ಪ್ರೇಮ ಪ್ರಣಯದ ಆಚೆಗೆ ಬದುಕು – ಅಮೃತ ಎಂ ಡಿ

ನನಗೂ ಪ್ರೀತಿಗೂ ಅಷ್ಟಕ್ಕಷ್ಟೇ ಎಂದು ಹೇಳುವ ಕವಿಯತ್ರಿ ಅಮೃತ ಎಂ ಡಿ ಅವರ ದೃಷ್ಟಿಕೋನದಲ್ಲಿ ಪ್ರೀತಿ. ಹಂತ ಹಂತವಾಗಿ ಬೆಳೆಯುವ ಪ್ರೀತಿಯ ಬಳ್ಳಿಯ ಕುರಿತು ಬರೆದ ಲೇಖನವಿದು, ಮುಂದೆ ಓದಿ…

ನನಗೂ ಪ್ರೀತಿಗೂ ಅಷ್ಟಕ್ಕಷ್ಟೇ ಎಂದು ಹೇಳುವ ನಾನು ಬಾಳ ತುಂಬಾ ಕಂಡಿದ್ದು ಪ್ರೀತಿಯ ಪಯಣವನ್ನೆ. ಪ್ರೀತಿ ಎಂದಾಕ್ಷಣ ನಮ್ಮ ಜನತೆ ಅರ್ಥೈಸಿಕೊಂಡಿರುವ ಭಾವವೇ ತಪ್ಪು ಮೊದಲಾಗಿ. ಪ್ರಕೃತಿಯ ಪ್ರತಿ ಕಣದೊಂದಿಗು ಪ್ರೀತಿಯ ಬಳ್ಳಿ ಬೆಸೆದಿದೆ. ಪ್ರತಿ ಅಣು ಅಣುವಿಗೂ ಚೆಂದದ ಅಂದದ ಭಾವ ಬೆಸೆದು ಕೊಂಡಿದೆ.

ಭಾವಗಳು ಹೊಸೆದು – ಬೆಸೆದು ಚೆಂದದ ಭಾವ ಉಣಬಡಿಸುವ ಪಯಣ ಎಂದಷ್ಟೇ ಹೇಳಬಲ್ಲೆ. ಸಣ್ಣ ಮಗು ನೋಡಿ ಮೊಗ ಅರಳುತ್ತದೆ ,ಅಲ್ಲೊಂದು ಪ್ರೀತಿಯ ಬುಗ್ಗೆ ಅರಳುತ್ತದೆ.
ಮನದ ಬೇಸರಿಕೆಯ ಸಂಗೀತದ ಅಮಲು ಬಡಿದು ಓಡಿಸುತ್ತದೆ ಅಲ್ಲೊಂದು ಪ್ರೇಮ ಬಳ್ಳಿ ಹಬ್ಬುತ್ತದೆ. ಪ್ರಕೃತಿಯ ರಮಣೀಯ ದೃಶ್ಯ ಉಂಟುಮಾಡುವ ಉನ್ಮಾದ ಕಡಲಲ್ಲಿ ತೇಲುವಾಗ ಜಗದ ಇರುಹು ಮರೆತ ನಾವು ಅದನ್ನು ಪ್ರೀತಿ ಎಂದು ಪರಿಗಣಿಸುವುದೇ ಇಲ್ಲ.

ಹಾದಿಯ ಮಗು ಜಾರಿ ಬಿದ್ದರೆ ನಮ್ಮೊಳಗೆ ಉಂಟಾಗುವ ಸಂಕಟಕ್ಕೆ ಯಾವ ಹೆಸರಿಡುವ..? ಮತ್ಯಾರೋ ಜೀವನ್ಮರಣ ಎಂದಾಗ ಕಣ್ಣ ತೋಯಿಸುವ ಕಣ್ಣೀರಿಗೆ ಏನೆಂದು ಹೆಸರಿಡುವ.?ಮಾನವೀಯ ಮೌಲ್ಯ ಅದು ಎಂದರೆ,ಆ ಮಾನವೀಯ ಮೌಲ್ಯಗಳನ್ನು ಬದುಕಿಗೆ ಪರಿಚಯಿಸಿದ ಪ್ರೀತಿಯ ಪಯಣಕ್ಕೆ ಹೊಣೆ ಯಾರು..? ಪ್ರೀತಿ ಎಂದರೆ ಪ್ರೇಯಸಿ ಪ್ರಿಯತಮ ಎನ್ನುವ ಇಂದಿನ ಮಂದಿಗೆ ಮೌಲ್ಯಗಳ ನಡುವಣ ಬದುಕಿನ ಹಿಂದಣ ಕಥೆ ಹೇಳಬೇಕಿದೆ ನಾನಿಂದು ಬದುಕು ಇಂದು ಇದ್ದ ಹಾಗೇ ನಾಳೆ ಇರುವುದಿಲ್ಲ. ಆದ್ಯತೆಗಳು ಬದಲಾಗಬಹುದು, ಇಂದು ಇಷ್ಟವಾದ ಗುಣ ನಾಳೆ ಕಷ್ಟವಾಗಬಹುದು.

ಫೋಟೋ ಕೃಪೆ : premiumtimesng

ಇಂದು ಅತೀ ಹತ್ತಿರದಲ್ಲಿ ನಿಂತು ನೋಡುವ ಗೋಜಿಗೆ ಹೋಗದೆ,ಊಟ ತಿಂಡಿ ಆಯ್ತಾ ಎನ್ನುವ ಅರ್ಥವಿಲ್ಲದ ಸಂಭಾಷಣೆಗೆ ಬರುವ ಮರು ಉತ್ತರವೇ ಪ್ರೀತಿ ಎಂದು ಪರಿಕಲ್ಪಿಸುವ ರೀತಿಗೆ ಮೂರ್ಖತನ ಎನ್ನದೆ ಬೇರೆ ಹೇಳಲು ಏನಾದ್ರೂ ಇದೆಯಾ.

ಬಾಂಧವ್ಯಗಳು ಗಟ್ಟಿಯಾಗಿ ನಿಲ್ಲಬೇಕು ಎಂದರೆ ಭಾವಗಳು ಬಲಿಯಬೇಕು. ವ್ಯಕ್ತಿಗಿಂತ ವ್ಯಕ್ತಿತ್ವ ಬಲು ಮುಖ್ಯ ಎಂದು ಹೇಳುವ ನಾನೆ, ಕಣ್ಣಾರೆ ಕಂಡ ವ್ಯಕ್ತಿತ್ವಕ್ಕೂ, ತೆರೆಯ ಹಿಂದೆ ಕಂಡ ವ್ಯಕ್ತಿತ್ವಕ್ಕೂ ವ್ಯತ್ಯಾಸ ನೋಡಿ ಬೆಚ್ಚು ಬಿದ್ದ ನಿದರ್ಶನಕ್ಕೆ ಕಡಿಮೆ ಆಯಸ್ಸು ಏನು ಇಲ್ಲ. ಎಲ್ಲರೂ ಸ್ವಾರ್ಥಿಗಳು ಎಂದು ಹೇಳಲು ಹೋಗುವುದಿಲ್ಲ. ನಿಸ್ವಾರ್ಥ ಮನದ ಮುಂದೆ ನಿಂತು ತೀರಾ ಹತ್ತಿರದಿಂದ ಅಪ್ಯಾಯಮಾನತೆ ಪಡೆದು ಕೊಂಡಿರುವೆ. ಆದ್ರೆ ಇಂದು ನಾ ಹೇಳ ಹೊರಟಿದ್ದು ಈ ಹದಿಹರೆಯದ ಹಾದಿಯಲ್ಲಿ ಬದುಕಿನ ರಸ ನಿಮಿಷಗಳ ಗಾಳಿಗೆ ತೂರಲು ಹೊರಟ ನನ್ನ ಪೀಳಿಗೆಯ ಯುವ ಮನಸ್ಸಿಗೆ.

ಮನಸ್ಸು, ದೇಹ ಹೊರಗಿನ ಪ್ರಪಂಚದ ಜೂಜು ಬಾಜುಗಳಿಗೆ ತೆರೆದು ಕೊಳ್ಳುವ ಮುನ್ನವೇ ಪ್ರೇಮ ಸೌಧ ಕಟ್ಟಿ ಬದುಕಿನ ಅರ್ಧ ಪಯಣ ಕಾಲೇಜು ಹಂತದಲ್ಲಿಯೇ ಮುಗಿಸುವ ನಿಮಗೆ ಮುಂದಿನ ೪೦ ವರುಷದ ಅಂದಾಜು ಏನಿದೆ..?

ನಮಗೆ ತಿಳಿಯದ ವಿಷಯ ಅವ್ರಿಗೆ ತಿಳಿದಿದೆ ಎಂದಾಕ್ಷಣ, ನಮಗೆ ಇಲ್ಲದ ವ್ಯಕ್ತಿತ್ವ ಅವ್ರಿಗೆ ಇದೆ ಎಂದಾಕ್ಷಣ ಬದುಕು ಅವರ ಜೊತೆ ಚೆನ್ನಾಗಿ ಇರುತ್ತದೆ ಎಂದು ಹೇಗೆ ಭಾವಿಸಿ ಹೆಜ್ಜೆ ಹಾಕುವಿರಿ. ಇಲ್ಲಿ ಎಲ್ಲರೂ ಏಕಮಾತ್ರರು,ವ್ಯಕ್ತಿತ್ವ ಸುಣ್ಣಕ್ಕೆ ಕಟ್ಟಿದ ಬಣ್ಣದಂಗೆ, ಒಂದೊಂದು ಹಂತದಲ್ಲಿ ಒಂದೊಂದು ತೆರವಾಗಿ ತೆರೆದು ಕೊಳ್ಳುತ್ತದೆ. ಇಂದು ಕಂಡ ವ್ಯಕ್ತಿತ್ವ ನಾಳೆ ಇನ್ನಷ್ಟು ಪ್ರಬುದ್ಧತೆ ಪಡೆಯಬಹುದು, ಆದ್ರೆ ಇಂದು ಪ್ರಭುದ್ದವಾಗಿ ಕಂಡ ಬೌದ್ಧಿಕತೆ ನಾಳೆ ಕುಸಿದು ನಿಲ್ಲಬಹುದು.

ಫೋಟೋ ಕೃಪೆ : premiumtimesng

ಆದ್ರೆ ನನ್ನಂತಹವರಿಗೆ ಮಡುಗಟ್ಟದ ದುಃಖ ಕೂಡ ಶಮನ ಆಗುವುದು ಅದೇ ಪ್ರಕೃತಿಯ ಮಡಿಲಲ್ಲಿ, ನನಗೂ ಮನಸ್ಸಿಗೂ ಬುದ್ದಿಗು ವೈರುದ್ದ ಜನಿಸಿ ನಿಂತರೆ ನಾ ಹೋಗಿ ಕೂರುವುದು ಅದೇ ಪುಟಗಳ ತಿರುಗುವ ಕೆಲಸದಲ್ಲಿ ಎಲ್ಲರಿಗೂ ಒಂದೊಂದು ಭದ್ರತಾ ಭಾವ ಎನ್ನುವುದಕ್ಕಿಂತ ಮನಸ್ಸು ಪ್ರಫುಲ್ಲಗೊಳ್ಳುವ ಜಾಗ,ಹುಚ್ಚು ಅಭ್ಯಾಸ ಇದ್ದೆ ಇರುತ್ತದೆ ಅದು ಎಲ್ಲಿ ತನಕ ನಿಲ್ಲುತ್ತದೆ ಹೇಳಿ. ನನಗೂ ಸಿಟ್ಟಿತ್ತು, ಸೆಡವು ನನ್ನನ್ನೇ ನಾ ಶಿಕ್ಷಿಸಿ ಕೊಳ್ಳುವಷ್ಟು ಮಟ್ಟಿಗೆ ಇತ್ತು. ಇಂದು ಸಿಟ್ಟಿಲ್ಲ ಅಂತ ಅಲ್ಲ, ಮುಂಗೈಗೆ ಪೆಟ್ಟಾಗದಷ್ಟು ಕಡಿಮೆ ಆಗಿದೆ. ಇದು ಬದಲಾವಣೆ ಇದ್ದರೂ ಇರಬಹುದು. ಒಂದು ಹೊಸ ಅಭ್ಯಾಸ ಅಭಯ ನೀಡಿದಾಗ ನಮ್ಮೊಳಗೆ ಒಂದು ಬೆಳ್ಳಿ ಬೆಳಕು ಮೂಡುತ್ತದೆ. ಒಂದೊಮ್ಮೆ ನಾ ಓದುವ ಕೃತಿ ಬರಹವಾಗಿ ಕಾಣುತ್ತಾ ಇದ್ದ ದಿನ ಇದ್ದವು,ಓದಿನ ಮೂಲ ಓದಿನ ರೀತಿ ಬದಲಾದ ತರುವಾಯ ಬರಹಗಳ ಆಳ ಬದಲಾಗಿದೆ. ನಾ ಯೋಚಿಸುವ ದೃಶ್ಯ ಬದಲಾಗಿದೆ.

ಇದೆಲ್ಲವೂ ಸಹ ನಮ್ಮ ವೈಯಕ್ತಿಕ ಬದುಕಿನ ಏರಿಳಿತದಲ್ಲಿ ಎದ್ದೇಳುವ ಅಲೆಗಳು. ಯಾವನು ಯಾವ ಅಲೆಯನ್ನು ದೂರದೆ ಸಮವಾಗಿ ಸ್ವೀಕಾರ ಮಾಡುವನೋ,ಆತನು ಎಲ್ಲಿಲ್ಲದ ಯಶಸ್ಸು ಅನ್ನು ಪಡೆಯುತ್ತಾನೆ. ಇನ್ನೊಂದು ಬಹುಮುಖ್ಯ ವಿಚಾರ ಏನೆಂದರೆ,ಎಲ್ಲಿಯ ತನಕ ನೀ ಬ್ರಹ್ಮಚರ್ಯ ವ್ರತವನ್ನು ಪಾಲನೆ ಮಾಡುವೆಯೋ ಅಲ್ಲಿ ತನಕ ಇನ್ನ ಬದುಕು ಉಚ್ಛ್ರಾಯ ಸ್ಥಿತಿಯಲ್ಲೆ ಇರುತ್ತದೆ. ಒಂದೇ ಜೀವನ, ಒಬ್ಬರೇ ಬದುಕು ಎಂದು ಯೋಚಿಸುವಾಗ ಬದುಕು ನಿಮಗೆ ಕೊಟ್ಟ ಅವಕಾಶ, ಬದುಕಿಗೆ ನೀವು ಕೊಟ್ಟ ಅವಕಾಶ ಎರಡನ್ನೂ ಆಲೋಚಿಸಿ

ಎನ್ನುತ್ತಾ..


  • ಅಮೃತ ಎಂ ಡಿ – ಕವಿಯತ್ರಿ , ಶಿಕ್ಷಕಿ 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading