ನೀಲಿ ಬಾನಲಿ ಹಸಿರು ಕಡಲಲಿ…ನಟಿಗೆ ಹೊನ್ನತೋರಣ ಕಟ್ಟಿತು…ಕವಿ ಬೆಂಶ್ರೀ ರವೀಂದ್ರ ಅವರ ಈ ಕವನ ನಟಿ ಲೀಲಾವತಿ ಅವರಿಗೆ ಸಮರ್ಪಣೆ , ತಪ್ಪದೆ ಮುಂದೆ ಓದಿ…
ಲೀಲೆ ಮುಗಿಸಿ ತೆರೆಯು ಮುಚ್ಚಿತು
ಉಸಿರು ಬೆರೆಯಿತು ನೆಲದಲಿ
ನೀಲಿ ಬಾನಲಿ ಹಸಿರು ಕಡಲಲಿ
ನಟಿಗೆ ಹೊನ್ನತೋರಣ ಕಟ್ಟಿತು
ಕಿರಣ ದೀಪವ ಬೆಳಗಿತು
ಬೆಳಕು ಭುವಿಯನೆ ತಬ್ಬಿತು
ತಲೆಮಾರುಗಳೆದೆಯ ಕುಣಿತವು
ಬಿಮ್ಮನೆ ಹೂಗಳ ಚೆಲ್ಲಿತು
ಕಿಣಕಿಣ ಗೆಜ್ಜೆ ನಿನಾದವು
ಸೆಳೆವ ಮೋಹಕದನಿಯು
ಕಣ್ಣು ಮಿಂಚಿನ ಕನ್ನಡಿ
ಭಾವಲೋಕದ ಗಾರುಡಿ
ಹೇಳದೆ ಹೋದೆಯೆಂದರೆ
ಸಟೆಯಾದೀತು ದಿಟದಿ
ಎಲ್ಲ ಹೇಳಿದಿ ನಾಟ್ಯದಿ
ವಿಹಾರ ವಿಯೋಗ ಯೋಗದಿ
ಉಸಿರು ಕಳೆದು ಸಾವು ಕಮರಿ
ರೂಪ ತಾರೆಯಲಿ ಸೇರಿತು
ಎಂಬದು ಹುಸಿನುಡಿಯಲ್ಲವೆ
ಮರೆಯಾಗುವುದೇ ನಕ್ಷತ್ರವು
ನೆನಪಿನ ಬೋಗೋಣಿಯಲಿ
ಇಹುದು ಛಲ ಚಲ ಜೀವವು
ತೆರೆತೆರೆಯಲಿ ನಿನ್ನ ಬಿಂಬವು
ಕನ್ನಡತಿಯ ಆಡುಂಬೋಲವು
- ಬೆಂಶ್ರೀ ರವೀಂದ್ರ
