” ಮನಸ್ಸಿನಲ್ಲಿ ಆನಂದದ ಬ್ಯಾಂಕ್‌ ಸ್ಥಾಪಿಸಿ “- ಸಿದ್ದೇಶ್ವರ ಶ್ರೀ



”ಜಗತ್ತಿನಲ್ಲಿ ಅತ್ಯಂತ ದೊಡ್ಡ ಕೆಲಸ ಯಾವುದಾದರೂ ಇದ್ದರೆ ಅದು ಹೊಲ ಉಳುವ “ಒಕ್ಕಲಿಗನ “ಕೆಲಸ. ಶ್ರೇಷ್ಠ ತತ್ವಜ್ಞಾನಿಯೋರ್ವ ಸಾಯುವ ಕೊನೆ ಘಳಿಗೆಯಲ್ಲಿ ತನ್ನ ಇಷ್ಟಾರ್ಥಗಳೇನು ಎಂಬುದಾಗಿ ಕೇಳಿದಾಗ ,ನಾನು ಮುಂದಿನ ಜನ್ಮದಲ್ಲಿ ರೈತನಾಗಿ ಹುಟ್ಟಬೇಕೆಂಬ ಆಶೆಯನ್ನು ವ್ಯಕ್ತಪಡಿಸುತ್ತಾನೆ”. – ಪರಮ ಪೂಜ್ಯ ಸಿದ್ದೇಶ್ವರ ಮಹಾಸ್ವಾಮಿಗಳು, ಜ್ಞಾನ ಯೋಗಾಶ್ರಮ‌ ವಿಜಯಪುರ. ಲೇಖಕ ಪ್ರಶಾಂತ ಹೊಸಮನಿ ಅವರ ಲೇಖನಿಯಲ್ಲಿ ಪರಮ ಪೂಜ್ಯ ಸಿದ್ದೇಶ್ವರ ಮಹಾಸ್ವಾಮಿಗಳ ನುಡಿಮುತ್ತುಗಳು…

( ವಿಜಯಪುರ ತಾಲ್ಲೂಕಿನ ನಾಗಠಾಣ ಗ್ರಾಮದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಜ್ಞಾನ ಯೋಗಾಶ್ರಮ ವಿಜಯಪುರ ದ ಪರಮ ಪೂಜ್ಯ ಸಿದ್ಧೇಶ್ವರ ಸ್ವಾಮಿಗಳು ಆಶೀರ್ವಚನ ನೀಡಿದರು, ಆ ಪ್ರವಚನದ ಸಾರವೇ ಇಲ್ಲಿನ ಬರಹ ರೂಪ……)

” ಮನಸ್ಸಿನಲ್ಲಿ ಆನಂದದ ಬ್ಯಾಂಕ್‌ ಸ್ಥಾಪಿಸಿ “– ಸಿದ್ದೇಶ್ವರ ಶ್ರೀ.

ಸುಂದರವಾದ ಮನೆ,ಹಸಿವನ್ನು ಇಂಗಿಸುವಷ್ಟು ಆಹಾರ, ಮನಸ್ಸನ್ನು ಅರಳಿಸುವಷ್ಟು ಜಲ,ಇಷ್ಟಿದ್ದರೇ ಸಾಕು ಜೀವನ ಪರಮಪಾವನ, ಅಮೂರ್ತನಾದ ದೇವರು ಅನ್ನ ನೀರಿನ ರೂಪದಲ್ಲಿ ಇರ್ತಾನೆ.

”ಅನ್ನ ದೇವರ ಮುಂದೆ,
ಇನ್ನೂ ದೇವರಿಲ್ಲ,ಅನ್ನಕ್ಕೆ ಮೇಲೆ ಇನ್ನಿಲ್ಲ
ಲೋಕಕ್ಕೆ ಅನ್ನವೇ ಸರ್ವಜ್ಞ”.

ಎಂಬ ತ್ರಿಪದಿ ಸಾಲಿನಂತೆ , ನಮ್ಮ ಮೊಗದಲ್ಲಿ ಮಂದಹಾಸಬೇಕಾದರೆ ಸರಿಯಾದ ಆಹಾರ ನಮ್ಮ ಹೊಟ್ಟೆಯನ್ನು ಸೇರಿರಬೇಕು,ಅಂದಾಗ ಮಾತ್ರ ನಾವುಗಳು ಹಸನ್ಮುಖಿಗಳಾಗಲು ಸಾಧ್ಯ.ಅನ್ನಕ್ಕೆಂದು ನಾವುಗಳು ಬೇಧ ಮಾಡಬಾರದು,ಅನ್ನ ದೈವರೂಪ ,ಯಾವುದೇ ಕಾರ್ಯಕ್ರಮ ಸ್ವರ್ಗದಾಗೂ ಭೂಮಂಡಲದಲ್ಲೂ ನಡೆದರೂ ,ಅನ್ನ ನೀರನ್ನು ಹೊರತು ಪಡಿಸಿ ಯಾವುದೇ ಸಮಾರಂಭಗಳಿಲ್ಲ, ಹಣ ಅನ್ನ ಕೊಡುತ್ತದೆ. ಹಣವನ್ನು ಗೌರವದಿಂದ ಕಾಣು, ಅದು ನಿನ್ನನ್ನು ಕಾಪಾಡುತ್ತದೆ. ಹಣದಿಂದ ನಾಲ್ಕು ಹಣ್ಣು ಬರ್ತಾವೆ. ಅವುಗಳನ್ನು ತಿಂದು ಉತ್ತಮ ಶಕ್ತಿವಂತ ದೇಹದೊಂದಿಗೆ, ಹಸನ್ಮುಖಿಯಾಗಿರಬಹುದು. ಅದಕ್ಕಾಗಿ ಹಣಕ್ಕೆ ಬೆಲೆ ಇದೆ. ಆದ್ದರಿಂದ ಹಣವನ್ನು ಪ್ರೀತಿಸಿ ಆದರೆ ದುರುಪಯೋಗಪಡಿಸಿಕೊಳ್ಳದಿರಿ. ಹಣವನ್ನು ಒಳ್ಳೆಯ ಕಾರ್ಯಗಳಿಗೆ ವಿನಿಯೋಗಿಸಿದರೆ ಸತ್ಕಾರ್ಯ ತಾನಾಗಿಯೇ ಬರುತ್ತದೆ. ಹಣವನ್ನು ನಾವುಗಳು ಉಪಯೋಗ ಮಾಡುವುದರಲ್ಲಿ ಅದರ ಮಹತ್ವ ಅಡಗಿದೆ.

ಪಾಶ್ಚಿಮಾತ್ಯ ತತ್ವಜ್ಞಾನಿಯೋರ್ವ ‘ ನಗುವುದೇ ಸ್ವರ್ಗ ನಗುವುದೇ ಸಂಪತ್ತು’ ಎಂಬುದಾಗಿ ಹೇಳಿದ್ದಾನೆ, ನಗುವುದಕ್ಕೂ ಮನಸ್ಸು ಬೇಕು,ಕೆಟ್ಟ ಮನಸ್ಸುಳ್ಳವರಿಗೆ ನಗುವೇ ಬರಲ್ಲ,ನಗುವಿಗೂ ಒಳ್ಳೆಯ ಮನಸ್ಥಿಕೂಡಾ ಅವಶ್ಯಕ, ಇಲ್ಲಿಗೆ ಬಂದವರು ದೇವರ ಕುಳಿತಿರುವ ಹಾಗೆ ಕುಳಿತಿದ್ದಿರಿ, ಮನೆಯ ಎಲ್ಲ ಚಿಂತೆಗಳನ್ನು ಬದಿಗೊರಿಸಿ ಬಂದು ಆರಾಮವಾಗಿ ಕುಳಿತಿದ್ದೀರಲ್ಲಾ ಇದುವೇ ಸಾಧನೆ,ಮನುಷ್ಯ ಒಂದು ಸ್ಥಳದಲ್ಲಿ ಏಕಾಂತವಾಗಿ ಮಗ್ನನಾಗಿ ಕೂಡುವುದೇ ಸಾಧನೆ. ಹೊರಗಿನ ಪ್ರಪಂಚಕ್ಕೆ ಹಣದ ಸಂಪತ್ತು ಅತೀ ಮುಖ್ಯ ಆದರೆ ಅಂತರಂಗದ ತೃಪ್ತಿಗೆ ಶಾಂತಿಯೇ ಸಂಪತ್ತು,ಅಂತರಂಗದ ನೆಮ್ಮದಿಯೇ ಜೀವನಕ್ಕೆ ಶಾಶ್ವತ. ಒಂದು ಪಕ್ಷಿ ಮರದಲ್ಲಿ ಕುಳಿತು,ಮರದಲ್ಲಿ ಬೆಳೆದ ಹಣ್ಣುಗಳನ್ನು ಹಾಗೇ ತಿನ್ನುತ್ತಿರುವಾಗ,ಮರಕ್ಕೆ ಎಲ್ಲಿಲ್ಲದ ಆನಂದ, ‘ನೀನು ನನ್ನ ಹಣ್ಣು ತಿಂದು ಜನರನ್ನು ಸಂತೋಷ ಪಡಿಸುವು ಕಾರ್ಯ ಮಾಡುವುದು ನನಗೆ ಅತೀವ ಸಂತೋಷ ಉಂಟು ಮಾಡುತ್ತದೆ, ನಿನಗಾಗಿಯೇ ಈ ಹಣ್ಣುಗಳು ಎಂದು ಹೇಳುತ್ತದೆ. ಆಗ ಪಕ್ಷಿ ಮರುಪ್ರಶ್ನೆಯಿಂದ ‘ಅಲ್ಲೋರ್ವ ಮನುಷ್ಯ ಬರುತ್ತಿದ್ದಾನೆ,ಅವನಿಗೂ ನೀನು ಹಣ್ಣುಗಳನ್ನು ನೀಡು’, ಇದಕ್ಕೆ ಪ್ರತಿಯಾಗಿ ಮರ ಹೇಳಿತು’ ‘ಅವನಿಗೇನೂ ಕೊಡೋದು ಬೇಕಾಗಿಲ್ಲಾ,ಅವನೇ ತಗೊಂಡು ಹೋಗ್ತಾನೆ,’ಎಂದು ಹೇಳಿತು.ಅವನಿಗೂ ನಿಮಗೂ ಸಾಕಷ್ಟೂ ವ್ಯತ್ಯಾಸವಿದೆ, ನಿನ್ನ ವೈಚಾರಿಕತೆಯಷ್ಟು ಅವನು ವಿಚಾರಿಸುವುದಿಲ್ಲ,ನಿನ್ನ ಕರ್ಮ ಸತ್ಕಾರ್ಯದೆಡೆಗೆ ಕೊಂಡುಯುತ್ತದೆ ,ಅವನ ಕರ್ಮ ಅವನ ಕಂಟಕಗಳನ್ನು ಹೆಚ್ಚಳ ಮಾಡುತ್ತದೆ’.ಎಂದು ಮರ ಹೇಳಿತು.ಒಟ್ಟಾರೆಯಾಗಿ ಮನುಷ್ಯ ಎಷ್ಟೋ ಸುಖಿಯಾಗಿದ್ದರೂ ಆಶೆಯೆಂಬುದಕ್ಕೆ ಮಿತಿಯಿಲ್ಲ ಎಂಬುದನ್ನು ಮರ ಮತ್ತು ಹಕ್ಕಿಯಿಂದ ತಿಳಿಯಬೇಕಾಗಿದೆ.

ಸಂತೋಷದ ಪ್ರಮುಖ ಅಂಗ “ನಗು” ಈ ‘ನಗು’ಜಾತಿ ಆಧಾರಿವಾಗಿಲ್ಲ, ಸಂತೋಷದ ಆಧಾರಿತವಾಗಿದೆ. ಸಂತೋಷದ ಜೀವನಕ್ಕೆ ನಗುವಲ್ಲದೇ ಆಹ್ಲಾದಕರ ಜೀವನವೂ ಅವಶ್ಯ. ಮುಂಜಾನೆಯ ಸೂರ್ಯ ನ ಬೆಳಗುವಿಕೆ,ಸಂಜೆಯ ಸೂರ್ಯಾಸ್ತಗಳಲ್ಲದೇ, ಮಳೆ,ಮೋಡಗಳು ಎಂದು ಕಷ್ಟ ನಷ್ಟದ ಬಗ್ಗೆ ಚಿಂತೇಯೇ ಮಾಡಿಯೇ ಇಲ್ಲ, ಇಂತಹ ಮನೋಭಾವ ನಾವುಗಳೇಲ್ಲಾ ಹೊಂದಬೇಕು. ಜಗತ್ತಿನಲ್ಲಿರುವ ಜಲ,ಭೂಮಿ,ಗಾಳಿ, ಪ್ರತಿಯೊಂದು ದೇವರ ಕರುಣೆ ಇವುಗಳನ್ನೇಲ್ಲಾ ಅನುಭವಿಸಬೇಕು.

ನಮ್ಮ ಮನಸ್ಸಿನ ಬ್ಯಾಂಕ್ ನಲ್ಲಿ ಆನಂದ ಎಂಬ ಹಣವನ್ನು ಹೂಡಬೇಕು. ಮನುಷ್ಯ ತನ್ನ ಸಂತೋಷಕ್ಕಾಗಿ ಬ್ಯಾಂಕನಲ್ಲಿ ಹಣ ಇಡ್ತಾನೆ. ಆದರೆ ದೇವರು ನಿನ್ನ ಮನಸ್ಸೆಂಬ ಬ್ಯಾಂಕ್ ನಲ್ಲಿ ಆನಂದ ಹಣವನ್ನು ಸದಾ ಕೊಡ್ತಿರ್ತಾನೆ. ಆದರೆ ನಾವುಗಳು ಬಳಸಬೇಕು. ನಾಗರ ಸ್ಥಾನ ನಾಗಠಾಣ ಗ್ರಾಮ ಶಿವನ ಕೊರಳಲ್ಲಿ ಹಾರದ ರೂಪದ ಸ್ಥಾನ ಪಡೆದ ಈ ಗ್ರಾಮ ಪುಣ್ಯ ಗ್ರಾಮ. ಇಲ್ಲಿ ತಾವುಗಳೇಲ್ಲಾ ಸೇರಿರುವುದು ಸತ್ಸಂಗದ ಸವಿಯನ್ನು ಅನುಭವಿಸಲಿಕ್ಕಾಗಿ, ಹೀಗೆ ಸಂತೋಷದಿಂದ ೧೦೦ ವರ್ಷಗಳ ಕಾಲ ಜೀವನ ಸವೆಸಿದರೆ ಅದುವೇ ಮೋಕ್ಷ. ಅದುವೇ ಸಂತೃಪ್ತಿ.

ಯಾವುದಾದರೂ ಪಕ್ಷಿ ನೋಡಿ ಎಂದಾದರೂ ಮುನಿಸಿಕೊಂಡಿದ್ದು..? ಅಥವಾ ಚಿಂತೆಯಲ್ಲಿರುವುದೇ ಕಂಡಿರೇನು..? ಇಲ್ಲ ಸಾಧ್ಯವೇ ಇಲ್ಲ. ಅವು ನಿಸರ್ಗದತ್ತವುಗಳು, ಅವುಗಳು ಸ್ವಚ್ಛಂದವಾಗಿ ತಮ್ಮ ಬದುಕನ್ನು ನಡೆಸುತ್ತವೆ. ಆದರೆ ಮನಷ್ಯ ಹಾಗಲ್ಲ. ಪ್ರತಿದಿನವೂ ಚಿಂತಾಮಯ ಜೀವನ, ಸಾಕಷ್ಟು ಆಸ್ತಿ ಅಂತಸ್ಥ ಹೊಂದಿದ್ದರೂ ಕೂಡಾ, ನರಳಾಟದ ಜೀವನ ತಪ್ಪದ್ದಲ್ಲ.  ಮನೆ ದೊಡ್ಡದು ಕಟ್ಟಿಸುವುದು ಮುಖ್ಯವಲ್ಲ, ಸುಖ ಸಂತೋಷಕ್ಕಾಗಿ ಮನಸ್ಸನ್ನು ದೊಡ್ಡದಾಗಿ ಮಾಡುವತ್ತ ತಮ್ಮ ಚಿತ್ತ ಹರಿಸಬೇಕು. ಇಲ್ಲಿನ ಕಾರ್ಯಕ್ರಮ ಕೇವಲ ನಾಮಾಕವಸ್ಥೆ ಕಾರ್ಯಕ್ರಮ. ಆದರೆ ನಿಮ್ಮನ್ನು ಇಲ್ಲಿಗೆ ಕರೆಯಿಸಿ ವೇದಿಕೆಗೆ ಸ್ವಾಮಿಗಳನ್ನು ಬರಮಾಡಿಸಿ ಅವರಿಂದ ಆಧ್ಯಾತ್ಮ ದ ದಾಸೋಹವನ್ನು ಉಣಬಡಿಸುತ್ತಿರುವುದು ಇದು ಅತ್ಯುತ್ತಮ ಕಾರ್ಯ.



ನೀವು ಕೆಳಗಡೆ ಕುಳಿತವರು ಅನ್ನಬಹುದು ಸ್ವಾಮಿಗಳು, ಎಷ್ಟ ಆರಾಮ ಖುರ್ಚಿಮ್ಯಾಗ ಕುಂತಾರ ಅಂತಹೇಳಿ..?. ಜೀವನಕ್ಕೆ ಈ ಖುರ್ಚಿ ಶಾಶ್ವತವಲ್ಲ. ಈ ನಿರ್ಜೀವ ಖುರ್ಚಿಗಾಗಿ ಏನೇನೂ ಘಟನೆಗಳು ನಡೆದಿವೆ..?,ಇದು ಶಾಶ್ವತವಲ್ಲ. ನೀವು ಕುಳಿತಿರುವ ಜಾಗ ಅದು ಶಾಶ್ವತ. ಅಲ್ಲಿ ಯಾರೂ ಕೇಳವವರಿಲ್ಲ, ಹೇಳುವವರಿಲ್ಲ. ಆದ್ದರಿಂದ ಆಡಂಬರದ ಬದುಕು ಕ್ಷಣಿಕ. ನೀವು ಕುಳಿತಿರುವ ಭೂಮಿ ಅತ್ಯದ್ಭುತ ಇದುವೇ ಶಾಶ್ವತ. ಕೇವಲ ಒಂದು ರೂಪಾಯಿಯಷ್ಟು ಬೀಜ ಹಾಕಿದ್ರೆ, ನೂರೂ ರೂಪಾಯಿಷ್ಟು ಉತ್ಪನ್ನ ಕೊಡುತ್ತದೆ. ಇಂತಹ ಮಹತ್ ಸ್ಥಾನದ ಒಡೆಯರಾಗಬೇಕು. ಇದಕ್ಕಾಗಿ ಇದನ್ನು ಭೂದೇವಿಗೆ ಹೋಲಿಸಿದ್ದು, ಸಾವಿರಾರು ವರ್ಷಗಳಿಂದ ಲಕ್ಷಾಂತರ ಜೀವಿಗಳಿಗೆ ಆಶ್ರಯ ತಾಣವಾಗಿರುವ ಈ ಭೂಮಿ ಮರಳಿ ಪ್ರತಿಫಲ ಬಯಸಿಲ್ಲ, ಭೂಮಿಗಾಗಿ ಎರಡು ಹನಿ ಬೆವರು ಹರಿಸಿದರೆ ಸಾಕು ಸಕಲ ಇಷ್ಟಾರ್ಥಗಳು ಬೆನ್ನ ಹತ್ತುತ್ತವೆ.

ಫೋಟೋ ಕೃಪೆ : prajavani

ಜಗತ್ತಿನಲ್ಲಿ ಅತ್ಯಂತ ದೊಡ್ಡ ಕೆಲಸ ಯಾವುದಾದರೂ ಇದ್ದರೆ ಅದು ಹೊಲ ಉಳುವ “ಒಕ್ಕಲಿಗನ “ಕೆಲಸ. ಶ್ರೇಷ್ಠ ತತ್ವಜ್ಞಾನಿಯೋರ್ವ ಸಾಯುವ ಕೊನೆ ಘಳಿಗೆಯಲ್ಲಿ ತನ್ನ ಇಷ್ಟಾರ್ಥಗಳೇನು ಎಂಬುದಾಗಿ ಕೇಳಿದಾಗ ,ನಾನು ಮುಂದಿನ ಜನ್ಮದಲ್ಲಿ ರೈತನಾಗಿ ಹುಟ್ಟಬೇಕೆಂಬ ಆಶೆಯನ್ನು ವ್ಯಕ್ತಪಡಿಸುತ್ತಾನೆ. ಆದರೆ ಪ್ರಸ್ತುತ ಒಕ್ಕಲುತನ ಬೇಡವಾಗಿದೆ. ಉಳ್ಳವರೇಲ್ಲಾ ಪಟ್ಟಣ ಸೇರುತ್ತಿದ್ದಿರೆ, ಹೊಲ ಉಳುವರ್ಯಾರು‌..?,ಅನ್ನ ಬೆಳೆಯುವರ್ಯಾರು,.? ಆದ್ದರಿಂದ ಪ್ರಸ್ತುತ ಮಕ್ಕಳಿಗೆ ಒಕ್ಕಲುತನ ಪಾಠವನ್ನು ಹೇಳುವ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ. ಇದುವೇ ಜೀವನಕ್ಕೆ ಅತ್ಯವಶ್ಯ. ನನ್ನ ಮಕ್ಕಳು ಮದ್ರಾಸ್, ಬೆಂಗಳೂರು, ಹೈದ್ರಾಬಾದ್ ಗಳಿಗೆ ಹೋಗಿ ಕೆಲಸ ಮಾಡಲಿ ಎಂದು ಬಯಸುವ ತಂದೆ ತಾಯಂದಿರುವ ಮನೆಯಲ್ಲಿನ ಹೊಲದ ಮಹತ್ವ ತಿಳಿಸದೇ ಅರಿವನ್ನು ಕಡಿಮೆಗೊಳಿಸುತ್ತಿದ್ದಾರೆ. ಇದಕ್ಕಾಗಿಯೇ ನಮ್ಮ ದೇಶದ ಪ್ರಧಾನಿಗಳಾಗಿದ್ದ ಲಾಲ ಬಹಾದ್ದೂರ ಶಾಸ್ತ್ರಿ ಯವರು ” ಜೈ ಜವಾನ್ ಜೈ ಕಿಸಾನ್” ಎಂಬುದಾಗಿ ಘೋಸಿಸಿದ್ದರು. ದೇಶ ಕಾಯುವ ಸೈನಿಕನಷ್ಟೇ ರೈತನೂ ಅನ್ನ ನೀಡುವ ಸೈನಿಕ ಎಂದು ಹೇಳಿದ್ದಾರೆ. ಭೂಮಿಯಲ್ಲಿ ಉತ್ತಿಬಿತ್ತಿ ಬೆಳೆದ ಬೆಳೆ ಪ್ರಾಮಾಣಿಕ ಋಣ ನಮ್ಮನ್ನು ಎಂದಿಗೂ ಕೈ ಬಿಡುವುದಿಲ್ಲ.

ಭೂಮಿಯೇ ಒಂದು ಬ್ಯಾಂಕ್ ಇಲ್ಲಿ ಏನು ಬೇಕಾದರೂ ಬೆಳೆಯಬಹುದು. ಕೇವಲ ಒಂದು ಕಬ್ಬಿನ ತುಣುಕು ಭೂಮಿಯಲ್ಲಿಟ್ಟರೆ, ಕೆಲವು ದಿನಗಳಲ್ಲಿ ಸಾಕಾಗುವಷ್ಟು ರಸ ನೀಡುತ್ತಿದೆ,ಇದಕ್ಕಿಂತ ಭೂಮಿಯಿಂದ ಇನ್ನೇನು ಬೇಕು..? . ಎಷ್ಟೋ ಸಂಪತ್ತು ಸಂಪಾದಿಸಿದ್ದರೂ ನೆಮ್ಮದಿ ಬದುಕಿನ ಸಂತೋಷದ ಜೀವನವೇ ನಿಜವಾದ ಸಂಪತ್ತಾಗಿದೆ. ಮನೆಗಳಲ್ಲಿ, ಮನಗಳಲ್ಲಿ ದೇವನ ಆಕರಗಳೇಲ್ಲಾ ಸೂರ್ಯ, ಚಂದ್ರರಂತೆ ಸದಾ ಸಂತೋಷವನ್ನು ನೀಡಲಿ, ಸತ್ಕಾರ್ಯಗಳಿಗೆ ಸದಾವಕಾಶವಾಗಲಿ, ಎಲ್ಲರಿಗೂ ಒಳ್ಳೆಯದಾಗಲಿ……

ಪರಮ ಪೂಜ್ಯ ಸಿದ್ದೇಶ್ವರ ಮಹಾಸ್ವಾಮಿಗಳು, ಜ್ಞಾನ ಯೋಗಾಶ್ರಮ‌ ವಿಜಯಪುರ…


  • ಪ್ರಶಾಂತ ಹೊಸಮನಿ (ಕತೆಗಾರರು, ಲೇಖಕರು) ನಾಗಠಾಣ ತಾ.ಜಿ.ವಿಜಯಪುರ.

5 1 vote
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW