‘ಅಕ್ಷರ ವೈಭವ’ ಪುಸ್ತಕ ಪರಿಚಯ

ಸಂಗಮನಾಥ ಪಿ ಸಜ್ಜನ ಅವರ ‘ಅಕ್ಷರ ವೈಭವ’ ಪುಸ್ತಕದ ಕುರಿತು ವೀರೇಶ ಬ.ಕುರಿ ಸೋಂಪೂರ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಅಕ್ಷರ ವೈಭವ
ಲೇಖಕರು : ಸಂಗಮನಾಥ ಪಿ ಸಜ್ಜನ
ಪ್ರಕಾಶನ : ಸಜ್ಜನ ಪ್ರಕಾಶನ
ಬೆಲೆ : ೧೦೦.೦೦
ಖರೀದಿಗಾಗಿ : 9902510531

ಹಲವಾರು ವಿಶೇಷತೆಗಳ ‘ಅಕ್ಷರ ವೈಭವ’ವನ್ನು ಒಮ್ಮೆಯಾದರೂ ಕಣ್ತಂಬಿಕೊಳ್ಳಿ ಬಾಂಧವರೆ.

ಕಲ್ಯಾಣ ನಾಡಿನ ಆತ್ಮೀಯ ಕವಿಮಿತ್ರರಾದ ಶ್ರೀ ಸಂಗಮನಾಥ ಪಿ ಸಜ್ಜನ ರವರ ಚೊಚ್ಚಲ ಕವನ ಸಂಕಲನವಾಗಿ ಹೊರ ಬಂದಿರುವ ‘ಅಕ್ಷರ ವೈಭವ’ದೊಳು ಈ ರವಿವಾರ ಮಿಂದೆದ್ದು ನಿಮಗೂ ಸಹ ಈ ವೈಭವದ ಕಿರು ಪರಿಚಯ ಮಾಡಿಕೊಡುವ ತುಂಬು ಹಂಬಲದ ಫಲವೇ ನಿಮ್ಮೆದುರಿಗಿರುವ ಈ ಲೇಖನ. ಶೀರ್ಷಿಕೆಯಲ್ಲಿ ತಿಳಿಸಿದಂತೆ ಹಲವಾರು ವಿಶೇಷತೆಗಳಿಂದೊಡಗೂಡಿದ ಕವನ ಸಂಕಲನವಿದು. ಅದರಲ್ಲಿ ಬಹು ಮುಖ್ಯವಾಗಿ ಗಮನಿಸಬೇಕಾದದ್ದು ಈ ಪುಸ್ತಕದ ಬೆನ್ನುಡಿಯು, ಲೇಖಕರ ತಾಯಿಯವರಾದ ಶ್ರೀಮತಿ ಶರಣಮ್ಮ ಸಜ್ಜನರವರಿಂದಲೇ ಮೂಡಿಬಂದಿರುವುದು. ಮೂಲತ: ಜನಪದ ಕಲಾವಿದರಾದ ಶರಣಮ್ಮ ಸಜ್ಜನರವರು ಕಲಬುರ್ಗಿ ವಿ.ವಿ ಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಷ್ಕೃತ ಕಲಾವಿದರು. ಆದರೆ ಇವರು ಓದು ಬರಹ ಅರಿಯದವರು. ಅವರ ಮನೋಭಿವ್ಯಕ್ತಿಯ ಮಂದಾರ ಪುಷ್ಪಗಳೇ ಇಲ್ಲಿ ಬೆನ್ನುಡಿಗಳಾಗಿ ಸಹೃದಯರ ಹೃನ್ಮನಗಳನ್ನು ಸೆಳೆದಿವೆ. ಬಹುಶ: ನನಗೆ ತಿಳಿದಮಟ್ಟಿಗೆ ಲೇಖಕರೊಬ್ಬರ ಕೃತಿಗೆ ಅವರ ಹೆತ್ತ ತಾಯಿಯೇ ಬೆನ್ನುಡಿಗಳ ಹೊನ್ನ ಆಶೀರ್ವಾದ ದಯಪಾಲಿಸಿದ ಕನ್ನಡ ಸಾರಸ್ವತ ಲೋಕದ ಮೊದಲ ಕೃತಿ ಅಕ್ಷರ ವೈಭವವೇ ಇರಬೇಕು ಎಂಬುದು ನನ್ನ ಅಭಿಮತ. ಇನ್ನೂ ಈ ಕವನ ಸಂಕಲನದ ಒಳಹೂರಣವನ್ನು ಅರಹುವುದಾದರೆ, ಒಟ್ಟು ೬೩ ಕವನ ಕುಸುಮಗಳ, ಒಟ್ಟು ೯೦ ಪುಟಗಳ‌ ಕೃತಿಯಿದು. ಸಜ್ಜನ ಪ್ರಕಾಶನದಿಂದ ಪ್ರಕಟವಾಗಿರುವ ಈ ಕೃತಿಯ ಬೆಲೆ ಕೇವಲ ೧೦೦/- ರೂಪಾಯಿಗಳು ಮಾತ್ರ.

 

ಬೆಂಗಳೂರಿನ ಕ್ರೈಸ್ಟ್ ಶಾಲೆ ( ಐ.ಸಿ.ಎಸ್.ಇ)ಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಸಂಗಮನಾಥ ಪಿ ಸಜ್ಜನರವರ ಅನನ್ಯ ಸಾಹಿತ್ಯ ಪ್ರೀತಿಯ ಧ್ಯೋತಕವಾಗಿ ಮೂಡಿ ಬಂದಿರುವ ಅವರ ಚೊಚ್ಚಲ ಕೃತಿ ರತ್ನವಿದು. ವಿಶೇಷವಾಗಿ ಈ ಕವನ ಸಂಕಲನದಲ್ಲಿ ಕನ್ನಡ ನಾಡು-ನುಡಿಯ ಅಭಿಮಾನದ ಕುರಿತ ಹಲವಾರು ಕವಿತೆಗಳು ಓದುಗರಿಗೆ ಮುದ ನೀಡುತ್ತವೆ. ಸಂಕಲನದ ಮೊದಲ ಕವಿತೆಯಾದ ‘ಕರುನಾಡಿನವರು’ ಎಂಬ ಕವಿತೆಯಲ್ಲಿ ‘ಕ ದಿಂದ ಕ:’ ದವರೆಗಿನ ಗುಣಿತಾಕ್ಷರಗಳನ್ನು ಬಳಸಿಕೊಂಡು ರುಚಿಕಟ್ಟಾದ ಕಾವ್ಯರಸಪಾಕವನ್ನು ಓದುಗರಿಗೆ ಉಣಬಡಿಸುವಲ್ಲಿ ಕೃತಿಕಾರರ ಪ್ರತಿಭೆ ಅಭಿನಂದನಾರ್ಹವಾದುದು. ಅಕ್ಷರ ವೈಭವ ಎಂಬ ಶಿರ್ಷಿಕೆಯ ಕವಿತೆಯಲ್ಲಿ ಕನ್ನಡ ವರ್ಣಮಾಲಾಕ್ಷರಗಳನ್ನು ಕ್ರಮಬದ್ದವಾಗಿ ಬಳಸಿಕೊಂಡು ಚಂದದ ಕಾವ್ಯಮಾಲೆಯನ್ನು ಕಟ್ಟಿದ್ದಾರೆ ಕವಿಮಿತ್ರರಾದ ಸಜ್ಜನರವರು.

ಅರಿಶಿಣ ಕುಂಕುಮ ಬಾವುಟ
ಆಗಸದೆತ್ತರ ಆರಲಿ
ಇಳಿಯದಿರಲಿ ಇರಲಿ ಅಲ್ಲೇ
ಈ ನಾಡಿನ ಚರಿತ್ರೆಯ ಸಾರುತ

ಎಂಬ ಸಾಲುಗಳು ನಮ್ಮೆದೆಯಲ್ಲಿ ಕನ್ನಡತನದ ಡಿಂಡಿಮ ಮೊಳಗಿಸಬಲ್ಲವು. ‘ನಾವೆಲ್ಲಿ‌ ಜೀವಿಸಬೇಕು’ ಎಂಬ ಕವಿತೆ ಜಗದೊಳಗೆ ಗಟ್ಟಿಯಾಗಿ ನೆಲೆಯೂರಿರುವ ಕಂದಾಚಾರಗಳಿಗೆ ಛಡಿ ಏಟು ನೀಡುವ ಪ್ರಯತ್ನ ಮಾಡುತ್ತದೆ. ನಾ ಹ್ಯಾಂಗ ಮರಿಲೆವ್ವ ಕವಿತೆಯಲ್ಲಿ ಕವಿ ಮನಸ್ಸು ಮಾತೆಯ ತ್ಯಾಗ, ಮಮತೆಗಳನ್ನು ತುಂಬು ಕೃತಜ್ಞತೆಯಿಂದ ಸ್ಮರಿಸಿದೆ. ಈ ಕವಿತೆ ಭಾವುಕರ ಕಣ್ಣಾಲಿಗಳನ್ನು ತೇವಗೊಳಿಸದೇ ಇರದು. ಓ ನನ್ನ ಕವನವೇ ಶಿರ್ಷಿಕೆಯ ಕವಿತೆ ನನಗೆ ತುಂಬಾ ವಿಭಿನ್ನವಾಗಿ ಗೋಚರಿಸಿತು.ಈ ಕವಿತೆಯ ಒಂದೆರಡು ಸಾಲುಗಳನ್ನು ಗಮನಿಸುವುದಾದರೆ,

ಅವರಿಲ್ಲದೇ ನಾನೆಲ್ಲಿಯೆನು
ಅವರೆನ್ನ ಆರಾಧ್ಯ ದೈವಗಳು
ಅವರೆನ್ನ ಆತ್ಮದ ಉಸಿರಿನಂತೆ
ಇಲ್ಲೇಕೆ ಕಾಯುವೆ ಓ ನನ್ನ ಕವನವೇ
ಓದುಗರ ಮನಮೀಟಿ ಬಾ ಹೋಗು.

ಹೀಗೆ ಕವಿ ಓದುಗರ ಮೇಲೆ ಅಪಾರ ಗೌರವ ಭಾವನೆಯೊಂದಿಗೆ ತಮ್ಮ ಕವನಗಳನ್ನು ಓದುಗರೆಡೆಗೆ ಪ್ರೀತಿಯಿಂದ ಕಳಿಸಿಕೊಡುತ್ತಾರೆ.

ಕಲ್ಯಾಣ ಕರ್ನಾಟಕದ ಜನರ ರೀತಿ ನೀತಿಗಳು, ಪ್ರೇಮಕವಿ ಕೆ.ಎಸ್. ನರಸಿಂಹಸ್ವಾಮಿಯವರ ಘಮಘಮಿಸುವ ಕಾವ್ಯಕೃಷಿ, ರವಿ ಬೆಳಗೆರೆಯವರ ಬೆರಗಿನ ಬರಹ ಲೋಕ, ಹರೆಯದ ಹೃದಯಗಳ ಪ್ರೀತಿ-ಪ್ರೇಮದ ಪಲುಕುಗಳು, ರಾಜರತ್ನ ಪುನೀತರ ಗುಣಗಾನ, ಅಣ್ಣ ಬಸವಣ್ಣನ ಅಮರ ಸಂದೇಶಗಳು ಹೀಗೆ ಸಾಕಷ್ಟು ವೈವಿದ್ಯಪೂರ್ಣವಾದ ಕವಿತೆಗಳನ್ನು ಶ್ರೀ ಸಂಗಮನಾಥರು ಈ ಸಂಕಲನದಲ್ಲಿ ಸಂಗಮಗೊಳಿಸಿ ಓದುಗರ ನೆತ್ತಿಗೆ ಸವಿ ಬುತ್ತಿಯಾಗಬಲ್ಲ ಚಂದದೊಂದು ಹೊತ್ತಿಗೆಯನ್ನು ನಮ್ಮ ಕೈಗಿತ್ತಿದ್ದಾರೆ. ಒಂದೆರಡು ಕವಿತೆಗಳು ತಮ್ಮ ವಾಚ್ಯಾರ್ಥವನ್ನು ಮೀರಿ ಕಾವ್ಯಕೌಶಲವನ್ನು ತೋರ್ಪಡಿಸಬೇಕಿತ್ತು ಎಂದೆನಿಸಿದರೂ ಸಹ ಕವಿಮನದ ಸದಾಶಯಗಳು ಎಲ್ಲರಿಗೂ ಇಷ್ಟವಾಗುವುದರಲ್ಲಿ ಯಾವುದೇ ಸಂದೇಹಗಳಿಲ್ಲ.

ಕನ್ನಡ ಕಾವ್ಯಲೋಕದಲ್ಲಿ ತಮ್ಮ ದೃಢವಾದ ಹೆಜ್ಜೆ ಗುರುತುಗಳನ್ನು ಮೂಡಿಸುವ ಭರವಸೆ ಹುಟ್ಟಿಸಿರುವ ಈ ಕವಿಬಾಂಧವರಿಗೆ ನಾಡಿನ ಉದಾರ ಮನದ ಓದುಗರ ಪ್ರೀತಿಯ ಪ್ರೋತ್ಸಾಹಗಳು ಸದಾವಕಾಲವೂ ಶ್ರೀರಕ್ಷೆಗಳಾಗಲಿ ಎಂಬ ಸದಾಶಯದೊಂದಿಗೆ ಶ್ರೀ ಸಂಗಮನಾಥ ಗುರುಗಳ ಕರದಲ್ಲಿ ಮತ್ತಷ್ಟು ಲವಲವಿಕೆಯ ಸತ್ವಪೂರ್ಣ ಕೃತಿಗಳು ಹೊರಹೊಮ್ಮಲಿ ಎಂದು ಶುಭ ಕೋರುತ್ತೇವೆ.


  • ವೀರೇಶ ಬ.ಕುರಿ ಸೋಂಪೂರ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW