ಇವ್ಳೇ ….ಲೇ ಇವ್ಳೇ…. – ನಾಗಮಣಿ ಎಚ್ ಆರ್

ಅಹಂಕಾರ ಮನುಷ್ಯನನ್ನು ಯಾವ ಮಟ್ಟಕ್ಕೆ ಕೊಂಡೊಯ್ಯುತ್ತದೆ ಎನ್ನುವುದನ್ನು ಕತೆಗಾರ್ತಿ ನಾಗಮಣಿ ಎಚ್ ಆರ್ ಯವರು ಒಂದು ಕತೆಯ ಮೂಲಕ ಓದುಗರಿಗೆ ಮನ ಮುಟ್ಟುವಂತೆ ಹೇಳಿದ್ದಾರೆ, ಇದೊಂದು ಜೀವನಕ್ಕೊಂದು ಪಾಠವಾಗುತ್ತದೆ ತಪ್ಪದೆ ಓದಿ…

ನನ್ನ ಬಾಲ್ಯದ ಗೆಳತಿಯೊಬ್ಬಳಿದ್ದಾಳೆ. ಅವರ ಮನೆಯಲ್ಲಿ ಎಲ್ಲರಿಗೂ ಭಲೇ ದುರಹಂಕಾರ. ಅವಳ ತಂದೆ ನನ್ನಪ್ಪ ಚಡ್ಡಿ ದೋಸ್ತ್ . ಹಾಗಾಗಿ ನನ್ನ ಕಂಡರೆ ಸ್ವಲ್ಪ ಚೆನ್ನಾಗಿ ಆದರದಿಂದ ಮಾತನಾಡ್ತಿದ್ರು ಅವಳ ತಂದೆ.

ನಾನು ಶಾಲೆಗೆ ಹೋಗುವಾಗ ಬರುವಾಗ , ಕಾಲೇಜಿಗೆ ಹೋಗಿ ಬರುವಾಗ, ಟೈಪಿಂಗ್ ಕ್ಲಾಸಿಗೆ , ಪಾನಿಪುರಿ ತಿನ್ನಲು , ಕದ್ದು ಸಿನೆಮಾ ನೋಡಲು ,( ಒಂದೆರಡು ಭಾರಿ ಕಾಲೇಜ್ ಬಂಕ್ ಮಾಡಿ ಹೋಗಿದ್ದೆವು ) ಮನೆಯ ಬಾಗಿಲು ತೆರೆದ ಕೂಡಲೇ ದವಡೆಗೆ ಕಡುಬು ಕೊಟ್ಟಿದ್ದರು ಅಮ್ಮ) N.S.S. camp ಗೆ ಹೋದಾಗ ,ಹೀಗೆ ಒಟ್ಟಿಗೆ ಇರುತ್ತಿದ್ದೆವು. ನನ್ನ ಬಿಟ್ಟು ಅವಳಾಗಲಿ , ಅವಳ ಬಿಟ್ಟು ನಾನಾಗಲೀ ಎಲ್ಲೋ ಹೋಗ್ತಿರಲಿಲ್ಲ.

ಪ್ರತೀ ಶನಿವಾರ ಸಂಜೆ ನೀರುಬಾಗಿಲು ಆಂಜನೇಯ ಸ್ವಾಮಿ ದೇವಾಲಯಕ್ಕೆ ಹೋಗೋದು , ಗುರುವಾರ ಗುರುರಾಯರ ಮಠಕ್ಕೆ ಹೋಗಿಬರೋದು ನಮ್ಮಿಬ್ಬರ ಅತ್ಯಂತ ಮೆಚ್ಚಿನ ಕೆಲಸವಾಗಿತ್ತು . ಈ ವಿಚಾರ ನನ್ನ ಗೆಳತಿಯ ಅಮ್ಮನಿಗೆ ಇಷ್ಟವಾಗ್ತಿರಲಿಲ್ಲ . ಅವರು ನನ್ನ ಕಂಡಕೂಡಲೇ , ಲೇ ಇವ್ಳೇ ….. ನೋಡೇ ….. ನಾನು ಮಠಕ್ಕೆ ಹೋಗ್ತೀನಿ ನನ್ನ ಜೊತೆ ಏನ್ ಮಾಡಿದ್ರೂ ಬರಲ್ಲ . ನಿನ್ನ ಜೊತೆಗೆ ಹೊರಟು ಬಿಡ್ತಾಳೆ . ಮಾರುತಿ ಟೆಂಪಲ್ ಗೆ ನಿನ್ ಜೊತೆ , ಫಿಲ್ಮ್ ಗೆ ಕೂಡಾ ನನ್ ಜೊತೆ ಬರಲ್ಲ . ಅಶಾ ನಾನು ಹೋಗ್ತೀವಿ ಅಂತಾಳೆ. ಅಂತಾ ಸ್ವಲ್ಪ ಅಸಹನೆಯಿಂದ ನಡಿಯೋರು.

ಅಮ್ಮಾ ನವರಾತ್ರಿಯ ಸಮಯದಲ್ಲಿ ಲಕ್ಷಾರ್ಚನೆ ಮಾಡಿ , ಪ್ರತಿದಿನ ಒಂದಿಬ್ಬರಿಗೆ ಊಟಕ್ಕೆ ಕರೆದು , ಮಡಿಲು ತುಂಬೋರು . ಹಾಗೆಯೇ ಅ ದಿನ ನನ್ನ ಗೆಳತಿಗೆ , ಇವತ್ತು ನಮ್ಮನೆಯಲ್ಲೇ ಊಟ ಮಾಡುವೆಯಂತೆ , ಕುಂಕುಮ ಇಟ್ಕೊಂಡು ಹೋಗುವೆಯಂತೆ ಮನೆಯಲ್ಲಿ ಹೇಳಿ ಬಾ ಅಂದ್ರು . ಸರಿ‌ ಅವಳು ಹೂಂ ಅಂದ್ಲು , ಗಸಗಸೆ ಪಾಯಸ , ಹಯಗ್ರೀವ , ಕಾಯನ್ನ
ಎರಡು ಬಗೆಯ ಕೋಸಂಬರಿ , ಎರಡು ಬಗೆಯ ಪಲ್ಯ ಸಾರನ್ನ ಮೊಸರನ್ನ ಇಷ್ಟು ಅಡುಗೆ ಮಾಡಿ ಬಡಿಸಿ ಅಕ್ಕರೆಯಿಂದ ಬಲವಂತವಾಗಿ ಹೊಟ್ಟೆ ತುಂಬಾ ಊಟ
ಮಾಡಿಸಿದ್ದರು.

ಫೋಟೋ ಕೃಪೆ : google

ಹಿಂದಿನ ದಿನವೇ ನಾನು ಅವಳು ಇಬ್ಬರೂ ಹೋಗಿ ಉದ್ದ ಲಂಗ ರವಿಕೆಯ ಬಟ್ಟೆಯನ್ನು ವೆರೈಟಿ ಸೆಂಟರ್ ನಿಂದ ತಂದಿದ್ದೆವು . ( ನನಗೆ ನನ್ನ ತಂಗಿಗೆಂದು ಹೇಳಿದ್ದೆ) ಅವಳಿಗೆ ಗೊತ್ತಿರಲಿಲ್ಲ.  ಅವಳು ಇಷ್ಟಪಟ್ಟು ಆರಿಸಿದ್ದ ಬಟ್ಟೆಯನ್ನು ಅಮ್ಮ ಹಣೆಗಿಟ್ಟು ಹೂವು ಹಣ್ಣು ದಕ್ಷಿಣೆಯೊಡನಿಟ್ಟು ಆಶೀರ್ವಾದ ಮಾಡಿ, ದೇವರ ಮುಂದೆ ಕೂರಿಸಿ ಕೊಟ್ಟಿದ್ದರು.

ಮಾರನೆಯ ದಿನ ನಾನವರ ಮನೆಗೆ ಹೋದರೆ ಅವಳಮ್ಮ ನನ್ನ ನೋಡಿದ ತಕ್ಷಣ ಲೇ … ಇವ್ಳೇ … ನೆನ್ನೆ ಏನು ನಿಮ್ಮನೇಲಿ ಫಂಕ್ಷನ್ ಅಂದ್ರು . ಏನಿಲ್ಲ ಅಂಟಿ ನವರಾತ್ರಿ ಪೂಜೆ ಮಾಡ್ತಾರಲ್ವಾ ಅಮ್ಮಾ. ಒಂಭತ್ತು ದಿನಗಳು ಒಂಭತ್ತು ಜನರಿಗೆ ಅರಿಸಿನ ಕುಂಕುಮ ಕೊಡ್ತಾರೆ ಅಂದೆ . ಅದಕ್ಕವರು ಹೌದಾ ನಮ್ ಕಡೇಲೂ ಹೀಗೇ ಮಾಡ್ತೀವಿ, ಅದ್ರೇ ರೇಷ್ಮೆ
ಲಂಗ ಬ್ಲೌಸ್ ಕೊಡ್ತೀವಿ. ಅದಕ್ಕೆ ಹೆಚ್ಚು ಹಣ. ಪಾಪ ನಿಮ್ಮಮ್ಮ ಎಂತದ್ದೋ ಒಂದು ಕೊಟ್ಟಿದ್ದಾರೆ ಅಂದ್ರು. ನನಗೇನು ಹೇಳಲು ತಿಳಿಯಲಿಲ್ಲ.

ಮನೆಗೆ ಬಂದು ಸಪ್ಪಗೆ ಕುಳಿತಿದ್ದೆ . ಅಮ್ಮಾ ಯಾಕೋ ನಾಗ ? ಏನಾಯ್ತು ? ಒಂಥರಾ ಇದ್ಯಲ್ಲ ಅಂದ್ರು , ಅಳು ಅವಮಾನ ತಡೆಯಲಾರದೆ ಇಂದ್ರಮ್ಮನ ಮಡಿಲಲ್ಲಿ ತಲೆಯಿಟ್ಟು ಜೋರಾಗಿ ಅತ್ತೆ. ಇಂದ್ರಮ್ಮನಿಗೆ ಗಾಬರಿ , ಅಯ್ಯೋ ನಾಗಾ ….. ನಾಗ ಏನಾಯ್ತಮ್ಮ ? ಅಳಬೇಡಾ ಏನಾಯ್ತು ಹೇಳೂಂತಾ ಅವರೂ ಜೋರಾಗಿ ಅಳಲು ಶುರುವಿಟ್ಟರು.

ಸ್ವಲ್ಪ ಮಟ್ಟಿಗೆ ಸಮಾಧಾನವಾದ ನಂತರ ನಡೆದ ಮಾತನ್ನೆಲ್ಲ ಹೇಳಿದೆ . ಅಮ್ಮನಿಗೂ ನೋವಾಯ್ತೇನೋ ಅವರು ನಿಧಾನವಾಗಿ , ದೇವರು ಏನು ಕೊಟ್ಟಿದ್ದಾನೋ ಆ ಸರ್ವ ಮಂಗಳೇ ತಾಯಿ ನನಗೆ ಕೊಟ್ಟಿದ್ದರಲ್ಲಿ ಲೋಪಬಾರದಂತೆ ನಿರ್ವಂಚನೆಯಿಂದ ಮಾಡಿದ್ದೇನೆ. ಫಲಾಫಲಗಳು ದೇವಿಗೆ ಬಿಟ್ಟಿದ್ದು ಅಂದರು.

ಒಂದು ಸ್ವಲ್ಪ ದಿನ ಅವರ ಮನೆಗೆ ನಾ ಹೋಗಲೇ ಇಲ್ಲ. ಒಂದು ಮಂಗಳವಾರ ಸಂತೆಗೆ ಹೋಗಿದ್ದವರು ಅದೇ ದಾರಿಯಲ್ಲಿದ್ದ ನಮ್ಮ ಮನೆಗೆ ಬಂದು, ರೀ ಇವ್ರೇ ……. ನಿಮ್ಮ ಮಗಳು ಮನೆಗೆ ಬಂದಿಲ್ಲಾಂತಾ ನನ್ನ ಮಗಳು ನನಗೆ ಬೈದು , ಜಗಳ ಮಾಡಿ , ಮಾತೂ ಸಹಾ ಆಡ್ತಿಲ್ಲ . ಕಳಿಸ್ರೀ ಇವ್ರೇ . ನಾಳೆ ನಮ್ಮನೆಗೆ ನೀ ಊಟಕ್ಕೆ ಬಾರೆ ಇವ್ಳೇ ಅಂದ್ರು.

ನನಗೆ ಹೋಗಲೂ ಇಷ್ಟವಿಲ್ಲ . ಆದರೆ ನನ್ನ ಗೆಳತಿ ಅವಳೇ ಬಂದು ಬಹಳ ಬಲವಂತವಾಗಿ ಕೈ ಹಿಡಿದು ಅವರ ಮನೆಗೆ ಕರ್ಕೊಂಡು ಹೋದಳು . ನನಗೋ ಅವಳಮ್ಮನನ್ನು ನೋಡಲೂ ಬೇಸರ. ಬಾರೇ ಇವ್ಳೇ ಊಟ ಮಾಡು . ನಮ್ಮನೆಯಲ್ಲಿ ಡೈವಿಂಗ್ ಟೇಬಲ್ ಮೇಲೆ ಊಟ ಮಾಡೋದು , ನೆಲದ ಮೇಲೆ ಚಾಪೆ ಹಾಕೊಂಡು ಎಲೆಯಲ್ಲಿ ಊಟಮಾಡೋದು ನಮಗೆ ಗೊತ್ತೇ ಇಲ್ಲ . ನಮ್ಮ ಮನೇಲಿ ಎಲ್ರೂ ಬೆಳ್ಳಿ ತಟ್ಟೆಯಲ್ಲಿ ಊಟ ಮಾಡೋದು ಅಂತೇಳಿ ಅವರು , ನನ್ನ ಗೆಳತಿ ಇಬ್ಬರೂ ಬೆಳ್ಳಿ ತಟ್ಟೆಗೆ ಊಟ ಬಡಿಸಿಕೊಂಡು , ನನಗೆ ಒಂದು ಸ್ಟೀಲ್ ತಟ್ಟೆಯಲ್ಲಿ ಊಟ ಬಡಿಸಿದರು.

ಫೋಟೋ ಕೃಪೆ : google

ಹೆಸರುಬೇಳೆ ಪಾಯಸ ಈರುಳ್ಳಿ ಗೊಜ್ಜು ಬೀನ್ಸ್ ಪಲ್ಯ , ದೇವಸ್ಥಾನದಲ್ಲಿ ಕೊಟ್ಟ ಪುಳಿಯೋಗರೆ , ಅನ್ನ ತಿಳಿಸಾರು , ಮಜ್ಜಿಗೆ ಅನ್ನ ,ಉದ್ದಿನ ಹಪ್ಪಳ ಬಡಿಸಿ. ನಮ್ಮನೆಯಲ್ಲಿ ಪ್ರತಿದಿನವೂ ಹೀಗೇ ಊಟ ಮಾಡೋದು ಅಂದ್ರು . ಒಗ್ಗರಣೆ ಮಾತೊಂದನ್ನು ಹೇಳಿದರು. ನಿನಗೆ ಡೈನಿಂಗ್ ಟೇಬಲ್ ಮೇಲೆ ಕೂತು ಊಟ ಮಾಡೋಕೆ ಬರಲ್ಲ ಅಲ್ವಾ ? ನಮಗಂತೂ ಹಾಗೆಲ್ಲಾ ಆಗೋದೇ ಇಲ್ಲ .

ಇದೆಲ್ಲಾ ನಡೆದು ಮೂವತ್ತು ವರ್ಷಗಳ ನಂತರ ಇದ್ದ ಸ್ವಂತ ಮನೆಯನ್ನು ಮಾರಿ , ವ್ಯಾಪಾರದಲ್ಲಿ ಹೀನಾಯ ನಷ್ಟವಾಗಿ , ಅವರಿಗೆ ಮನೆಯಲ್ಲೂ ಅಡುಗೆ ಮಾಡಿಕೊಳ್ಳಲಾಗದಷ್ಟು ಖಾಯಿಲೆಯಾಗಿ , ಅವರು ಸತ್ತಾಗ ನನ್ನ ಗೆಳತಿಯ ಗಂಡ ನನಗೆ ಕಾಲ್ ಮಾಡಿ ಆಶಾ ಮೇಡಂ ನಮ್ಮತ್ತೆ ಹೋಗ್ಬಿಟ್ಟರಂತೆ , ಸ್ವಲ್ಪ ನೀವು ಹೋಗಿ ನೋಡ್ತೀರಾ ? ನಮ್ಮ ಮಾವನಿಗೆ ಪೆರಾಲಿಸಿಸ್ ಅಗಿದೆ , ಎದ್ದೋಗಿ ನೋಡೋಕಾಗಲ್ಲ . ಬೆಂಗಳೂರಿನಿಂದ ನಾವು ಬರಬೇಕಲ್ವಾ ಹಾಗಾಗಿ ಅಂದ್ರು.

ನಾ ಹೋಗಿ ನೋಡಿದರೆ , ಬೀರು ತುಂಬಾ ಬಹಳ ಸೀರೆಗಳನ್ನು ತುಂಬಿಸಿಕೊಂಡಿದ್ದವರಿಗೆ , ಉಟ್ಟ ಸೀರೆ ಮಾಸಲಾಗಿತ್ತು . ಇದ್ದವುಗಳನ್ನು ಉಡಲಾಗದಷ್ಟು ನಿತ್ರಾಣವಾಗಿದ್ದರು , ಆದರೆ ನಾನು ಡಾಕ್ಟರ್ ನ ಕರೆ ತಂದು ತೋರಿಸುವುದರೊಳಗೆ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು . ಕೊನೆಯದಾಗಿ ನನ್ನ ಕೈನಿಂದಲೇ ಬಾಯಿಗೆ ನೀರು ಬಿಡುವಂತಾಗಿದ್ದು ನೋವೆನಿಸಿತು.
ಅಷ್ಟೊಂದು ಬಿಂದಾಸಾಗಿ ಬದುಕಿ ಬಾಳಿದವರ ಸಾವು ಬಂದದ್ದಾದರೂ ಎಂತಹುದು ?

ಈ ದಿನ ಚಂಪಾ ಚಿನಿವಾರ್ ರವರ ನಗೆಬರಹ ಓದಿ ಇವ್ಳೇ …….. ಇವ್ಳೇ ಎನ್ನುತ್ತಿದ್ದವರ ನೆನಪಾಯ್ತು…

ವಂದನೆಗಳು .


  • ನಾಗಮಣಿ ಎಚ್ ಆರ್ – ಲೇಖಕಿ, ಸಾಹಿತ್ಯ ಪ್ರಿಯರು, ಹಾಸನ. 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading