ಗೆಳತಿಯ ನೆನಪಲ್ಲಿ ಹುಟ್ಟಿದ ಸುಂದರ ಗಝಲ್, ಕವಿ ಬಿ.ಆರ್.ರವೀಂದ್ರ ಅವರ ಲೇಖನಿಯಲ್ಲಿ ಅರಳಿದ ಪೂರ್ಣ ಮತ್ಲಾ ಗಝಲ್. ಮುಂದೆ ಓದಿ…
ಸಂಜೆಗೆಂಪು ಬಾನಿಗೆ ಸೂರ್ಯ ಬಳಿದೊಡನೆ
ನಿನ್ನದೇ ನೆನಪು ಗೆಳತಿ,
ಕಿವಿಗೆ ಇಂಪು ಭಾವಗೀತೆ ಕೇಳಿದೊಡನೆ
ನಿನ್ನದೇ ನೆನಪು ಗೆಳತಿ.
ಇಳೆಯ ಮಳೆಯು ಸೋಕಿದೊಡನೆ
ನಿನ್ನದೇ ನೆನಪು ಗೆಳತಿ,
ಚಳಿಯು ತಾಕಿ ಕಚಗುಳಿಯಿಟ್ಟೊಡನೆ
ನಿನ್ನದೇ ನೆನಪು ಗೆಳತಿ.
ಮುಡಿಗೆ ಮಲ್ಲಿಗೆಯ ದಂಡು ಕಂಡೊಡನೆ
ನಿನ್ನದೇ ನೆನಪು ಗೆಳತಿ,
ಅಡಿಯ ಗರಿಕೆ ಪವಡಿಸಲು ಕರೆದೊಡನೆ
ನಿನ್ನದೇ ನೆನಪು ಗೆಳತಿ.
ಮಧು ಹೀರುವ ದುಂಬಿಯ ನೋಡಿದೊಡನೆ
ನಿನ್ನದೇ ನೆನಪು ಗೆಳತಿ,
ಮುದ ನೀಡುವ ಮಾತು ಆಲಿಸಿದೊಡನೆ
ನಿನ್ನದೇ ನೆನಪು ಗೆಳತಿ.
ನಾಳೆಗಳ ಚಿಂತೆಗಳು ಕಾಡಿದೊಡನೆ
ನಿನ್ನದೇ ನೆನಪು ಗೆಳತಿ,
ಬಳೆಯ ಸದ್ದು ಕಿವಿಯ ತಮಟೆಗೆ ಬಡಿದೊಡನೆ
ನಿನ್ನದೇ ನೆನಪು ಗೆಳತಿ.
- ರಾಣಾ (ಬಿ.ಆರ್.ರವೀಂದ್ರ) ವೃತ್ತಿಯಲ್ಲಿ ವಕೀಲರು, ಹವ್ಯಾಸಿ ಕವಿಗಳು, ಬರಹಗಾರರು, ಕೋಲಾರ.
