ಕುರಿಗಳೇ ಜೀವನಾಧಾರ

ಬೇಸಿಗೆಯಲ್ಲಿ ನೀರು ಮತ್ತು ಹಸಿರು ಮೇವಿನ ಕೊರತೆ ಎದುರಾದರೆ, ಮಳೆಗಾಲದಲ್ಲಿ ಕೆಸರು, ತೇವಾಂಶ ಹಾಗೂ ವಿವಿಧ ಕಾಯಿಲೆಗಳಿಂದ ಕುರಿಗಳನ್ನು ಸುರಕ್ಷಿತವಾಗಿಡುವುದು ದೊಡ್ಡ ಸವಾಲಾಗುತ್ತದೆ. ದಿನೇಶ್ ದಿಂಡವರ ಅವರು ಕುರಿ ಸಾಗಾಣಿಕೆಯ ಸವಾಲುಗಳ ಕುರಿತು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಗ್ರಾಮೀಣ ಭಾರತದ ಕೃಷಿ ಸಂಸ್ಕೃತಿಯಲ್ಲಿ ಕುರಿಗಾಹಿಗಳ ಪಾತ್ರ ಬಹಳ ಮಹತ್ವದ್ದಾಗಿದೆ. ಕುರಿಗಳನ್ನು ಸಾಕುತ್ತಾ, ಅವುಗಳನ್ನೇ ತಮ್ಮ ಜೀವನದ ಆಧಾರವಾಗಿಸಿಕೊಂಡು ಬದುಕುವ ಕುರಿಗಾಹಿಗಳ ಜೀವನ ಹೊರನೋಟಕ್ಕೆ ಸರಳವಾಗಿ ಕಂಡರೂ, ಅದರ ಹಿಂದೆ ಅನೇಕ ಕಷ್ಟಗಳು, ಸವಾಲುಗಳು ಮತ್ತು ಅಪಾರ ಪರಿಶ್ರಮ ಅಡಗಿದೆ.

ಬೆಳಗಿನ ಸೂರ್ಯೋದಯಕ್ಕೂ ಮುನ್ನವೇ ಎದ್ದು ಕುರಿಗಳ ಹಿಂಡನ್ನು ಮೇಯಿಸಲು ಹೊರಡುವ ಕುರಿಗಾಹಿಗಳು ಬಿಸಿಲು, ಮಳೆ, ಚಳಿ ಎನ್ನದೆ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಾರೆ. ಹಗಲಿಡೀ ಕುರಿಗಳೊಂದಿಗೆ ಕಾಡು, ಹೊಲ, ಗದ್ದೆ ಹಾಗೂ ಬಯಲು ಪ್ರದೇಶಗಳಲ್ಲಿ ಅಲೆದಾಡುತ್ತಾ ಅವುಗಳ ಪಾಲನೆ ಮಾಡುತ್ತಾರೆ. ಪ್ರಕೃತಿಯೊಂದಿಗೆ ಬೆರೆತು ಬದುಕುವ ಅವರ ಜೀವನದಲ್ಲಿ ವಿಶ್ರಾಂತಿಗಿಂತ ಪರಿಶ್ರಮವೇ ಹೆಚ್ಚು.

ಕುರಿಗಾಹಿಗಳ ಜೀವನ ಪ್ರಕೃತಿಯೊಂದಿಗೆ ಬೆಸೆದುಕೊಂಡಿದೆ. ಬೇಸಿಗೆಯಲ್ಲಿ ನೀರು ಮತ್ತು ಹಸಿರು ಮೇವಿನ ಕೊರತೆ ಎದುರಾದರೆ, ಮಳೆಗಾಲದಲ್ಲಿ ಕೆಸರು, ತೇವಾಂಶ ಹಾಗೂ ವಿವಿಧ ಕಾಯಿಲೆಗಳಿಂದ ಕುರಿಗಳನ್ನು ಸುರಕ್ಷಿತವಾಗಿಡುವುದು ದೊಡ್ಡ ಸವಾಲಾಗುತ್ತದೆ. ಕೆಲವೊಮ್ಮೆ ಮೇವು ಮತ್ತು ನೀರಿಗಾಗಿ ತಮ್ಮ ಊರನ್ನು ಬಿಟ್ಟು ಬೇರೆ ಪ್ರದೇಶಗಳಿಗೆ ವಲಸೆ ಹೋಗಬೇಕಾದ ಪರಿಸ್ಥಿತಿಯೂ ಎದುರಾಗುತ್ತದೆ.

ವಲಸೆ ಹೋದಾಗ ಅವರ ಸಂಕಷ್ಟಗಳು ಮತ್ತಷ್ಟು ಹೆಚ್ಚಾಗುತ್ತವೆ. ಪರಿಚಯವಿಲ್ಲದ ಜನರು, ಗೊತ್ತಿಲ್ಲದ ಊರು, ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳದ ಆಹಾರ ಹಾಗೂ ಶುದ್ಧ ಕುಡಿಯುವ ನೀರಿನ ಕೊರತೆ ಹೀಗೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪ್ರತಿದಿನವೂ ಹೊಸ ಸವಾಲುಗಳನ್ನು ಎದುರಿಸುತ್ತಾ, ಯಾವಾಗ ಏನಾಗುತ್ತದೆಯೋ ಎಂಬ ಆತಂಕದಲ್ಲಿಯೇ ದಿನ ಕಳೆಯಬೇಕಾಗುತ್ತದೆ. ಕೆಲವೊಮ್ಮೆ ಹಾವು, ಕಾಡುಪ್ರಾಣಿಗಳು ಹಾಗೂ ಇತರ ಅಪಾಯಗಳಿಂದಲೂ ಕುರಿಗಳನ್ನು ರಕ್ಷಿಸಬೇಕಾಗುತ್ತದೆ. ಇಂತಹ ಅನಿಶ್ಚಿತತೆಯ ನಡುವೆಯೇ ಕುರಿಗಾಹಿಗಳು ತಮ್ಮ ಬದುಕಿನ ಬಂಡಿಯನ್ನು ಸಾಗಿಸುತ್ತಾರೆ.

ಕುರಿಗಾಹಿಗಳಿಗೆ ಕುರಿಗಳೇ ಆಸ್ತಿ, ಕುರಿಗಳೇ ಬದುಕು. ಒಂದು ಕುರಿಗೆ ಕಾಯಿಲೆ ಬಂದರೂ ಅಥವಾ ರಸ್ತೆ ದಾಟುವ ಸಂದರ್ಭದಲ್ಲಿ ವಾಹನ ಡಿಕ್ಕಿಯಾಗಿ ಮೃತಪಟ್ಟರೂ ಅದು ಕುಟುಂಬದ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಏಕೆಂದರೆ ಅವರು ಸಾಕುವ ಪ್ರತಿಯೊಂದು ಕುರಿಯ ಹಿಂದೆಯೂ ಅವರ ಪರಿಶ್ರಮ, ಹಣ ಮತ್ತು ಬದುಕಿನ ಭರವಸೆ ಅಡಗಿರುತ್ತದೆ. ಆದರೂ ಎಷ್ಟೇ ಕಷ್ಟಗಳು ಎದುರಾದರೂ ತಮ್ಮ ವೃತ್ತಿಯನ್ನು ನಂಬಿ ಬದುಕು ಸಾಗಿಸುತ್ತಾರೆ.

ಕುರಿಗಾಹಿಗಳ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಸರ್ಕಾರದಿಂದ ಸೂಕ್ತ ಸೌಲಭ್ಯಗಳು ದೊರೆಯಬೇಕಾಗಿದೆ. ಕುರಿಗಳಿಗೆ ಉಚಿತ ಅಥವಾ ಕೈಗೆಟುಕುವ ದರದಲ್ಲಿ ಪಶುವೈದ್ಯಕೀಯ ಚಿಕಿತ್ಸೆ, ಕಾಲಕಾಲಕ್ಕೆ ಲಸಿಕೆ, ಕುರಿ ವಿಮೆ ಹಾಗೂ ತುರ್ತು ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಬೇಕು. ಮೇವು ಮತ್ತು ನೀರಿನ ಕೊರತೆ ಎದುರಾಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು.

ಅಲ್ಲದೆ, ಕುರಿಗಾಹಿ ಕುಟುಂಬಗಳ ಮಕ್ಕಳ ಶಿಕ್ಷಣಕ್ಕೂ ವಿಶೇಷ ಆದ್ಯತೆ ನೀಡಬೇಕು. ವಲಸೆಯ ಕಾರಣದಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಂತೆ ವಸತಿ ಶಾಲೆಗಳು, ವಿದ್ಯಾರ್ಥಿವೇತನ ಹಾಗೂ ವಸತಿ ಸೌಲಭ್ಯಗಳನ್ನು ಒದಗಿಸಬೇಕು. ಕುರಿ ಸಾಕಾಣಿಕೆಯನ್ನು ಉತ್ತೇಜಿಸಲು ಆರ್ಥಿಕ ನೆರವು ಮತ್ತು ಮಾರುಕಟ್ಟೆ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಕುರಿಗಾಹಿಗಳ ಬದುಕಿಗೆ ಭದ್ರತೆ ಒದಗಿಸಬಹುದು.

ಗೊಲ್ಲ ಸಮುದಾಯದ ಹಲವು ಕುಟುಂಬಗಳಲ್ಲಿ ತಮ್ಮ ಕುಲದೇವರು ಮತ್ತು ಗ್ರಾಮದೇವತೆಗಳ ಆರಾಧನೆಗೆ ವಿಶೇಷ ಮಹತ್ವವಿದೆ. ಕೆಲವು ಪ್ರದೇಶಗಳಲ್ಲಿ ಬಾಲಕೃಷ್ಣ, ಜುಂಜಪ್ಪ, ಮೈಲಾರಲಿಂಗೇಶ್ವರ ಸೇರಿದಂತೆ ವಿವಿಧ ಸ್ಥಳೀಯ ದೇವರುಗಳ ಆರಾಧನೆ ಕಂಡುಬರುತ್ತದೆ.

ಜಾತ್ರೆ ಮತ್ತು ಉತ್ಸವಗಳ ಸಂದರ್ಭದಲ್ಲಿ ಕುರಿಗಾಹಿಗಳು ತಮ್ಮ ಸಂಪ್ರದಾಯದಂತೆ ವಿಶೇಷ ಧಾರ್ಮಿಕ ಆಚರಣೆಗಳನ್ನು ನೆರವೇರಿಸುತ್ತಾರೆ. ಕೆಲವು ಕಡೆಗಳಲ್ಲಿ ಕುರಿಗಳ ಗುಂಪನ್ನು ತಮ್ಮ ಹಟ್ಟಿಯಲ್ಲಿ ಅಥವಾ ತಾವು ಆರಾಧಿಸುವ ದೇವಸ್ಥಾನ ಹಾಗೂ ದೇವರ ಸುತ್ತಲೂ ಕರೆತರುವ ಆಚರಣೆಯಿದೆ. ಇದನ್ನು ಸ್ಥಳೀಯವಾಗಿ ‘ಕುರಿ ಕರೆಯುವುದು’ ಎಂದು ಕರೆಯುತ್ತಾರೆ. ಇಂತಹ ಆಚರಣೆಗಳು ಅವರ ಧಾರ್ಮಿಕ ನಂಬಿಕೆ, ಸಂಪ್ರದಾಯ ಮತ್ತು ಕುರಿಗಳೊಂದಿಗಿನ ಭಾವನಾತ್ಮಕ ಸಂಬಂಧವನ್ನು ಪ್ರತಿಬಿಂಬಿಸುತ್ತವೆ. ಜಾತ್ರೆ, ಉತ್ಸವ ಹಾಗೂ ಸಾಮೂಹಿಕ ಅನ್ನಸಂತರ್ಪಣೆಯಂತಹ ಆಚರಣೆಗಳು ಸಮುದಾಯದ ಜನರನ್ನು ಒಗ್ಗೂಡಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತವೆ.

ಸಂಪ್ರದಾಯದ ಸಂರಕ್ಷಕರು ಕುರಿಗಾಹಿಗಳು

ಕುರಿಗಾಹಿಗಳು ಕೇವಲ ಕುರಿಗಳನ್ನು ಮೇಯಿಸುವವರಲ್ಲ. ಅವರು ಗ್ರಾಮೀಣ ಸಂಸ್ಕೃತಿ, ಜನಪದ ಸಂಪ್ರದಾಯ ಮತ್ತು ಪಶುಸಂಗೋಪನೆಯ ಅನುಭವದ ಜ್ಞಾನವನ್ನು ತಲೆಮಾರಿನಿಂದ ತಲೆಮಾರಿಗೆ ಮುಂದುವರಿಸಿಕೊಂಡು ಬರುತ್ತಿರುವ ಸಂಪ್ರದಾಯದ ಸಂರಕ್ಷಕರು.

ಇದಕ್ಕೆ ನಮ್ಮ ಕುಟುಂಬವೇ ಒಂದು ಉದಾಹರಣೆ. ನಮ್ಮ ತಾತ ಕುಂಟಪ್ಪ ಅವರು ಸುಮಾರು ಒಂದು ಸಾವಿರ ಕುರಿಗಳನ್ನು ಸಾಕಾಣಿಕೆ ಮಾಡುತ್ತಿದ್ದರು. ಅವರ ಮಗ ಮೆಣಪ್ಪ ಅವರು ಪ್ರಸ್ತುತ ಸುಮಾರು ಐದು ನೂರು ಕುರಿಗಳನ್ನು ಸಾಕುತ್ತಿದ್ದಾರೆ. ಹೀಗೆ ನಮ್ಮ ಕುಟುಂಬದಲ್ಲಿ ಕುರಿ ಸಾಕಾಣಿಕೆಯ ವೃತ್ತಿ ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಮುಂದುವರಿದುಕೊಂಡು ಬಂದಿದೆ. ಇದು ಕೇವಲ ವೃತ್ತಿಯಲ್ಲ; ನಮ್ಮ ಕುಟುಂಬದ ಬದುಕು, ಅನುಭವ ಮತ್ತು ಪರಂಪರೆಯ ಭಾಗವಾಗಿದೆ.

ಕುರಿಗಳ ಆರೋಗ್ಯ, ಅವುಗಳ ಆಹಾರ, ಮೇಯಿಸುವ ಸ್ಥಳಗಳು, ಹವಾಮಾನಕ್ಕೆ ಅನುಗುಣವಾಗಿ ಅವುಗಳನ್ನು ನಿರ್ವಹಿಸುವ ವಿಧಾನ ಹೀಗೆ ಅನೇಕ ವಿಷಯಗಳ ಬಗ್ಗೆ ಕುರಿಗಾಹಿಗಳಿಗೆ ಅಪಾರ ಅನುಭವವಿರುತ್ತದೆ. ಇಂತಹ ಅನುಭವದ ಜ್ಞಾನವನ್ನು ಅವರು ಪುಸ್ತಕಗಳಿಂದ ಕಲಿತವರಲ್ಲ; ಬದುಕಿನ ಅನುಭವದಿಂದಲೇ ಪಡೆದುಕೊಂಡವರು. ಅವರ ಪರಿಶ್ರಮ ಮತ್ತು ಜ್ಞಾನ ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗವಾಗಿದೆ.

ಕುರಿಗಾಹಿಗಳ ಬದುಕು ನಮಗೆ ಪರಿಶ್ರಮ, ತಾಳ್ಮೆ, ಆತ್ಮವಿಶ್ವಾಸ ಮತ್ತು ಪ್ರಕೃತಿಯೊಂದಿಗಿನ ಸಹಬಾಳ್ವೆಯ ಪಾಠವನ್ನು ಕಲಿಸುತ್ತದೆ. ಬಿಸಿಲು, ಮಳೆ, ಚಳಿ ಎನ್ನದೆ ತಮ್ಮ ಕುರಿಗಳೊಂದಿಗೆ ಬದುಕು ಕಟ್ಟಿಕೊಳ್ಳುವ ಈ ಸಮುದಾಯದ ಶ್ರಮವನ್ನು ಸಮಾಜ ಗುರುತಿಸಬೇಕಾಗಿದೆ. ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು, ಅಗತ್ಯ ಸೌಲಭ್ಯಗಳನ್ನು ಒದಗಿಸಿ, ಅವರ ಬದುಕಿಗೆ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಕಲ್ಪಿಸುವುದು ಸರ್ಕಾರದ ಜೊತೆಗೆ ಸಮಾಜದ ಜವಾಬ್ದಾರಿಯೂ ಆಗಿದೆ.

ಕುರಿಗಾಹಿಗಳ ಬದುಕು ಸುಧಾರಿಸಿದಾಗ ಗ್ರಾಮೀಣ ಆರ್ಥಿಕತೆಯೂ ಬಲಗೊಳ್ಳುತ್ತದೆ. ಆದ್ದರಿಂದ ಕುರಿಗಾಹಿಗಳ ವೃತ್ತಿಯನ್ನು ಗೌರವಿಸುವುದರ ಜೊತೆಗೆ ಅವರ ಪರಂಪರೆ, ಸಂಸ್ಕೃತಿ ಮತ್ತು ಬದುಕನ್ನು ಉಳಿಸಿ ಬೆಳೆಸುವುದು ಇಂದಿನ ಅಗತ್ಯವಾಗಿದೆ.


  • ದಿನೇಶ್ ದಿಂಡವರ

 

Leave a Reply

Home
Search
Menu
Recent
About
×