ಕುಡುಕ ಗಂಡನಿಗೆ ಕಲಿಸಿದ ಪಾಠ

ದಿನಾ ಗಂಡ ಕುಡಿದು ತೂರಾಡುತ್ತಾ ಬರುತ್ತಿದ್ದ, ಹೆಂಡತಿ ವಿಲ್ಲಿ ಗಂಡನ ಕುಡಿತದ ಚಟಕ್ಕೆ ಬೇಸತ್ತು ಹೋಗಿದ್ದಳು, ಒಂದು ದಿನ ಸಮಯ ನೋಡಿ ಏನು ಮಾಡಿದಳು ಹೊತ್ತೇ?…ವಸುಧಾ ಪ್ರಭು ಅವರ ಬರವಣಿಗೆಯ ಸಣ್ಣಕತೆಯನ್ನು ತಪ್ಪದೆ ಮುಂದೆ ಓದಿ…

ಸುಮಾರು ಹದಿನೆಂಟು ವರ್ಷದ ಹಿಂದಿನ ಘಟನೆ. ನಾನು ಊರಿಗೆ ಹೋಗಿದ್ದೆ, ಅಲ್ಲಿ ಸಂಬಂಧಿಕರ ಮನೆಯಲ್ಲಿ ಉಳಿದಿದ್ದೆ. ಉಡುಪಿಯ ಹತ್ತಿರ ಕಲ್ಯಾಣಪುರ ಎಂಬ ಊರು ಇದೆ. ಅಲ್ಲಿ ವಾರಕ್ಕೊಮ್ಮೆ ದೊಡ್ಡ ಸಂತೆ ನೆರೆಯುತಿತ್ತು. ನನ್ನ ಚಿಕ್ಕಪ್ಪನ ಮಗಳು ಮತ್ತು ನಾನು ಇಬ್ಬರೂ ಸಂತೆಗೆ ಹೋಗಿದ್ದೆವು. ಸುಮಾರು ತಿರುಗಾಡಿದ ನಂತರ ಯಾರೋ ನನ್ನ ಹೆಸರನ್ನು ಕೂಗಿದಂತಾಯಿತೆಂದು ಹಿಂದೆ ತಿರುಗಿ ನೋಡಿದಾಗ ನನ್ನ ಪ್ರೀತಿಯ ಗೆಳತಿ ‘ವಿಲ್ಲಿ’ ನನ್ನ ನೋಡಿ ಇಷ್ಟು ಸಂತಸವೆಂದರೆ ಅಲ್ಲಿ ಇರುವ ತನ್ನ ಮನೆಯೊಳಗೆ ಒತ್ತಾಯದಿಂದ ತುಂಬಾ ಮಾತನಾಡುವುದಿದೆ ಎಂದು ಕರೆದುಕೊಂಡು ಹೋದಳು.

ಈ ವಿಲ್ಲಿ ಮಕ್ಕಳು ನನ್ನ ಮಕ್ಕಳು ಒಂದೇ ವಯಸ್ಸಿನವರು. ಒಂದೇ ಶಾಲೆಗೆ ಹೋಗುತಿದ್ದರು. ಮುಂಬೈನಲ್ಲಿ ಪಕ್ಕದ ಕಟ್ಟಡದಲ್ಲಿ ವಾಸಿಸುತ್ತಿದ್ದಳು. ಗಂಡ ಟ್ಯಾಕ್ಸಿ ಓಡಿಸುತ್ತಿದ್ದ. ಮಾತ್ರ ತುಂಬಾ ಕುಡುಕ. ವಿಲ್ಲಿ ಯಾವಾಗಲೂ ತನ್ನ ದುಖಃವನ್ನು ನನ್ನ ಬಳಿ ತೋಡಿಕೊಳ್ಳುತಿದ್ದಳು. ಸುಮಾರು ಸಲ ಅವಳ ಮಕ್ಕಳ ಫೀಸಿನ ಹಣವನ್ನೂ ನಾನೇ ಕಟ್ಟಿದ್ದೆ. ಅವಳ ಹತ್ತಿರ ಹಣ ಬಂದಾಗ ವಾಪಸ್ ಕೊಡುತಿದ್ದಳು. ಆಕೆ ಸ್ವಾಭಿಮಾನಿ, ಸಹೃದಯಿ, ತನ್ನ ಗಂಡನ ಕುಡುಕುತನವನ್ನು ಬಿಡಿಸುವುದು ಹೇಗೆ ಎಂಬ ಚಿಂತೆ ಆಕೆಯದು. ಒಮ್ಮೆ ನಾನೊಂದು ಉಪಾಯವನ್ನು ಹೇಳಿದೆ. ಸ್ವಲ್ಪ ಆಲೋಚಿಸಿ ಸಮಯ ಬಂದಾಗ ನೋಡುತ್ತೇನೆ ಅಂದಳು. ಈಗ ಆಕೆ ಮನೆ ಬದಲಾಯಿಸಿ ಊರಿನಲ್ಲಿ ವಾಸಿಸುತ್ತಿದ್ದಳು. ಮಕ್ಕಳು ಹೊರದೇಶದಲ್ಲಿ ದುಡಿಯುತ್ತಿದ್ದರು. ಅವಳ ಮುಖದ ಮೇಲೆ ತೃಪ್ತಿ ಇತ್ತು. ನಾನು ಸಿಕ್ಕಿದ್ದೇ ಅವಳಿಗೆ ತುಂಬಾ ಸಂತೋಷ ಆಗಿತ್ತು.

ಫೋಟೋ ಕೃಪೆ : google

ನಿಂಬೆಹಣ್ಣಿನ ಪಾನಕ ಮಾಡಿ ಕೊಟ್ಟಳು. ಅವಳ ಗಂಡನ ಬಗ್ಗೆ ವಿಚಾರಿಸಿದೆ, ಆಗ ಆಕೆ ಈಗ ಕುಡಿಯುವುದನ್ನು ಸಂಪೂರ್ಣ ಬಿಟ್ಟಿದ್ದಾನೆ ಅಂದಳು, ನನಗೆ ಪರಮಾಶ್ಚರ್ಯವಾಯಿತು, ಹೇಗೆ ಎಂದು ಕೇಳಿದಾಗ “ನೀನು ಒಂದು ಉಪಾಯ ಹೇಳಿದ್ದೆ ತಾನೇ ನೆನಪಿದೆಯಾ”ಎಂದಳು. ನನಗೆ ನೆನಪಾಗಲಿಲ್ಲ,ಕೊನೆಗೆ ಆಕೆಯೇ ಹೇಳಿದಳು. “ಒಂದು ದಿನ ತುಂಬಾ ಕುಡಿದು ಗಲಾಟೆ ಮಾಡಿದ, ಏನು ಮಾಡಲಿ ಹೇಗೆ ಬುದ್ಧಿ ಕಲಿಸಲಿ ಎಂದು ಯೋಚಿಸಿದಾಗ ನೀನು ಹೇಳಿದ ಉಪಾಯ ಕಾರ್ಯಗತ ಮಾಡೋಣ ಎಂದು ಒಂದು ದಿನ ದೂರದಿಂದಲೇ ತೂರಾಡಿ ಬರುವುದನ್ನು ಕಂಡೆ. ಮನಸ್ಸು ಗಟ್ಟಿ ಮಾಡಿ ಮನೆಯಲ್ಲಿ ಇದ್ದ ಬಾಟಲಿಯಲ್ಲಿರುವ ಸಾರಾಯಿಯನ್ನು ಮೈ ಮೇಲೆ ಹಾಕಿ, ಮುಖಕ್ಕೂ ಒರೆಸಿ ತೂರಾಡುತ್ತಾ ಆತನನ್ನು ಸ್ವಾಗತಿಸಿದೆ. ಬಾಟ್ಲಿಯನ್ನು ತೋರಿಸಿ ಇನ್ನು ನಾವು ಇಬ್ಬರೂ ಇಡೀ ದಿನ ಇದನ್ನೇ ಕುಡಿದು ಬದುಕೋಣ, ಆನಂದಿಸೋಣ. ಮಕ್ಕಳಿಬ್ಬರನ್ನೂ ಗತಿ ಇಲ್ಲದವರೆಂದು ಯಾವುದಾದರೂ ಆಶ್ರಮಕ್ಕೆ ಸೇರಿಸೋಣ ಅಂದೆ. ಅನಿರೀಕ್ಷಿತವಾದ ನನ್ನ ವರ್ತನೆ ನೋಡಿ ಅವನಿಗೂ ಆಘಾತ ಆಯಿತು. ಆ ದಿನ ಊಟವನ್ನೂ ಕೊಡಲಿಲ್ಲ.

ಬೆಳಗ್ಗೆ ನೋಡಿದಾಗ ಹೊರಗೆ ಹಾಲಿನಲ್ಲಿ ಏಸುವಿನ ಪ್ರತಿಮೆಯ ಮುಂದೆ ಕುಳಿತು ಕಣ್ಣೀರು ಸುರಿಸುತಿದ್ದ. ನನ್ನ ನಾಟಕ ಪುನಃ ಶುರು ಬಾಟಲಿಯನ್ನು ಕೈಯಲ್ಲಿ ಹಿಡಿದು, ಬಾ ಕುಡಿಯೋಣ ಇಬ್ಬರೂ, ಕುಡಿದೇ ಸಾಯೋಣ. ಇನ್ನು ಊಟಾನು ಬೇಡ, ತಿಂಡಿ ಕಾಫಿ ಏನೂ ಬೇಡ ಸಾಯುವ ವರೆಗೆ ಕುಡಿಯೋಣ ಎಂದು ತೊದಲಿದೆ. ಆತ ಗಟ್ಟಿಯಾಗಿ ನನ್ನ ಕಾಲುಗಳನ್ನು ಹಿಡಿದ. ಆಣೆ ಮಾಡಿದ, ಇನ್ನೆಂದೂ ಕುಡಿಯೋಲ್ಲ ಎಂದು ಭಾಷೆ ಕೊಟ್ಟ ಮತ್ತು ಅದನ್ನು ಪಾಲಿಸಿದ.

ಈಗ ಎಲ್ಲಾ ದುಶ್ಚಟಗಳನ್ನು ಬಿಟ್ಟಿದ್ದಾನೆ. ಸಂತೋಷದಲ್ಲಿದ್ದೇವೆ ಎಂದಾಗ ಆಕೆಯ ಕಣ್ಣಲ್ಲಿ ನೀರು ತುಂಬಿತ್ತು. ಮುಂಬೈನಲ್ಲಿ ಮಾಡಲಾಗದ ಪ್ರಯೋಗವನ್ನು ಆಕೆ ಇಲ್ಲಿ ಮಾಡಿ ಯಶಸ್ವಿಯಾಗಿದ್ದಳು.


  • ವಸುಧಾ ಪ್ರಭು – ಮುಂಬೈ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading