ಬಂಗು ಅಥವಾ ಪಿಗ್ಮೆಂಟೇಷನ್ ಎಂದರೇನು? – ವಸುಧಾ ಪ್ರಭು



ಈಗ ‘ ಬಂಗು” ಎಂದರೆ ಏನು?? ನೋಡೋಣ. ಇದು ಸಾಧಾರಣ ಮಧ್ಯವಯಸ್ಕರ ಮುಖದ ಮೇಲೆ ಅಂದರೆ ಹಣೆ, ಗಲ್ಲದ ಮೇಲೆ ಬೀಳುವ ಒಂದು ತರಹದ ಕಪ್ಪು ಕಲೆ, ಈ ಕಲೆ ಒಳಮುಖದ ಕಲೆ, ಅಂದರೆ ಚರ್ಮದ ಮೇಲಿನ ಕಲೆ ಅಲ್ಲ, ಚರ್ಮದ ಒಳಗಿನ ಕಲೆ, ಇದರಲ್ಲಿ ಚರ್ಮ ಕಂದು ಅಥವಾ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇದನ್ನು ‘ಬಂಗು’ ಅನ್ನುತ್ತಾರೆ. ಹೆಚ್ಚಾಗಿ ಸ್ತ್ರೀಯರಲ್ಲಿ ಇದು ಜಾಸ್ತಿ.

ಫೋಟೋ ಕೃಪೆ : trendingposts

ಸ್ತ್ರೀ ಅಂದರೆ ಸಂಸಾರದ ಕಣ್ಣು, ಚಿಕ್ಕಂದಿನಲ್ಲಿ ಹೆತ್ತವರು ಹಾಕಿದ ಆಹಾರ ಪದಾರ್ಥದಲ್ಲೇ ತೃಪ್ತಿ ಪಡುವಾಕೆ ( ಅದೂ ಗಂಡು ಮಕ್ಕಳಿಗೆ ತಿನಿಸಿದಷ್ಟು ಹೆಣ್ಣು ಮಕ್ಕಳಿಗಿರುವುದಿಲ್ಲ) ಮದುವೆ ಆಗಿ ಗಂಡನ ಮನೆಗೆ ಹೋದ ಮೇಲೆ ಎಲ್ಲರಿಗೂ ಬಡಿಸಿ ಮಕ್ಕಳ ಹೊಟ್ಟೆ ತುಂಬಿಸಿ ನಂತರ ಇದ್ದುದರಲ್ಲೇ‌‌ ತಾನು ಉಂಡು ತೃಪ್ತಿ ಪಡುವಾಕೆ ಅದರಲ್ಲೂ ಮೂರ್ನಾಕು ಮಕ್ಕಳ ತಾಯಿಯಾದರೆ ಸರಿಯಾದ ಪೋಷಣೆ ಇಲ್ಲದೆ ಕ್ರಮೇಣ ಮೈಯೊಳಗೆ ನಿಶ್ಯಕ್ತಿ, ಹಾಗೂ ರಕ್ತಸಂಚಾರವಾಗದೆ, ಸರಿಯಾದ ಆಹಾರ ಕ್ರಮ ಇಲ್ಲದೆ ವಿಟಾಮಿನ್ಗಳ ಕೊರತೆಯಿಂದ ಚರ್ಮ ಕಪ್ಪು, ಕಂದು ಬಣ್ಣಕ್ಕೆ ತಿರುಗುವುದೇ ಬಂಗು, ವಿಟಾಮಿನ್ ಸಿ, ಇ ಗಳ ಕೊರತೆ ಇದಕ್ಕೆ ಕಾರಣ.

ನನಗೆ ತಿಳಿದ ಹಾಗೆ ಹಿರಿಯರು ಇದಕ್ಕೆ ಒಂದು ವೈಜ್ಞಾನಿಕ ಕಾರಣವನ್ನು ಕೊಟ್ಟಿದ್ದಾರೆ, ಅದೆಂದರೆ ಯಾವಾಗ ಶನಿ ದೋಷ ಶುರು ಆಗುವುದೋ ಆಗ ಇದು ಮುಖದ ಮೇಲೆ ಬೀಳುತ್ತೆ. ನಂತರ ಶನಿ ಬಿಡುವಾಗ ಇದು ತಂತಾನೆ ಕಡಿಮೆ ಆಗುತ್ತೆ, ಇದು ಎಷ್ಟು ಸತ್ಯ ನನಗಂತೂ ಗೊತ್ತಿಲ್ಲ,, ಹಿರಿಯರ ಮಾತನ್ನು ಅಲ್ಲಗಳೆಯುವಂತೆಯೂ ಇಲ್ಲ,ಇರಲಿ.

ಈಗ ಈ ಬಂಗಿಗೆ ಮಾರುಕಟ್ಟೆಯಲ್ಲಿ ಹೇರಳ ಔಷಧಿಗಳು ಸಿಗುತ್ತವೆ, ಅದೆಲ್ಲಾ ಹಣ ಮಾಡುವ ಉಪಾಯ ಅಷ್ಟೇ ಹೆಚ್ಚು ಪರಿಣಾಮ ಬೀರೋದಿಲ್ಲ. ಅದನ್ನು ಹಚ್ಚುವುದರಿಂದ ಬಂಗು ಸಂಪೂರ್ಣವಾಗಿ ಹೋಗುವುದಿಲ್ಲ, ಸ್ವಲ್ಪ ಕಪ್ಪು ಬಣ್ಣ ಬಿಳುಪಾಗಬಹುದು ಅಷ್ಟೇ.

ಫೋಟೋ ಕೃಪೆ : trendingposts

ಇದಕ್ಕೆ ರಾಮಬಾಣ ಔಷಧ ಅಂದರೆ ಕಿತ್ತಳೆ ಹಣ್ಣನ್ನು ಹೇರಳ ಸೇವಿಸಲೂ ಬೇಕು. ಹಾಗೂ ಇದರ ಸಿಪ್ಪೆಯನ್ನು ಸರಿಯಾಗಿ ಒಣಗಿಸಿ ಅರೆದು ಆ ಪೇಸ್ಟನ್ನು ಮುಖಕ್ಕೆ ಹಚ್ಚುವುದು, ಇದು ಕೇವಲ ಒಂದೆರಡು ದಿವಸ ಹಚ್ಚಿದರೆ ಸಾಲದು, ತಾಳ್ಮೆಯಿಂದ ತಿಂಗಳಾದರೂ ಹಚ್ಚಬೇಕು.

ಇನ್ನೊಂದು ಉಪಾಯ. ಮೊದಲಿಗೆ ಒಂದು ಬಟ್ಟಲಿಗೆ ಒಂದು ಟೇಬಲ್ ಸ್ಪೂನ್ ಅಕ್ಕಿ ಹಿಟ್ಟನ್ನು ಹಾಕಿ ನಂತರ ಅದಕ್ಕೆ ಎರಡು ಟೇಬಲ್ ಸ್ಪೂನ್ ಗಟ್ಟಿ ಮೊಸರು ಹಾಗೂ ಒಂದು ಟೇಬಲ್ ಸ್ಪೂನ್ ಟೊಮೆಟೊ ರಸವನ್ನು ಹಾಕಿ ಈ ಮೂರನ್ನು ಕೂಡ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಈ ಒಂದು ಮಿಶ್ರಣವನ್ನು ನಿಮ್ಮ ಮುಖಕ್ಕೆ ಅಪ್ಲೈ ಮಾಡಿಕೊಂಡು ಐದು ನಿಮಿಷಗಳ ಕಾಲ ಸ್ಕ್ರಬ್ಬಿಂಗ್ ಮಾಡಿಕೊಳ್ಳಬೇಕು ನಂತರ ೧೫ ರಿಂದ ೨೦ ನಿಮಿಷಗಳ ಕಾಲ ಹಾಗೇಯೆ ಬಿಟ್ಟು ತಣ್ಣಿರಿನಿಂದ ನಿಮ್ಮ ಮುಖವನ್ನು ತೊಳೆದುಕೊಳ್ಳಿ ಹೀಗೆ ಮಾಡುವುದರಿಂದ ನಿಮಗೆ ಇರುವ ಪಿಗ್ಮೆಂಟೇಶನ್ ಸಮಸ್ಯೆ ಸ್ವಲ್ಪ ‌ಮಟ್ಟಿಗೆ ಕಡಿಮೆಯಾಗುತ್ತದೆ.

ಉಪಾಯ…ಕಿತ್ತಳೆ ಹಣ್ಣನ್ನು ತಿಂದ ನಂತರ ಸಿಪ್ಪೆಯನ್ನು ಒಣಗಿಸಿ ಕುಟ್ಟಿ ಪುಡಿಮಾಡಿ ಒಂದು ಭರಣಿಯಲ್ಲಿ ಮುಚ್ಚಿ ಇಡಬೇಕು. ಕಹಿಬೇವಿನ ಎಣ್ಣೆ , ತೆಂಗಿನೆಣ್ಣೆ, ಅಥವಾ ಹಳೇ ತುಪ್ಪದೊಂದಿಗೆ ಬೆರೆಸಿ ದಿನಾ ಹಚ್ಚಿದರೆ ಮುಖದ ಮೇಲಿನ ಬಂಗು, ಹಾಗೂ ಇತರ ಚರ್ಮಕ್ಕೆ ಸಂಬಂಧಿಸಿದ ಕಲೆಗಳು ಮಾಯವಾಗುವುದು.

ಉಪಾಯ, ಗರಿಕೆ ಹುಲ್ಲನ್ನು ಬೇರು ಸಹಿತ ತಂದು ಜಜ್ಜಿ ರಸ ತೆಗೆದು ಸ್ವಲ್ಪ ಎಳ್ಳೆಣ್ಣೆ ಸೇರಿಸಿ ಕಾಯಿಸಬೇಕು. ಕೊನೆಗೆ ಉಳಿದ ಎಣ್ಣೆಯನ್ನು ಮಾತ್ರ ಶೇಖರಿಸಿ ಇಟ್ಟು ‘ಬಂಗು’ ಗೆ ತಾಗಿಸಿದರೆ ಬಂಗು ಮಾಯವಾಗಬಹುದು.

ಫೋಟೋ ಕೃಪೆ : emedihealth

ಮುಖಕ್ಕೆ ಅರಸಿನವನ್ನು ಹಿಂದಿನವರು ಹಚ್ಚುತಿದ್ದರು. ಅದು ಕೇವಲ ಸೌಭಾಗ್ಯಕ್ಕೆ ಮಾತ್ರವಲ್ಲ ಇಂತಹ ಚರ್ಮದ ಮೇಲೆ ಬರುವ ಕಲೆಗಳನ್ನು ಕೂಡಾ ತಡೆಗಟ್ಟುತಿತ್ತು.

ಅರಶಿನ ಕೊಂಬು, ಕಹಿಬೇವಿನ ಕಡ್ಡಿ, ಹಸುವಿನ ಹಳೇ ತುಪ್ಪದಲ್ಲಿ ತೇದು ಹಚ್ಚಿದರೆ ಎಲ್ಲಾ ಕಲೆಗಳೂ ಮಂಗಮಾಯವಾಗುತ್ತದೆ… ಹೆಚ್ಚು ಬಿಸಿಲಿಗೆ ಹೋಗಬಾರದು, ಹೊರಗೆ ಬಿಸಿಲಿದ್ದರೆ ಕೊಡೆಯನ್ನು ಕೊಂಡು ಹೋಗಲೇ ಬೇಕು, ಹತ್ತಿರ ಒಂದು ನೀರಿನ ಬಾಟಲಿಯೂ ಇರಲಿ.



ಕೇವಲ ಹೊರಗಿನಿಂದ ಮುಖ ಚಂದ ಮಾಡಿದರೆ ಸಾಲದು,, ತಿನ್ನುವ ಆಹಾರದಲ್ಲಿಯೂ ಗಮನವನ್ನು ಕೊಡಬೇಕು,, ಮೊಳಕೆ ಬಂದ ಧಾನ್ಯಗಳು, ಹಸಿರು ತರಕಾರಿಗಳು, ಬೀಸಿದ ಸಿರಿಧಾನ್ಯಗಳ ಹಿಟ್ಟಿನ ಭಕ್ಕರಿ, ಚಪಾತಿ, ಮೊಸರು, ಮಜ್ಜಿಗೆ ಹಾಗೂ ಭರಪೂರ ನೀರನ್ನು ಕೂಡಾ ಕುಡಿಯಬೇಕು. ಇದರಿಂದ ರಕ್ತ ಶುದ್ಧಿಯಾಗುವುದು, ದೇಹದಲ್ಲಿ ಅಶುದ್ಧ ರಕ್ತ ಹೆಚ್ಚಾದಂತೆ ಕೆಲವು ಕಾಯಿಲೆಗಳು ನಮ್ಮನ್ನು ಸುತ್ತುತ್ತವೆ, ದಿನಾ ಏನಾದರೂ ಹಣ್ಣು ಹಂಪಲುಗಳು ತಿನ್ನಲೇ ಬೇಕು.

ಅಬ್ಬಬ್ಬಾ ಎಷ್ಟು ಚಿಕ್ಕದ್ದು ಎಂದರೂ ಬರೆದಷ್ಟು ಕಡಿಮೆ ಈ ಸೌದರ್ಯದ ಸಲಹೆಗಳು, ಹೆಚ್ಚು ಉದ್ದವೂ ಆಗಬಾರದು ಲೇಖನ,, ನಿಮಗೂ ನೆನಪಿನಲ್ಲಿಡಲು ಕಷ್ಟ, ಇನ್ನೂ ಕೆಲವು ಸೂಚನೆಗಳನ್ನು ಮುಂದಿನ ಲೇಖನದಲ್ಲಿ ನೀಡುತ್ತೇನೆ. ಅದೇ ಮುಖದ ಮೇಲೆ ಬೀಳುವ ಸಿಬ್ಬಿನ ಬಗ್ಗೆ, ಅಳವಾದ ಗಾಯದ ಕಲೆಗಳ ಬಗ್ಗೆ ವಗೈರೆ ವಗೈರೆ, ಅಲ್ಲಿ ವರೆಗೂ ಟಾ,ಟಾ.


  • ವಸುಧಾ ಪ್ರಭು, ಮುಂಬೈ

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading