ಮೊದಮೊದಲು ಇತ್ತು ಕಿತ್ತುತಿನ್ನುವ ಬಡತನ, ಆದರೂ ಹಂಚಿ ತಿನ್ನುವ ಗುಣಕ್ಕಿರಲಿಲ್ಲ ಬಡತನ…ಕವಿ ನಾಗರಾಜ್ ಜಿ.ಎನ್.ಬಾಡ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಧರ್ಮರಾಯನಂತಿದ್ದ ನಮ್ಮ ಅಪ್ಪನು
ಅವನಂತೆಯೇ ಇದ್ದ ಆಪ್ತ ದೊಡ್ಡಪ್ಪನೂ
ಅನವಶ್ಯಕ ಮಾತು ಕಡಿಮೆ ಮಿತಭಾಷಿ
ಎಲ್ಲರಿಗೂ ಒಳಿತನ್ನು ಬಯಸುವ ಹಿತೈಷಿ
ಹೆಜ್ಜೆ ಹೆಜ್ಜೆಗೂ ಇದ್ದರೂ ಒಂದಿಲ್ಲೊಂದು ಕಷ್ಟ
ಯಾರಿಗೂ ಹೇಳಿಕೊಳ್ಳಲಿಲ್ಲ ತನ್ನ ಸಂಕಷ್ಟ
ಸದಾ ಒಂದಿಲ್ಲೊಂದು ಕೆಲಸದಲ್ಲಿ ಮಗ್ನ
ಖಾದಿ ಬಟ್ಟೆಯಷ್ಟೇ ಸರಳ ಇವರ ಜೀವನ
ಮೊದಮೊದಲು ಇತ್ತು ಕಿತ್ತುತಿನ್ನುವ ಬಡತನ
ಆದರೂ ಹಂಚಿ ತಿನ್ನುವ ಗುಣಕ್ಕಿರಲಿಲ್ಲ ಬಡತನ
ಅಂದಿಗೂ ಇಂದಿಗೂ ಗುಣದಲ್ಲಿತ್ತು ಸದಾ ಸಿರಿತನ
ಎಂದಿಗೂ ನಗುಮುಖದಲ್ಲೇ ತುಂಬಿತ್ತು ಜೀವನ
ಮಗ್ಗದ ಮನೆಯಲ್ಲಿ ಬಟ್ಟೆ ನೇಯುವ ಕಾಯಕ
ತುಂಬು ಕುಟುಂಬದ ಧೀಮಂತ ನಾಯಕ
ಸದಾ ದುಡಿಮೆಯಲ್ಲಿಯೇ ತನ್ನ ಕಾಲವ ಕಳೆದ
ನಿಯತ್ತಿನಲ್ಲೇ ಜೀವನಪೂರ್ತಿ ಉಳಿದು ಬೆಳೆದ
ನಮ್ಮ ಮೇಲೆಯೂ ಇತ್ತು ಅಪಾರ ಪ್ರೀತಿ ವಾತ್ಸಲ್ಯ
ನಮಗೂ ಅವರೆಂದರೆ ಅಗಾಧ ಆದರ ಗೌರವ
ತುಂಬುಜೀವನ ನಡೆಸಿ ಹೊರಟರು ಅಜಾತ ಶತ್ರು
ಹೋಗಿಬನ್ನಿ ಮರೆಯಲಾಗದು ನಿಮ್ಮ ನಗುಮುಖವ
ಹಾಗೆಯೇ ನಿಮ್ಮೊಳಗಿದ್ದ ಮುಗ್ಧ ಮಗುವಿನ ಮನವ
- ನಾಗರಾಜ್ ಜಿ.ಎನ್.ಬಾಡ, ಕುಮಟ.
