‘ ಪಾತಕ ಲೋಕದಿಂದ ಗಾಂಧಿಯಾನದೆಡೆಗೆ’ ಕೃತಿ ಪರಿಚಯ

ಡಾ. ಎಚ್ಎಸ್ ಸುರೇಶ್ ರವರ ಪಾತಕ ಲೋಕದಿಂದ ಗಾಂಧಿಯಾನದೆಡೆಗೆ ಪುಸ್ತಕವು ಮುಂಬೈ ಭೂಗತ ಲೋಕದಲ್ಲಿ ಪರಿಸ್ಥಿತಿಯ ಒತ್ತಡದಿಂದಾಗಿ ಅಪರಾಧಿಯಾಗಿದ್ದ ಖೈದಿಯೊಬ್ಬನ ಮನ ಪರಿವರ್ತನೆಯಾದ ನಿಜ ಜೀವನ ಕಥೆಯ ಅನಾವರಣ.  ಈ ಕೃತಿಯ ಕುರಿತು ಲೇಖಕರಾದ ಚೇತನ ಭಾರ್ಗವ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ… 

ಪುಸ್ತಕ: ಪಾತಕ ಲೋಕದಿಂದ ಗಾಂಧಿಯಾನದೆಡೆಗೆ
ಲೇಖಕರು: ಡಾ. ಎಚ್ ಎಸ್ ಸುರೇಶ್
ಪ್ರಕಾಶಕರು ಅನ್ನಪೂರ್ಣ ಪಬ್ಲಿಷಿಂಗ್ ಹೌಸ್
ಪುಟಗಳು 4+14+68
ಬೆಲೆ: 100
ಮುದ್ರಣ: 2025

ಪುಸ್ತಕವು ಮಸ್ತಕವನ್ನು ಬೆಳಗುತ್ತದೆ ಎಂಬ ಮಾತಿದೆ. ಒಂದು ಪುಸ್ತಕಕ್ಕೆ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನೇ ಬದಲಿಸುವ ಶಕ್ತಿ ಇದೆ. ಒಂದು ಉತ್ತಮ ಪುಸ್ತಕ ವ್ಯಕ್ತಿ ಮತ್ತು ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ಗಾಂಧೀಜಿಯವರ ಜೀವನ ಚರಿತ್ರೆಯನ್ನು ಓದಿ ಇಂಗ್ಲೆಂಡಿನ ಮೀರಾ ಬೆಹೆನ್ ಭಾರತಕ್ಕೆ ಬಂದು ಗಾಂಧೀಜಿಯವರ ಅಪ್ಪಟ ಶಿಷ್ಯೆಯಾಗಿದ್ದೇ ಸಾಕ್ಷಿ. ಹಾಗೆಯೇ ಗಾಂಧೀಜಿಯವರ ಆತ್ಮಕಥೆಯಾದ ನನ್ನ ಸತ್ಯಾನ್ವೇಷಣೆ ಪುಸ್ತಕವನ್ನು ಓದಿ ‘ಲಕ್ಷ್ಮಣ್ ತುಕಾರಾಂ ಗೋಲೆ’ ಎಂಬ ಖೈದಿಯ ಮನಪರಿವರ್ತನೆಯಾಗಿ ಸತ್ಪ್ರಜೆಯಾಗಿ ಇತರರಿಗೆ ಮಾರ್ಗದರ್ಶಿಯಾದ ರೀತಿ ಈ ಪುಸ್ತಕವನ್ನು ಓದುವಾಗ ಓದುಗನಿಗೆ ರೋಚಕತೆಯ ಅನುಭವ ನೀಡುತ್ತದೆ.

ಲೇಖಕರ ಸರಳ ಸುಂದರ ನಿರೂಪಣಾ ಶೈಲಿ ಭಾಷೆ ಈ ಪುಸ್ತಕದ ಆಕರ್ಷಣೆ ಕಾರಣವಾಗಿದೆ. ಲಕ್ಷ್ಮಣ್ ತುಕಾರಾಮ ಗೋಲೆ ಚಿಕ್ಕವನಿದ್ದಾಗ ತನ್ನ ತಾಯಿಯನ್ನು ಕಳೆದುಕೊಂಡಿರುತ್ತಾನೆ. ಈತನು 7ನೇ ತರಗತಿಯಲ್ಲಿದ್ದಾಗ ಇವನ ತಂದೆ ಮರು ವಿವಾಹವಾಗಿ ಇವನನ್ನು ಬೋರ್ಡಿಂಗ್ ಶಾಲೆಗೆ ಸೇರಿಸುತ್ತಾರೆ. ತಂದೆಯ ಮರು ವಿವಾಹ ಇವನ ಮನಸ್ಸಿಗೆ ಘಾಸಿಯನ್ನು ಉಂಟುಮಾಡುತ್ತದೆ. ಆತ ಬೋರ್ಡಿಂಗ್ ಶಾಲೆಯನ್ನು ತೊರೆದು ,ಕೆಟ್ಟ ಸ್ನೇಹಿತರ ಸಹವಾಸ ದೋಷದಿಂದ, ಕೆಟ್ಟ ವ್ಯಸನಗಳಿಗೆ ದಾಸನಾಗಿ ಪಡ್ಡೆ ಹುಡುಗರೊಂದಿಗೆ ಅಡ್ಡಾಡುತ್ತಾ ಸಮಯವನ್ನು ಕಳೆಯುತ್ತಾ ಇರುತ್ತಾನೆ.

ಒಮ್ಮೆ ಲಕ್ಷ್ಮಣ್ ತುಕಾರಾಂ ಗೋಲೆ ತನ್ನ ಸ್ನೇಹಿತರೊಂದಿಗೆ ವಡಾಪಾವ್ ತಿನ್ನುತ್ತಿದ್ದಾಗ ಕೂರ್ಲಾದ ರೌಡಿ ಒಬ್ಬನು ಮಹಿಳೆ ಒಬ್ಬಳನ್ನು ಛೇಡಿಸುತ್ತಾನೆ. ಆಗ ಅಸಹಾಯಕ ಮಹಿಳೆ ಇವರನ್ನು ಕುರಿತು ತುಮ್ಹಾಲಾ ಕಾಹಿ ವಾಟತ್ ನಾಹಿಕಾ?( ನಿಮಗೆ ಏನೂ ಅನ್ನಿಸುವುದೇ ಇಲ್ಲವೇ?)ಎನ್ನುತ್ತಾಳೆ. ಆಗ ಲಕ್ಷ್ಮಣ್ ಗೋಲೆ ಆವೇಶ ಭರಿತನಾಗಿ ಸಲೂನಿನಿಂದ ರೇಝರ್ ಹಿಡಿದು ರೌಡಿಯ ಮೇಲೆ ಹಾರಿ ಆತನ ಕಿವಿಯನ್ನು ಇರಿದು ಹೊಟ್ಟೆಗೆ ಚಾಕು ಹಾಕುತ್ತಾನೆ. ಈ ಘಟನೆಯಿಂದ ಆತ ಪಾತಕ ಲೋಕಕ್ಕೆ ಕಾಲಿಡುತ್ತಾನೆ. ಆಗ ಅವನಿಗೆ ಬರಿಯ 16 ವರ್ಷ ನಂತರ ಜೈಲಿನಲ್ಲಿಯೇ ಕೈದಿಗಳಿಂದಲೇ ಈ ಪಾತಕಲೋಕದ ಅನೇಕ ಸಂಗತಿಗಳನ್ನು ಹಾಗೂ ಅಪರಾಧದ ಪಾಠಗಳನ್ನು ಕಲಿಯುತ್ತಾ ಅದನ್ನೇ ವೃತ್ತಿ ಮತ್ತು ಪ್ರವೃತ್ತಿಯಾಗಿಸಿ ಕೊಳ್ಳುತ್ತಾನೆ.

ಹೀಗೆ ದರೋಡೆ, ಜನರನ್ನು ಬೆದರಿಸುತ್ತ ಹಫ್ತಾ ವಸೂಲಿ ಮಾಡಿ, ವಿದ್ಯುತ್ ಕಳ್ಳತನ, ಚೂರಿ ಇರಿತ, ಜನರನ್ನು ಬ್ಲಾಕ್ ಮೇಲ್ ಮಾಡಿ, ದಂಧೆ ದಾಂಧಲೆ ಮುಂತಾದ ಅಪರಾಧಗಳನ್ನು ಮಾಡುತ್ತ ಒಂಬತ್ತು ಬಾರಿ ಜೈಲಿಗೆ ಅತಿಥಿಯಾಗಿ ಹೋಗುವುದು ನಂತರ ಬಿಡುಗಡೆಯಾಗಿ ಬರುವುದು ಅವನಿಗೆ ಮಾಮೂಲಿಯಾಗಿರುತ್ತದೆ. ಒಮ್ಮೆ ಇದೇ ಅಪರಾಧದ ಮೇಲೆ ಜೈಲಿನಲ್ಲಿದ್ದಾಗ ಸಹ ಖೈದಿಯಿಂದ ಪ್ರೇರಿತನಾಗಿ ಗಾಂಧೀಜಿಯ ಆತ್ಮಕತೆಯ ಪುಸ್ತಕವನ್ನು ಓದಿ ಆತನ ಮನ ಪರಿವರ್ತನೆ ಆಗುತ್ತದೆ. ತನ್ನ ಅಪರಾಧವನ್ನು ಒಪ್ಪಿಕೊಂಡು ಶಿಕ್ಷೆ ಅನುಭವಿಸಲು ಸಿದ್ಧನಾಗುತ್ತಾನೆ. ಇವನ ಸನ್ನಡತೆಯ ಆಧಾರದ ಮೇಲೆ ಅವನಿಗೆ ಶಿಕ್ಷೆ ಕಡಿಮೆಯಾಗಿ ಬಿಡುಗಡೆಯಾಗುತ್ತದೆ. ನಂತರ ಲಕ್ಷ್ಮಣ್ ತುಕಾರಾಂ ಗೋಲೆಯು ಸತ್ಪ್ರಜೆಯಾಗಿ ಸಮಾಜ ಸುಧಾರಕನಾಗಿ ಇತರ ಖೈದಿಗಳ ಮನ ಪರಿವರ್ತನೆ ಮಾಡುವ ಕೆಲಸವನ್ನು, ಸಮಾಜಮುಖಿ ಕೆಲಸದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಹೊಸ ಜೀವನಕ್ಕೆ ಪಾದಾರ್ಪಣೆ ಮಾಡುತ್ತಾನೆ. ಈತನ ಆತ್ಮ ನಿವೇದನೆ ಮತ್ತು ಪರಿವರ್ತನೆ ಯನ್ನು ಓದುವಾಗ ಓದುಗನಿಗೆ ಅಪರಾಧಿಗಳಲ್ಲಿ ಮನುಷ್ಯತ್ವವನ್ನು ಮೂಡಿಸಿ ಸತ್ಪ್ರಜೆಯನ್ನಾಗಿ ಮಾಡಬಹುದು ಎಂಬ ಆಶಾಭಾವನೆ ಮೂಡುತ್ತದೆ.

ಲಕ್ಷ್ಮಣ್ ತುಕಾರಾಂ ಗೋಲೆ ಎಂಬ ಅಪರಾಧಿಯ ಜೀವನ ಗಾಥೆ ಮತ್ತು ಪರಿವರ್ತನೆಯ ನಂತರದ ದಿನಗಳ ಬಗ್ಗೆ ಲೇಖಕರು ಓದುಗನಿಗೆ ಮನಮುಟ್ಟುವ ಹಾಗೆ ನಿರೂಪಿಸಿದ್ದಾರೆ. ಗೋಲೆಯ ಪರಿವರ್ತನೆಯ ಕಥೆ ಮಹಾರಾಷ್ಟ್ರದಲ್ಲಿ ಅನೇಕ ಬಂಧಿತರ ತಪ್ಪೊಪ್ಪಿಗೆಗೆ ಮತ್ತು ಮನ ಪರಿವರ್ತನೆಗೆ ಕಾರಣವಾಗಿರುವುದು ಶ್ಲಾಘನೀಯ.

ಪರಿಸ್ಥಿತಿಯ ಒತ್ತಡದಿಂದ ಪಾತಕಿಯಾಗಿ ನಂತರ ಸತ್ಪ್ರಜೆಯಾಗಿ ಇತರರಿಗೆ ಪ್ರೇರಕನಾದ ಲಕ್ಷ್ಮಣ್ ತುಕಾರಾಂ ಗೋಲೆಯನ್ನು ಕರ್ನಾಟಕ ಸರ್ವೋದಯ ಮಂಡಲದ ಮೂಲಕ ರಾಜ್ಯಕ್ಕೆ ಕರೆಸಿಕೊಂಡು ಶಿವಮೊಗ್ಗ, ಪರಪ್ಪನ ಅಗ್ರಹಾರ, ಮಂಡ್ಯ, ಮೈಸೂರ, ತುಮಕೂರ ಮುಂತಾದ ಜೈಲಿಗೆ ಕರೆದುಕೊಂಡು ಹೋಗಿ ಉಪನ್ಯಾಸಗಳನ್ನು ಏರ್ಪಡಿಸಿ ಇತರ ಖೈದಿಗಳ ಮನಃಪರಿವರ್ತನೆಗೆ ಶ್ರಮಿಸಿದ ಲೇಖಕರಾದ ಡಾ. ಎಚ್ ಎಸ್ ಸುರೇಶ್ ರವರ ಕಾರ್ಯ ವೈಖರಿ ಪ್ರಶಂಸನೀಯ.

ಜನ್ಮಜಾತವಾಗಿ ಯಾರು ಅಪರಾಧಿಯಾಗಿರುವುದಿಲ್ಲ ಪರಿಸ್ಥಿತಿ ಪರಿಸರ ಸಹವಾಸ ದೋಷ ಕೆಟ್ಟ ಒಡನಾಟದಿಂದ ಅಪರಾಧಿಯಾಗುತ್ತಾರೆ. ಅಪರಾಧಿಗಳು ತಮ್ಮ ತಪ್ಪನ್ನು ಅರಿತು ಶಿಕ್ಷೆಯನ್ನು ಅನುಭವಿಸಿ ಸತ್ಪ್ರಜೆಯಾಗಿ ಬದಲಾದರೆ, ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬಹುದು. ಈ ನಿಟ್ಟಿನಲ್ಲಿ ಈ ಕೃತಿಯು ವಿಶೇಷವಾಗಿದೆ. ಲೇಖಕರ ನಿರೂಪಣಾ ಶೈಲಿ ಪುಸ್ತಕದ ಮೆರಗನ್ನು ಹೆಚ್ಚಿಸಿದೆ.

ಸಮೀಕ್ಷೆಯ ಪ್ರಕಾರ ಅಪರಾಧವನ್ನು ಎಸಗಿ ಬಂದಿತರಾಗುತ್ತಿರುವವರಲ್ಲಿ 18- 30 ವರ್ಷ ವಯೋಮಿತಿಯಲ್ಲಿರುವವರು ಶೇಕಡ 44.7 ರಷ್ಟು ಎನ್ನುವುದು ಅಚ್ಚರಿ ಮತ್ತು ಆಘಾತಕಾರಿ ವಿಷಯ. ಅದರಲ್ಲಿ ಅಪರಾಧಿಗಳು ಶೇಕಡ 75ರಷ್ಟು ಜನ ವಿದ್ಯಾವಂತರೆನ್ನುವುದು ನಮ್ಮನ್ನು ಚಿಂತನೆಗೆ ನೂಕುವಂತೆ ಮಾಡುತ್ತದೆ. ಯುವಜನತೆಯು ದಾರಿ ತಪ್ಪುತ್ತಿರುವುದಕ್ಕೆ ಇದೇ ಸೂಚಕ . ಈ ಪುಸ್ತಕವು ಇಂದಿನ ದಾರಿ ತಪ್ಪುತ್ತಿರುವ ಯುವ ಜನತೆಗೆ ಮಾರ್ಗದರ್ಶನದಂತಿದೆ ಹಾಗಾಗಿ ಹೆಚ್ಚೆಚ್ಚು ಜನರಿಗೆ ಈ ಪುಸ್ತಕವು ತಲುಪಲಿ ಎಂದು ಆಶಿಸುತ್ತೇನೆ.

ಇಲ್ಲಿ ಅಪರಾಧಿಯಾಗಿದ್ದು ಸತ್ಪ್ರಜೆಯಾಗಿ ಬದಲಾದ ಲಕ್ಷ್ಮಣ್ ಮಾದರಿಯಾದರೆ ಈ ಪರಿವರ್ತನೆಯ ವಿಷಯವನ್ನು ಅವರ ಮೂಲಕವೇ ಹಲವು ಕಡೆ ಶ್ರಮವಹಿಸಿ ಸಮಾಜದ ಸ್ವಾಸ್ಥ್ಯ ಹಾಗೂ ಗುಣಮಟ್ಟವನ್ನು ಹೆಚ್ಚಿಸುವ ಸುರೇಶ ಅವರ ಸೇವಾ ಕೈಂಕರ್ಯ ಅಭಿನಂದನೀಯ ಹಾಗೂ ಅನುಕರಣೀಯ ಕೂಡ ಆಗಿದೆ.


  •  ಚೇತನ ಭಾರ್ಗವ – ಅರಮನೆತೋಟ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading