ ಉಂಟಾಗುವುದು ಮುಂತಾದ ಸಮಸ್ಯೆಗಳು ಎದುರಾಗಬಹುದು. ಅಲ್ಲದೆ, ತಪ್ಪು ಮಾಹಿತಿ, ವದಂತಿಗಳು ಮತ್ತು ಅನಗತ್ಯ ವಿಷಯಗಳು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಬಹುದು.
ಆದ್ದರಿಂದ ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮಗಳನ್ನು ಅಗತ್ಯಕ್ಕೆ ತಕ್ಕಂತೆ ಮತ್ತು ಮಿತವಾಗಿ ಬಳಸಬೇಕು. ಶೈಕ್ಷಣಿಕ ಹಾಗೂ ಜ್ಞಾನವರ್ಧಕ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಸಮಯದ ಮೌಲ್ಯವನ್ನು ಅರಿತುಕೊಂಡು ಸಾಮಾಜಿಕ ಮಾಧ್ಯಮಗಳನ್ನು ಜವಾಬ್ದಾರಿಯುತವಾಗಿ ಬಳಸಿದರೆ ಅವು ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಹಾಯಕವಾಗುತ್ತವೆ.
ಸಾಮಾಜಿಕ ಮಾಧ್ಯಮಗಳು ವಿದ್ಯಾರ್ಥಿಗಳಿಗೆ ಜ್ಞಾನ, ಮಾಹಿತಿ ಮತ್ತು ಅವಕಾಶಗಳನ್ನು ನೀಡುವ ಶಕ್ತಿಶಾಲಿ ಸಾಧನಗಳಾಗಿವೆ. ಆದರೆ ಅವುಗಳ ಅತಿಯಾದ ಬಳಕೆ ಹಾನಿಕಾರಕವಾಗಬಹುದು. ಆದ್ದರಿಂದ “ಅತಿಯಾದರೆ ಅಮೃತವೂ ವಿಷ” ಎಂಬಂತೆ, ಸಾಮಾಜಿಕ ಮಾಧ್ಯಮಗಳನ್ನು ಮಿತವಾಗಿ ಮತ್ತು ಸರಿಯಾದ ರೀತಿಯಲ್ಲಿ ಬಳಸುವುದು ವಿದ್ಯಾರ್ಥಿಗಳ ಕರ್ತವ್ಯವಾಗಿದೆ.
- ಗಾಯತ್ರಿ ನಾಗೇಶ ಪಾರಶಿ – ಪತ್ರಿಕೋದ್ಯಮ ವಿದ್ಯಾರ್ಥಿನಿ, ವಿವಿ ಕಲಾ ಕಾಲೇಜು, ತುಮಕೂರು.
