ಕವಿ ಹೆಚ್.ಪಿ.ಕೃಷ್ಣಮೂರ್ತಿ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ನಮಗೆ ಕಾಣುತ್ತದೆ
ಕಾಂಕ್ರೀಟು ಕಾಡಿನ ಹೆದ್ದಾರಿಯಲ್ಲಿ
ನಡೆಯುವಾಗ
ಮುಗಿಲು ಚುಂಬಿಸುವ ಕಟ್ಟಡಗಳು
ಕಣ್ಣು ಕೊರೈಸುವ ಅಂಗಡಿಯ
ವಸ್ತ್ರ ವಿನ್ಯಾಸಗಳು!
ನಮಗೆ ಕಾಣುವುದಿಲ್ಲ
ಅಲ್ಲೆ ಪುಟ್ ಪಾತಿನಲ್ಲಿ
ಸೂರಿಲ್ಲದೆ ಕೊರಗುವ ಜೀವಗಳು
ಹೊದೆಯಲು ಹಚ್ಚಡವಿಲ್ಲದೆ ನಡಗುವ
ದೇಹಗಳು!
ನಮಗೆ ಕಾಣುತ್ತದೆ
ಮದುವೆ ಸಮಾರಂಭಗಳಲ್ಲಿ
ಚಿನ್ನದ ಭಾರ ಹೊತ್ತು ಸರಿಯುವ ಟೀವಿಗಳು
ತೋರಿಕೆಗೆ ತಿಂದು ಚೆಲ್ಲುವವರ ಧಿಮಾಕುಗಳು
ನಮಗೆ ಕಾಣುವುದಿಲ್ಲ
ಅಲ್ಲೆ ಛತ್ರದ ಹಿಂಬದಿಯಲ್ಲಿ
ಎಂಜಲೆಲೆಗೆ ಕಾದಾಡುವ ಕಂದಗಳು
ಅರೆ ಹೊಟ್ಟೆಯ ಒಡಲುಗಳು!
ನಮಗೆ ಕೇಳಿಸುತ್ತದೆ
ಉಪ್ಪರಿಗೆಯ ಮನೆಯಲ್ಲಿ
ಅಲೆ ಅಲೆಯಾಗಿ ತೇಲಿ ಬರುವ
ಪಾಶ್ಯಾತ್ಯ ಗೀತೆಗಳು
ತೆರೆ ತೆರೆಯಾಗಿ ಮೊಳಗುವ
ವಿಚಿತ್ರ ನಾದಗಳು!
ನಮಗೆ ಕೇಳಿಸುವುದೇ ಇಲ್ಲ
ಮುರಿದ ಸೂರುಗಳಲ್ಲಿ ನರಕುಸಿದವರ
ವ್ಯಥೆಯ ಹಾಡುಗಳು!
ಹೋಳಾದ ಬದುಕುಗಳ
ನಿಟ್ಟುಸಿರ ಗೋಳುಗಳು!
- ಹೆಚ್. ಪಿ. ಕೃಷ್ಣಮೂರ್ತಿ, ಬೆಂಗಳೂರು
