ಜಗತ್ತಿನಲ್ಲಿ ಕೆಟ್ಟ ಮಕ್ಕಳಿರಬಹುದು, ಕೆಟ್ಟ ತಾಯಿ ಇರುವುದಿಲ್ಲ. ತಿಯೊಬ್ಬರ ಬದುಕು ಶುರುವಾಗುವುದೇ ತಾಯಿಯಿಂದ. ಅವಳು ನೀಡಿದ ಉಸಿರಿನಿಂದ, ಹೆಸರಿನಿಂದ. ಹಾಗಾಗಿ ತಾಯಿ ಮಗುವಿನ ಸಂಬಂಧಕ್ಕೆ ಎಣೆಯಿಲ್ಲ. ಆ ಸಂಬಂಧಕ್ಕೆ ಕೊನೆಯೂ ಇಲ್ಲ. ಅಂಕಣಕಾರ್ತಿ ಮಂಗಳ ಎಂ ನಾಡಿಗ್ ಅವರ ‘ಅಂಗೈಯಲ್ಲಿ ಪ್ರಪಂಚ’ ಅಂಕಣದಲ್ಲಿ ‘ತಾಯಿ ಮಕ್ಕಳ ಸಂಬಂಧ’ ತಪ್ಪದೆ ಮುಂದೆ ಓದಿ…
ಜಗತ್ತಿನಲ್ಲಿ ತಾಯಿ, ಮಕ್ಕಳ ಸಂಬಂಧಕ್ಕೆ ವಿಶೇಷವಾದ ಸ್ಥಾನಮಾನವಿದೆ. ಬಿಡಿಸಲಾರದ ಬಂಧವಿದು, ಗರ್ಭದಲ್ಲಿರುವಾಗಿನಿಂದಲೇ ಬೆಳೆದ ಕರುಳ ಸಂಬಂಧವಿದು. ಮುಖ ನೋಡದೆಯೇ ಶುರುವಾಗುವ ಪ್ರೀತಿಯೆಂದರೆ ಬಹುಶಃ ಅದು ತಾಯಿಯದು ಮಾತ್ರ. ಗರ್ಭದಲ್ಲಿ ಮಗು ಕುಡಿಯೊಡೆದ ಸಂದರ್ಭದಲ್ಲಿ ಅವಳ ಮನದೊಳಗಡೆ ಹುಟ್ಟುವ ಪ್ರೀತಿ, ಕಾಳಜಿ ಅಪಾರ. ಇಲ್ಲಿಂದ ಶುರುವಾದ ಅವಳ ಪ್ರೀತಿ, ಕಾಳಜಿ ಅವಳ ಕೊನೇ ಉಸಿರಿನ ತನಕವೂ ಹಾಗೆಯೇ ಇರುತ್ತದೆ. ತನ್ನ ಕರುಳಕುಡಿ ಎಂಬ ಆ ಭಾವವೇ ಅನನ್ಯ. ಎಂಥಾ ಸಂದರ್ಭದಲ್ಲೂ ಮಕ್ಕಳನ್ನು ಬಿಟ್ಟುಕೊಡದೇ ಸದಾ ಮಕ್ಕಳ ಪರವಾಗಿ ಅವರ ಕಷ್ಟ ಸುಖದಲ್ಲಿ ನಿಲ್ಲುವವಳೆಂದರೆ ತಾಯಿ ಮಾತ್ರ. ಮಗುವಿನ ಸರ್ವತೋಮುಖ ಬೆಳವಣಿಗೆ, ಅಭಿವೃದ್ಧಿ ಎಲ್ಲದರಲ್ಲೂ ತಾಯಿಯ ಪಾತ್ರ ಹಿರಿದು. ಮಕ್ಕಳಿಗೋಸ್ಕರ ತಾಯಿ ಎಂಥಾ ತ್ಯಾಗಕ್ಕೂ ಸಿದ್ಧ. ಹುಟ್ಟು ಸ್ವಾಭಿಮಾನಿಯಾದವಳು ಮಕ್ಕಳಿಗೋಸ್ಕರ ಇನ್ನೊಬ್ಬರ ಮುಂದೆ ಕೈಚಾಚುವಂತಹ ಪರಿಸ್ಥಿತಿ ಬಂದರೂ ಎದೆಗುಂದುವುದಿಲ್ಲ. ಹೊಟ್ಟೆಬಟ್ಟೆ ಕಟ್ಟಿ, ಹರಕೆಗಳನ್ನು ಹೊತ್ತು, ದೇವಸ್ಥಾನಗಳನ್ನು ಸುತ್ತಿ, ಹಗಲು-ರಾತ್ರಿ ಎನ್ನದೆ ಊಟ ನಿದ್ದೆ ಬಿಟ್ಟು, ಸಮಯ ಬಂದಾಗ ಆಸ್ಪತ್ರೆಗಳನ್ನು ಎಡತಾಕಿ ಕಾಪಾಡುವ ದೇವತೆಯವಳು. ಸಂಬಂಧಗಳಲ್ಲಿ ಒಂದುವೇಳೆ ಮಕ್ಕಳಿಗಾಗಿ ಎಲ್ಲರನ್ನೂ ಎದುರು ಹಾಕಿಕೊಳ್ಳುವ ಪರಿಸ್ಥಿತಿ, ಬೇರೆ ಸಂಬಂಧಗಳನ್ನು ಕಡಿದುಕೊಳ್ಳುವ ಪರಿಸ್ಥಿತಿ ಎದುರಾದರೆ ಅವಳ ಆಯ್ಕೆ ಯಾವಾಗಲೂ ಮಕ್ಕಳೇ.
ಮಕ್ಕಳಿಗೂ ಅಷ್ಟೇ ತಾಯಿಯೇ ಎಲ್ಲಾ. ಅವಳ ಸೆರಗಲ್ಲಿ ಅವಿತು ಎದೆಹಾಲು ಕುಡಿದು ಬೆಚ್ಚಗೆ ಸುಖನಿದ್ದೆ ಮಾಡುವ ಮಕ್ಕಳದು ಒಂದು ಬದುಕಾದರೆ, ಹುಟ್ಟುವಾಗಲೇ ತಾಯಿಯನ್ನು ಕಳೆದುಕೊಂಡು ಅವಳ ಮಡಿಲಿಲ್ಲದೇ ಶುರುವಾಗುವ ಖಾಲಿ ಬದುಕು ಇನ್ನು ಕೆಲವು ಮಕ್ಕಳದು.

ಫೋಟೋ ಕೃಪೆ : ಅಂತರ್ಜಾಲ
ಮಕ್ಕಳ ಪ್ರತಿ ಹಂತದಲ್ಲೂ ಸಂಭ್ರಮಿಸುವವಳು ತಾಯಿ. ಮಗು ನಕ್ಕಾಗ, ಅಂಬೆಗಾಲು ಇಟ್ಟಾಗ, ಕೂತಾಗ, ನಿಂತಾಗ, ನಡೆದಾಗ, ಮಾತು ಕಲಿತಾಗ, ಶಾಲೆಗೆ ಹೋಗಲು ಶುರು ಮಾಡಿದಾಗ, ಹೊಸತನ್ನು ಕಲಿತಾಗ, ಆಟಗಳಲ್ಲಿ, ಕಲೆ, ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತನ್ನನ್ನು ತೊಡಗಿಸಿಕೊಂಡಾಗ ಹೀಗೆ ಎಲ್ಲದರಲ್ಲೂ ಜೊತೆಯಾಗಿ ನಿಲ್ಲುವವಳು ತಾಯಿ. ಮಕ್ಕಳು ಹದಿಹರೆಯಕ್ಕೆ ಬಂದಾಗ ಜವಾಬ್ದಾರಿಯ ಪ್ರತೀಕವಾಗಿ ಹೇಳುವ ಒಂದಷ್ಟು ಬುದ್ಧಿಮಾತು, ಕೆಲವೊಮ್ಮೆ ಬೇಡಿಕೆ, ಆಜ್ಞೆ, ಕಟ್ಟುನಿಟ್ಟು ಎಲ್ಲವೂ ಮಕ್ಕಳ ಒಳಿತಿಗೇ. ತನ್ನ ಮಕ್ಕಳ ಕಡೆ ಯಾರೂ ಬೊಟ್ಟು ಮಾಡಿ ತೋರಿಸಬಾರದೆಂಬ ಅಭಿಲಾಷೆ. ಪ್ರೀತಿ, ಪ್ರೇಮದ ವಿಷಯದಲ್ಲಿ ಮುಂದಾಲೋಚನೆ, ಒಂದಷ್ಟು ಸಲಹೆ ನೀಡುವುದರ ಜೊತೆಗೆ ಮಕ್ಕಳ ಸುಖ, ಸಂತೋಷಕ್ಕೆ, ಅವರ ಇಷ್ಟಗಳಿಗೆ ಯಾವಾಗಲೂ ಒತ್ತು ಕೊಡುವವಳು ಅವಳು.
ಮಗುವನ್ನು ತೊಟ್ಟಿಲಿಗೆ ಹಾಕುವಾಗ, ಹೆಸರಿಟ್ಟು ಜಗತ್ತಿಗೆ ತನ್ನ ಮಗುವೆಂದು ಪರಿಚಯಿಸುವಾಗ, ಅನ್ನಪ್ರಾಶನ ಹೀಗೆ ಎಲ್ಲವೂ ಅವಳ ಜೀವನದ ಒಂದೊಂದು ಸಂಭ್ರಮ. ಶಾಲೆಗೆ ಹೋಗುವ ಮೊದಲ ದಿನ ಸಮಸ್ತ್ರದಲ್ಲಿ ಪುಸ್ತಕದ ಚೀಲದೊಂದಿಗೆ ಹೊರಡುವ ಮಗುವನ್ನು ಕಣ್ತುಂಬಿಕೊಳ್ಳುವುದೇ ಅವಳಿಗೊಂದು ಆನಂದ. ಆ ದಿನ ಎಲ್ಲಾ ತಾಯಂದಿರ ಅವಿಸ್ಮರಣೀಯ ಕ್ಷಣವೆಂದರೆ ತಪ್ಪಾಗಲಾರದು. ಅಕ್ಷರ ಕಲಿಸುವಾಗ, ತಿದ್ದಿ ಬರೆಸುವಾಗ, ಪದ್ಯ, ಮಗ್ಗಿಗಳನ್ನು ಕಂಠಪಾಠ ಮಾಡಿಸುವಾಗ ಅವಳ ಶ್ರದ್ಧೆ ಎಷ್ಟೆಂದರೆ ಮಕ್ಕಳಿಗೆ ಬರುವವರೆಗೂ ಬಿಡದಷ್ಟು. ಮಕ್ಕಳು ಖುಷಿಯಾಗಿ ಕಲಿತಾಗ ಆಗುವ ಖುಷಿ , ತರಲೆ-ತುಂಟಾಟ ಮಾಡಿದಾಗ ಗದರುವ, ಸುಮ್ಮನಿರಿಸಲು ಮಾಡಿಕೊಳ್ಳುವ ಹುಸಿಕೋಪ, ತಪ್ಪು ಮಾಡಿದಾಗ ಒಳ್ಳೆಯ ಮಾತಿನಲ್ಲಿ ತಿದ್ದಿಕೊಳ್ಳದಿದ್ದರೆ ಕೊಡುವ ಪೆಟ್ಟು, ನಂತರ ಅದನ್ನು ನೆನೆದು ಆಗುವ ದುಃಖ, ಇನ್ನೊಮ್ಮೆ ಇಲ್ಲ ಸರಿಯಾಗಿಯೇ ಮಾಡಿದ್ದೇನೆಂಬ ತೃಪ್ತಿ , ಅಬ್ಬಾ ! ಎಂತೆಂತಹ ಅನುಭವದ ಪಾಠ ಅವಳಲ್ಲಿ.
ಮಕ್ಕಳಿಗೂ ಅಷ್ಟೇ. ಹೊರಗಡೆಯಿಂದ ಬಂದ ತಕ್ಷಣ ಅಮ್ಮ ಬೇಕು. ಚಿಕ್ಕ ಮಕ್ಕಳಾದರೆ ಶಾಲೆಯಲ್ಲಿ ನಡೆದಿದ್ದನ್ನೆಲ್ಲ ಅಮ್ಮನೊಡನೆ ಹೇಳಿದರೇ ಸಮಾಧಾನ. ಅಮ್ಮ ಇದ್ದರೆ ತಮ್ಮ ಎಲ್ಲಾ ಅಗತ್ಯಗಳನ್ನು ಪೂರೈಸುವವಳು ಎಂಬ ವಿಶ್ವಾಸ, ನಂಬಿಕೆ ಎಲ್ಲಾ. ದೊಡ್ಡ ಮಕ್ಕಳಾದರೂ ಅಷ್ಟೇ. ಎಲ್ಲದಕ್ಕೂ ಅಮ್ಮನೇ ಬೇಕು. ಯಾವುದಕ್ಕಾದರೂ ಅಮ್ಮನ ಬಳಿ ಇರುವ ಸಲುಗೆ ಮಕ್ಕಳಿಗೆ ಬೇರೆಲ್ಲೂ ಸಿಗಲಿಕ್ಕಿಲ್ಲ. ತಾಯಿಗೆ ಮಕ್ಕಳು ಎಷ್ಟು ದೊಡ್ಡವರಾದರೂ ಅವಳು ತನ್ನ ಉಸಿರಿರುವರೆಗೂ ಅವರ ಕಾಳಜಿ ಮಾಡುವುದನ್ನು ಬಿಡುವುದಿಲ್ಲ. ಹಾಗಾಗಿ ಮಕ್ಕಳ ಯಾವ ಸೇವೆ ಮಾಡಲೂ ತಾಯಿಗೆ ಕಷ್ಟ, ಬೇಸರ ಎನಿಸುವುದಿಲ್ಲ. ತನ್ನ ಮಕ್ಕಳು ಚೆನ್ನಾಗಿರಲಿ ಎಂದು ಹರಸುವ ತಾಯಿಜೀವ ದಿನಾ ದೇವರಲ್ಲಿ ಬೇಡುವುದೂ ಅದನ್ನೇ. ಮಕ್ಕಳಿಗೂ ಅಷ್ಟೇ, ಯಾರು ನಮ್ಮನ್ನು ನಂಬದಿದ್ದರೂ, ಕ್ಷಮಿಸದಿದ್ದರೂ, ಬೆಂಬಲವಾಗಿ ನಿಲ್ಲದಿದ್ದರೂ, ಅಮ್ಮ ತಮ್ಮೊಡನೆ ಇರುತ್ತಾಳೆಂಬ ಭರವಸೆ ಮಕ್ಕಳಿಗೆ ಇದ್ದೇ ಇರುತ್ತದೆ. ಅದಕ್ಕೆ ತಕ್ಕಂತೆ ತಾಯಿಯೂ ಬುದ್ಧಿ ಹೇಳಬೇಕಾದಲ್ಲಿ ಹೇಳಿ, ತಿದ್ದಬೇಕಾದಲ್ಲಿ ತಿದ್ದಿ , ಬೈದು, ಹೊಡೆದು ಮಾಡಬೇಕಾದಲ್ಲಿ ಅದನ್ನೂ ಮಾಡಿ ತನ್ನ ಮಕ್ಕಳನ್ನು ಸರಿದಾರಿಯಲ್ಲಿ ನಡೆಯುವಂತೆ ಮಾಡುವವಳೇ ತಾಯಿ. ಹೇಗಾದರೂ ಸರಿ ನನ್ನ ಮಕ್ಕಳು ಯಾರಿಂದಲೂ ಏನೂ ಹೇಳಿಸಿಕೊಳ್ಳಬಾರದು, ಯಾರ ಮುಂದೂ ತಲೆತಗ್ಗಿಸಿ ನಿಲ್ಲಬಾರದೆಂಬ ಆ ತಾಯಿಯ ಸ್ವಾಭಿಮಾನವನ್ನು ಮಕ್ಕಳು ಅರ್ಥ ಮಾಡಿಕೊಂಡು ಅವಳು ತೋರಿದ ದಾರಿಯಲ್ಲಿ ನಡೆದರೆ ಬಾಳು ಹಸನಾಗುವುದು ಖಂಡಿತ.

ಓದು, ಕೆಲಸ ಹೀಗೆ ಮಕ್ಕಳು ತಮ್ಮ ಕಾಲಮೇಲೆ ನಿಂತು ಸ್ವತಂತ್ರರಾದಾಗ ಆ ತಾಯಿಗೂ ಒಂದು ಸಾರ್ಥಕದ ಭಾವ. ಹೊತ್ತು, ಹೆತ್ತು ಬೆಳೆಸಿದ ಮಕ್ಕಳು ಕಣ್ಮುಂದೆ ತನಗಿಂತ ಎಲ್ಲದರಲ್ಲೂ ಎತ್ತರವಾಗಿ ಬೆಳೆದಾಗ ಅದಕ್ಕಿಂತ ಇನ್ನೇನು ಬೇಕು ಆ ತಾಯಿಗೆ. ನನ್ನ ಮಗು/ಮಕ್ಕಳು ಎಂದು ಹೇಳಿಕೊಳ್ಳುವಾಗ ಅವಳ ಕಣ್ಣಲ್ಲಿರುವ ಹೆಮ್ಮೆ ಅಷ್ಟಿಷ್ಟಲ್ಲ. ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲ ಎಂಬಂತೆ ಅವಳೊಬ್ಬಳು ಇದ್ದರೆ ಇಡೀ ಪ್ರಪಂಚವೇ ಜೊತೆಗೆ ಇದ್ದಂತೆ. ಅವಳೊಬ್ಬಳು ಇಲ್ಲದಿದ್ದರೆ ಎಲ್ಲರೂ ಕೈ ಬಿಟ್ಟಂತೆ ಅನಾಥ ಭಾವ.
ಇದಕ್ಕೆ ಉದಾಹರಣೆಯಾಗಿ ಅಪರೂಪಕ್ಕೆಂಬಂತೆ ಅಲ್ಲೊಮ್ಮೆ ಇಲ್ಲೊಮ್ಮೆ ತಾಯಿಯೇ ಮಗುವನ್ನು ಬಿಸ್ಹಾಕುವುದು, ಹೊಡೆದು ಬಡಿದು ಹಿಂಸಿಸುವುದು, ಹುಟ್ಟಿದ ತಕ್ಷಣ ಎಲ್ಲಿಯಾದರೂ ಬಿಟ್ಟು ಬರುವುದು, ವೇಶ್ಯಾವಾಟಿಕೆಗೆ ಇಳಿಸುವುದು, ಮಾರಾಟ ಮಾಡುವುದು ಇಂತಹ ಘಟನೆಗಳು ನಡೆದಿರುವುದು ಮಾಧ್ಯಮಗಳ ಮೂಲಕ, ಒಬ್ಬರ ಬಾಯಿಂದ ಇನ್ನೊಬ್ಬರಿಗೆ ಹರಡಿ, ಓದಿ ಹೀಗೆ ನಮ್ಮೆಲ್ಲರ ಅರಿವಿಗೆ ಬಂದಿರುವುದಂತೂ ಸತ್ಯ. ಮನಸ್ಥಿತಿ, ಪರಿಸ್ಥಿತಿ, ಅಸಹಾಯಕತೆ ಏನೇ ಇದ್ದರೂ ಇಂತಹ ಕೃತ್ಯಗಳು ತಾಯಿ ಎನ್ನುವ ಸ್ಥಾನಕ್ಕೆ ಕಳಂಕ ತರುವುದು ಸುಳ್ಳಲ್ಲ. ಜೊತೆಗೆ ಆ ಮಕ್ಕಳ ಬದುಕು ಮೂರಾಬಟ್ಟೆಯಾಗುವುದೂ ಅಷ್ಟೇ ಸತ್ಯ.
ಅಂತೆಯೇ ತಾಯಿಯ ಅಸೆಗಳನ್ನೆಲ್ಲಾ ನೆರವೇರಿಸಿ, ಅವಳ ಕಷ್ಟ ಕಳೆದು, ಅವಳನ್ನು ಸುಖವಾಗಿ ನೋಡಿಕೊಳ್ಳುವ ಮಕ್ಕಳು ಅನೇಕರು. ರೆಕ್ಕೆ ಬಲಿತ ಮೇಲೆ ಮರಿಹಕ್ಕಿ ಹಾರಿಹೋಗುವಂತೆ ಯೌವ್ವನದಲ್ಲಿ ಪ್ರೀತಿ, ಪ್ರೇಮ, ಕೆಲಸ ಎಂದು ತಮ್ಮ ದಾರಿ ಹಿಡಿದು ಹೋಗುವವರು ಹಲವರು. ತಮ್ಮ ಸುಖಕ್ಕೋಸ್ಕರ ತಾಯಿಯನ್ನು ವೃದ್ಧಾಶ್ರಮಕ್ಕೆ ಕಳಿಸಿ ಅವಳ ಕಣ್ಣೀರಿಗೆ ಕರಗದೇ, ಅವಳ ಕಾಯುವಿಕೆಗೆ ತಿರುಗಿ ನೋಡದೇ ಕಲ್ಲಂತಿರುವವರು ಇನ್ನೂ ಅನೇಕರು. ಅದಕ್ಕೇ ಹೇಳುವುದು ಕೆಟ್ಟ ಮಕ್ಕಳಿರಬಹುದು, ಕೆಟ್ಟ ತಾಯಿ ಇರುವುದಿಲ್ಲ ಎಂದು. ವಯಸ್ಸಾದ ಕಾಲದಲ್ಲಿ ತಾಯಿಯನ್ನು ಮಗುವಂತೆ ನೋಡಿಕೊಳ್ಳುವ ಮಕ್ಕಳೂ ಇದ್ದಾರೆ. ಪ್ರೀತಿಯಿಂದ ಮಾತನಾಡಿ, ತುತ್ತು ತಿನ್ನಿಸಿ, ಹಗಲು-ರಾತ್ರಿ ಅವಳ ಸೇವೆ ಮಾಡಿ, ಕೊನೆಗಾಲದಲ್ಲಿ ಅವಳಿಗೆ ನೆಮ್ಮದಿಯ ಸುಖನಿದ್ರೆ ನೀಡಿ ತಮ್ಮ ಕರ್ತವ್ಯಪಾಲನೆ ಮಾಡಿ ಅವಳ ಆಶೀರ್ವಾದಕ್ಕೆ ಪಾತ್ರರಾಗುವವರೂ ಇದ್ದಾರೆ. ಒಟ್ಟಿನಲ್ಲಿ ಪ್ರತಿಯೊಬ್ಬರ ಬದುಕು ಶುರುವಾಗುವುದೇ ತಾಯಿಯಿಂದ. ಅವಳು ನೀಡಿದ ಉಸಿರಿನಿಂದ, ಹೆಸರಿನಿಂದ. ಹಾಗಾಗಿ ತಾಯಿ ಮಗುವಿನ ಸಂಬಂಧಕ್ಕೆ ಎಣೆಯಿಲ್ಲ. ಆ ಸಂಬಂಧಕ್ಕೆ ಕೊನೆಯೂ ಇಲ್ಲ.
- ಸುತ್ತ ಮುತ್ತ – ಲೇಖನಗಳ ಸಂಕಲನದಿಂದ
- ಕೃಪೆ : ಸುತ್ತ ಮುತ್ತ ಲೇಖನಗಳ ಸಂಕಲನ
- ಹಿಂದಿನ ಸಂಚಿಕೆಗಳು :
- ಅಂಗೈಯಲ್ಲಿ ಪ್ರಪಂಚ (ಭಾಗ-೧)
- ಅಂಗೈಯಲ್ಲಿ ಪ್ರಪಂಚ (ಭಾಗ-೨)
- ಅಂಗೈಯಲ್ಲಿ ಪ್ರಪಂಚ ‘ಗಂಡು ಮಕ್ಕಳ ಮೇಲೆ ಉಂಟಾಗುವ ಲೈಂಗಿಕ ದೌರ್ಜನ್ಯ’ (ಭಾಗ-೩)
- ಅಂಗೈಯಲ್ಲಿ ಪ್ರಪಂಚ ‘ನಾನು… ನಿಮ್ಮ ದಿಂಬು’ (ಭಾಗ-೪)
- ಅಂಗೈಯಲ್ಲಿ ಪ್ರಪಂಚ ‘ಆಡಿಕೊಳ್ಳುವುದು’ (ಭಾಗ- ೫)
- ಅಂಗೈಯಲ್ಲಿ ಪ್ರಪಂಚ ‘ಕ್ರಿಯೆ ಇದ್ದ ಮೇಲೆ ಪ್ರತಿಕ್ರಿಯೆ’ (ಭಾಗ- ೬)
- ಅಂಗೈಯಲ್ಲಿ ಪ್ರಪಂಚ ‘ಹೈಸ್ಕೂಲ್, ಕಾಲೇಜು ಮಕ್ಕಳಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯಗಳ ವ್ಯಸನ’ (ಭಾಗ- ೭)
- ಅಂಗೈಯಲ್ಲಿ ಪ್ರಪಂಚ ‘ನಾನ್ರೀ ನಿಮ್ ದಾರಿ’ (ಭಾಗ- ೮)
- ಅಂಗೈಯಲ್ಲಿ ಪ್ರಪಂಚ ‘ಸಾಮಾಜಿಕ ಜವಾಬ್ದಾರಿ’ (ಭಾಗ- ೯)
- ಅಂಗೈಯಲ್ಲಿ ಪ್ರಪಂಚ ‘ಹರೆಯ ಉಕ್ಕಿ’ (ಭಾಗ- ೧೦)
- ಅಂಗೈಯಲ್ಲಿ ಪ್ರಪಂಚ ‘ಏನೇನೋ ಅಂದುಕೊಳ್ಳುವ ಮುನ್ನ’ (ಭಾಗ- ೧೧)
- ಅಂಗೈಯಲ್ಲಿ ಪ್ರಪಂಚ ‘ಮಗುವಿನ ಕಾಳಜಿ ಜೊತೆಗೆ ಜಾಗೃತಿ’ (ಭಾಗ- ೧೨)
- ಅಂಗೈಯಲ್ಲಿ ಪ್ರಪಂಚ ‘ವಯಸ್ಸಾದಂತೆ ಜೀವನ ಒಂದು ಬೋನಸ್ ’(ಭಾಗ- ೧೩)
- ಅಂಗೈಯಲ್ಲಿ ಪ್ರಪಂಚ ‘ವೃದ್ಧಾಶ್ರಮ ’ (ಭಾಗ- ೧೪)
- ಅಂಗೈಯಲ್ಲಿ ಪ್ರಪಂಚ ‘ಮಧ್ಯಮ ವರ್ಗದ ಬದುಕು’ (ಭಾಗ- ೧೫)
- ಅಂಗೈಯಲ್ಲಿ ಪ್ರಪಂಚ ‘ಕಣ್ಣೀರು’ (ಭಾಗ- ೧೬)
- ಅಂಗೈಯಲ್ಲಿ ಪ್ರಪಂಚ ‘ನಾನ್ರೀ…ನಿಮ್ ಮನೆ’ (ಭಾಗ- ೧೭)
- ಅಂಗೈಯಲ್ಲಿ ಪ್ರಪಂಚ ‘ರಸ್ತೆಯಲ್ಲಿ ವಾಹನದ ಮೇಲಿರಲಿ ಜವಾಬ್ದಾರಿ’ (ಭಾಗ- ೧೮)
- ಅಂಗೈಯಲ್ಲಿ ಪ್ರಪಂಚ ‘ವಿಘ್ನ ಸಂತೋಷಿಗಳುಶ್ರೀಲಕ್ಷ್ಮಿ ಬಹಳ ಮುದ್ದಾದ ಹುಡುಗಿ’ (ಭಾಗ- ೧೯)
- ಅಂಗೈಯಲ್ಲಿ ಪ್ರಪಂಚ ‘ಮನಸ್ಥಿತಿ’ (ಭಾಗ- ೨೦)
- ಅಂಗೈಯಲ್ಲಿ ಪ್ರಪಂಚ ‘ಮೂಡ್ ಇಲ್ಲ’ (ಭಾಗ- ೨೧)
- ಅಂಗೈಯಲ್ಲಿ ಪ್ರಪಂಚ ‘ಭಾವನಾತ್ಮಕ ಸಂಬಂಧ’ (ಭಾಗ- ೨೨)
- ಅಂಗೈಯಲ್ಲಿ ಪ್ರಪಂಚ ‘ನಗುವಿನ ಮಹತ್ವ’ (ಭಾಗ- ೨೩)
- ಅಂಗೈಯಲ್ಲಿ ಪ್ರಪಂಚ ಅಮ್ಮನೆಂಬ ಅಮೃತ (ಭಾಗ- ೨೪)
- ಅಂಗೈಯಲ್ಲಿ ಪ್ರಪಂಚ ‘ಕಾಡುವ ಶಾಪ’ (ಭಾಗ- ೨೬)
- ಅಂಗೈಯಲ್ಲಿ ಪ್ರಪಂಚ ‘ಇರಲಿ ನಿಮ್ಮ ಸ್ಪಂದನೆ’ (ಭಾಗ- ೨೭)
- ಅಂಗೈಯಲ್ಲಿ ಪ್ರಪಂಚ ‘ಬಾಲ್ಯ ಕಸಿಯುವ ಮುನ್ನ’’ (ಭಾಗ- ೨೮)
- ಅಂಗೈಯಲ್ಲಿ ಪ್ರಪಂಚ ‘ಆಯಮ್ಮನೆಂಬ ಅಮ್ಮ’ (ಭಾಗ- ೨೯)
- ಅಂಗೈಯಲ್ಲಿ ಪ್ರಪಂಚ (ಭಾಗ- ೩೦)
- ಅಂಗೈಯಲ್ಲಿ ಪ್ರಪಂಚ ‘ ಬಫೆ ಸಿಸ್ಟಮ್’ (ಭಾಗ- ೩೧)
- ಅಂಗೈಯಲ್ಲಿ ಪ್ರಪಂಚ ‘ ಸ್ನೇಹ ಸಂಬಂಧ’ (ಭಾಗ- ೩೨)
- ಅಂಗೈಯಲ್ಲಿ ಪ್ರಪಂಚ‘ಮಾತನಾಡುವುದೂ ಒಂದು ಕಲೆ’ (ಭಾಗ- ೩೩)
- ಅಂಗೈಯಲ್ಲಿ ಪ್ರಪಂಚ ‘ನೆರೆಹೊರೆಯ ಸಂಬಂಧ’ (ಭಾಗ- ೩೪)
- ಅಂಗೈಯಲ್ಲಿ ಪ್ರಪಂಚ ‘ಅನ್ನದಾತೋ ಸುಖೀಭವ’ (ಭಾಗ- ೩೫)
- ಅಂಗೈಯಲ್ಲಿ ಪ್ರಪಂಚ ‘ಸಂಬಂಧಗಳಲ್ಲಿ ಬಿರುಕು’ (ಭಾಗ- ೩೬)
- ಅಂಗೈಯಲ್ಲಿ ಪ್ರಪಂಚ ‘ನಾನು ಆಸ್ಪತ್ರೆ’ (ಭಾಗ- ೩೮)
- ಅಂಗೈಯಲ್ಲಿ ಪ್ರಪಂಚ ‘ಮಧ್ಯವರ್ತಿಗಳು’ (ಭಾಗ- ೩೯)
- ಅಂಗೈಯಲ್ಲಿ ಪ್ರಪಂಚ ‘ಸಂಬಂಧ’ (ಭಾಗ- ೪೦)
- ಅಂಗೈಯಲ್ಲಿ ಪ್ರಪಂಚ ‘ನಾನ್ರೀ…ನಿಮ್ ಬೆಂಗ್ಳೂರು’ (ಭಾಗ- ೪೧)
- ಅಂಗೈಯಲ್ಲಿ ಪ್ರಪಂಚ ‘ಮನೆಗೆ ಹೇಳದೆ ಬಂದ ಅತಿಥಿ’ (ಭಾಗ- ೪೩)
- ಅಂಗೈಯಲ್ಲಿ ಪ್ರಪಂಚ ‘ಸಂಬಂಧಗಳಲ್ಲಿ ಸ್ಥಾನಮಾನ’ (ಭಾಗ- ೪೪)
- ಅಂಗೈಯಲ್ಲಿ ಪ್ರಪಂಚ ‘ನಿಮ್ಮ ಪೆನ್ನು’ (ಭಾಗ- ೪೫)
- ಹಿಂದಿನ ಸಂಚಿಕೆಗಳು :
- ಮಂಗಳ ಎಂ ನಾಡಿಗ್ – ಅಂಕಣಕಾರ್ತಿ, ಕವಿಗಳು, ಬೆಂಗಳೂರು.
