‘ಸಾಲು ಸಾಲು ಬಿಲ್ಲಿನಂತೆ, ತೋಳು ಚಾಚಿ ಬುವಿಯನಪ್ಪಿ, ಗೋಲದರ್ಧದಂತೆ ಕಂಡು ದೃಶ್ಯ ವೈಭವ’… ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರ ಲೇಖನಿಯಲ್ಲಿ ಮೂಡಿದ ಸೊಗಸಾದ ಕವನ, ಮುಂದೆ ಓದಿ…
ಏಳು ಬಣ್ಣ ಮೂಡುತಿಹುದು
ನೀಲ ಬಾನನಪ್ಪಿಕೊಂಡು
ತೇಲುತಿಹುದು ಹೊಳಪಿಳಿಸುತ ಸೃಷ್ಟಿ ಸುಂದರ
ಸಾಲು ಸಾಲು ಬಿಲ್ಲಿನಂತೆ
ತೋಳು ಚಾಚಿ ಬುವಿಯನಪ್ಪಿ
ಗೋಲದರ್ಧದಂತೆ ಕಂಡು ದೃಶ್ಯ ವೈಭವ
ಇಳೆಗಿಳಿಯಲು ಮಳೆ ಬಳಗವು
ನಳನಳಿಸುವ ಸೊಬಗಿಳಿವುದು
ಕಳೆಕಳೆಯಲಿ ಹೊಳೆವುದಿಲ್ಲಿ ರಮ್ಯತಾಣವು
ಮಳೆಯುನಿಂತು ಕ್ಷಣಕಳೆಯಲು
ತಳೆವುದಲ್ಲೆ ಬಣ್ಣವೇಳು
ಕೆಳಮುಖದಲಿ ರಂಗಿಳಿಸುವ ಭುವನ ಭವ್ಯವು
ಅಕ್ಕರೆಯಲಿ ನೋಡಿ ಬಾನು
ಮಕ್ಕಳೋಡಿ ಬಂದು ನಿಂತು
ನಕ್ಕು ನಲಿದು ಕುಣಿದವಲ್ಲೆ ನೋಡಿ ಮುಗಿಲನು
ಸಿಕ್ಕಿ ಮಳೆಗೆ ರವಿಯ ಕಿರಣ
ಡಿಕ್ಕಿ ಹೊಡೆದು ಚದುರಿ ಬೆಳಕು
ದಕ್ಕಿತಲ್ಲೆ ವರ್ಣಮಯದ ಚೆಲುವ ಬಿಲ್ಲದು.
- ಚನ್ನಕೇಶವ ಜಿ ಲಾಳನಕಟ್ಟೆ – ಕವಿಗಳು, ಲೇಖಕರು, ಬೆಂಗಳೂರು.
