ಬಡ್ಡೀ ಮಗನೆ, ನೀನು ಬೆಂಗಳೂರನ್ನಲ್ಲಾದರೂ ಇರು ಮಂಗಳೂರನ್ನಲ್ಲಾದರೂ ಇರು ಇಲ್ಲ ಎಲ್ಲಿದ್ದೀಯೊ ಅಲ್ಲೆ ನೆಗೆದು ಬಿದ್ದು ಸಾಯಿ ಮೊದಲು ದುಡ್ಡಾಕು” ಅಂತ ದಬಾಯಿಸಿ ಹಣ ಹಾಕಿಸಿಕೊಂಡೆ – ಕತೆಗಾರ ಕು.ಸ.ಮಧುಸೂದನ ರಂಗೇನಹಳ್ಳಿ ಅವರ ಅನುಭವದ ಒಂದು ಕತೆ ಓದುಗರ ಮುಂದೆ ತಪ್ಪದೆ ಓದಿ…
ಇವತ್ತು ಸ್ವಲ್ಪ ಎದೆನೋವು ಅಂತ ಡಾಕ್ಟರಿಗೆ ತೊರಿಸಲು ಹೋಗಿ ಶಿವಮೊಗ್ಗದ,ಲ್ಯಾಬು-ಮೆಡಿಕಲ್ ಶಾಪ್ ನವರಿಗೆ ಸುಮಾರು ಹನ್ನೆರಡು ಸಾವಿರ ದೇಣಿಗೆ ಕೊಟ್ಟು ಬಂದೆ. ಅದಿರಲಿ ಆಸ್ಪತ್ರೆಗೆ ಹೋಗಿ ಹನ್ನೊಂದು ಗಂಟೆಗೆ ಬರುವ ಡಾಕ್ಟರಿಗೆ ತೋರಿಸಲು ಎಂಟೂವರೆಗೆ ಹೋಗಿ ಐನೂರರು ರೂಪಾಯಿ ಕನ್ಸಲ್ಟೆನ್ಸಿ ಪೀಸ್ ಕಟ್ಟಿ ನನ್ನ ಜಾತಕ ಬರೆಸಿ ಓಡಾಡುವ ನರ್ಸುಗಳನ್ನು ನೊಡುತ್ತ ಕೂತು ತೂಕಡಿಸುವಾಗ ಬಂದ ವಾಟ್ಸಪ್ಪು ಮೆಸೇಜಿಗೆಲ್ಲ ಉತ್ತರಿಸಿ, ಎಫ್ ಬಿಯ ಕಂಡ ಕಂಡ ರೀಲ್ಸ್ ಗಳ ನೋಡಿ ಜನರಲ್ ನಾಲೆಜ್ ಇಂಪ್ರೂವ್ ಮಾಡಿಕೊಂಡು ಕೂತಿರುವಾಗ ಹನ್ನೊಂದುವರೆಗೆ ಬಂದ ಡಾಕ್ಟರಿಗೆ ತೋರಿಸಲು ಹೋದರೆ ಬಾಗಿಲಲಿ ತಡೆದ ಸ್ಟಾಫ್ ನರ್ಸೊಬ್ಬರು ಬಿಪಿಚೆಕ್ ಮಾಡಿ ತೂಕ ನೋಡಿ ಅಸ್ಪತ್ರೆಯವರು 500 ರೂಪಾಯಿಗೆ ಕೊಟ್ಟ ಫೈಲೊಳಗೆ ಬರೆದು ಒಳಗೆ ಕಳಿಸಿದಳು. ಒಳಗೆ ಹೋದರೆ ಡಾಕ್ಟರು ಕೂರಿ ಅಂದವರು ಕೂತ ಮೇಲೆ ನನ್ನ ಹೆಸರು ಊರು ಕೇರಿ ಕೇಳದೆ ಏನಾಗಿದೆ ಅಂತ ಕೇಳಿ ನಾನು ಹೇಳಿದ ಕೂಡಲೆ ಲ್ಯಾಬಿನವರು ಮಾಡಿಸಿಕೊಟ್ಟ ಉದ್ದದ ಚೀಟಿಯಲ್ಲಿರೊ ಪರೀಕ್ಷೆಗಳಲ್ಲಿ ಮುಕ್ಕಾಲು ಪರೀಕ್ಷೆಗಳಿಗೆ ಟಿಕ್ ಹೊಡೆದು, ಹೋಗಿ ಕೌಂಟರಲ್ಲಿ ದುಡ್ಡು ಕಟ್ಟಿ ಇದೆಲ್ಲ ಮಾಡಿಸಿಕೊಂಡು ಬನ್ನಿ ಅಂದರು. ಇವತ್ತಿನ ವೈದ್ಯರುಗಳು ನಾಡಿ ಹಿಡಿದು ನೋಡಲ್ಲ, ಸ್ಟೆತಾಸ್ಕೋಪೂ ಹಿಡಿಯಲ್ಲ. ಕೇಸ್ ಹಿಸ್ಟರಿ ಮೊದಲೇ ಕೇಳಲ್ಲ ಅಂತ ಗೊತ್ತಿದ್ದರಿಂದ ಹೆಚ್ಚೇನು ಆಶ್ಚರ್ಯವಾಗಲಿಲ್ಲ.

ಫೋಟೋ ಕೃಪೆ : google
ಅಲ್ಲಿ ಲ್ಯಾಬಲ್ಲಿ ರಕ್ತ ಮೂತ್ರ ಕೊಟ್ಟು-ಮತ್ತೆರಡು ಗಂಟೆ ಕಾದು ಹೈರಾಣಾಗಿ- ಟೆಕ್ನಿಶಿಯನ್ ಕೊಟ್ಟ ಕಂಪ್ಯೂಟರಲ್ಲಿ ಟೈಪ್ ಮಾಡಿದ ರಿಪೋರ್ಟ್ ತಗೊಂಡು ಮತ್ತೆ ಡಾಕ್ಟರ್ ಹತ್ತಿರ ಹೋದರೆ ಅವರು ಎದುರು ಕೂರಿಸಿಕೊಂಡು ಮೂರನೆ ಕ್ಲಾಸಿನವರಿಗೆ ಪಾಠ ಮಾಡುವಂತೆ “ಇದಿದು ಹೀಗಿದೆ, ಅದು ಹಾಗಿದೆ ಅಂತೇಳಿ ನಾನು ಬರೆದ ಮಾತ್ರೆಗಳನ್ನು ಒಂದು ತಿಂಗಳು ತಗೊಂಡು ನಂತರ ಬನ್ನಿ ” ಅಂತೇಳಿ, “ಮತ್ತೆ ಮಾತ್ರೆ ಔಷಧಗಳನ್ನು ನಮ್ಮಲ್ಲಿರುವ ಶಾಪಲ್ಲಿಯೇ ತಗೊಳ್ಳಿ, ಇವು ಬೇರೆ ಕಡೆ ಸಿಗೊದಿಲ್ಲ” ಅಂತೇಳಿ ಕಳಿಸಿದರು. ಹೊರಗೆ ಬಂದು ಅವರ ಮೆಡಿಕಲ್ಲಿನಲ್ಲಿಯೆ ತಗೊಂಡು ಒಂದು ತಿಂಗಳಿಗೆ ತಗೊಂಡ ಮಾತ್ರೆಗಳಿಗೆ ಕೊಡಲು ಹಣ ಕಮ್ಮಿಯಿತ್ತು ಅಂತ ತಿಂಗಳ ಬದಲಿಗೆ 15 ದಿನಕ್ಕೆ ಕೊಡಿ ಮತ್ತೆ ಬಂದು ತಗೋತೀನಿ, ಈಗ ಅಷ್ಟು ಹಣ ತಂದಿಲ್ಲ ಅಂತ ಹೇಳಿದರೆ ಅವನೋ, ಡಾಕ್ಟರ್ ಹೇಳಿದಷ್ಟೆ ತಗೊಬೇಕು ಸರ್, ಇಲ್ಲಾಂದರೆ ನಿಮಗೆ ಉಪಯೋಗವಿಲ್ಲ ಅಂತ ಹೆದರಿಸಿದಾಗ, ಆಸ್ಪತ್ರೆಯ ಹತ್ತಿರದ ಪಕ್ಕದ ಏರಿಯಾದಲ್ಲಿ ಮನೆಯಿರುವ ಗೆಳೆಯನಿಗೆ ಕಾಲ್ ಮಾಡಿ “ನನ್ನ ಖಾತೆಗಿಷ್ಟು ಹಣ ಹಾಕೊ ಬೇಗ” ಅಂದರೆ ಅವನು “ಬಡ್ಡಿ ಮಕ್ಕಳಾ, ನಾನೀಗ ಬೆಂಗಳೂರಲ್ಲಿದ್ದೀನಿ, ಇಲ್ಲಿ ಬಂದ್ರು ನೆಮ್ಮದಿಯಾಗಿರೋಕೆ ಬಿಡಲ್ವಲ್ರೋ ಹಲ್ಕಾ ನನ್ನ ಮಕ್ಕಳಾ” ಅಂತ ಅವನಿಂದ ಬೈಸಿಕೊಂಡು, “ಬಡ್ಡೀ ಮಗನೆ ನೀನು ಬೆಂಗಳೂರಾಗಾದರು ಇರು ಮಂಗಳೂರಾಗಾದರು ಇರು ಇಲ್ಲ ಎಲ್ಲಿದ್ದೀಯೊ ಅಲ್ಲೆ ನೆಗೆದು ಬಿದ್ದು ಸಾಯಿ ಮೊದಲು ದುಡ್ಡಾಕು” ಅಂತ ದಬಾಯಿಸಿ ಹಣ ಹಾಕಿಸಿಕೊಂಡು ಎಲ್ಲಾ ಔಷಧಿಗಳನನ್ನು ತೆಗೆದುಕೊಂಡು ಹೊರಗೆ ಬಂದು ಮೆಟ್ಟಿಲುಗಳ ಇಳಿಯುತ್ತ ಕೊನೆಯ ಮೆಟ್ಟಿಲಲ್ಲಿ ನಿಂತರೆ ಎದುರಿಗೆ ಪರಮಾಶ್ಚರ್ಯ,ಇಷ್ಟೊತ್ತು ಬೆಂಗಳೂರಿಂದ ಬಯ್ದುಕೊಂಡು ದುಡ್ಡು ಹಾಕಿದ ಗೆಳೆಯನ ಹೆಂಡತಿ. ಏನಿಲ್ಲಿ ಅಂದರೆ ಆಕೆ ಅಣ್ಣ ಅವರು ಬೆಂಗಳೂರಿಂದ ಹತ್ತು ನಿಮಿಷದ ಹಿಂದೆ ಪೋನ್ಮಾಡಿ ನೀವೀ ಆಸ್ಪತ್ರೆಲಿರೊದು ಹೇಳಿ, “ಏನೋ ಅರ್ಜೆಂಟಿರಬೇಕು ಸ್ವಲ್ಪ ಹಣ ಕೇಳಿದ ಹಾಕಿದ್ದೀನಿ. ಯಾವುದೊ ಧ್ಯಾನದಲ್ಲಿ ರೇಗಿಬಿಟ್ಟೆ, ನೀನೀಗಲೇ ಆಸ್ಪತ್ರೆಗೆ ಹೋಗಿ ನಿಮ್ಮನ್ನು ನೋಡಿ ಮಾತಾಡಿಸಿ ಮನೆಗೆ ಕರೆದುಕೊಂಡು ಹೋಗಿ ವಿಚಾರಿಸಿ ಇನ್ನೂ ಹಣ ಬೇಕಾದರೆ ಮನೇಲಿರುವುದರಲ್ಲಿ ತೆಗೆದು ಕೊಡು, ಅತ್ತಿಗೇನು ಬಂದಿರಬೇಕು ನೋಡಿ ವ್ಯವಸ್ಥೆ ಮಾಡು.ಜೊತೆಗೆ ಮಗಳನ್ನೂ ಕರೆದುಕೊಂಡು ಹೋಗು ಅವನಿಗೂ ಅವಳಂದ್ರೆ ಮುದ್ದು” ಅಂದರು ಅಂತೇಳಿದಾಗ “ಅಯ್ಯೋ ನನಗೆ ಅಂತಾದ್ದೇನೂ ಆಗಿಲ್ಲಮ್ಮ. ಅವನು ನನಗೂ, ನಾನು ಅವನಿಗೂ ರೇಗೋದು ಹೊಸತಾ ನಿನಗೆ ಅಂತ,ಮಗಳೆಲ್ಲಿ ಅಂತ ಕೇಳುವ ಸಮಯಕ್ಕೆ ಸರಿಯಾಗಿ ಕಾರ್ ಪಾರ್ಕಿಂಗ್ ಮಾಡಿ ಓಡಿ ಬಂದ ಚೋಟು ನನ್ನ ಎದೆಮಟ್ಟಕ್ಕೆ ನೆಗೆದು ಹಗ್ ಮಾಡಿ “ಮಾಮಾ ನಾವ್ ಬಂದಿಲ್ಲ ಅಂದ್ರೆ ನೀನು ಮನೆಗೆ ಬರದೆ ಎಸ್ಕೇಪಾಗ್ತಿದ್ದೆ ಅಲ್ವಾ- ಅದಕ್ಕೇ ನನಗೀಗ ಐಸ್ ಕ್ರಿಂ ಕೊಡಿಸು ಬಾ” ಅಂತ ದುಂಬಾಲು ಬಿದ್ದಾಗ ಅವರಮ್ಮ “ಮಾಮ ಬಂದಿರೋದು ಆಸ್ಪತ್ರೆಗೆ.ಪಿಕ್ನಿಕ್ಕಿಗಲ್ಲಾ” ಅಂತ ರೇಗಿದರೆ ಮಗಳು “ಇವತ್ತು ಮಾಮ ಏನು ಬಿಲ್ಕೊಡೋದು ಬೇಡ, ನಾನೇ ಕೊಡ್ತೀನಿ” ಅಂತ ಸಿಡಿದಳು. “ಪಿಯುಸಿ ಓದುವ ನನ್ನ ಕೋತಿಮರಿಗೆ ದುಡ್ಡೆಲ್ಲಿಂತ ಬಂತೋ” ಅಂದರೆ- “ಊರಿಂದ ಅಜ್ಜಿ ಬಂದಿದ್ದರಲ್ಲ -ಯಾರಿಗೂ ಹೇಳಬೇಡ ಅಂತ ಎರಡು ಸಾವಿರ ಕೊಟ್ಟುಹೊಗಿದ್ರು “ಅಂತ ನಕ್ಕಳು.. “ಆಯ್ತು ನೀನೀಗ ದೊಡ್ಡವಳಾಗಿ ಬಿಟ್ಟೆ. ಮಾಮ ಬಿಯರು ಕುಡಿದರೆ ಬಿಲ್ ಕೊಡ್ತೀಯಾ” ಅಂದೆ “ನನಗೂ ಕುಡಿ ಅಂತ ಹೇಳಿ ಕುಡಿಸಿದರೆ ಬಿಲ್ ಕೊಡ್ತೀನಿ” ಅನ್ನುವಷ್ಟರಲ್ಲಿ, ಅವಳಮ್ಮ ದೊಡ್ಡ ಕಣ್ಬಿಟ್ಟು ಗದರಿದಳು.

ಫೋಟೋ ಕೃಪೆ : google
ಅಷ್ಟರಲ್ಲಾಗಲೇ ಮೋಡ ಮುಸುಕ ತೊಡಗಿತ್ತು. ಮಳೆ ಬರುವ ಮುನ್ಸೂಚನೆ ನೋಡಿ “ಇನ್ನೊಂದು ದಿನ ಬೆಳಿಗ್ಗೇನೆ ಮನೆಗೆ ಬರ್ತೀನಿ. ಭಾನುವಾರದಂದು ಪಾರ್ಟಿ ಮಾಡುವ” ಅಂತೇಳಿ ಕಾರು ಹತ್ತಿಸಿದೆ, ಸ್ಟಿಯರಿಯಿಂಗ್ ಹಿಡಿದ ಕೋತಿಮರಿಗೆ “ಮುದ್ದು ನಿಧಾನ ಹೋಗು ಜೋಪಾನ !” ಅಂದರೆ,ಕಣ್ಣು ಮಿಟುಕಿಸಿ ಎಷ್ಟು ವೇಗವಾಗಿ ಹೋದಳೆಂದರೆ ನನಗೇ ಭಯವಾಗುವ ಬದಲಿಗವಳ ಧೈರ್ಯಕ್ಕೆ ಹೆಮ್ಮೆಯೆನಿಸಿತ್ತು. ಆ ಗೆಳೆಯನ ಜಾತಿ ಧರ್ಮ ಹೇಳಿದರೆ ಮನುಷ್ಯರ ನಡುವಿನ ಮಾನವೀಯ ಸಂಬಂಧಗಳಿಗೆ ಅವಮಾನ ಮಾಡಿದಂತಾಗುತ್ತದೆ. ಸೊ ಹೇಳಲ್ಲ!
- ಕು.ಸ.ಮಧುಸೂದನ ರಂಗೇನಹಳ್ಳಿ – ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ತಾಲೂಕಿನ ರಂಗೇನಹಳ್ಳಿ ಎನ್ನುವ ಹಳ್ಳಿಯಲ್ಲ ನೆಲೆಸಿರುವ ಇವರು ‘ಸಂಗಾತಿ’ ಸಾಹಿತ್ಯದ ವೆಬ್ ಪತ್ರಿಕೆಯ ಸಂಸ್ಥಾಪಕರ, ಪ್ರಧಾನ ಸಂಪಾದಕರಾಗಿರುವ ಇವರು ಇದುವರೆಗು ನಾಲ್ಕು ಕವನ ಸಂಕಲನಗಳನ್ನು, ಎರಡು ಕಥಾ ಸಂಕಲನಗಳನ್ನು,ಎರಡು ರಾಜಕೀಯ ಬರಹಗಳ ಎರಡು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
