‘ಮನ ತುಂಬಿದ ಬೆಳಕು’ ಸಣ್ಣಕತೆ – ನಾಗಮಣಿ ಹೆಚ್ ಆರ್

ರಮಾಳ ಕ್ರೂರ ನೋಟ ತನ್ನ ಎದೆಯನ್ನೂ ಸೀಳಿಬಿಡುವಷ್ಟೂ ಚೂಪಾದ ನೋಟಕ್ಕೆ ಹೆದರದಿದ್ರೂ , ಅವಳ ನಾಲಿಗೆಯ ಬೆಂಕಿ ಮಾತಿಗೆ ಅರುಣ ನಲುಗಿ ಹೋಗಿದ್ದ. ರಮಾ ಹೊರಗಿನವರಿಗೆ ಅರುಣ ಕಟುಕನೆಂಬಂತೆ ಬಿಂಬಿಸಿದ್ದಳು. ಅರುಣನ ಕತೆ ಏನಾಯಿತು, ನಾಗಮಣಿ ಹೆಚ್ ಆರ್ ಅವರು ಬರೆದಿರುವ ಈ ಕತೆಯನ್ನು ತಪ್ಪದೆ ಮುಂದೆ ಓದಿ…

ಜಾನೂ … ಜಾನೂ… ಏಯ್ ಜಾನಕಿ, ಏನ್ ಯೋಚನೆ ಮಾಡ್ತಿದ್ಯಾ?… ಆಗಿನಿಂದ ಎಷ್ಟು ಸಾರಿ ಕೂಗಿದೆ. ಕಿವಿ ಕೇಳಸಲ್ವಾ ? ನೋವಿನ ನಗೆ ನಕ್ಕವಳ ಕಣ್ಣಲ್ಲಿ ನೋವಿನ ಜೊತೆಗೆ ತೆಳುವಾದ ನೀರಿನ ಎಳೆಯೂ ಕಾಣಿಸಿತು.

‘ಇಲ್ಲಾ ಕಣೋ ಅರೂ, ಏನೋ ಯೋಚಿಸುತ್ತಿದ್ದೆ, ನೀ ಬಂದದ್ದೂ ಕಾಣಿಸಲಿಲ್ಲ. ಕೂಗಿದ್ದೂ ಕೇಳಿಸಲಿಲ್ಲ. ನಿನ್ನದೇನು ವಿಚಾರ?’… ನಿನ್ನ ಹೆಂಡ್ತಿ ಮುಂದೆ ಮಾತು ಬೇಡವೆಂಬಂತೆ ಜಾನಕಿಯ ಬಾಯಿ ಮೇಲೆ ಕೈಯ್ಯಿಟ್ಟವನು ಬಿಟ್ಟ ಉಸಿರಲ್ಲೇ ಅರಿವಾಯ್ತು ನೋವಿನಲ್ಲಿದ್ದಾನೆಂದು. ಏನೋ ಹೇಳಲೂ ಇಬ್ಬರೂ ಅರೂ ಎಂದ ಜಾನಕಿಯ ಜೊತೆಗೆ ಅರುಣನೂ ಜಾನೂ ಎಂದವರು ಇಬ್ಬರೂ ಜೋರಾಗಿ ನಗತೊಡಗಿದರು. ಅದೆಷ್ಟು ಬಲಿಷ್ಠ ನಗುವೆಂದರೆ, ಕಣ್ಣಲ್ಲಿ ನೀರು… ನಕ್ಕಿದ್ದಕ್ಕೆ ಬಂದದ್ದೋ ಇಬ್ಬರ ನೋವು ಹೊರಹಾಕಿದ ಬುದ್ದಿವಂತಿಕೆಯೋ , ನೋಡುವವರಿಗೆ ಅರಿವಾಗದಿದ್ದರೂ ಇವರಿಬ್ಬರಿಗೆ ಮಾತ್ರ ನೂರಕ್ಕೆ ನೂರರಷ್ಟು ಅರ್ಥವಾಗಿತ್ತು. ನೋಡು ಜಾನೂ ನಾಳೆಯಿಂದ ಹದಿನೈದು ದಿನದೊಳಗೆ ಯಾವಾಗ ಬೇಕಾದರೂ ಹೋಗಿ ಜಾಯಿನ್ ಆಗಬಹುದು. ಏನೇ , ಯಾವುದೇ ಸಮಸ್ಯೆ ಇದ್ದರೂ ನನಗೆ ಹೇಳು. ತಕ್ಷಣವೇ ನಾ ಬರಬೇಕಾದಲ್ಲಿ ಬರುವೆ. ಇಲ್ಲಿಂದಲೇ ನಿನ್ನ ಸಮಸ್ಯೆಗೆ ಪರಿಹಾರ ಸಿಗುವುದಾದ್ರೆ ಅದಕ್ಕೂ ಈ ನಿನ್ನ ಬಡ ಸ್ನೇಹಿತ ಒದಗಿ ಬರ್ತಾನೆ. ನೀನ್ಯಾವುದೇ ವಿಷಯಕ್ಕೂ ತಲೆ ಕೆಡಿಸಿಕೊಳ್ಳಬೇಡ ಗೊತ್ತಾಯ್ತಾ ? ಅವನ ಕೈಯ್ಯನ್ನು ತನ್ನೆರಡು ಕೈನಲ್ಲಿಟ್ಟುಕೊಂಡು , ತನ್ನ ಕಣ್ಣಿಗೊತ್ತಿಕೊಂಡವಳ ಕಣ್ಣೀರು ಅರುಣನಿಗೆ ವಿದ್ಯುತ್ ಶಾಖ್ ಹೊಡೆದಷ್ಟು ನೋವಾಯ್ತು.

ಅದರೂ ಮನ ನೋಯುತ್ತಿದ್ದರೂ ‘ಜಾನೂ… ಏನೂ ಭಯ ಬೇಡಾ. ನಾನಿದ್ದೇನೆ’… ಎನ್ನುವ ಮಾತು ಗಂಟಲಿನಿಂದ ಹೊರಬಾರದೆ. ಕತ್ತು ಹಿಚುಕಿದಂತೆ ಒದ್ದಾಡಿದ. ತನ್ನೆರಡು ಕೈನಿಂದವಳ ಕೈ ಅದುಮಿ ನಿಧಾನವಾಗಿ ಕೈ ಬಿಟ್ಟ. ಮನಸ್ಸಿಲ್ಲದ ಮನದಿಂದ ಕುಳಿತಿದ್ದವನೆದ್ದು ಬಿಟ್ಟು,’ ಜಾನೂ’… ಅ ಹೆಸರು ಕರೆಯುವಾಗೆಲ್ಲಾ ಇನ್ನ ಹೆಸರು ಅಷ್ಟೊಂದು ಸೊಗಸೇ ? ಎಂಬ ಪ್ರಶ್ನೆ ಜಾನಕಿಯ ಮನದಲ್ಲಿ ಮೂಡುತ್ತಿತ್ತು. ಆದರೆ ತಾನು ಹಾಗೇ ಯೋಚಿಸೋದೂ ಅಪರಾಧ ಎಂಬ ವಿಷಯ ಬಹಳವಾಗಿ ಚುಚ್ಚುತ್ತಿತ್ತೆಂಬುದು ಸುಳ್ಳಲ್ಲ .

‘ಜಾನೂ… ತಗೋ ಇದು ನಿನಗೆ ಊರಿಗೆ ಹೋಗುವಾಗ ಮತ್ತು ಅಲ್ಲಿಗೆ ಹೋದ ನಂತರ ನಿನಗೆ ಅತೀ ಅವಶ್ಯಕತೆ ಇರುವ ಕೆಲವು ಮುಖ್ಯ ವಸ್ತುಗಳು ಇದರಲ್ಲಿದೆ. ಈಗೇನೂ ಈ ಬಾಕ್ಸ್ ಓಪನ್ ಮಾಡಲು ಹೋಗೋದು ಬೇಡಾ, ತಗೋ’… ಎಂದು ಮರದ ಛೇರಿನ ಮೇಲಿಟ್ಟಿದ್ದ ದೊಡ್ಡದಾದ ಅಮೇಜಾನ್ ಬಾಕ್ಸನ್ನು ತಂದು ಅವಳ ಮುಂದಿಟ್ಟ . ‘ಲೋ ಗಾಂಪ ಇದೇನೋ ಇದು. ಇಷ್ಟು ದೊಡ್ಡ ಡಬ್ಬ ತಂದಿದ್ಯಾ?… ಇದರಲ್ಲಿ ನಾನು ಕೂತು ಪ್ಯಾಕಾಗಬಹುದು’… ಬಾಯಲ್ಲಿ ನಗುವಿದ್ದರೂ ಕಣ್ಣಲ್ಲಿ ಸಾವಿರ ನೋವಿತ್ತು. ಬಾಯಿ ನಕ್ಕರೂ ಕಣ್ಣು ನಗ್ತಿಲ್ಲ ಜಾನೂ , ಅನ್ನೋ ಮನಸಾದರೂ ಮಾತು ಹೊರಬರಲಾರದೇ ಚಡಪಡಿಸಿತು.

ಪತಿಯಿಂದ ಅತಿ ಹೆಚ್ಚು ನೋವನುಭವಿಸಿ , ಇಪ್ಪತ್ತು ವರ್ಷಗಳ ನರಕ ಧೋರಣೆಯ ಬದುಕು ಅನುಭವಿಸಿದ್ದು ಕಡಿಮೆಯೇನಲ್ಲ. ಆದರೆ ಹೊರಗೆ ಬಾರದಂತೆ ಅವಳನ್ನು ರಿಮೋಟ್ ಕಂಟ್ರೋಲ್ ನಂತೆ ಪರಿಗ್ರಹಿಸಿ, ಬೈದು ಹೊಡೆದು ತುಳಿದು ಎಲ್ಲಾ ದೌರ್ಜನ್ಯದ ಸಾಕ್ಷಿಗಳು ಅವಳ ಮೈಮೇಲೆ ರಾರಾಜಿಸುತ್ತಿತ್ತು. ಕೂತರೆ ನಿಂತರೆ ತಪ್ಪೆನ್ನುವ ಅವನ
ದುರುಳತನಕ್ಕೆ ಶರಣಾಗಿ ಬಿಟ್ಟಿದ್ದಳು.

ಮೈಸೂರಿನಲ್ಲಿ ಕೆಲಸದಲ್ಲಿದ್ದ ಅರುಣ ವೃತ್ತಿಯಲ್ಲಿ ಇಂಜಿನಿಯರ್ ಅಗಿದ್ದು, ಹುಬ್ಬಳ್ಳಿ ಅವನ ಹುಟ್ಟೂರು. ರೈಲಿನಲ್ಲಿ ಪ್ರಯಾಣಿ ಸುವಾಗಾದ ಪರಿಚಯ, ಅದರೆ ಅಷ್ಟು ಸುಮಸಿನ ಅರುಣನಿಗೆ ಎಂತಾ ನೋವು ಕೊಟ್ಟಿದ್ದ ಆ ದೇವರು ಎನಿಸಿದ್ದು ಸುಳ್ಳಲ್ಲ. ತಾನು ಪತಿಯಿಂದ , ಅವನು ಪತ್ನಿಯಿಂದ ದೌರ್ಜನ್ಯಕ್ಕೊಳಗಾದವರೆಂದು ಗೊತ್ತಾದಾಗ , ಇಬ್ಬರೂ ಆತ್ಮೀಯರಾಗಿದ್ದರು. ರೈಲಿನಲ್ಲಿ ತಲೆಸುತ್ತಿ ಬಿದ್ದ ತನ್ನನ್ನು, ನೀರು ಕೊಟ್ಟು ಕೈಹಿಡಿದೆತ್ತಿ ತನಗೆ ಅಸರೆಯಾಗಿ ನಿಂತು ಮನೆಗೆ ತಲುಪಿಸಿದಾತ. ಯಾರೆಂದೂ ಗೊತ್ತಿರದವನು ಅಂದು ಮಾಡಿದ ಸಹಾಯ ಇಂದು ಸ್ನೇಹ ಹೆಮ್ಮರವಾಗಿ ಬೆಳೆದಿತ್ತು.

ದಿನಕ್ಕೊಮ್ಮೆಯಾದರೂ ಫೋನಿನಲ್ಲಿ ಮಾತಾಡಿ , ಸ್ನೇಹಪರ ಮಾತುಗಳು ಜಾನಕಿಯ ನೋವಿಗೆ ಮುಲಾಮಿನಂತೆ ಕೆಲಸ ಮಾಡುತ್ತಿತ್ತು. ಅರುಣನ ಬದುಕು ಸಹಾ ತನ್ನ ಬದುಕಂತೆ ಬೆಂಕಿಯಲ್ಲಿ ಬಿದ್ದ ಪತಂಗ ಒದ್ದಾಡುವಂತೆ ಅವನ ಹೃದಯ ಒದ್ದಾಡ್ತಿದ್ದರೂ , ನೋಡುವ ಕಣ್ಣಿಗೆ ಅವನ ಹೃದಯ ಹಿಂಡುವ ನೋವು ಮಾತ್ರ ಯಾರಿಗೂ ಕಾಣಿಸದಂತೆ ಮುಚ್ಚಿಟ್ಟು
ನಡೆವ ಅವನ ನಗು ಮಾತುಗಳು, ಎಂತಹವರನ್ನೂ ಅವನ ಸ್ನೇಹದ ಮಾತಿಗೆ ಮರುಳಾಗುವಷ್ಟು ಮನಸು ಉಲ್ಲಾಸಿತನಾಗಿರುತ್ತಿದ್ದವ.

ಜಾನಕಿಯ ಸ್ನೇಹ , ಮಾತು ಅವಳು ಹಾಡುತ್ತಿದ್ದ ಹಾಡುಗಳು , ಭಾವಗೀತೆ ದಾಸರ ಪದಗಳು ಚಲನಚಿತ್ರ ಗೀತೆಗಳು , ಅವಳ ಅನುಭವದಿಂದ ಬಂದ ಅನುನಯ ವಾದ ಮಾತುಗಳೂ ಸಹಾ ಅರುಣ ತನಗಾಗೇ ಹೇಳುವಳೆಂಬ ಭಾವಕ್ಕೆ ಶರಣಾಗತನಾಗಿದ್ದ . ಸಾವಿರ ಸ್ನೇಹದ ತಂತುಗಳಿದ್ದರೂ , ಮನಕೆ ಹಿತ ತರುವ ತಂತುಗಳು ಹೆಚ್ಚಿರಲ್ಲ. ಸಾವಿರದಲ್ಲಿ ಒಂದೋ ಎರಡೋ ಇರಬಹುದು.

ಇಬ್ಬರ ಮನದಲ್ಲೂ ಅರಿವಾಗದ ಒಂದು ಅಪೂರ್ವ ಭಾವವೊಂದು ಸುಳಿದಾಡಿ ಬಂಗಾರದ ಕಿರಣಗಳ ಜೊತೆಗೆ ಪಚ್ಚೆಯ ಕಾಡಿನಲ್ಲಿ ಬೆಳ್ಳಿಯ ನೀರಿನ ಜಲಪಾತ ಪ್ರಶಾಂತತೆಯಿಂದ ಹರಿಯುತ್ತಿದ್ದು , ಕೇವಲ ಗುಪ್ತಗಾಮಿನಿಯಾಗೇ ಇತ್ತು. ಇಬ್ಬರಿಗೂ ತಮ್ಮಯ ಮಿತಿ ಏನೆಂಬರಿವಿತ್ತು . ಯಾವತ್ತೂ ತನ್ನ ಮನೆಯಲ್ಲಿಯೇ , ತನ್ನ ರಕ್ತಬೀಜಾ ಸುರನ ಅಪರಾವತಾರದ ಪತಿಯೆದುರೇ ಫೋನಿನಲ್ಲಿ ಮಾತ ನಾಡುವಾಗಲೂ ಲಕ್ಷ್ಮಣ ರೇಖೆಯ ಹಿಡಿತದಲ್ಲಿಯೇ ಇರುತ್ತಿತ್ತು . ಅಡ್ಡದಾರಿಯ ಹಿಡಿದ ಯಾವುದೇ ಮಾತಿಗೂ ಅವಕಾಶವಿರಲಿಲ್ಲ.

ಅರುಣ್ ಸರ್ ಇದ್ದ ಮಾತೀಗ ಅರೂ ಆಗಿತ್ತಷ್ಟೇ . ಜಾನಕಿಯವರೇ ಇದ್ದದ್ದು ಜಾನೂ ಅಗಿತ್ತಷ್ಟೇ . ಕೀಳು ಕಲ್ಮಶಗಳನ್ನು ನೋಡಲೂ ಸಿಗದಂತಿತ್ತು . ತನ್ನ ಮನೆಯಿಂದ ಹತ್ತು ಮನೆಗಳಷ್ಟು ಮುಂದಿತ್ತು ಅರುಣನ ಮನೆ. ತುಂಬಿದ ಮನೆಯ ಸಂಸಾರ ಅವನದ್ದು. ಎಲ್ಲರ ಕಷ್ಟಕ್ಕೂ ಓಡಿ ಬರುವಾತನ ಕಷ್ಟ, ಯಾರಿಗೂ ಗೊತ್ತಿರಲಿಲ್ಲ .

‘ನೋಡೇ… ನೀನು ನನ್ನ ಮನೆಯಲ್ಲಿರೋದು ಬೇಕಾಗಿಲ್ಲ . ನನ್ನ ಚಪ್ಪಲಿಯ ಕೆಳಗಿಟ್ಟಿದ್ದೀನಿ ನಿನ್ನ.‌ ನೀನಿಲ್ಲದೆಯೂ ನನ್ನ ಬದುಕು ಚೆನ್ನಾಗಿರುತ್ತೆ . ನಿನ್ನ ಕಟ್ಕೊಂಡಿದ್ದಕ್ಕೆ ನನ್ನ ಬದುಕು ಹಾಳಾಗೋಯ್ತು ‘. ಮೂಲೆಯಲ್ಲಿದ್ದ ಆರ್.ಎಸ್.ಎಸ್ ದಂಡವನ್ನು ತೆಗೆದು ಬಾರಿಸಲು ತೊಡಗಿದ್ದ. ಎಸ್,ಎಲ್ . ಭೈರಪ್ಪನವರ ಹೊಸಾ ಕಾದಂಬರಿ ತಂದಿದ್ದವ , ತಾನೆರಡು
ದಿನ ಬೆಂಗಳೂರಿಗೆ ಹೋಗಬೇಕಾದಾಗ , ಅಷ್ಟರಲ್ಲಿ ಜಾನಕಿಯಾದರೂ ಓದಲೆಂದು ಮನೆಯ ಬಳಿ ಬಂದವನ ಕಿವಿಗೆ ಬಿದ್ದ ಮಾತುಗಳು ಅರುಣನ ಕಿವಿಗೆ ಕಾದ ಸೀಸದಂತೆ ಸುಟ್ಟಿತ್ತು. ಬಾಗಿಲು ತೆರೆದು ತಾನು ತಾಳಿ ಕಟ್ಟಿದ ಹೆಣ್ಣಿಗೆ ಕೋಲಿನಿಂದ ಹೊಡೆಯುವಷ್ಟು ಹೇಯವಾದವನ ಮುಖವನ್ನು ನೋಡಲೂ ಅಸಹ್ಯವಾಗಿತ್ತವನಿಗೆ. ರಂಗೋಲಿ ಡಬ್ಬವಿಡುತ್ತಿದ್ದ ಕಿಟಕಿಯಲ್ಲಿ ಕತೆ ಪುಸ್ತಕವನ್ನಿಟ್ಟು ಹೊರಟು ಹೋಗುತ್ತಿದ್ದವನ ಕಣ್ಣಲ್ಲಿ ಕುಲುಮೆಯ ಬೆಂಕಿ ಕುಣಿಯತೊಡಗಿತ್ತು. ಜಾನೂ…… ಜಾನೂ … ನಾ ಏನು ಮಾಡಬಹುದಿತ್ತು ಇವಳಿಗೆ ಎಂದು ಮನಸು ಪ್ರಶ್ನಿಸಿದಾಗ , ಉತ್ತರಿಸಲಾಗದೇ ನರಳಿದ್ದ. ತಲೆಗೂದಲು ಕಿತ್ತುಕೊಂಡು ನೋವಿಂದ ಅಮ್ಮಾ… ಎಂದಿತ್ತು ನಾಲಿಗೆ. ಮುಷ್ಟಿಯಿಂದ ಗೋಡೆಗೆ ಗುದ್ದಿ ಕೈಗೆ ನೋವಾಗಿತ್ತು . ಅಕ್ಕಾ ಶಾಂತಿ ಓಡಿ ಬಂದಿದ್ದಳು. ‘ಅರೂ… ಅರೂ… ನೋವಾಗಲ್ವೇನೊ ನಮ್ಮನ್ನೇನು ಅನಾಥ ಮಾಡಬೇಕು. ಅಂತಿದ್ದೀಯಾ ಹೇಗೆ ?’ ಕೈ ಗಿಣ್ಣು ತರಚಿ ಹೋಗಿ ರಕ್ತ ಒಸರುತ್ತಿತ್ತು.

ತಕ್ಷಣವೇ ಡೆಟಾಲ್ ಹತ್ತಿಯಿಂದ ಹೆಚ್ಚಿ ಉರಿಯಾಗದಂತೆ ಉಫ್ …ಉಫ್ ಎಂದು  ಬಾಯಿಂದ ಊದುತ್ತಾ ಕೈ ಕೆಲಸ ಮಾಡುತ್ತಿದ್ದರೂ ಬಿಕ್ಕಳಿಸಿ ಬಿಕ್ಕಳಿಸಿ ಅಳುತ್ತಿದ್ದವ, ಕಣ್ಣಿಂದ ಬಿಸಿಯ ಹನಿಗಳು ಅವನ ಕೈ ಮೇಲೆ ಬೀಳುವಾಗ ಅಸಿಡ್ ಬಿದ್ದಂತೆ ನರಳಿತ್ತು ಮನಸು. ನೋವಿದ್ದ ಕೈನಿಂದಲೇ , ಅಕ್ಕನ ಕಣ್ಣೀರನ್ನು ಒರೆಸಿ, ಕೆನ್ನೆ ತಟ್ಟಿದ್ದ . ‘ಅಕ್ಕೋ… ಅಳ್ ಬೇಡ್ವೇ , ಯಾವುದೋ ಬೇಸರದಲ್ಲಿ ಕೈ ಗುದ್ದಿದೆ. ಗೋಡೆಗೆ ತಗುಲಿ ತರಚಿತಷ್ಟೇ’ ಎಂದ. ತೊಡೆಗೆ ಮುಖವಿಟ್ಟು ಅತ್ತವಳ ಕಣ್ಣೀರು ಅವನ ಪ್ಯಾಂಟ್ ಒದ್ದೆಮಾಡಿತ್ತು. ವಿಷಯ ಹೇಳಲಾಗದೇ ಮನದೊಳಗಿಡಲಾಗದೇ ಉದ್ದದ ನಿಟ್ಟುಸಿರು ಹೊರಹೊಮ್ಮಿತ್ತು .

ಹಾದಿ ಬೀದಿ ಮನೆಯ ಜನರ ಉದ್ದಾರ ಮಾಡಲು ಹೋಗೊಕಾಗುತ್ತೆ . ಮನೇಲಿ ಹೆಂಡತಿಯ ನೋವು ಏನೂಂತಾ ವಿಚಾರಿಸಲಾಗದವನೂ ಒಬ್ಬ ಗಂಡ . ಇಂತೋರಿಗೆಲ್ಲರಿಗೂ ಯಾಕಾದ್ರೂ ಮದುವೆ, ಮಕ್ಕಳು ಬೇಕೋ ?…. ಮನೇ ತುಂಬಾ ಕುರಿ ತರಹ ಎಲ್ರನ್ನು ತಂದಿಟ್ಟು ಕೊಳ್ಳೋದಲ್ಲದೇ, ಅವರ ಚಾಕರಿಗೆ ಬಿಟ್ಟಿಯಾಗೊಂದಾಳಾಗಿ ನನ್ನ ಮದುವೆ ಮಾಡ್ಕೊಂಡು ಬಂದಿದ್ದಾರೆ.

ಥೂ …ಇವನ ಜನ್ಮಕ್ಕೆ …… ಮಾತು ಮುಂದುವರಿಸದಿದ್ದರೂ ರಮಾಳ ಮಾತು ಭರ್ಜಿಯಂತೆ ಚುಚ್ಚಿ , ಅಲ್ಲೇ ತಿರುಗಿಸಿದಾಗ ಆಗುವ ನೋವಿನಷ್ಟು ಭಯಂಕರವಾಗಿತ್ತು . ಶಾಂತಿ ಏನೂ
ಮಾತನಾಡದೇ ರೂಮಿನೊಳಗೆ ಹೋಗಿ ಸುರಿಯುತ್ತಿದ್ದ ಕಣ್ಣೀರನ್ನು ಒರೆಸಿಕೊಳ್ಳಲು ತ್ರಾಣವಿಲ್ಲದೇ . ಮಂಚದ ಮೇಲೆ ಧೊಪ್ಪನೆ ಕುಕ್ಕರಿಸಿ ಅಳತೊಡಗಿದಳು. ರಮಾಳ ಮಾತಿಗೆ ಹೆದರಿ ಅರುಣ್ ಹೊರನಡೆದ. ಆದರೆ ಎದುರು ಮನೆಯವ ನಗುತ್ತಾ ಬಂದವನ ನೋಡಿ, ಮಾತನಾಡುವ ಮನಸಾಗದೇ ಪುನಃ ಒಳ ಬಂದ .

ಚಾರ್ಜಿಂಗ್ ಇಟ್ಟಿದ್ದ ಫೋನ್ ರಿಗಣಿಸಿದಾಗ ರಿಸೀವ್ ಮಾಡಿದ ಕೂಡಲೇ ಅತ್ತಕಡೆಯಿಂದ ಕೇಳಿದ್ದು ಅರೂ, ‘ಅರೂ’….ಅರೇ ಇದು ನನ್ನ ಹೆಸರೇ ? ಇಷ್ಟು ಚೆಂದಿದ್ಯಾ ? ಅಥವಾ ನನ್ನ ಕಿವಿ ಸರಿ ಇಲ್ವಾ ? ಯೋಚನೆಗೊಳಗಾದ . ಪುನಃ ಅರೂ…..ಎಂದ ಕಂಠದೊಡತಿ ಜಾನೂದೆಂಬುದರಲ್ಲಿ ಸಂಶಯವಿರಲಿಲ್ಲ . ಅವಳ ಕರೆಗೆ ತಲೆದೂಗುವಂತಾಗಿ , ಕೈಗಾದ ನೋವು, ಶಾಂತಿಗಾದ ಅವಮಾನ, ಹಸಿವಾಗುತ್ತಿದ್ದ ಹೊಟ್ಟೆ , ಎಲ್ಲಾ ಮರೆತುಹೋಯ್ತು . ಮುರಳಿಯ ಗಾನಕ್ಕೆ ತಲೆದೂಗುವಂತ ಅಕಳಿನಂತೆ, ಹಾ … ಹೇಳು ಜಾ….ನೂ , ಯಾಕೋ ನಾಲಿಗೆ ತೊದಲುವಂತಾಯ್ತು . ಕಾಲಿಗೆ ಕಲ್ಲು ಸಿಕ್ಕಿ ಎಡವಿದ ಹಾಗೇ ರಮಾ ಎದುರು ನಿಂತು ಕಣ್ಣು ಬಿಟ್ಟ ನೋಟಕ್ಕೆದರಿ , ಗಂಟಲು ಒಣಗಿದಂತಾಗಿ , ಹ… ಹಲೋ ನಾನೇ ಅರುಣ ಎಂದ. ಬೆದರು ಮಾತಿಗೆ ಟಪ್ಪನೆ ಕಾಲ್ ಕಟ್ ಮಾಡಿದ್ದಳು.

ರಮಾಳ ಕ್ರೂರ ನೋಟ ತನ್ನ ಎದೆಯನ್ನೂ ಸೀಳಿಬಿಡುವಷ್ಟೂ ಚೂಪಾದ ನೋಟಕ್ಕೆ ಹೆದರದಿದ್ರೂ , ಅವಳ ನಾಲಿಗೆಯ ಬೆಂಕಿ ಮಾತಿಗೆ , ಬೀದಿಯಲ್ಲಿ ನಿಂತವಳು ಮಾಡುವ
ನಟನೆಯ ಜೋರು ಅಳು ಹಾದಿ ಬೀದಿಯ ಜನರ ಕಣ್ಣಲ್ಲಿ ಅವಳು ಅಯ್ಯೋ ಪಾಪ , ಅರುಣ ಕಟುಕನೆಂಬಂತೆ ಬಿಂಬಿಸುವ ಅವಳ ಚಾಕಚಕ್ಯತೆಗೆ ಇಡೀ ಮನೆಯವರಿ ರಲಿ , ಬಂಧು ಬಾಂಧವರು ನಿಬ್ಬೆರಗಾಗುವಂತೆ ಮಾಡುತ್ತಿದ್ದಳು.

ತನ್ನದೇ ಮನೆಯಲ್ಲಿಯೇ ಮಾನಕ್ಕೆ ಹೆದರಿ ಗುಬ್ಬಚ್ಚಿಯಂತೆ ಗೂಡು ಸೇರಿದ್ದ ಅರುಣ. ತಾನೇ ಕಟ್ಟಿದ ಮನೆಯಲ್ಲ ಪರಕೀಯನಂತಿರುವ ಶಿಕ್ಷೆ ಯಾವ ಗಂಡಸಿಗೂ ಬೇಡಾ ಎಂಬಂತಿತ್ತು . ಕಾಫೀ, ಟೀ ಏನೇ ಮಾಡಿದರೂ ಪತಿಗೆ ತಂದು ಕೈಗಿಡುವ ಸುಮನಸು ಇಲ್ಲದ ಹೆಣ್ಣು ರಮಾ. ಲೋಟವನ್ನು ಗಂಡನೆದುರು ಕುಕ್ಕಿ ಹೋಗುತ್ತಿದ್ದಳು. ಅರ್ಧ ಕಾಫೀ ಚೆಲ್ಲಿ ಹೋಗುತ್ತಿತ್ತು . ತಿರುಗಿಯೂ ನೋಡದೇ ಹೋಗುತ್ತಿದ್ದಳು . ತನಗೆ ಬೇಕಾದ್ದನ್ನು ಜೋರು ಮಾಡಿ ಪಡೆಯುವುದು ಅವಳ ಹಕ್ಕೆಂಬಂತೆ ನಡೆಯುತ್ತಿದ್ದಳು. ಅವಳಲ್ಲಿ ಯಾವ ರೀತಿಯ ಮುಲಾಜೂ ಕಾಣದವಳು.

ಸಂಜೆ ಮನೆಯವರೆಲ್ಲರಿಗೂ ಸುರಿಯುತ್ತಿದ್ದ ಜೋರು ಮಳೆಯಲ್ಲಿಯೇ ಹೋಗಿ ಬಜ್ಜಿ, ಬೋಂಡಾ, ಪಕೋಡಾ, ಸಮೋಸಾ, ಪುದೀನಾ ಚಟ್ನಿ ತಂದಿತ್ತು. ಶಾಂತಿಗೆ ಕಾಫಿ ಮಾಡಲು ಹೇಳಿದವನ ಮನಸಿಗೆ ಏನೋ ನೆನಪಾಗಿ, ಐದು ನಿಮಿಷದಲ್ಲಿ ಬರುವೆನೆಂದೇಳಿ ಹೊರಟವನ ಕಾಲು ಸೀದಾ ಜಾನಕಿಯ ಮನೆ ಮುಂದೆ ನಿಂತವನ ಕೈನಲ್ಲಿ ಪಕೋಡಾ ಬಜ್ಜಿಯ ಜೊತೆಗೆ, ಜಾನಕಿಗೆ ಇಷ್ಟವಾದ ಜಾಮೂನ್, ಐಸ್ ಕ್ರೀಂ ಪ್ಯಾಕೇಟ್ ಇತ್ತು. ಮನೆಯಲ್ಲಿ ಯಾರೂ ಇದ್ದಂತಿರಲಿಲ್ಲ . ಉತ್ಸಾಹದಿಂದ ಬಂದವನ ಮನಸು ಗಾಳಿ ತೆಗೆದ ಬಲೂನಿನಂತಾಯ್ತು . ಛೇ ನಾನು ಫೋನ್ ಮಾಡಿ ಬರಬೇಕಿತ್ತು . ಅವಳಿಗಿಷ್ಟವಾದ ತಿನಿಸು ತಂದರೇ , ಅವಳೇ ಇಲ್ಲ… ಎಂದುಕೊಳ್ಳುತ್ತಾ ಬೆನ್ನುಹಾಕಿ ನಡೆದವನಿಗೆ, ಬಾಗಿಲು ತೆಗೆದ ಶಬ್ದ ಕೇಳಿಸಿತು.
ಅವನಿಗೆ ನಿಧಿ ಸಿಕ್ಕಷ್ಟೇ ಸಂತೋಷವಾಯಿತು. ತಿರುಗಿ ಎರಡೇ ಹೆಜ್ಜೆಯಲ್ಲಿ ಮನೆಯ ಹೊಸಿಲಿನ ಬಳಿ ಬಂದಿದ್ದವನಿಗೆ, ಮನೆಯ‌ ಒಳ ಹೋಗಲೂ ಭಯವೆನಿಸಿತು . ತಾನು ಮನೆಯೊಳ ಹೋಗಿ, ಶುಧ್ದ ಮನದ ಹೆಣ್ಣಿಗೆ ಶಿಕ್ಷೆ ಕೊಡಿಸಿದಂತಾಗುತ್ತದೆ ಎಂದುಕೊಂಡು ಶಾಂತಿ ಇದನ್ನು ನಿಮಗೆ ಕೊಡಲು ಹೊರಟಿದ್ದಳು.

‘ಮಳೆ ಬರ್ತಿತ್ತಲ್ಲಾ… ಜಾನೂ ನಾನೇ ಕೊಟ್ಬರ್ತೀನಿ ಅಂತಾ ಬಂದೆ. ಅವಳ ಕೈಗಿತ್ತು ಹೊರಟವನ ಕಣ್ಣಿಗೆ ಜಾನಕಿಯ ಕಣ್ಣು ಊದಿತ್ತು . ಕಣ್ಣೀರು ಕರೆಗಟ್ಟಿದ ಮುಖಾ ನೋಡಿ ಯಾಕೋ ಅಂಗಾಲಿಂದ ನೆತ್ತಿಯವರೆಗೂ ನೋವೆನಿಸಿತು. ಸುಸ್ತಾದವನಂತೆ ಅಲ್ಲಿದ್ದ ಕುರ್ಚಿಯ ಮೇಲೆ ಕುಸಿದ . ‘ಅರೂ ಏನಾಯ್ತು. ಯಾಕೆ ಹಾಗೆ ಕುಸಿದೆ ? ಯಾಕೀ ಮಳೆಯಲ್ಲಿ ಬರಲು ಹೋದೆ . ಛತ್ರಿ ತರುವುದೂ ಮರೆತೋಯ್ತಾ ?’… ಎಂದೆನ್ನುತ್ತಾ , ಒಗೆದು ನೀಟಾಗಿ ಮಡಚಿಟ್ಟಿದ್ದ ಟವೆಲ್ ತಂದು ತಲೆ ಒರೆಸಲು ಹೋದಳು. ‘ಅರೂ… ಬಟ್ಟೆ ಎಲ್ಲಾ ಒದ್ದೆಯಾಗಿದೆ’ ಎಂದಳು ಜಾನಕಿ. ನನಗಾಗಿ ಅವಳ ಕಣ್ಣಲ್ಲಿ ಸ್ವಾತಿ ನಕ್ಷತ್ರದ ಕಾಂತಿ ಕಂಡಿತ್ತು. ಅರುಣ್ ಗೆ ಯುರೇಕಾ ಯುರೇಕಾ ಎಂದು ಕುಣಿದು ಕುಪ್ಪಳಿಸುವಂತಾಗಿ, ಎರಡು ಕ್ಷಣದ ಹಿಂದೆ ತನ್ನ ಮನಸಿಗಾದ ನೋವನ್ನು ಮರೆತೇ ಬಿಟ್ಟ. ನಿಜಕ್ಕೂ ತನಗೆ ಮದುವೆಯಾಗದೇ ಇದ್ದಿದ್ದರೆ ಜಾನಕಿಯನ್ನು ಮದುವೆಯಾಗಿ ಅವಳನ್ನು ಸುಖ ಸಂತೋಷದಿಂದ ನೋಡಿಕೊಳ್ತಿದ್ದೆ . ಮನಸಿನ ಮಾತಿಗೆ ಸಾಥ್ ನೀಡಿದ್ದ. ಶಿಳ್ಳೆ ಹೊಡೆಯುವಷ್ಟು ಖುಷಿಯಾಗಿತ್ತು .

ಆದರೆ  ರಮಾ ಎದುರು ಬಂದು ನಿಂತಳು.  ಇಷ್ಟಪಟ್ಟು ಖುಷಿಯಿಂದ ಪಾಯಸ ಕುಡಿಯುವಾಗ ನೊಣವೊಂದು ಪಾಯಸದಿ ಬಿದ್ದಂತೆ ಮುಖ ಕಿವುಚಿದ.  ಕಂಡು , ಅರೂ ಏನಾಯ್ತು ? ತಲೆ ನೋಯ್ತಿದೆಯಾ ? ಎಂದವಳ ಮಾತುಗಳಿಗೆ ಇಲ್ಲವೆಂದು ತಲೆಯಾಡಿಸುತ್ತಾ ಹೊರನಡೆವನ ಹಿಂದೆಯೇ ಓಡುತ್ತಾ ಹೊರಬಂದು , ತಗೋ ಛತ್ರಿ , ನೆನೆಯಬೇಡಾ ಎಂದವಳ ಕಾಳಜಿಯ ಮಾತಿಗೆ ಸಂಭ್ರಮಿಸಿದ.

‘ಅರೂ… ಸ್ವಲ್ಪ ನಿನ್ನ ಬಳಿ ಮಾತನಾಡಬೇಕು. ಶಾಂತಿನ ಕರ್ಕೊಂಡು ಬರಲಾಗುತ್ತಾ?’.

‘ರಮಾ ಭಜನಾ ಮಂಡಳಿಗೆ ಹೋಗಿದ್ದಾಳೆ. ಅಯ್ತು ನಾನು ಶಾಂತಿ ಐದೇ ನಿಮಿಷಗಳಲ್ಲಿ ಬರ್ತೀವಿ. ನೀನು ಹುಷಾರಾಗಿದ್ಯಾ ತಾನೇ ?’… ಅವನಿಗೆ ಗೊತ್ತಿಲ್ಲದ ಹಾಗೆ ಧ್ವನಿ ಮೃದುವಾಗಿದ್ದವನರಿವಿಗೆ ಬಂತು. ಅವಳು ಉತ್ತರಿಸದ್ದೇನೂ ಕೇಳಿಸಲೇ ಇಲ್ಲ. ಅರುಣನ ಮಾತು ಕೇಳಿಸಿಕೊಂಡ ಶಾಂತಿ ತಮ್ಮಾ… ಹೇಳುವ ಮೊದಲೇ ತಲೆಬಾಚಿ , ಬೇರೆ ಸೀರೆಯುಟ್ಟು ರೆಡಿಯಾದಳು.

‘ಅಕ್ಕಾ …… ಎನ್ನುವಾಗಲೇ ಜಾನೂ ನಮ್ಮಿಬ್ಬರನ್ನೂ ಬರಹೇಳಿದ್ದಾಳೆ. ಹೋಗೊಣಾ ರೆಡಿಯಾಗು’… ಎಂದು ನಗುತ್ತಾ ಹೇಳಿದ. ಅವನ ಮಾತಿಗೆ ಜೋರಾಗಿ ನಕ್ಕುಬಿಟ್ಟಳು. ತಮ್ಮನ
ಕಣ್ಣಲ್ಲಿ ಜಾನಕಿಯ ಹೆಸರು ಹೇಳಿದರೆ ಸಾಕು ಸಂತೋಷ ಕಾಣುತ್ತಿತ್ತು. ಆದರೆ ಅವಳದು ಮದುವೆಯಾಗಿದೆ ಮತ್ತು ಇವನೂ ಮದುವೆಯಾಗಿದ್ದಾನೆ. ಆದರೆ ಇಬ್ಬರ ನಡುವೆ ಪ್ರೀತಿ ಇರಲಾರದು. ನಾ ಕೂಡಾ ಹಾಗೇ ಯೊಚಿಸೋದು ತಪ್ಪು ಅಂತ ಶಾಂತಿ ಯೋಚಿಸಿದಳು. ಅರುಣ ಹತ್ತಿರ ಬಂದವನೇ  ‘ಅಕ್ಕಾ… ಹೆಚ್ಚು ಯೋಚನೆ ಕೊಡಬೇಡಾ… ನಿನ್ನ ಪುಟ್ಟ ತಲೆಗೆ’… ಪ್ರೀತಿಯಿಂದ ಮೊಟಕಿದ ತಲೆಗೆ.

‘ಅರುಣಾ ನೋವಾಯ್ತೋ’… ಎನ್ನುತ್ತಾ ತಲೆಯುಜ್ಜಿಕೊಂಡಳು.  ಹತ್ತಿರ ಬಂದು ‘ಸಾರಿ, ಕಣೇ ಅಕ್ಕಾ’… ಎಂದವನ ಮಾತಲ್ಲಿ ಭ್ರಾತೃ ವಾತ್ಸಲ್ಯ ಇತ್ತು . ಹಣೆಯಲ್ಲಿ ನೆರಿಗೆ ಮೂಡಿದ್ದ ವನ ನೋಡಿ ದುಃಖವಾದರೂ , ಬೇರೇನೂ ಮಾತನಾಡದೇ ಹೊರಟರು ಅಕ್ಕಾ ತಮ್ಮ ತಮ್ಮಿಬ್ಬರಿಗೆ ಕಾಯುತ್ತಾ ಕುಳಿತಿದ್ದ ಜಾನಕಿಯ ಕಂಡು ಶಾಂತಿ ಜಾನೂ ಯಾಕಪ್ಪಾ ? ಏನಾಯ್ತು ಊಟ ಮಾಡಿದ್ಯೋ ಇಲ್ವೋ ? ಅಕ್ಕರೆಯ ಪ್ರೀತಿ ತುಂಬಿದ ಸಕ್ಕರೆಯ ಮಾತಿಗೆ ಜಾನಕಿಯ ದುಃಖದ ಸಹನೆಯೊಡೆದು ಬಿಕ್ಕಿ ಬಿಕ್ಕಿ ಅಳುತ್ತಿದ್ದವಳ ಕಂಡ ಅರುಣನ ಮನಸು ಬಹಳ ನೋವನುಭವಿಸಿತು. ಎದ್ದೋಗಿ ತನ್ನೆದೆಗವಳ ತಲೆಯೊರಗಿಸಿಕೊಂಡು ಸಾಂತ್ವನ ಹೇಳುವ ಬಯಕೆಯನ್ನು , ಬೆತ್ತ ದಿಂದ ಬಾರಿಸಿ ಸುಮ್ಮನಾಗಿಸಿದ. ಶಾಂತಿ ಅವಳನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ತಲೆನೇವರಿಸುತ್ತಾ , ಏನಾಯ್ತು ಜಾನೂ. ಯಾಕೆ ಇಷ್ಟು ಮನಸು ಘಾಸಿಗೊಳಿಕೊಂಡಿದ್ದೀಯ ನನ್ನ, ನಿನ್ನ ಅರುಣನ ಮೂವರ ಬದುಕು ಮೂರಾಬಟ್ಟೆಯಾಗಿದೆ .
ಇದೇ ಬದುಕು . ಇದರಲ್ಲೇ ನರಳಬೇಕು . ಇದರಲ್ಲೇ ಅರಳ ಬೇಕು . ಇಲ್ಲವಾದಲ್ಲಿ ಉರುಳಿ ಹೋಗುತ್ತೇವೆ ಬುಡ ಸಮೇತ. ನಿನ್ನ ಗಂಡ ಎಲ್ಲಿ ? ಮನೆಯಲ್ಲಿ ಇಲ್ವಾ ? ನಾವುಗಳು ಬಂದಿದ್ದು ಗೊತ್ತಾದರೆ ನಿನಗೆ ಸುಮ್ಮನೆ ತೊಂದರೆ, ನೀನು ಅದೆಲ್ಲಾ ನೋವನುಭವಿಸೋದು ನೋಡಲಾಗ್ತಿಲ್ಲ . ನೀನು ಎನಾದ್ರೂ ಒಂದು ಗಟ್ಟಿಯಾದ ನಿರ್ಧಾರ ತಗೋಬೇಕು . ಇಲ್ಲವಾದಲ್ಲಿ ನೀನು
ಖಂಡಿತವಾಗಿ ಬದುಕಿರಲ್ಲ.

‘ಅವನು ಇಲ್ಲ…  ಐದು ದಿನ ಇರಲ್ಲ. ಇವತ್ತು ಬೆಳಗ್ಗೆ ಬೆಂಗಳೂರಿಗೆ ಹೋಗಿದ್ದಾನೆ. ಬರೋದು ಶನಿವಾರ. ಅವರ ಚಿಕ್ಕಪ್ಪನ ಮಗಳ ಮದುವೆ ಇದೆ. ಹಾಗಾಗಿ ಅಲ್ಲಿಗೆ ಹೋಗಿದ್ದಾನೆ’.  ‘ಅರೂ ಬ್ಯಾಗನ್ನು ಟೇಬಲಿನ ಮೇಲಿಟ್ಟಿದ್ದು ತಗೊಂಡು ಬಾ’ ಎಂದ ಅಕ್ಕನ ಮಾತಿಗೆ ಎದ್ದೋಗಿ ಬ್ಯಾಗ್ ತಗೆದುಕೊಂಡು ಹೋದ. ಮನಸಲ್ಲಿ ಏನಿದು ಎಂಬ ಪ್ರಶ್ನೆ ಇತ್ತು, ಅದನ್ನು ಅಕ್ಕಅರಿತವಳಂತೆ’ ಬೆಳಗ್ಗೆ ತರಕಾರಿ ಉಪ್ಪಿಟ್ಟು ಅರುಣನಿಗೆ ಇಷ್ಟಾಂತ ಮಾಡಿದ್ದೆ. ನಿನಗಾಗಿ ಸ್ವಲ್ಪ ತಂದಿದ್ದೇನೆ. ಎಂದೇಳಿ ತಾನೇ ಎದ್ದು ಹೋಗಿ ಕೈತೊಳೆದುಕೊಂಡು ಚಮಚೆಯೊಂದಿಗೆ ಹೊರಬಂದವಳ ನೋಡಿ ಕಣ್ಣೀರೊರೆಸಿಕೊಂಡಳು ಜಾನಕಿ. ಜಾನಕಿಗೆ ಅವಳಲ್ಲಿ ತಾಯಿ ಪ್ರೀತಿ ಕಂಡಿತು.

ತಾನೇ ಬಲವಂತ ಮಾಡಿ ಜಾನಕಿಗೆ ತಿನ್ನಿಸಿದ. ಶಾಂತಿಯನ್ನು ಅ ಸಮಯದಲ್ಲಿಯೂ ಸ್ವಲ್ಪ ಈರ್ಷೆಯಿಂದ ನೋಡಿದ. ತಾನೇ ಜಾನಕಿಗೆ ತಿನ್ನಿಸಿದ್ದರೆ ಎಂಬ ಕಲ್ಪನೆಯೇ ಸುಖ
ನೀಡಿತ್ತು. ಏನಾದರೂ ಮಾತನಾಡುವ ಮುನ್ನ ಎದ್ದು ಹೊರ ನಡೆದವ ಮನದಲ್ಲಿ ಶೀತಲ ಯುದ್ದ ಶುರುವಾಗಿತ್ತು. ಐದು ನಿಮಿಷ ಹೊರಗೆ ನಿಂತ. ಮನಸನ್ನು ತಹಬದಿಗೆ ತಂದುಕೊಂಡು,  ದೀರ್ಘ ಉಸಿರನ್ನು ಹೊರಚೆಲ್ಲಿ , ಮನೆಯೊಳ ಬಂದವನನ್ನು ಶಾಂತಿ, ತಮ್ಮನ ಮನಸರಿತವಳಂತೆ ನಕ್ಕಳು. ಬೆಳಗಿಂದ ಅನುಭವಿಸಿದ ವೇದನೆ ಜಾನಕಿ ಕಣ್ಣೀರಾಗಿ ಹರಿದು ಮನಸು ಸ್ವಲ್ಪ ತಹಬದಿಗೆ ಬಂದಿತ್ತು . ಬೆಳಗ್ಗೆ ಮನೆ ಬಿಟ್ಟು ಹೊರಹೋಗುವವರೆಗೂ ನಡೆದ ಘಟನೆಗಳನ್ನು ಕೇಳಿ ಶಾಂತಿ ಅತ್ತು ಬಿಟ್ಟಳಾದರೂ ಅರುಣನಿಗೆ ಕೂತು ಅ ಮಾತುಗಳನ್ನು ಕೇಳಲಾಗದೇ ಕಿವಿಮುಚ್ಚಿ ಹೇಳಬೇಡಾ ‘ಜಾನೂ, ಪ್ಲೀಸ್… ಹೇಳಬೇಡಾ , ಈ ನರಕದಿಂದ ನಾ ನಿನಗೆ ಮುಕ್ತಿಕೊಡುವ ಹಾಗಿದ್ದರೆ ನಿನ್ನ ನಾ ರಾಣಿಯಂತೆ , ನಮ್ಮ ಮನೆಯ ದೇವತೆಯಂತೆ , ಸಿರಿದೇವಿ ಗೃಹಲಕ್ಷ್ಮಿಯಾಗಿ ನಿನ್ನ ನೋಡಿಕೊಳ್ಳುವೆ’ ಮನ ಗೋಳಾಡುತ್ತಿದ್ದರೂ ಗಂಟಲಿನಿಂದ ಶಬ್ದ ಹೊರಬರಲಾಗದಂತೆ, ಕಲ್ಲು ಸಿಕ್ಕಿಕೊಂಡು ಒದ್ದಾಡುವಂತೆ ವಿಲಿವಿಲಿ ಒದ್ದಾಡಿತವನ ಮನಸು. ಎಷ್ಟು ತಡೆಯೊಡ್ಡಿದರೂ ನಿಲ್ಲದೇ, ಕಣ್ಣೀರು ಅವನ ಕಣ್ಣಿಂದ ಸುರಿಯತೊಡಗಿತು. ಜಾನೂ…ಜಾನೂ… ಪ್ಲೀಸ್ ಅಳಬೇಡಾ . ನನಗೆ ನಿಜವಾಗ್ಲೂ ನೋಡೋಕಾಗ್ತಿಲ್ಲ.

‘ಮನೂ… ನಿಜವಾಗ್ಲೂ ಮನುಷ್ಯನಲ್ಲ. ನೀನು ಮದುವೆಯಾಗದೇ ಹಾಗೇ ಇದ್ದರೂ ಪರವಾಗಿರಲಿಲ್ಲ. ನಿನ್ನ ಈ ವೇದನೆ ತುಂಬಿದ ನರಕದ ಜೀವನ ನಿನ್ನಂಥವಳಿಗಲ್ಲ’… ಕೈನಿಂದ ಕಣ್ಣು ಮುಚ್ಚಿಕೊಂಡು ಜೋರಾಗಿ ಅಳತೊಡಗಿದವನನ್ನು ಶಾಂತಿ, ಜಾನಕಿ ಅಚ್ಚರಿಯಿಂದ ನೋಡತೊಡಗಿದರು. ಶಾಂತಿ ಇತ್ತ ತಮ್ಮನಿಗೇನು ಹೇಳೋದು? ಜಾನಕಿಗೆ ಏನು ಹೇಳೋದು ಗೊತ್ತಾಗದೇ ಗೊಂದಲದಿಂದ ನೋಡುತ್ತಾ ಮೌನವಾದಳು. ‘ಅರೂ… ನೀನು ಈ ಡಬ್ಬದಲ್ಲೇನು ತುಂಬಿಸಿದ್ದೀಯಾ ? ಅದೂ ಇಷ್ಟು ದೊಡ್ಡದಾದ ಭಾರವಾದ ಡಬ್ಬದಲ್ಲಿ
ಏನಿಟ್ಟಿದ್ದೀಯಾ?’… ಮಾತು ಬದಲಿಸಿದವಳ ಬುದ್ದಿವಂತಿಕೆಗೆ ತಲೆದೂಗಿದ. ‘ಏನೂ ಇಲ್ಲ, ಜಾನೂ… ನೀನು ತುಮಕೂರಿಗೆ ಹೋದ ನಂತರ ಬೇಕಾಗುವ ಸಾಮಾನುಗಳಷ್ಟೇ . ಸಣ್ಣ ಕುಕ್ಕರ್, ತಟ್ಟೆ, ಲೋಟಗಳು, ಒಂದು ಗೋಡೆ ಗಡಿಯಾರ , ಉಪ್ಪಿನಕಾಯಿ, ಚಟ್ನಿ ಪುಡಿ, ಹಪ್ಪಳ, ಬಾಳಕ ಅಷ್ಟೇ’.

‘ಹೌದಾ ? ಆದರೆ ಇದೇನು ? ಇದರಲ್ಲಿ ಬೇರೇನೋ ಇರುವ ಹಾಗಿದೆ . ನೀನು ರಟ್ಟಿನ ಡಬ್ಬಾ ತಂದಾಗ ಈ ಹೊಟ್ಟೆ ದಪ್ಪಮಾಡಿಕೊಂಡ ಲಕೋಟೆ ಇರಲಿಲ್ಲ. ನೋಡು… ಇದು ನಿನಗೆ ತಕ್ಷಣಕ್ಕೆ ಅತ್ಯಾವಶ್ಯಕವಾಗಿ ಬೇಕೇ ಬೇಕಾದ್ದು. ಇದು ನನ್ನ ಬದುಕಿನ ಒಂದು ಅಧ್ಯಾಯವನ್ನು ಹಾಗೂ ಕಡೆಯ ಅಧ್ಯಾಯವನ್ನೂ ಬರೆದು ಇಟ್ಟಿದ್ದೇನೆ . ಅದನ್ನು ನೀನು ಬಿಡುವಾದ ಸಮಯದಲ್ಲಿ ಓದಿ , ನಿನ್ನ ಅನಿಸಿಕೆ ಹಾಗೂ ನಿರ್ಧಾರ ತಿಳಿಸು. ಇಷ್ಟು ದಿನ ಈ ದಾರಿಯಲ್ಲಿ ಬರೀ ಕತ್ತಲೆ ತುಂಬಿತ್ತು . ಈಗ ನಾನು ಆ ದಾರಿಯನ್ನು ರಾಜಮಾರ್ಗವಾಗಿ ಬದಲಾಯಿಸಲು ನಿರ್ಧರಿಸಿದ್ದೇನೆ. ಅದಕ್ಕೆ ನಿನ್ನ ಒಪ್ಪಿಗೆಯೂ ಬೇಕು. ನಿನ್ನ ಸಹಕಾರವಿಲ್ಲದೇ ನಾನೇನೂ ಮಾಡಲು ಸಾಧ್ಯವಿಲ್ಲ. ಇಲ್ಲಿಯವರೆಗೂ ನೀನು ಹೇಳಿದ ಹಾಗೂ ಮೊಬೈಲ್ ನಲ್ಲಿ ವಾಯ್ಸ್ ರೆಕಾಡ್೯ ಮಾಡಿದ. ಯಾವುದನ್ನೂ ಡಿಲಿಟ್ ಮಾಡಬೇಡಾ. ಮುಂದೆ ಒಂದು ದಿನ ಅತೀ ಶೀಘ್ರದಲ್ಲಿಯೇ ಇವೆಲ್ಲಾ ನಿನಗೆ ಬೇಕಾಗುತ್ತೆ. ಜೋಪಾನವಾಗಿಡು . ಈ ಪತ್ರ ಓದಿ ನನಗೆ ಕಾಲ್ ಮಾಡಬೇಕಂತನಿಸಿದರೆ ಕಾಲ್ ಮಾಡು. ಬದುಕು ಕಲ್ಲು ತಿಂದು ನಡೆಯುವಂತಿರಬಾರದು. ಕಲ್ಲನ್ನು ಪುಡಿಮಾಡಿ , ದಾರಿಯನ್ನು ಮಾಡಿಕೊಂಡು ಎಡವದಂತೆ ನಡೆದು ಖುಷಿಯಾಗಿ ನಡೆಯವುದೇ ನಿಜವಾದ ಬದುಕು. ಎಲ್ಲಾ ಈ ಪತ್ರ ಓದಿದ ನಂತರ ನಿನಗೇ ಎಲ್ಲಾ ಅರ್ಥವಾಗುತ್ತೆ’… ಎಂದು ಹೇಳಿ ಹೊರ ನಡೆದವನ ಮನಸ್ಸು ಹಗೂರಾಗಿತ್ತು.

ಹದಿನೈದು ದಿನಗಳ ನಂತರ ಪ್ರೀತಿಯ ಜಾನೂ ನನ್ನ ಮನಸಲ್ಲಿ ನಿನ್ನ ಮೊದಲನೆಯ ಸಾರಿ ರೈಲಿನಲ್ಲಿ ನೋಡಿದಾಗಲೇ ಎನೋ ಮಧುರವಾದ ಅನುಭೂತಿ ಕಂಡಿತ್ತು . ಅದರೆ ನಿನ್ನ ಕೊರಳಿನಲ್ಲಿದ್ದ ಕರಿಮಣಿ ಸರ , ಕಾಲುಂಗುರ ಕಂಡಾಗ ಮನಸಿಗೆ ಕಸಿವಿಸಿಯಾಗಿದ್ದು ಸುಳ್ಳಲ್ಲ . ನಾನೂ ನನ್ನ ಬದುಕಲ್ಲಿ ಬಹಳ ನೊಂದು ಬೆಂದು ಹೋಗಿದ್ದೇನೆ . ಪತ್ನಿಯ ದೌರ್ಜನ್ಯಕ್ಕೆ ಒಳಗಾದವರು ಅಪ್ಪಾ ಅಮ್ಮಾ ನಾನು ನನ್ನ ಅಕ್ಕಾ ತಂಗಿ, ನಾನು ಯಾರಿಗೂ ದ್ರೋಹ ಮಾಡದವನು ನಾನು . ನನ್ನ ಮನೆಯಲ್ಲಿ ನಾನೇ ಪರಕೀಯು . ನಾ ಕಟ್ಟಿಸಿದ ಮನೆಯಲ್ಲಿ ನನಗಾಗಿ ರೂಮು ಇಲ್ಲ . ವೆರಡಾಂಡದಲ್ಲಿ ಮಲಗುವ ಹಣೆಬರಹ ನನ್ನದು . ಕಾಫೀ ಟೀ ತಂದು ಕುಕ್ಕುವಷ್ಟು ಸಹನೆಯವಳು. ಕೈಗೆ ಕೊಡಲು ಆಗದವಳು. ಇಪ್ಪತ್ತು ವರ್ಷದಿಂದ ಸಹಿಸಿ ಸಹಿಸಿ ಸಾಕಾಗಿದ್ದೇನೆ. ನನ್ನ ಪತ್ನಿಯ ಅಣ್ಣನಿಗೆ ನನ್ನಕ್ಕನನ್ನು ಕೊಟ್ಟು ಮದುವೆ ಮಾಡಿರೋದು. ಅವಳ ಬದುಕಲ್ಲಿ ಇವಳ ತವರು ಮನೆಯವರು ಬಹಳ ಅಟಗಳಾಡಿದ್ದಾರೆ. ಬೇರೆಯವರನ್ನು ವಂಚಿಸಿ ಹಣ ಸೆಳೆದು ಜೈಲು ಸೇರುತ್ತಿದ್ದ. ಐದು , ಹತ್ತು ಲಕ್ಷಗಳಿಗೆ ಲೆಕ್ಕವೇ ಇಲ್ಲ . ಮನೆಯಲ್ಲಿದ್ದ ಒಡವೆ ಅಸ್ತಿ ಮಾರಿ , ಹಣ ತಂದು ಬೇಲ್ ನೀಡಿ ಬಿಡಿಸಿಕೊಂಡು ಬರ್ತಿದ್ದೆ . ನಾಲ್ಕು ಮನೆಗಳನ್ನು ಮಾರಿಯಾಯ್ತು. ಇವನ ದಬ್ಬಾಳಿಕೆಗೆ. ಕೊನೆಗೆ ತನ್ನೆರಡು ಮಕ್ಕಳನ್ನು ಕರೆದುಕೊಂಡು ಬಂದ ಅಕ್ಕನನ್ನು ನನ್ನ ಮಗಳಂತೆ ನೋಡ್ಕೋತಿದ್ದೀನಿ . ಭಾವನಾದವನು ಕುಡಿದು ಕುಡಿದು ಜೈಲು ಸೇರಿ  ಕಂಡವರಿಗೆ ಮೋಸ ಮಾಡುತ್ತಾ ಕೊನೆಗೆ ಜೀವ ತೆತ್ತ.

ಒಂದು ದಿನವೂ ಪತಿಯಾಗಿ ನನ್ನ ನೋಡಿಲ್ಲ. ಅಪ್ಪಮ್ಮನ ಮಾತಿಗೆ ವಿರುದ್ದವಾಗಿ ನಡೆಯಲಾರದೇ ಅವರ ಮಾತಿಗೆ ಬೆಲೆಯಿಟ್ಟು ಇಲ್ಲಿಯವರೆಗೂ ಒಂದೇ ಮನೆಯಲ್ಲಿದ್ದರೂ , ನಾಯಿಯಂತೆ ಕಂಡರೂ ಸಹಿಸಿದೆ . ಅಕ್ಕಾ ತಂಗಿಗೂ ಅವಳು ಮಾಡುವ ಅವಮಾನ ಅಪಮಾನ ಗಳನ್ನು ಸಹಿಸಲಾರದೇ ನಾನು ಲಾಯರನ್ನು ಕಂಡುಬಂದಿದ್ದೇನೆ . ಅವಳಿಂದ ಸದ್ಯದಲ್ಲೇ ಮುಕ್ತಿ ಸಿಗಲಿದೆ.

ನೀನು ನಿನ್ನ ಪತಿಯಿಂದ ಅನುಭವಿಸುತ್ತಿರುವ ಹಾಗೂ ಶಾಂತಿಗೆ ನೀನು ಕಳಿಸಿರುವ, ವೀಡಿಯೋ- ಅಡಿಯೋ ರೆಕಾಡ್೯ಗಳನ್ನು ಒಂದು ಪೆನ್ ಡ್ರೈವ್ ಗೆ ಹಾಕಿಟ್ಟಿದ್ದೇನೆ. ಫ್ಯಾಮಿಲಿ ಕೋರ್ಟಲ್ಲಿ ನಮ್ಮಿಬ್ಬರಿಗೂ ನ್ಯಾಯ ಸಿಗಲಿದೆ. ನೀನೇನೂ ಯೋಚಿಸಬೇಡಾ. ನೀನು ಒಪ್ಪುವುದಾದರೆ ನಾನು ನಿನ್ನನ್ನು ಮದುವೆಯಾಗುತ್ತೇನೆ. ನಿನ್ನ ಇಲ್ಲಿಯವರೆಗಿನ ನೋವುಗಳನ್ನು ಮರೆತುಬಿಡು. ನನ್ನ ಕೈಲಾದಷ್ಟು ಸುಖ ಸಂತೋಷದಿಂದ ನೋಡಿಕೊಳ್ತೀನಿ. ಇದರಲ್ಲಿ ಬಲವಂತವಿಲ್ಲ. ನಿನ್ನ ಸಂಪೂರ್ಣ ಒಪ್ಪಿಗೆಯಿದ್ದಲ್ಲಿ ಮಾತ್ರ ಒತ್ತಾಯವಿಲ್ಲ. ನಿನ್ನ ಅನುಮತಿ ನಿರ್ಧಾರ ಮುಖ್ಯ ನನಗೆ. ಆರು ತಿಂಗಳ ನಂತರ ಪತಿ – ಪತ್ನಿಯರ ಒಪ್ಪಿಗೆಯಿಂದ ಜಾನಕಿ ತನ್ನ ಪತಿಯಿಂದ, ಅರುಣ್ ತನ್ನ ಪತ್ನಿಯಿಂದ, ನ್ಯಾಯಾಲಯದಿಂದ ಬಿಡುಗಡೆ ಪಡೆದು ಸಂಪೂರ್ಣ ಸ್ವತಂತ್ರರಾದರು. ಶಾಂತಿಯ ಕಣ್ಣಲ್ಲಿ ತಮ್ಮ ಅರುಣ್ ಹಾಗೂ ಜಾನಕಿಯ ಮದುವೆ ಅತೀವ ಸಂತಸ ತಂದಿತ್ತು. ಮನೆಯ ಬಾಗಿಲಲ್ಲಿ ನಿಂತಿದ್ದ ವಧೂ ವರರಿಗೆ ಆರತಿ ಮಾಡಿ ಮನೆ ತುಂಬಿಸಿಕೊಳ್ಳಲು ಪಕ್ಕದ ಮನೆಯವರನ್ನು ಕರೆದು ಆರತಿ ಮಾಡಿ, ಪಡಿ ಎಡವಿ ಬಂದವಳ ಕಂಡು ಬಿಗಿದಪ್ಪಿ,  ‘ಜಾನೂ … ಈ ಮನೆಯ ಹಾಗೂ ನನ್ನ ತಮ್ಮನ ಮನದೊಡತಿಯಾಗಿ ಸುಖ ಸಂತಸದಿಂದ ಇರು ಎಂದು ಹಾರೈಸಿದವಳ ಕಣ್ಣಲ್ಲಿ ಆನಂದಭಾಷ್ಪ ಉದುರಿತು.

ಅರುಣ್ ಮತ್ತು ಜಾನಕಿ ಶಾಂತಿಯ ಕಾಲಿಗೆ ನಮಿಸಿದಾಗ ಶಾಂತಿ ಅವರಿಬ್ಬರನ್ನು ಬಿಗಿದಪ್ಪಿದಳು. ರೂಮಿನೊಳ ಬಂದ ಅರುಣ ಜಾನಕಿಯನ್ನು ಪ್ರೀತಿ ಅಕ್ಕರೆಯಿಂದ ಜಾನೂ… ಎಂದು ಕರೆದ ಪ್ರೀತಿಯ ನುಡಿಗೆ ಅವನೆದೆಯಲ್ಲಿ ತಲೆಯಿಟ್ಟು ಕಣ್ಮುಚ್ಚಿ , ಅವನ ಪ್ರೀತಿಯಾಲಿಂಗನದಲ್ಲಿ ಕಳೆದು ಹೋದಳು. ಮನಸಲ್ಲೇ ನನ್ನ ಮನ ತುಂಬಿದ ಬೆಳಕನ್ನು ಅಪ್ಪಿದ ಅರುಣನ ಮನದಲ್ಲಿ ಹೊಂಗಿರಣ ಮೂಡಿತ್ತು.


  • ನಾಗಮಣಿ ಹೆಚ್ ಆರ್

Leave a Reply

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading