ಅದೇ ರಾಗಿ, ಅದೇ ರೊಟ್ಟಿ…ಆದ್ರೆ ವಿನ್ಯಾಸ ಬೇರೆ



ಅದೇ ರಾಗಿ, ಅದೇ ರೊಟ್ಟಿ ಅದೇ ಬಣ್ಣ, ಬದಲಾದದ್ದು ಕೈ ಮಾತ್ರ…ಮಾರ್ಕೆಟಿಂಗ್ ಟೆಕ್ನಿಕ್ ಕಂಡು ಹಿಡಿದ ಹೆಂಡತಿಗೆ ಜೈ ಎನ್ನುತ್ತಾರೆ ಲೇಖಕ ಹಿರಿಯೂರು ಪ್ರಕಾಶ್ ಅವರು. ಮುಂದೆ ಓದಿ…

ನಮ್ಮ ಬಾಲ್ಯದಲ್ಲಿ ರಾಗಿಮುದ್ದೆ ವಿಚಾರದಲ್ಲಿ ಒಂದು ಅಲಿಖಿತ ಸಂವಿಧಾನ ಮನೆಯಲ್ಲಿ ಜಾರಿಯಲ್ಲಿತ್ತು . ಅದೆಂದರೆ ನಾವು ಕಡ್ಡಾಯವಾಗಿ #ರಾಗಿಮುದ್ದೆ ತಿಂದರೇನೇ ನಂತರ ತಟ್ಟೆಗೆ ಅನ್ನ ಬೀಳುತ್ತಿತ್ತು. ಮಧ್ಯಮ ವರ್ಗದ ಅವಿಭಕ್ತ ಕುಟುಂಬ, ದುಡಿಯುವ ಕೈಗಳಿಗಿಂತ, ಅಧಿಕವಾಗಿದ್ದ ಉಂಬುವ ಕೈಗಳು, ಒಂದು ಕೆಜಿ ಅಕ್ಕಿ ಬೆಲೆಯಲ್ಲಿ ಕನಿಷ್ಠ ಎಂಟು ಕೆಜಿ ರಾಗಿ ಸಿಗುತ್ತಿದ್ದ ಕಾಲ …. ಈ ಕಾರಣಗಳಿಂದಾಗಿಯೂ ಅಲ್ಲದೇ ನಿತ್ಯವೂ ಮನೆಗೆ ಬಂದು ಹೋಗುವ ಬಂಧುಗಳು, ನೆಂಟರು, ಪರಿಚಯದವರಿಗೂ ಸಹಾ ಊಟಕ್ಕೆ ಬಡಿಸಲೇ ಬೇಕಾದ ಹೃದಯ ವೈಶಾಲ್ಯತೆಯ ಸೌಜನ್ಯ . ಹೀಗಾಗಿ ರಾಗಿ ಮುದ್ದೆ ಕಡ್ಡಾಯವಾಗಿತ್ತು. ನನಗೆ ನೆನಪಿರುವಂತೆ ಬೆಳಿಗ್ಗೆ ಹಚ್ಚಿದ ಒಲೆಯಲ್ಲಿನ ನಿಗಿ ನಿಗಿ ಕೆಂಡ ರಾತ್ರಿ ಹತ್ತರವರೆಗೂ ಆರದೇ ಬೆಚ್ಚಗಿರುತ್ತಿತ್ತು.

ದೊಡ್ಡವರೇನೋ ಸರಾಗವಾಗಿ ಒಂದೆರೆಡು ಮುದ್ದೆ ಗುಳುಂ ಮಾಡಿದ ಮೇಲೆ ಸ್ವಲ್ಪ ಅನ್ನ ತಿಂದು ಹಸಿವು ನೀಗಿಸಿಕೊಳ್ಳುತ್ತಿದ್ದರು. ಆದರೆ ಚಿಕ್ಕವರಾಗಿದ್ದ ನಮಗೆ ಮುದ್ದೆ ನುಂಗೋದೇ ಒಂಥರಾ ಶಿಕ್ಷೆಯಂತೆ ಭಾಸವಾಗುತ್ತಿತ್ತು. ಆದರೂ ಗೃಹ ಸಂವಿಧಾನ ಪಾಲನೆಯಲ್ಲಿ ಸಮಾನತೆ ಕಾಪಾಡಬೇಕಿತ್ತು ! ಒಮ್ಮೊಮ್ಮೆ ಮಕ್ಕಳಿಗೆ #ಮುದ್ದೆ ನುಂಗೋದು ಕಷ್ಟ ಅಂತ ರಾಗಿ ರೊಟ್ಟಿ ಮಾಡಿಕೊಡುತ್ತಿದ್ದರೂ ಅದರ ಗಾತ್ರ ಮಾತ್ರ ಸಕತ್ ದಪ್ಪ ಇರುತ್ತಿದ್ದರಿಂದ ರಾಗಿರೊಟ್ಟಿ ಬಗೆಗೂ ಅಂತಹಾ ಪ್ರೀತಿ ಬೆಳೆಸಿಕೊಂಡಿರಲಿಲ್ಲ. ಹೀಗಾಗಿ ಬಾಲ್ಯದಿಂದಲೂ ನನಗೆ ರಾಗಿಯ ಮಹತ್ವ ಗೊತ್ತಾಗುವುದಕ್ಕೆ ಸಾಕಷ್ಟು ಕಾಲ ಹಿಡಿದಿತ್ತು ! ಈ ವೃತ್ತಾಂತವೆಲ್ಲವನ್ನು ಮತ್ತೊಂದು ಚಾಪ್ಟರ್ ನಲ್ಲಿ ಹೇಳೋಣ.

ಸಧ್ಯ ರಾಗಿ ಬಗೆಗಿನ ಇಷ್ಟೆಲ್ಲಾ ಪೀಠಿಕೆ ಯಾಕಪ್ಪಾ ಅಂದ್ರೆ ಗಟ್ಟಿಯಾಗಿರುತ್ತಿದ್ದ ರಾಗಿ ಮುದ್ದೆ ಹಾಗೂ ದಪ್ಪಗಿದ್ದ ಪ್ಲೈನ್ #ರಾಗಿರೊಟ್ಟಿ ತಿನ್ನಲು ಮುಖ‌ಸಿಂಡರಿಸಿಕೊಳ್ಳುತ್ತಿದ್ದವನಿಗೆ ನನ್ನ ಶ್ರೀಮತಿಯವರು ರಾಗಿಮುದ್ದೆಯ ಗಾತ್ರ ಮತ್ತು ವಿನ್ಯಾಸವನ್ನು ಸರಾಗವಾಗಿ ಬೆಣ್ಣೆಯಂತೆ ಗಂಟಲೊಳಗೆ ಇಳಿಯುವ ರೀತಿಯಲ್ಲಿ ಅಂದರೆ ನನ್ನ ಬೇಡಿಕೆಗೆ ತಕ್ಕಂತೆ ಮಾರ್ಪಡಿಸಿ ಅದನ್ನು ಬೇಡಿಕೆಯ ಲಿಸ್ಟ್ ನಲ್ಲಿರುವಂತೆ ಮಾಡಿದ್ದ ಬಗೆ ಹಾಗೂ ರಾಗಿರೊಟ್ಟಿಯನ್ನೂ ಸಹ ಈರುಳ್ಳಿ, ಮೆಣಸಿನಕಾಯಿ , ಕೊತ್ತಂಬರಿ ಹಾಕಿ ಈರುಳ್ಳಿ ದೋಸೆ ತರಹ ರುಚಿಕರವಾಗಿ, ಮಸಾಲೆ ದೋಸೆ ತರಹ ರೋಸ್ಟ್ ಆಗಿ ಹಾಗೂ ಪ್ಲೈನ್ ದೋಸೆ ಥರಾ ತೆಳುವಾಗಿ ಮಾಡಬಹುದು ಎಂದು ಪ್ರೂವ್ ಮಾಡಿದ ರೀತಿಯೇ ಒಂದು ಅನನ್ಯ ! ಈ ಬದಲಾವಣೆಯಾದ ಮೇಲೆ ಅದು ರಾಗಿರೊಟ್ಟಿಯೆಂಬುದೇ ಮರೆತು ಹೋಗಿ ಒಂದು ವಿಭಿನ್ನವಾದ ವಿನೂತನವಾದ ಟೇಸ್ಟ್ ಕೊಡುವಲ್ಲಿ ಯಶಸ್ವಿಯಾಗಿ ಮನ ಗೆದ್ದಿದೆ.

ಇದು ಮಾಮೂಲಿಯಾದ ಬಾಂಡ್ಲಿ ರೊಟ್ಟಿಯಂತೆ ತಿನ್ನಲು ಹೆಚ್ಚು ಕಡಿಮೆ ಹಾಗೆಯೇ ಇದ್ದರೂ ಅದರಷ್ಟು ದಪ್ಪ ಇರೋಲ್ಲ. ರೊಟ್ಟಿ ತೆಳುವಾಗಿ ಬರಲು ರೊಟ್ಟಿ ಹೆಂಚಿನ ಬದಲು ಅಲ್ಯೂಮಿನಿಯಂ ಪಾತ್ರೆಯ ದೊಡ್ಡ ಮುಚ್ಚಳವನ್ನು ಇದಕ್ಕೆಂದೇ ಪ್ರತ್ಯೇಕವಾಗಿರಿಸಿ ಅದನ್ನು ಸ್ಟವ್ ಮೇಲಿಟ್ಟು ಅದರ ಮೇಲೆ ರೊಟ್ಟಿಯನ್ನು ಹದವಾಗಿ ನಾಜೂಕಾಗಿ ಬೇಯಿಸಲಾಗುತ್ತೆ. ದಪ್ಪನೆಯ ಪ್ಲೈನ್ ರಾಗಿರೊಟ್ಟಿ ತಿನ್ನಲು ವಿರೋಧಿಸಿ ಫ಼ೈಟ್ ಮಾಡುತ್ತಿದ್ದ ದಿನಗಳು ಹೋಗಿ ಈ ತೆಳುವಾದ ದೋಸೆ ತರಹದ ರೊಟ್ಟಿ ನನ್ನ ಫ಼ೇವರೀಟ್ ಆಹಾರಗಳ ಪಟ್ಟಿಯಲ್ಲಿ ಸೇರಿಯಾಗಿದೆ.



ಮರೆಯುವ ಮುನ್ನ
ಬಹುಶಃ ಹೆಣ್ಣುಮಕ್ಕಳ ಕ್ರಿಯಾಶೀಲತೆಯ ಸಮಕ್ಕೆ ಬೇರಾರೂ ಬರೋದು ಕಷ್ಟ ಕಣ್ರೀ ! ಮನೆಯಲ್ಲಿರುವವರ ರುಚಿ- ಅಭಿರುಚಿ, ಬೇಕು- ಬೇಡಗಳನ್ನೆಲ್ಲಾ ಸರಿಯಾಗಿ ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ ನೂತನ ಬದಲಾವಣೆಗಳನ್ನು ಮಾಡಿ ಗೆಲ್ಲುವ ಇವರ ತಂತ್ರ ,ಜಾಣ್ಮೆ ಕಲೆಗಾರಿಕೆಯೇ ಒಂದು ಅದ್ಭುತ. ರಾಗಿಯೆಂದರೆ ಮೂಗು ಮುರಿಯುತಿದ್ದವನನ್ನು , ಅದೇ ರಾಗಿ ಬೇಕೆಂದು ಬಯಸುವಂತೆ ಮಾಡಿದ ರೀತಿಯಲ್ಲೂ ಅವರಲ್ಲಿ ಒಂದು ಕ್ರಿಯಾತ್ಮಕ ಒಳನೋಟವಿದ್ದೇ ಇರುತ್ತದೆ. ಅದನ್ನು ಸೂಕ್ಷ್ಮವಾಗಿ ಗುರುತಿಸುವ ಮನಸಿರಬೇಕಷ್ಟೇ !

ಕೆಲವು ಸಿನಿಮಾಗಳು ಸಿರ್ಫ಼್ ನಿರೂಪಣೆ ಹಾಗೂ ಪ್ರೆಸೆಂಟೇಷನ್ ಗಳಿಂದಲೇ ಮನಸೂರೆಗೊಳ್ಳುತ್ತವೆ. ಹಾಗೆಯೇ ಇಲ್ಲಿ ! ಅದೇ ರಾಗಿ, ಅದೇ ರೊಟ್ಟಿ ಅದೇ ಬಣ್ಣ….. ಆದರೆ ಅದನ್ನು‌ ವಿನ್ಯಾಸಗೊಳಿಸುವ ವಿನೂತನ ರೀತಿಯಿಂದ ಮನೆಯಲ್ಲಿ ಸರ್ವ ಸ್ವೀಕಾರಾರ್ಹವಾಗುವುದರ ಮಾರ್ಕೆಟಿಂಗ್ ಟೆಕ್ನಿಕ್ ಕಂಡುಹಿಡಿದು ಅದನ್ನು ನನ್ನ ಲೈಫಲ್ಲಿ ಪ್ರಯೋಗಿಸುತ್ತಿರುವ ನನ್ನ‌ ವೈಫ಼್ ಗೆ ಧನ್ಯವಾದಗಳು.

ಲಾಸ್ಟ್ ಪಂಚ್

ಇವೆಲ್ಲವೂ ಎಲ್ಲರ ಮನೆಯಲ್ಲೂ ಕಾಮನ್ ಬಿಡಿ ! ಅಂತಹಾ‌ ವಿಶೇಷವಾದದ್ದೇನೂ ಇಲ್ಲ. ಆದರೆ ಬಹಳಷ್ಟು ಮಂದಿ ಹೇಳಿಕೊಳ್ಳದೇ ಬಿಟ್ಟಿದ್ದನ್ನು ನಾಲ್ಕು ಸಾಲುಗಳ ಮೂಲಕ ಬೆಳ್ಳಂಬೆಳಿಗ್ಗೆ ಹಂಚಿಕೊಂಡಿದ್ದೇನೆ…..


  • ಹಿರಿಯೂರು ಪ್ರಕಾಶ್ (ಲೇಖಕರು, ಕತೆಗಾರರು)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading