ಖ್ಯಾತ ಲೇಖಕ ವಸುಧೇಂದ್ರ ಅವರ “ತೇಜೋ-ತುಂಗಭದ್ರಾ” ಪುಸ್ತಕ ಒಂದು ಕಾದಂಬರಿಯಾಗಿದ್ದು, ಇದೊಂದು ವಿಜಯನಗರ ಸಾಮ್ರಾಜ್ಯ, ಪೋರ್ಚುಗೀಸ್, ಬಹುಮನಿ ಸುಲ್ತಾನರ ಕಾಲದ ಇತಿಹಾಸ ಹಾಗೂ ಆ ಕಾಲದ ಜನಜೀವನವನ್ನು ಕಟ್ಟಿಕೊಡುವ ಸಾಮಾಜಿಕ ಕಾದಂಬರಿಯಾಗಿದೆ, ಈ ಕಾದಂಬರಿ ಕುರಿತು ರಂಜಿತ್ ಕವಲಪಾರ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ಮುಂದೆ ಓದಿ…
ಪುಸ್ತಕ : ತೇಜೋ-ತುಂಗಭದ್ರ
ಲೇಖಕರು: ವಸುಧೇಂದ್ರ
ಪ್ರಕಾಶಕರು : ಛಂದ ಪುಸ್ತಕ
ಬೆಲೆ : ೨೩೯ /
ನನ್ನ ಎಡ ಕಣ್ಣಂಚಲಿ ಮೂಡಿರುವ ಒಂಟಿ ಹನಿಯೊಂದು ಜಾರಲೂ ಆಗದ, ಮರಳಿ ಕಣ್ಣಿನಾಳಕ್ಕೆ ಹೋಗಲೂ ಸಾಧ್ಯವಾಗದ ಸಂದಿಗ್ಧ ಸ್ಥಿತಿಯಲ್ಲಿ ನಾನಿದನ್ನು ಬರೆಯುತ್ತಿದ್ದೇನೆ. ಈ ಕ್ಲಿಷ್ಟ ಸ್ಥಿತಿಗೆ ಕಾರಣವಾಗಿರುವುದು ನಿಮ್ಮ ತೇಜೋ-ತುಂಗಭದ್ರ ಕೃತಿ. ಭಾವನಾತ್ಮಕವಾಗಿ ನನ್ನನ್ನು ಸೋಲಿಸಿದ ನಿಮಗೆ ಇಲ್ಲಿಂದಲೇ ನಮಸ್ಕಾರ. ಈಗಾಗಲೇ ಸಾವಿರಾರು ಮಂದಿ ಮೆಚ್ಚಿರುವ ನಿಮ್ಮ ಕೃತಿಗೆ ನನ್ನ ನುಡಿ ನಮನ ಏನೇನೂ ಅಲ್ಲ ಎನ್ನುವ ಅರಿವು ನನಗಿದೆ. ಭಾವತೀವ್ರತೆ ಬರೆಯದೇ ಇರಲು ಬಿಡುತ್ತಿಲ್ಲ. ತೇಜೋ ನದಿಯಲ್ಲಿ ಬೆಲ್ಲಾ ಹಿಡಿದು ಕೊಟ್ಟ ಮೀನನ್ನು ಮತ್ತೆ ತುಂಗಭದ್ರಾ ನದಿಯಲ್ಲಿ ಗೆಬ್ರಿಗೆ ಕಾಣಿಸುವಾಗ ಆತನಲ್ಲಿ ಉಂಟಾಟ ಭಾವೋನ್ಮಾದ ನನಗೆ ಈ ಕೃತಿಯ ಓದಿನ ಹಲವು ಮಜಲುಗಳಲ್ಲಿ ಧಕ್ಕಿದೆ.

ಐತಿಹಾಸಿಕ ಕಥೆಯೊಂದನ್ನು ನೀವು ಆ ಕಾಲಘಟ್ಟದ ಜನಸಾಮಾನ್ಯರ ಮೂಲಕ ಹೇಳಿರುವ ರೀತಿ ನಿಜಕ್ಕೂ ಅಧ್ಬುತ. ಇಲ್ಲಿ ಬರುವ ಪ್ರತಿಯೊಂದು ಪಾತ್ರಗಳಿಗೂ ಧಕ್ಕೆ ಬಾರದ ರೀತಿಯಲ್ಲಿ ನೀವು ಕಾಳಜಿವಹಿಸಿ ಬರೆದಿದ್ದೀರಾ. ಅಡವಿಸಾಮಿ ಆಪ್ತವಾದಷ್ಟೇ ಚಂಪಕ್ಕಳೂ ನಮಗೆ ಹತ್ತಿರದವಳಾಗುವುದು ಆ ಕಾರಣಕ್ಕಾಗಿಯೇ.
ಪ್ರೀತಿ, ಹತಾಶೆ, ಧರ್ಮ, ದ್ವೇಷ, ಆಸೆ, ನಿರೀಕ್ಷೆ, ಕ್ರೌರ್ಯ ಇತ್ಯಾದಿ ಮನೋಸಹಜ ಗುಣಗಳೇ ಇಲ್ಲಿ ಮುಖ್ಯಪಾತ್ರವಹಿಸುತ್ತದೆ. ಕೆಲವೊಂದು ಸಾಲುಗಳಂತೂ ವಾವ್ ಅನುಭವ ನೀಡುತ್ತದೆ. ‘ದ್ವೇಷ ಮಾಡಲು ಯಾರೂ ಇಲ್ಲದ ಸ್ಥಿತಿಯಲ್ಲೂ ಮನುಷ್ಯ ತಲ್ಲಣಿಸಿ ಬಿಡುತ್ತಾನೆ’ ಇಂತಹ ಸಾಲುಗಳು ಓದುವಾಗ ಅರಿವಿಲ್ಲದೇ ತಲೆದೂಗಿ ಹೌದೌದು ಎಂದು ಅಂದುಕೊಂಡಿದ್ದೇನೆ.

ಲೇಖಕ ವಸುಧೇಂದ್ರ ಮತ್ತು ರಂಜಿತ್ ಕವಲಪಾರ
ನಿಮ್ಮ ಕೃತಿಗೂ ಮುನ್ನ ನಾನು ಕನ್ನಡದ ಶ್ರೇಷ್ಠ ಕೃತಿಗಳಲ್ಲಿ ಒಂದಾದ ಮಾಸ್ತಿ ಅವರ ಚಿಕವೀರ ರಾಜೇಂದ್ರ ಓದಿದ್ದೆ. ಇತಿಹಾಸವೆಂದರೇ ಮಹಾ ಬೋರು, ಸುಳ್ಳುಗಳ ಸರಮಾಲೆ ಎಂದೇ ಬಹುವಾಗಿ ನಂಬಿದ್ದ ನನ್ನ ನಂಬಿಕೆಯನ್ನು ಈ ಎರಡು ಕೃತಿಗಳು ಬುಡಮೇಲು ಮಾಡಿದೆ. ಇತಿಹಾಸ ಎನ್ನುವುದಕ್ಕಿಂತಲೂ ನುರಿತ ಕಥಾ ನೈಪುಣ್ಯತೆ ನಿಮ್ಮ ಈ ಕೃತಿಯುದ್ಧಕ್ಕೂ ಮನರಂಜನೆ ಒದಗಿಸಿ ಕೊಟ್ಟಿದೆ.
ನಿಮ್ಮ ಅಧ್ಯಾಯ, ತಾಳ್ಮೆ, ಶ್ರಮ ಕೃತಿಯಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ನಮ್ಮೊಳಗಿರುವ, ನಮಗೆ ಬೇಕಾಗಿರುವ, ನಮ್ಮ ಜೀವನಕ್ಕೆ ಅನುಸರಿಸಬೇಕಾದ, ನಮ್ಮದೇ ಮನೋಧರ್ಮವೇ ಇತರ ಎಲ್ಲಾ ಧರ್ಮಗಳಿಗಿಂತಲೂ ಶ್ರೇಷ್ಠ ಧರ್ಮ ಎನ್ನುವ ನೆಲೆಗಟ್ಟನ್ನು ಗಟ್ಟಿಯಾಗಿಸುವ ನಿಮ್ಮ ಪ್ರಯತ್ನ ಈ ಕೃತಿಯ ಮೂಲಕ ಯಶಸ್ವಿಯಾಗಿದೆ. ಕಣ್ಣಿಂದ ಜಾರಲೂ ಆಗದೇ ತಟಸ್ಥವಾಗಿದ್ದ ಹನಿ ಇದೀಗ ಆವಿಯಾಗಿದೆ. ಇಷ್ಟಕ್ಕೆ ನಿಲ್ಲಿಸುತ್ತೇನೆ. ಎಲ್ಲವೂ ಹೇಳಿದರೆ ಒಳಗಿಟ್ಟುಕೊಳ್ಳಲು ಏನೂ ಇರುವುದಿಲ್ಲಾ.
- ರಂಜಿತ್ ಕವಲಪಾರ – ಪತ್ರಕರ್ತರು, ಲೇಖಕರು, ಮಡಿಕೇರಿ.

ಮನಕ್ಕೆ ತಟ್ಟಿದ ಕೃತಿ ತೇಜೋತುಂಗ ಭದ್ರ
ಲಿಸ್ಬನ್ ನಿಂದ ವಿಜಯನಗರ ತಲುಪಿ ಗೋವದವರೆಗೆ