ನನ್ನ ಅಮ್ಮ ನನಗೆ ಸ್ಫೂರ್ತಿ – ನಾಗಮಣಿ ಎಚ್ ಆರ್

ಮಕ್ಕಳಿಗೆ ಅಮ್ಮನೇ ಸ್ಫೂರ್ತಿ. ಅಮ್ಮನ ನಡೆ ನುಡಿಗಳೇ ಮಕ್ಕಳಿಗೆ ದಾರಿ ದೀಪ, ಅಮ್ಮನ ಬಗ್ಗೆ ನಾಲ್ಕು ಸಾಲುಗಳಲ್ಲಿ ಬರೆಯಲು ಸಾಧ್ಯವಿಲ್ಲ. ಮುಗಿಯದ ಕಾದಂಬರಿ ಅವಳು, ನಾಗಮಣಿ ಎಚ್ ಆರ್ ಅವರ ಅಮ್ಮನ ಬಗ್ಗೆ ಬರೆದ ಸುದೀರ್ಘ ಲೇಖನವನ್ನು ತಪ್ಪದೆ ಮುಂದೆ ಓದಿ…

ನನ್ನ ಅಮ್ಮ ಓದಿದ್ದು ನಾಲ್ಕನೇ ತರಗತಿಯಾದರೂ ಲೆಕ್ಕದಲ್ಲಿ , ಸಂಸ್ಕೃತ ಭಾಷೆಯನ್ನು ಓದುವುದು , ಭಗವದ್ಗೀತೆಯ 18 ಅಧ್ಯಾಯ ಬಾಯಿ ಪಾಠ, ವಿಷ್ಣು ಲಲಿತಾ ಸಹಸ್ರನಾಮ, ಲಕ್ಷ್ಮೀ ಶೋಭಾನೆ, ಕನಕಧಾರಾ ಸ್ತೋತ್ರ, ಸೌಂದರ್ಯ ಲಹರಿ, ದುರ್ಗಾ ಅಪದುದ್ದಾರ ಸ್ತೋತ್ರ, ಸೌದಾಮಿನಿ, ಶಿವ ಸಹಸ್ರ ನಾಮ, ಲಕ್ಷ್ಮೀ ಸಹಸ್ರನಾಮ, ದೇವೀ ಮಹಾತ್ಮೆ, ಭಾಗವತ, ತುಳಸಿ ಪೂಜೆಯ ಹಾಡುಗಳು, ಮಕ್ಕಳಿಗೆ ಆರತಿ ಮಾಡುವಾಗ ಹಾಡುವ ಹಾಡುಗಳು ಹಾಗೂ ನೀವು ಯಾವುದೇ ದೇವರ ಅಷ್ಟೋತ್ತರ , ಲಿಂಗಾಷ್ಟಕ ಹನುಮಾನ್ ಚಾಲೀಸಾ, ದೇವೀ ಖಡ್ಗ ಮಾಲಾ ಸ್ತೋತ್ರ , ಪಾರ್ವತಿ ಕಲ್ಯಾಣ , ರಾಮಾಯಣ ಮಹಾಭಾರತವನ್ನು ಹಾಡಿನ ಮೂಲಕ ಹೇಳುವುದು. ಗೌರೀ ಪೂಜೆಯ ಸಂಪ್ರದಾಯದ ಹಾಡುಗಳು . ( ನಮ್ಮೋರು ಬಡವರು ನಮಗಿನ್ನೇನೀವರು ಹಾಡನ್ನು ಎಷ್ಟು ಸ್ಪಷ್ಟವಾಗಿ ಸ್ಪುಟವಾಗಿ ಹಾಡುವುದನ್ನು ಮೈಯೆಲ್ಲಾ ಕಿವಿಯಾಗಿ ಕೇಳುತ್ತೇನೆ ) ಸತ್ಯನಾರಾಯಣ ವ್ರತದ ಗೀತಕತೆ , ಮಂಗಳಗೌರಿ ಮೌನಗೌರಿ , ಸಂತೋಷಿಮಾತಾ , ಹದಿನಾರು ಸೋಮವಾರದ , ಎಲ್ಲಾ ವ್ರತ ನೋಹಿಗಳನ್ನು ಮಾಡಿ ಈಗಲೂ ಕೂಡಾ ಏಕಾದಶಿಯಂದು ಹದಿನೆಂಟು ಅಧ್ಯಾಯ ಭಗವದ್ಗೀತೆ ಹೇಳೋದು , ( ಪ್ರತಿದಿನ ಒಂದೊಂದು ಅಧ್ಯಾಯ ಹೇಳೋದು ) ಮಂಗಳವಾರ ಸುಬ್ರಹ್ಮಣ್ಯ ಸ್ವಾಮಿಯ ಅಷ್ಟೋತ್ತರ , ಹೀಗೇ ಅಯಾಯ ವಾರದಂದು ಅದಕ್ಕೆ ಸಂಭಂಧಪಟ್ಟದ್ದನ್ನು ಗುರುಚರಿತ್ರೆ ಶಂಕರ ವಿಜಯ, ಪ್ರತೀ ಶನಿವಾರ ಶನಿಮಹಾತ್ಮೆ ಕತೆ ಓದೋದು , ರಾಮ ಕತೆ ,ಕಾರ್ತಿಕ ಪುರಾಣ ಮಾಘ ಪುರಾಣ ಹೀಗೆ ಆಡು ಮುಟ್ಟದ ಸೊಪ್ಪಿಲ್ಲವೆನ್ನುವಂತೆ , ಅಮ್ಮ ಕಲಿಯದ ದೇವರ ಸ್ತೋತ್ರವಾಗಲಿ ಇಲ್ಲವೆನ್ನಬಹುದು . ನನಗೆ ಈಗಲೂ ಮುಗ್ದಳಾದ ನನ್ನಮ್ಮನೇ ನನಗೆ ದೇವರು ಗುರು , ಸ್ಪೂರ್ತಿ ಅದರ ಜೊತೆಗೆ ಯಾವುದೇ ಸಸ್ಯಾಹಾರಿ ಅಡುಗೆ ಈರುಳ್ಳಿ ಬೆಳ್ಳುಳ್ಳಿ ತಿನ್ನದ . ಹೊರಗಿನ ತಿಂಡಿ ತಿನಿಸು ತಿನ್ನದ , ಒಂದು ತಿಂಗಳ ಪ್ರವಾಸ ಹೋದಾಗಲೂ ತಮ್ಮ ಊಟದ ನಿಷ್ಠೆ ಮುಂದುವರಿಸಿದ ಏಕೈಕ ಮಹಿಳೆ ನನ್ನಮ್ಮ ಎನ್ನಬಹುದು.

ಯಾರ ಮನೆಯಲ್ಲೂ ಊಟ ಮಾಡದೆ, ಎಲ್ಲಿ ಹೋದರೂ ಒಂದು ಲೋಟ ನೀರನ್ನು ಬೇರೆಯವರ ಹತ್ತಿರ ಪಡೆದು ಕುಡಿಯದ ನನ್ನಮ್ಮ . ನಮ್ಮ ಸಕ್ಕರೆ ಗೊಂಬೆಗೂ ಭಗವದ್ಗೀತೆಯನ್ನು ಮೊಬೈಲ್ ವೀಡಿಯೋ ಕಾಲ್ ಮಾಡಿ ಈಗಲೂ ಹೇಳಿಕೊಡುವ ಆಸಕ್ತಿ ಇರುವುದನ್ನು ನೋಡಿ ದರೆ ಬೇರೆ ಯಾರೂ ನನ್ನ ಕಣ್ಣೆದುರಿಗೆ ಬಾರರು .‌ ನನ್ನ ಅಮ್ಮನಷ್ಟು ಸಾಧಕಿ ಇಲ್ಲವೇ ಇಲ್ಲ . ಇದು ನನ್ನಯ ನಂಬಿಕೆ ಕೂಡಾ ಹೌದು .

( ತುಳಸಿ ಫೂಜೆ ಮಾಡುವವರೆಗೂ ಹನಿ ನೀರು ಕುಡಿಯದಾಕೆ . ತಿಂಗಳ ರಜೆಯಲ್ಲಿ ನಮ್ಮಗಳ ಪಾಡು ಬೇಡ ಹಾಗೆ . ತಟ್ಟೆ ಚೊಂಬು ಲೋಟ ಕೊಟ್ಟು ಕೂರಿಸ್ತಿದ್ರು . ಹೆಚ್ಚುಗಾರಿಕೆ ದಿನಗಳಲ್ಲಿ ಮುಟ್ಟಾದರೆ , ನಮ್ಮ ಗತಿ ದೇವರೇ ಗತಿ )

ಹೊಟ್ಟೆನೋವು ಬಂದು ಒದ್ದಾಡುತ್ತಿದ್ದರೂ ತನ್ನ ಪೂಜೆ ನಿಧಾನಗತಿಯ ದೇವರ ಸ್ತೋತ್ರವನ್ನು ಹೇಳುತ್ತಾ , ತುಳಸೀಪೂಜೆಯ ಮಾಡಿ ಮುಗಿಸುವವರೆಗೂ ನಾವಿರುವ ರೂಮಿನ ಬಾಗಿಲಿನ ಹೊರಗಿನ ಚಿಲುಕ ಓಪನ್ ಅಗ್ತಿರಲಿಲ್ಲ . ಆಗಲೂ ಅಮ್ಮನ ಬಾಯಲ್ಲಿ ದೇವಿ ನಮೋ ಪರದೇವಿ ನಮೋ , ದೇವಿ ದೇವಿ ವಾಗ್ದೇವಿ ನಮೋ ಸುಶ್ರಾವ್ಯವಾಗಿ ಬರುತ್ತಿತ್ತೇ ಹೊರತು ನಮ್ಮ ಕಡೆಗೆ ನೋಡ್ತಾನೂ ಇರಲಿಲ್ಲ . ಅಷ್ಟು ತನ್ಮಯತೆ ಹಾಗೂ ನಂಬಿಕೆ .

ಹಬ್ಬದ ದಿನಗಳಂತೂ ನಾವು ನಾಲ್ಕೂ ಜನ ಮಕ್ಕಳಿಗೂ , ಬೆಳಗಿನ ಮೂರು ಗಂಟೆಗೆದ್ದು ಹಂಡೆ ಒಲೆ ಉರಿ ಮಾಡುತ್ತಿದ್ದರು , ರಾತ್ರಿ ಹೊಟ್ಟು ತುಂಬಿ ಕಾದ ನೀರು ದೊಡ್ಡ ಹಂಡೆಯ ತುಂಬಾ ಕೊತ ಕೊತನೆ ಕುದಿಯುತ್ತಿತ್ತು . ದೊಡ್ಡ ಬಟ್ಟಲಿನಲ್ಲಿ ಹರಳೆಣ್ಣೆಯನ್ನು , ಒಲೆಯ ಕೆಂಡ ಎಳೆದು ಕಾಸಿದ ಎಣ್ಣೆಯನ್ನು , ಮೊದಲೇ ಹೇಳಿರುತ್ತಿದ್ವಿ , ಅಮ್ಮಾ ನಾ ಮೊದಲು ಬುಕ್ಕಚ್ಚಿ ಅಂತಾ.

ಯಾರು ಹೇಳಿರುತ್ತಿದ್ರೋ ಅವರನ್ನೆಬ್ಬಿಸಿ , ಮುಖಾ ತೊಳೆದು ಬಂದ ತಕ್ಷಣ ಕಾಫಿ ಬೆರೆಸಿಕೊಟ್ಟು , ತಲೆಗೆ ಹಿತವಾಗಿ ಬಿಸಿಯಾದ ಎಣ್ಣೆಯನ್ನು ಹಚ್ಚೋದಲ್ಲ , ಇಳಿಯುವಷ್ಟು ಮೆತ್ತಿ , ನನ್ನ ಹಾಗೂ ತಂಗಿಯ ರಾಶಿಹೊರೆ ಕೂದಲನ್ನು ಗಂಟು ಕಟ್ಟಿ ಅರ್ಧಗಂಟೆ ಬಿಟ್ಟು ನಂತರ ಬಿಸಿನೀರಿನ ಅಭ್ಯಂಜನ . ನನ್ನಮ್ಮನಿಗೆ ಯಾವುದೇ ಅಂಗಡಿಯ ಸೀಗೇಪುಡಿ ಕೂಡಾ ಒಪ್ಪಿಗೆಯಾಗುತ್ತಿರ ಲಿಲ್ಲ . ಶೆಟ್ಟಿ ಅಂಗಡಿ ಸೀಗೇಪುಡಿನೂ ಚೆನ್ನಾಗಿಲ್ಲ . ಜೈನಿಗರ ಅಂಗಡೀದು ಚೆನ್ನಾಗಿಲ್ಲ ಅಂತಿದ್ರು .

ಜನವರಿಯ ಮೆಣಸಿನಕಾಯಿ ಸೀಗೇಕಾಯಿಯ ಸಮಯದಲ್ಲಿ ಎರಡು ಮೂರು ದೊಡ್ಡ ದೊಡ್ಡ ಚೀಲ ರೆಡಿಮಾಡಿಟ್ಟುಕೊಂಡು , ಹಾಸನದ ಜಾತ್ರೆ ಮೈದಾನದ ಬಳಿ ಇರುವ ಹೋಲ್ ಸೇಲ್ ಸೀಗೇಕಾಯಿ ಮೆಣಸಿನಕಾಯಿ ಮಾರುವ ಅಂಗಡಿಗೆ ಹೋಗಿ , ವರ್ಷಕ್ಕಾಗುವಷ್ಟು ಸೀಗೇಕಾಯಿ, ಕೆಂಪು ಮೆಣಸಿನಕಾಯಿ, ಹುಣಸೇಹಣ್ಣು ತಗೊಂಡು ಆಟೋದಲ್ಲಿ ಬರ್ತಿದ್ರು . ಅಮ್ಮನ ಜೊತೆಗೆ ನನ್ನ ದೊಡ್ಡಮ್ಮ ಕೂಡಾ ಜೊತೆಗೆ ಹೋಗೋರು . ಅವರಿಗೂ ಬೇಕು ಎಂದ ಸಾಮಗ್ರಿ ಗಳನ್ನು ತಾನೇ ಕೊಡಿಸಿ , ಅವರನ್ನು ಅವರ ಮನೆಗೆ ಆಟೋ ಮಾಡಿ ಕಳಿಸಿ , ಮನೆಗೆ ತಾನು ಬರ್ತಿದ್ರು . ಇಲ್ಲಿಗೆ ಮುಗಿಯದು ಈ ಕತೆ.

ರಣರಣ ಬಿಸಿಲಿಗೆ ಮೆಣಸಿನಕಾಯಿ ಸೀಗೇಕಾಯಿ ಹುಣಸೇಹಣ್ಣು ಮೂರನ್ನು ಹಿತ್ತಲಿನ ಬಿಸಿಲಿಗೆ ಹಾಕಿ ಒಂದುವಾರ ಒಣಗಿಸಿ ಅದರದ್ದೇ ರಿಸರ್ವೇಶನ್ ಅದ ಡಬ್ಬಗಳಲ್ಲಿ , ಹುಣಸೇಬಿತ್ತ , ಮೆಣಸಿನಕಾಯಿಯ ತೊಟ್ಟು ತೆಗೆದು ಅದರ ಸ್ಥಾನಕ್ಕಿಟ್ಟುಬಿಟ್ಟರೆ ಮುಗೀತು. ಪ್ರತೀ ವಾರ ಸ್ವಲ್ಪ ಎಲ್ಲರಿಗಾಗುವಷ್ಟು ಸೀಗೇಕಾಯಿ ತಗೊಂಡು ಬೇಯಿಸಿ , ರುಬ್ಬುವ ಕಲ್ಲಿನಲ್ಲಿ ರುಬ್ಬಿದ
ನಂತರ ನಮ್ಮ ತಲೆಯ ಎಣ್ಣೆ ತೆಗೆಯಲು ಬರುತ್ತಿತ್ತು . ಇನ್ನೂ ಇದೆ ಇವತ್ತಿಗೆ ಇಷ್ಟು ಸಾಕು .ಮತ್ತೊಂದು ಸಾರಿ ಅಮ್ಮ ಮಾಡುತ್ತಿದ್ದ ಹಾಲ್ಬಾಯಿ ಕತೆ ಹೇಳುವೆ .

ಅಮ್ಮ ಒಬ್ಬರೇ ಇರುವ ಫೋಟೋ ಇಲ್ಲ . ಹಾಗಾಗಿ ಇಂದ್ರಮ್ಮನ ಮಗಳು ನಾಗ , ನಾಗನ ಮಗಳು ಇರುವ ಪೋಟೋ ಲಗತ್ತಿಸಿದ್ದೇನೆ .

ಅಮ್ಮಾ ನಾನು ಶೆಟ್ಟಿ ಇಬ್ರೂ ಪೇಟೆ ಅಂಜನೇಯನ ದೇವಸ್ಥಾನಕ್ಕೆ ಹೋಗ್ತೀವಿ ಕಣಮ್ಮಾ . ನೋಡು ನಾಳೆ ಬೆಳಗ್ಗೆನೇ ನಾ ಎಬ್ಬಿಸಿದ ತಕ್ಷಣ ಎದ್ದು ಎಣ್ಣೆ ಸ್ನಾನ ಮಾಡಿಬಿಡು . ನಾಡಿದ್ದಿನಿಂದ ಗೀತಾ ಜಯಂತಿ . ಇನ್ ಎಂಟತ್ತು ದಿನ ಬೆಳೆಗ್ಗೆ ಶ್ರೀ ವೆಂಕಟೇಶ್ವರ ಸುಪ್ರಭಾತ. ಅಭಿಷೇಕ ಮಂಗಳಾರತಿ ಮುಗಿಸಿ , ಮತ್ತೆ ಬಂದು ನಿಮಗೆಲ್ಲರಿಗೂ ಅಡುಗೆ ಮಾಡಿಟ್ಟು ಹೋಮ ಇದೆ ಹೋಗಬೇಕು . ಮತ್ತೆ ಬರೋದು ಎರಡೂವರೆ ಮೂರು ಗಂಟೆಯಾಗುತ್ತೆ , ಮತ್ತೆ ಸಂಜೆ ಐದೂವರೆಗೆ ಹೋಗಬೇಕು. ಭಜನೆ ಮಾಡಿದ ನಂತರ , ಶೃಂಗೇರಿ ಜಗದ್ಗುರುಗಳು ಬಂದಿದ್ದಾರೆ , ಅವರ ಪ್ರವಚನ ಕೇಳಿ , ಬರೋದು ಎಂಟೂವರೆಯಾಗುತ್ತೆ . ಮನೇಲೇ ಇರು ಬೇಗ ಬಂದು.

ಅಮ್ಮಾ ಮನೆಗ್ಯಾಕಮ್ಮಾ ಬರ್ತೀಯಾ ನಿನ್ ಕಾಲೇಜ್ ನಿಂದ ? ಅಮ್ಮಾ ಸತತ ನಲವತ್ತು ವರ್ಷಗಳ ಕಾಲ ಹಾಸನದ ಶ್ರೀ ಸೀತಾರಾಮಾಂಜನೇಯ ದೇವಸ್ಥಾನಕ್ಕೆ ಪ್ರತಿದಿನ ಐದೂವರೆಗೆ ಹೋಗಿ ಏಳೂವರೆಗೆ ಬರ್ತಿದ್ರು . ಅವರ ರಜಾದಿನಗಳಲ್ಲಿ ಅವರ ನೋವು ಹಪಾಹಪಿ ನೋಡಲಾಗ್ತಿರಲಿಲ್ಲ. ನವರಾತ್ರಿ ಈಗ ದೇವಿ ಮಹಾತ್ಮೆ ಓದ್ತಿದ್ರು . ಇದೊಂದು ನನ್ನ ಮೂಲೆಗೆ ಕೂರಿಸ್ತು . ಇನ್ನೊಂದೆರಡು ದಿನ ತಡೆದು ಆಗಿದ್ರೆ ಏನ್ ಆಗ್ತಿತ್ತೋ ಇದಕ್ಕೆ.

ಗೌರಿ ಹಬ್ಬದ ಎರಡು ತಿಂಗಳ ಮುಂಚೆಯೇ ತಯಾರಿ ಶುರುವಾಗುತ್ತಿತ್ತು . ಗೌರಿ ಎಳೆ , ಗಣಪತಿ ಎಳೆ ಗೆಜ್ಜೆವಸ್ತ್ರ , ಮಂಗಳಾರತಿ ಬತ್ತಿ ಹೂ ಬತ್ತಿ . ವಿವಿಧ ರೀತಿಯ ಹತ್ತಿಯ ಹಾರಗಳ ತಯಾರಿಗೆ , ಅಜ್ಜಿಯ ಊರಿಗೆ ಹೋಗಿ , ತೋಟದಲ್ಲಿದ್ದ ಹತ್ತಿಯ ಮರದಿಂದ ಹತ್ತಿ ಬಿಡಿಸಿಕೊಂಡು ತರ್ತಿದ್ರು . ಚಂದ್ರಿ ಹತ್ತಿ ಬೇಕು ಕಣೋ . ಸೋಮವಾರ ಭಾನುವಾರ ಹತ್ತಿ ಬಿಡಿಸಬಾ ರದು . ಶನಿವಾರ ಕಿತ್ತಿಟ್ಟಿರು ಮಡೀಲಿ. ಬೆಳೆಗ್ಗೆ ಬಸ್ಸಿಗೆ ಬರ್ತೀನಿ , ಸಂಜೆ ವಾಪಸಾಗಬೇಕು. ಅಂಗಡಿಯಿಂದ ತಂದರೆ ಹತ್ತಿ ಅವರ ಮಡಿಯ ಕೆಲಸಗಳಿಗೆ ಪೂಜೆಗೆ ಬರ್ತಿರಲಿಲ್ಲ. ಹತ್ತಿಯ ಕೆಲಸ ದಿನಾ ಊಟಕ್ಕಿಂತ ಮೊದಲು ಶುರುವಾಗ್ತಿತ್ತು. ಬೇಗ ಬೇಗ ಅಡುಗೆ ಕೆಲಸ ಮುಗಿಸಿ ಮಡಿಯಾದ ಬಿಳೀ ಪಂಚೆಯಲ್ಲಿ ಸುತ್ತಿ ಬಿಸಿಲಿಗಿಟ್ಟು ಒಣಗಿಸಿ ಬೀಜ ಕಸ ತೆಗೆದು ಇಡುತ್ತಿದ್ದರು
ವಿಭೂತಿ ಸ್ವಲ್ಪ ಹಸೀ ಹಾಲು ಇಟ್ಕೊಂಡು , ಮಡಿ ಮಂದಲಿಗೆ ( ಪೂಜೆಗಾಗೇ ತೊಳೆದಿಟ್ಟ ಚಾಪೆ ) ಹಾಕಿಕೊಂಡು , ಮಾಡಲು ಕುಳಿತಾಗಲೂ , ಬಾಯಿಗೆ ಮಾತ್ರ ರೆಸ್ಟ್ ಇರ್ತಿರಲಿಲ್ಲ. ಶನಿವಾರವಾದರೆ ಕೋಪವ ಬಿಡು ಬಿಡು ಶನಿಮಹಾರಾಜ , ಕಾಪಾಡು ನಮಿಸುವೆ ಕರುಣಾ ಪ್ರಭಾವ ಅಂತಲೋ , ಮಂಗಳವಾರವಾದರೆ ಬನ್ನಾರಿ ತಾಯಿ ನಮಸ್ಕಾರ, ಆದಿಪರಾಶಕ್ತಿ ನಮಸ್ಕಾರ ಅಂತಾ ಬುಧವಾರವಾದರೆ ಶ್ರೀ ರಂಗಪುರವಿಹಾರ , ಜಯ ಕೋದಂಡ ರಾಮಾವತಾರ ರಘುವೀರ ಅಂತಲೋ , ಗುರುವಾರವಾದರೆ ಗುರುವಿನ ಗುಲಾಮನಾಗುವ ತನಕ
ದೊರೆಯದಣ್ಣ ಮುಕುತಿ , ಶುಕ್ರವಾರ ಲಲಿತಾ ಸಹಸ್ರ ನಾಮ , ಸನಕಾದಿಗಳನು ತಡೆಯಲು ರಾಮ , ಜಯವಿ ಜಯರಿಗೆ ಶಾಪವು ರಾಮ ಅಂತಲೋ ಶುರುವಾದರೆ ಪಕ್ಕದಲ್ಲಿ ಬಾಂಬ್ ಬಿದ್ದರೂ ಪರಿವೇ ಇರದಂತೆ ಅವರ ತನ್ಮಯತೆ ನನ್ನಮ್ಮನಲ್ಲಿ. ನವರಾತ್ರಿಯ ಒಂಭತ್ತು ದಿನಗಳು , ಹಾಸನಾಂಬಾ ದೇವಸ್ಥಾನದ ಬಾಗಿಲು ತೆಗೆದಾಗಿನಿಂದ , ಬಾಗಿಲು ಮುಚ್ಚುವವರೆಗೂ ಮನೆಯಲ್ಲಿ ಮೆಣಸಿನ ಪುಡಿಯನ್ನು ಮಾಡ್ತಿರಲಿಲ್ಲ . ಮೊದಲೇ ಗೊತ್ತಾಗ್ತಿದಾದ್ದರಿಂದಲೋ ಏನೋ ಸ್ವಲ್ಪವಾದರೂ ಸರಿ ಮಾಡ್ಕೋತಿದ್ರು . ಅಲ್ಲಾ ಯಾಕಮ್ಮಾ ಮಾಡಬಾರದಾಂದ್ರೇ ಅಮ್ಮನವರು ಬಂದಾಗ ಖಾರ ಹುರೀತಾರ್ಯೆ , ಘಾಟಿನ ಕೆಲಸ ಮಾಡ ಬಾರ್ದು . ಇವತ್ತಿಗೂ ನನ್ನಮ್ಮ ಹೀಗೇನೇ . ಬುಧವಾರ ಭಾನುವಾರ ಮಾತ್ರ ಮೆಣಸಿನಕಾಯಿ ಹುರಿಯೋದು.

ಹಾಸನಾಂಬೆಯ ದರ್ಶನಕ್ಕೆ ಹೋಗುವ ಸಡಗರವೇ ಬೇರೆ ನನ್ನಮ್ಮನದು . ಹಿಂದಿನ ದಿನವೇ ಮಡಿಯಲ್ಲಿ ಕೊಬ್ರಿ ಸಕ್ಕರೆ ಮಾಡಿಟ್ಟು , ಇನ್ನೂರರಷ್ಟು ಸಂಕ್ರಾಂತಿ ಕವರಿಗೆ ಹಾಕಿ ಪಿನ್ ಮಾಡಿಟ್ಟು , ಇನ್ನೊಂದಷ್ಟನ್ನು ಒಂದು ಸ್ಟೀಲ್ ಡಬ್ಬಿಗೆ ಹಾಕಿ , ಅರಿಶಿನ ಕುಂಕುಮ ಹೂವು ಎಲೆ ಅಡಿಕೆ ನಾಲ್ಕು ತೆಂಗಿನಕಾಯಿ ,( ಅಮ್ಮನ ವರಿಗೆ ಎರಡು , ಗಣಪತಿಗೆ ಒಂದು , ಸಿದ್ದೇಶ್ವರ ಸ್ವಾಮಿಗೆ ಒಂದು ಕಾಯಿ) ಸೀರೆ ರವಿಕೆ ಕಣ ಬಳೆ ಕೊಬ್ಬರಿ ದಕ್ಷಿಣೆ ಹೀಗೇ ಮೂರು ದೇವರಿಗೂ ಬೇರೆ ಬೇರೆಯಾಗಿ ಇಟ್ಟುಕೊಂಡು , ನಮ್ಮಮ್ಮ ಮಹಾತಾಯಿ ನಮ್ಮನ್ನು ರಾತ್ರಿ
ಮೂರು ಗಂಟೆಗೆ ಎಬ್ಬಿಸಿಕೊಂಡು , ಸ್ನಾನ ಪೂಜೆ ಮಾಡಿ , ಬರಿಗಾಲಲ್ಲಿ ನಮ್ಮ ನಾಲ್ಕೂ ಜನರನ್ನು ಮನೆಯಿಂದ ದೇವಸ್ಥಾನದವರೆಗೂ , ದಯೆ ಇಲ್ಲದೇ ನಡೆಸಿಕೊಂಡು , ಅದೂ ಬರಿಗಾಲಲ್ಲಿ ಕರೆದುಕೊಂಡು ಹೋಗೋರು . ಅಮ್ಮಾ ಆಟೋದಲ್ಲಿ ಹೋಗೋಣಾ ಅಂದ್ರೇ , ದೇವರ ದರ್ಶನಕ್ಕೆ ನಡೆದೇ ಹೋಗಬೇಕು .

ಸುಮ್ಮೇ ಇರು ಮಾತಾಡ್ತಿರಬೇಡಾ , ಹಾಸನಾಂಬೆಯ ಸ್ತೋತ್ರ ಹೇಳ್ತಿದ್ದೀನಿ ಅನ್ನೋರು . ಮೊದಲು ನಮ್ಮ ತಾತನವರೇ ಪೂಜೆ ಮಾಡುತ್ತಿದ್ದರು. ಅಪ್ಪನನ್ನು ನೋಡಿದರೆ ಸಾಕು ರಾಮಣ್ಣೋರೇ ಬನ್ನಿ ಬನ್ನೀ… ಅನ್ನುವಾಗ , ಅಮ್ಮಾ ಆ ಅಮಂತ್ರಣವನ್ನು ನಯವಾಗಿ ಬೇಡಾಂತಿದ್ರು . ಯಾಕಮ್ಮಾ ಬೇಡಾಂದೆ . ನಿಲ್ಲೋಕೆ ಆಗ್ತಿಲ್ಲ ಹೋಗೋಣಾ ಬಾ ಅಂದ್ರೇ , ದುರುಗುಟ್ಟಿ ನಮ್ಮನ್ನು ನೋಡಿದ ತಕ್ಷಣ ನಾವು ಬೆದರಿ ಅಲ್ಲೇ ಗಪ್ ಚುಪ್. ಬೇರೆಯವರು ನಮ್ಮನ್ನು ಬೈಯ್ಕೋಬಾರದು ಅವರೂ ನಮ್ಮಂತೆ ಬೆಳೆಗ್ಗೆಯೇ ಬಂದಿರ್ತಾರೆ ಅಂತಿದ್ರು.
ದೇವರ ದರ್ಶನ ಮುಗಿಸಿ ಹೊರಬಂದ ನಂತರ ಅಲ್ಲಿ ಬಂದ ಹೆಂಗಸರಿಗೆ ಅರಿಶಿನ ಕುಂಕುಮ ಹೂವು ಕೊಟ್ಟು ಕೊಬ್ಬರಿ ಸಕ್ಕರೆಯ ಒಂದೊಂದು ಪ್ಯಾಕೆಟ್ ಕೊಟ್ಟು ಸಂತಸ ಪಡ್ತಿದ್ರು.

ಆದರೆ ಈಗ ನನ್ನ ತಮ್ಮ ಮೊದಲೇ ಹೇಳಿಕೊಂಡು ಅವನೂ ಅರ್ಚಕನಾದ್ದರಿಂದ , ನಡೆಯಲಾಗದ ಅಮ್ಮನನ್ನು ವಿ.ವಿ.ಐ.ಪಿ . ಬಾಗಿಲಿನಿಂದ ದೇವರ ಗರ್ಭಗುಡಿಯವರೆಗೂ ಹೋಗಿ ದರ್ಶನ ಮಾಡಿಸುತ್ತಾನೆ. ಬಂದ ನಂತರ ನನಗೆ ಫೋನ್ ಮಾಡಿ ನಾಗ ನಿನ್ ತಮ್ಮ ಕರ್ಕೊಂಡು ಹೋಗಿ ದರ್ಶನ ಮಾಡಿಸಿದ. ಅಮ್ನೋರನ್ನ ನೋಡೋಕೆರಡು ಕಣ್ಣು ಸಾಲ್ದು . ದೇವರ ಮೇಲಿನ ಪ್ರಸಾದ, ಅಕ್ಕಿ, ಹೂವು, ಬಳೆ ಎಲ್ಲಾ ಕೊಟ್ರು . ನಿನ್ ತಮ್ಮನಿಗೆ ಇಸ್ಕೊಳ್ಳಿಕ್ಕೆ ಹೇಳಿದೆ. ಆ ತಾಯಿ ನನ್ನ ಎಲ್ಲಾ ಸೌಭಾಗ್ಯನೂ ಕಿತ್ಕೊಂಡು ಬಿಟ್ಲು . ಎಲ್ಲಾ ದೇವರನ್ನು
ನಾ ಏನನ್ನೂ ಕೇಳಿರಲಿಲ್ಲ . ಮುತ್ತೈದೆ ಭಾಗ್ಯದಲ್ಲೇ ನನಗೆ ಸಾವು ಕೊಡಮ್ಮಾಂತಾ ಕೇಳಿದ್ದೆ . ಅದೊಂದನ್ನು ಕೊಡಲಿಲ್ಲ . ಪ್ರಸಾದ ಎಲ್ಲಾ ಅರಿಶಿನ ಕುಂಕುಮ ಬಳೆ ಚಂದ್ರ ನಿನಗೇಂತಾ ಇಟ್ಟಿದ್ದೀನಿ . ಬಂದಾಗ ಕೊಡ್ತೀನಿ ಎಂದೇಳಿ ಬಿಕ್ಕಳಿಸಿ ಅಳುವ ನನ್ನಮ್ಮ ಚಿಕ್ಕ ಮಗುವಿನಂತೆ ಕಾಣ್ತಾಳೆ.

ಎಲ್ಲೂ ತನ್ನ ನೇಮ ನಿಷ್ಟೆ ಬಿಡದ ನನ್ನಮ್ಮ ನನಗೆ ಸ್ಪೂರ್ತಿ ಅವಳೇ , ನಾಗಾ ನೀ ನನ್ನ ಹೊಟ್ಟೆಯಲ್ಲಿ ಗಂಡಾಗಿಯಾದರೂ ಹುಟ್ಟಬಾರದಿತ್ತೆ ಎನ್ನುವಾಗ ನಗೆ ದುಃಖ ಉಮ್ಮಳಿಸಿ ಬರುತ್ತೆ . ಇನ್ನು ಬರೆಯಲಾಗ್ತಿಲ್ಲ. ಕಣ್ಣೀರು ತುಂಬಿದೆ . ದಿಂಬು ಒದ್ದೆಯಾಗಿದೆ .


  • ನಾಗಮಣಿ ಎಚ್ ಆರ್

Leave a Reply

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading