ಕರ್ನಾಟಕದ ಹೆಸರಾಂತ ಸಾಹಿತಿ, ಕಾದಂಬರಿಕಾರ ಎಸ್ ಎಲ್ ಭೈರಪ್ಪ ಅವರು ಮನೆಗೆ ಬಂದು ನನ್ನ ಕೈ ರುಚಿ ಸವೆದದ್ದು ನನ್ನ ಸೌಭಾಗ್ಯ ಎಂದು ನನ್ನ ಮಗಳು ಈಗಲೂ ಹೇಳಿ ಸಂತೋಷ ಪಡುತ್ತಾಳೆ. ನಿವೃತ್ತ ಗಣಿತ ಪ್ರಾಧ್ಯಾಪಕರಾದ ಕೊರಗಲ್ಲ ವಿರೂಪಾಕ್ಷಪ್ಪ ಅವರ “ಕೊಪ್ಪಳ-ಹಾವೇರಿಯ ನೆನಪಿನಂಗಳದಿಂದ” ಅಂಕಣವನ್ನು ತಪ್ಪದೆ ಓದಿ…
ನಾನು ಬರೆದ ಮಕ್ಕಳ ಕಥೆ ಪುಸ್ತಕ ಬಿಡುಗಡೆ ಸಮಾರಂಭವೇರ್ಪಡಿಸಬೇಕಾಗಿತ್ತು. ಆ ಸಮಾರಂಭಕ್ಕೆ ಪ್ರಸಿದ್ಧ ಕಾದಂಬರಿಕಾರರಆದ ಭೈರಪ್ಪನವರನ್ನು ಕರೆಯಿಸಬೇಕೆಂದು ನಿರ್ಧರಿಸಿದ್ದೆ. ಬಹಳ ಜನ ನನ್ನ ಸ್ಥಳೀಯ ಗೆಳೆಯರು ಭೈರಪ್ಪನವರನ್ನೊಮ್ಮೆ ಹಾವೇರಿಗೆ ಬರಮಾಡಿಕೊಳ್ಳಬೇಂದು ಅಪೇಕ್ಷೆ ಪಟ್ಟಿದ್ದರಿಂದ ಅವರನ್ನು ಸಂಪರ್ಕಿಸಿ ಒಪ್ಪಿಗೆ ಪಡೆದಿದ್ದೆ. ನನ್ನ ಸ್ಥಳೀಯ ಗೆಳೆಯರೊಬ್ಬರಿಗೆ ವಿಷಯ ತಿಳಿಸಿದೆ. ಅವರು ಸ್ವತಃ ಮರುದಿವಸವೇ ಮೈಸೂರಿಗೆ ಹೋಗಿ ಭೈರಪ್ಪನವರನ್ನು ಕಂಡು ಒಪ್ಪಿಗೆ ಪಡೆದುಕೊಂಡು ಬರಬೇಕೆಂದು ಹೇಳಿದ್ದೆವು. ಆದರೆ ಅವರು ಮೈಸೂರಿಗೆ ಹೋದಾಗ ಭೈರಪ್ಪನವರು ಊರಲ್ಲಿಲ್ಲವೆಂದು ಬರಿಗೈಯಿಂದ ಮರಳಿ ಬಂದರು. ಹಾವೇರಿಯಿಂದಲೆ ಒಂದು ದಿವಸ ಫೋನಾಯಿಸಿ ಹಾವೇರಿಗೆ ಬರಬೇಕೆಂದು ವಿನಂತಿಸಿಕೊಂಡೆವು . ಅವರು ಎರಡು ಕರಾರಿನ ಮೇಲೆ ಹಾವೇರಿಗೆ ಬರಲಿಕ್ಕೆ ಒಪ್ಪಿಕೊಂಡರು. ಒಂದು ಹಾವೇರಿ ಸುತ್ತ-ಮುತ್ತ ಇರುವ ಪ್ರಸಿದ್ಧ ಸ್ಥಳಗಳನ್ನು ತೋರಿಸಬೇಕು, ಮತ್ತು ಅವರು ಹೋಟೆಲಿನಲ್ಲಿ ಊಟ ಮಾಡುವುದಿಲ್ಲವಾದದ್ದರಿಂದ ಯಾರದಾದರೂ ಮನೆಯಲ್ಲಿ ಅವರು ಹೇಳಿದಂತೆ ಅಡುಗೆಮಾಡಿ ಊಟ ಮಾಡಿಸಬೇಕು. ನಾವು ಎರಡೂ ಕರಾರುಗಳಿಗೆ ಒಪ್ಪಿಕೊಂಡು ಅವರನ್ನು ಹಾವೇರಿಗೆ ಬರಮಾಡಿಕೊಂಡೆವು.
ನನ್ನ ಸ್ಥಳಿಯ ವಿದ್ಯಾರ್ಥಿ ಮಿತ್ರ ದಿಲೀಪ ಭೋಸಲೆ ತನ್ನ ಕಾರಿನಲ್ಲಿ ಅವರಿಗೆ ಹಾವೇರಿ ಸುತ್ತು-ಮುತ್ತು ಇರುವ ಪ್ರಸಿದ್ಧ ಐತಿಹಾಸಿಕ ಮತ್ತು ಧಾರ್ಮಿಕ ಸ್ಥಳಗಳಾದ ಅಗಡಿ, ಗಳಗನಾಥ, ಗುತ್ತಲ, ಚೌಡಯ್ಯದಾನಪುರ, ಅರಳಳ್ಳಿ, ಬಂಕಾಪುರ, ಸವಣೂರು, ಹಾನುಗಲ್ಲು ಮುಂತಾದ ಊರುಗಳನ್ನು ತೋರಿಸಿಕೊಂಡು ಬರಲು ಸಿದ್ಧನಾದ. ಬಂದ ದಿವಸ ಸಾಯಂಕಾಲ ನಮ್ಮ ಮನೆಗೆ ಕರೆದುಕೊಂಡು ಬಂದು ಅಲ್ಪೋಪಹಾರ ಸೇವಿಸಿದೆವು. ಆ ಮೇಲೆ ಅವರು ನನ್ನ ಹೆಂಡತಿ ಮತ್ತು ಮಗಳನ್ನು ಕರೆದು “ ನೋಡಮ್ಮಾ ನಾನು ಖಾರಾ ತಿನ್ನೋದಿಲ್ಲ. ಎಣ್ಣೆ ಪದಾರ್ಥಗಳನ್ನು ಕಡಿಮೆ ತಿನ್ನುತ್ತೇನೆ. ನೀವು ಉತ್ತರ ಕರ್ನಾಟಕದಲ್ಲಿ ಖಾರಾ ಹೆಚ್ಚು ತಿನ್ನುವುದಿಂದ ನನಗೆ ಖಾರಾ ಕಡಿಮೆ ಹಾಕಿ ಅಡುಗೆ ಮಾಡಿಕೊಡಬೇಕು. ಸ್ಥಳೀಯವಾಗಿ ಸಿಗುವ ಬ್ಯಾಡಗಿ ಮೆಣಸಿನ ಕಾಯಿಯ ಬದಲು ಕರಿ ಮೆಣಸು ಹಾಕಿ ಅಡುಗೆ ಮಾಡಿದರೆ ಒಳ್ಳೆಯದು.’’ ಎಂದು ಹೇಳಿದರು. ಮರುದಿವಸದ ಬೆಳಗಿನ ಉಪಹಾರಕ್ಕೆ ದೋಸೆ ಮಾಡಬಹುದೆ? ಎಂದು ನನ್ನ ಮಗಳು ಕೇಳಿದಳು. ಮಾಡಬಹುದು ಆದರೆ ಎಣ್ಣೆಯನ್ನು ಅತೀ ಕಡಿಮೆ ಬಳಸಬೇಕು’’ ಎಂದರು.
ಭೈರಪ್ಪನವರು.” ಕಡಿಮೆ ಅಂದರೇನು ಎಣ್ಣೆ ಹಾಕದೆ ದೋಸೆ ಮಾಡು ಎಂದರೆ ಮಾಡುತ್ತೇನೆ’’ ಎಂದಳು ನನ್ನ ಮಗಳು. “ಎಣ್ಣೆ ಹಾಕದೆ ದೋಸೆ ಮಾಡಲಿಕ್ಕೆ ಬರುವುದಿಲ್ಲಮ್ಮಾ’’ಎಂದರು.

“ಸರ್ ಈಗ ಟಾಫ್ಲೆನ್ ತವೆ ಬಂದಾವು. ಎಣ್ಣೆ ಹಾಕದೆ ದೋಸೆ ಹುಯ್ದರೂ ಅವು ತವೆಗೆ ಹತ್ತುವುದಿಲ್ಲ.” ಎಂದು ಹೇಳಿದಾಗ ಅವರಿಗೆ ಅಚ್ಚರಿ. ಅಂತೂ ಮರುದಿವಸ ಕಡಿಮೆ ಎಣ್ಣೆ ಹಾಕಿ ದೋಸೆ ಮಾಡಿದರು. ಭೈರಪ್ಪನವರು ಖುಷಿಯಾದರು. ಆದರೆ ಮಧ್ಯಾನ್ಹದ ಊಟದ ವ್ಯವಸ್ಥಾ ಸರಿಯಾಗಲಿಲ್ಲ. ಕರಿಮೆಣಸು ಹಾಕಿ ಪಲ್ಲೆ ಮಾಡ್ರಿ ಎಂದು ಭೈರಪ್ಪನವರು ಹೇಳಿದ್ದನ್ನು ಚಾಚೂ ತಪ್ಪದೆ ಅನುಸರಿಸಿದ ನನ್ನ ಹೆಂಡತಿ ಒಂದು ಹಿಡಿ ಕರಿಮೇಣಸಿನ ಕಾಳುಗಳನ್ನು ಪುಡಿ ಮಾಡಿ ಹಾಕಿ ಪಲ್ಲೆ ಮಾಡಿ ಬಿಟ್ಟಿದ್ದಳು. ಕರಿ ಮೆಣಸು ಹಾಕಿ ಎಂದೂ ಪಲ್ಲೆ ಮಾಡದ ಇವಳಿಗೆ ಅದನ್ನು ಹೇಗೆ ಬಳಸಬೇಕೆಂಬುದೆ ಗೊತ್ತಿರಲಿಲ್ಲ. ಜೋಳದ ರೊಟ್ಟಿಗೆ ಒಂಚೂರು ಪಲ್ಲೆ ಹಚ್ಚಿಕೊಂಡು ಒಂದು ತುತ್ತು ಬಾಯಿಗಿಟ್ಟಕೊಂಡ ಭೈರಪ್ಪನವರ ಕಣ್ಣಲ್ಲಿ ನೀರೆ ಬಂದು ಬಿಟ್ಟವು. “ ಅಯ್ಯೋ ಏನಮ್ಮಾ ಖಾರಾ ‘’ ಎಂದರು ಭೈರಪ್ಪನವರು.
“ನೀವು ಹೇಳಿದ ಹಂಗ ಕರೆ ಮೆಣಸು ಹಾಕೇ ಮಾಡೀನ್ರಿ’’ ಎಂದಳು ಇವಳು.
“ ಒಂದು ಮೆಣಸೆ ಕಾಣೋದಿಲ್ಲ. ನೀವು ಖಾರ ಪುಡಿಯನ್ನೇ ಮರೆತು ಹಾಕಿ ಬಿಟ್ಟಿದ್ದೀರೆಂದು ಕಾಣುತ್ತದೆ.’’
“ಇಲ್ರಿ ಮೆಣಸಿನ ಕಾಳುಗಳನ್ನು ಸಣ್ಣಾಗಿ ಜಜ್ಜಿ ಹಾಕೀನ’’
ಅವರು ಪಡಿಪಾಟಲಾ ಪಡುವುದನ್ನು ನೋಡಿ “ ಸರ್ ಬಿಟ್ಟು ಬಿಡಿರಿ. ಐದು ನಿಮಿಷದಲ್ಲಿ ಬೇರೆ ಪಲ್ಲೆ ಮಾಡಿಸುತ್ತೇನೆ.’’ ಎಂದು ಹೇಳಿ ಅವರ ಮುಂದಿದ್ದ ತಾಟನ್ನು ತೆಗೆದುಕೊಂಡು ಹೋದೆ.
“ಮನೆಯಲ್ಲಿ ಕಿರಕಸಾಲಿ ಸೊಪ್ಪು ಇದೆ. ಅದು ಆದೀತೆ’’ ಎಂದು ಕೇಳಿದೆ.
“ಕಿರಕಸಾಲಿ ಅಂದ್ರೇನು” ಎಂದರು. ಮೈಸೂರು ಕಡೆಗೆ ಅದಕ್ಕೆ ಏನು ಹೇಳುತ್ತಾರೆಂಬುದು ನನಗೆ ಗೊತ್ತಿಲ್ಲದಿದ್ದುರಿಂದ ಆ ಸೊಪ್ಪನ್ನೆ ತಂದು ತೋರಿಸಿದೆ.
“ ಈ ಸೊಪ್ಪಾದರೆ ಒಳ್ಳೆಯದಾಯಿತು. ನನಗೆ ದಿನಾಲೂ ಇದೇ ಸೊಪ್ಪಿನ ಪಲ್ಲೆ ಮಾಡಿ ಬಿಡ್ರಿ.’ ಎಂದರು.
ಮುಂದಿನ ಐದು ನಿಮಿಷದಲ್ಲಿ ಕಿರಕಸಾಲಿ ಪಲ್ಲೆ. ಟೊಮ್ಯಾಟೋ, ಸೌತೆಕಾಯಿ ಹಾಕಿದ ಮೊಸರುಗಾಯಿ ತಯಾರಿಸಿದಳು. ಬಿಜಾಪುರ ಜೋಳದ ಬೆಳ್ಳನೆಯ ರೊಟ್ಟಿಯನ್ನು ನೋಡಿ ಅವರಿಗೆ ಬಹಳ ಖುಷಿಯಾಯಿತು.ಅವರು ನನ್ನ ಹೆಂಡತಿಗೆ ಸರಿಯಾಗಿ ತರಬೇತು ಕೊಟ್ಟರು ನೋಡಮ್ಮಾ ನಾಲ್ಕೆ ನಾಲ್ಕು ಮೆಣಸಿನ ಕಾಳುಗಳನ್ನು ಇಡಿಯಾಗಿ ಹಾಕಿ ಪಲ್ಲೆ ಮಾಡ್ರಿ ಎಂದು ಹೇಳಿದ್ದರಿಂದ ಮುಂದಿನ ಎರಡು ದಿವಸ ಅವರು ಮೆಚ್ಚುವಂತೆ ಅಡುಗೆ ಮಾಡಿದಳು. ಮೊದಲನೆಯ ದಿವಸ ಊಟವಾದ ಮೇಲೆ ಅವರು ನಮ್ಮ ಮನೆಯವರಂತಾಗಿ ಬಿಟ್ಟರು. ಕರ್ನಾಟಕದಲ್ಲಿ ಹೆಸರು ಮಾಡಿದ ಸಾಹಿತಿ ಮತ್ತು ತತ್ವಜ್ಞಾನಿಯೊಬ್ಬರಿಗೆ ಊಟ ತಯಾರಿಸಿ ಉಣಿಸುವ ಸೌಭಾಗ್ಯ ದೊರಕಿದ್ದು ನನ್ನ ಪುಣ್ಯ ಎಂದು ಈಗಲೂ ಅವಳು ಹೇಳಿ ಸಂತೋಷ ಪಡುತ್ತಾಳೆ.

“ಕೊಪ್ಪಳ-ಹಾವೇರಿಯ ನೆನಪಿನಂಗಳದಿಂದ” ಅಂಕಣದ ಹಿಂದಿನ ಸಂಚಿಕೆಗಳು :
- ವಾಲಿಕಾರ ಮಲ್ಲೇಶಪ್ಪನ ಪಲ್ಲಕ್ಕಿ ಸೇವೆ – (ಭಾಗ೧)
- ಹಾವೇರಿಯ ನಕ್ಷತ್ರ ಚಂಪಾ – (ಭಾಗ೨)
- ಎಂ.ಎ. ಡಿಗ್ರಿಯ ಕಿಮ್ಮತ್ತು ಬರಿ ಒಂದು
- ಗುಡಾರ – (ಭಾಗ ೩)ಪ್ರಾಮಾಣಿಕ ಹುಚ್ಚ – (ಭಾಗ ೪)
- ಹಳ್ಳಿಯ ನಾಟಕದ ಸೂಳೆಯ ಪಾತ್ರ – (ಭಾಗ ೫)
- ದೊಡ್ಡ ತಲೆಗೆ ಸಣ್ಣ ಮಾಲೆ – (ಭಾಗ ೬)
- ಉಪ್ಪಾರ ಮರಿಯಪ್ಪನ ಮಿಂಚುವ ಜಾತ್ರೆಯ ಅಂಗಿ – (ಭಾಗ ೭)
- ಹಾಲು ಕೊಟ್ಟವರ ನೆನಪಿನ ಲೋಕ – (ಭಾಗ ೮)
- ಬಬ್ರುವಾಹನನ ನಾಟಕದ ಕಥೆ – (ಭಾಗ ೯)
- ಕೊರಗಲ್ಲ ವಿರೂಪಾಕ್ಷಪ್ಪ – ಹಾವೇರಿ
