‘ಸಾಮೀಪ್ಯ’ ಕೃತಿ ಪರಿಚಯ – ಡಾ. ರತ್ನಾಕರ ಕುನುಗೋಡು

ನಾಗ ಎಚ್. ಹುಬ್ಳಿ ಅವರು ಬಂಗಾಳಿಯಿಂದ ನೇರವಾಗಿ ಅನುವಾದಿಸಿದ, ಖ್ಯಾತ ಬಂಗಾಳಿ ಸಾಹಿತಿ ಶ್ರೀಯುತ ಶೀರ್ಷೇಂದು ಮುಖೋಪಾಧ್ಯಾಯ ಅವರ ಆಯ್ದ ಕತೆಗಳ ಸಂಕಲನ ‘ಸಾಮೀಪ್ಯ’ ಕುರಿತು ಪ್ರಾಧ್ಯಾಪಕರೂ, ಕವಿಯೂ, ವಿಮರ್ಶಕರೂ ಆದ ಡಾ. ರತ್ನಾಕರ ಕುನುಗೋಡು ಅವರು ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ. ತಪ್ಪದೆ ಮುಂದೆ ಓದಿ….

ಪುಸ್ತಕ: ಸಾಮೀಪ್ಯ
ಮೂಲ : ಶೀರ್ಷೇಂದು ಮುಖ್ಯೋಪಾಧ್ಯಾಯ
ಕನ್ನಡಕ್ಕೆ : ನಾಗ ಎಚ್. ಹುಬ್ಳಿ
ಪ್ರಕಾರ : ಕಥಾಸಂಕಲನ

೨೦೨೩ನೇ ಕುವೆಂಪು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಬಂಗಾಳಿಯ ಹಿರಿಯ ಸಾಹಿತಿ ಶೀರ್ಷೇಂದು ಮುಖ್ಯೋಪಾಧ್ಯಾಯ ಅವರ ಆಯ್ದ ಆರು ಕತೆಗಳ ಅನುವಾದ ಸಂಕಲನವೇ ‘ಸಾಮೀಪ್ಯ’. ಕಳೆದ ಕೆಲವು ವರ್ಷಗಳಿಂದ ಕುವೆಂಪು ರಾಷ್ಟ್ರೀಯ ಪ್ರಶಸ್ತಿ ಗೆ ಭಾಜನರಾಗುವ ಭಿನ್ನ ಭಾಷಿಕ ಕವಿಗಳ ಆಯ್ದ ಬರಹಗಳನ್ನು ಕನ್ನಡಕ್ಕೆ ಅನುವಾದ ಮಾಡಿಸಿ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೃತಿ ಬಿಡುಗಡೆ ಮಾಡುವ ಸಂಕಲ್ಪತೊಟ್ಟ, ಅಕ್ಷತಾ ಹುಂಚದಕಟ್ಟೆ ಅವರು ಈ ಬಾರಿಯು ಅದನ್ನು ಸಾಧ್ಯವಾಗಿಸಿದ್ದಾರೆ.

ಮೂಲತಃ ಹುಬ್ಬಳ್ಳಿಯವರಾದ ಡಾ. ನಾಗ ಎಚ್. ಹುಬ್ಳಿ ಅವರು ಪ್ರಸ್ತುತ ಜಾರ್ಖಂಡ್ ನ ರಾಂಚಿ ವಿವಿಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಬುಡಕಟ್ಟು ಅಧ್ಯಯನದಲ್ಲಿ ಗಂಭೀರವಾಗಿ ತೊಡಗಿಸಿಕೊಂಡ ಇವರು ಬೇರೆ ಬೇರೆ ಭಾಷೆಗಳಿಂದ ನೇರವಾಗಿ ಕನ್ನಡಕ್ಕೆ ಹಲವು ಮಹತ್ವದ ಕೃತಿಗಳನ್ನೂ ಅನುವಾದಿಸಿದ್ದಾರೆ.

ಶೀರ್ಷೇಂದು ಅವರು ಬೇರೆ ಬೇರೆ ಕಾಲಘಟ್ಟದಲ್ಲಿ ಬರೆದ ಪ್ರಾತಿನಿಧಿಕ ಕತೆಗಳು ಇಲ್ಲವೆ. ನಿರಾಳ, ಸಾಮೀಪ್ಯ, ಸೈಕಲ್, ತೊಟ್ಟಿ, ಮನೆಯ ಹಾದಿ, ಔಷದಿ. -ಈ ಆರು ಕತೆಗಳ ವಸ್ತುಗಳು ಭಿನ್ನ. ಆದರೆ ಶೋಧಿಸುವ ಮೌಲ್ಯ ಗಳು ಹೆಚ್ಚು ಕಮ್ಮಿ ಸಮನಾಗಿವೆ. ‘ಎಷ್ಟು ಕಷ್ಟವೊ ಹೊಂದಿಕೆ ಎಂಬುದು ನಾಲ್ಕು ದಿನದ ಬದುಕಿನಲಿ’ ಎಂಬ ಕವಿತೆಯ ಸಾಲುಗಳ ಭಾವ ಈ ಒಟ್ಟು ಕತೆಗಳಲ್ಲಿ ಧ್ವನಿಸುತ್ತದೆ. ಹತ್ತಿರವಿದ್ದೂ ದೂರವಾಗುವ, ದೂರ ಸರಿದವರು ಇನ್ನೂ ದೂರವಾಗುತ್ತಿರುವ ಸಂಕೀರ್ಣ ಬಾಳಿನಲ್ಲಿ; ಪರಸ್ಪರ ಹತ್ತಿರವಾಗಬೇಕಾದ ಒಂದು ಸಾಮೀಪ್ಯ ಸಾಧ್ಯವಾಗುವಿಕೆ ಕಥೆಗಾರರ ಆಶಯವಾಗಿದೆ.

ಸಾವನ್ನು ಎದುರಿಗಿಟ್ಟುಕೊಂಡು ಬಹುಕಾಲದ ಬಾಕಿಕಾರ್ಯವೊಂದನ್ನು ಪೂರ್ಣವಾಗಿಸಿ ‘ನಿರಾಳ’ವಾಗುವಿಕೆ. ಬಡ ಹುಡುಗನ ‘ಸೈಕಲ್’ ನ ಆಸೆ ಮರೀಚಿಕೆಯಾಗಿಯೇ ಉಳಿವ ವಿಷಾದ. ತೊಳೆದಷ್ಟೂ ರಾಡಿಯಾಗುವ ಅಂತರಂಗಗಳ ‘ತೊಟ್ಟಿ’ ರೂಪಕಾತ್ಮಕವಾಗುವ ಬಗೆ. ಎಲ್ಲರೂ ಬೆನ್ನುಮಾಡಿದ ಆದರೆ ತೊರೆದುಹೋದವರಿಗಾಗಿ ಕಾಯುತ್ತಿರುವ ‘ಮನೆಯಹಾದಿ’. ಅನುರೂಪ ದಾಂಪತ್ಯಕ್ಕೆ ಅಗತ್ಯವಾದ’ಔಷಧಿ’. ಎಲ್ಲಾ ಕತೆಗಳು ಕುತೂಹಲಕಾರಿಯಾಗಿ ಓದಿಸಿಕೊಳ್ಳುವಂತೆ ಮಾಡುವಲ್ಲಿ ಅನುವಾದ ಕಾರ್ಯ ಯಶಸ್ವೀಯಾಗಿದೆ. ಅನಿರೀಕ್ಷಿತ ತಿರುವು, ಮುಕ್ತಾಯವಾಗದ ಕಥಾಲಹರಿ, ಓದುಗರಿಗೆ ಊಹಿಸಿಕೊಳ್ಳಲು ಬಿಟ್ಟುಬಿಡುವ ಸನ್ನಿವೇಶ ನಿರ್ಮಾಣ- ಮೊದಲಾದ ಕಥಾ ತಂತ್ರಗಳು ಇಲ್ಲಿ ಫಲಪ್ರದವಾಗಿವೆ.


  • ಡಾ. ರತ್ನಾಕರ ಕುನುಗೋಡು – ಪ್ರಾಧ್ಯಾಪಕರು, ಕವಿ, ವಿಮರ್ಶಕರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading