ಬನ್ನಿ… ಗುಬ್ಬಚ್ಚಿಗಳೆ – ಡಾ.ಪ್ರಕಾಶ ಬಾರ್ಕಿ



ಬನ್ನಿ ಗುಬ್ಬಚ್ಚಿಗಳೆ. ಕಾಳು ತಿಂದು, ನೀರು ಗುಟುಕಿಸಿ, ಗೂಡುಗಳಲ್ಲಿ ನಿಮ್ಮ ಸಂತಾನ ಬೆಳಸಿಕೊಳ್ಳಿ‌. ಸೈತಾನ್ನನಂತ ನಮ್ಮನ್ನು ಕ್ಷಮಿಸಿ ಬಿಡಿ. ನೀವು ನಮ್ಮ ಪೂರ್ವಜರು. ಪಾಪಿಗಳಾದ ನಮಗೆ ಕ್ಷಮೆಯಿಲ್ಲ ಆದರೂ ಪಾದವಿಟ್ಟು ಉದ್ಧರಿಸಿ.

ಅಕ್ಕಿ ಹಸನ ಮಾಡುವಾಗ, ಅವ್ವನ ಕೈಯಿಂದ ಚಂಗನೇ ಜಿಗಿಯುವ ಅಕ್ಕಿ ಕಾಳನ್ನು, ಜಿಗಿ ಜಿಗಿದು ಹೆಕ್ಕುತ್ತಿದ್ದ ಪುಟ್ಟ ಗುಬ್ಬಿಗಳು. ಅಂಜು- ಅಳುಕಿಲ್ಲದೆ ತಂಡೋಪತಂಡವಾಗಿ ಅಂಗಳಕ್ಕೆ ದಾಂಗುಡಿಯಿಡುತ್ತಿದ್ಜವು.

ಮನೆಯ ಹಂಚಿನ ಸಂದಿ, ದೇವರ ಫೋಟೋಗಳ ಹಿಂದೆ, ಗೋಡೆಯ ಸಂದುಗೊಂದಿನಲ್ಲಿ ಹಿಡಿ ಒಣ ಹುಲ್ಲನ್ನು ಪೇರಿಸಿ, ಮೊಟ್ಟೆಯಿಟ್ಟು ಮರಿಮಾಡಿ ತಮ್ಮ ತಂಡಕ್ಕೆ ಬಲ ತುಂಬಿಸಿಕೊಳ್ಳುತ್ತಿದ್ದ ನಿರುಪದ್ರವಿ ಜೀವಿ.

ಗಂಡು, ಹೆಣ್ಣು ಗುಬ್ಬಚ್ಚಿ ಯಾವಾಗಲೂ ಜೊತೆಯಾಗಿದ್ದು, ಆದರ್ಶ ದಂಪತಿಗಳಂತಿರುತ್ತಿದ್ದವು. ಸೂರ್ಯ ಕಾಣೆಯಾಗುವ ಸಂಜೆಗೆ “ಕರೆಂಟ್ ವೈರ್” ಮೇಲೆ ರಾಶಿ ಗುಬ್ಬಚ್ಚಿಗಳು ಸಾಲಾಗಿ ಕೂತು, ಚಿಲಿಪಿಲಿಗುಟ್ಟುತ್ತಾ “ಮೀಟಿಂಗ್” ಮಾಡುವುದು ನಿತ್ಯನೋಟ.

ಫೋಟೋ ಕೃಪೆ : thespruce

ಮನೆಯ ಮುಂದೆ ನೀರು ತುಂಬಿಟ್ಟ ಬಕೆಟ್, ಕಲ್ಲುಬಾನಿಯಲ್ಲಿ ಮಿಂದೇಳತ್ತಿದ್ದ ಗುಬ್ಬಚ್ಚಿಗಳು, ಪುರ್ರನೆ ರೆಕ್ಕೆ ಬಡಿದು ಮೈ ಒರೆಸಿಕೊಳ್ಳುತ್ತಿದ ಸ್ವಚ್ಜ ಶುಚಿ ಜೀವಿಗಳು. ಹಾರುವ ಕೀಟ, ಮನೆಯಲ್ಲಿ ಚಲ್ಲಿದ ಧವಸ ಧಾನ್ಯ, ಹೊಲದ ಕಾಳಿನ ತೆನೆ ಕುಕ್ಕಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಗುಬ್ಬಚ್ಚಿಗಳು ನಮ್ಮ ಜೊತೆ ತೀರಾ ಒಡನಾಟದಲ್ಲಿದ್ದ ಏಕೈಕ ಪಕ್ಷಿ ಪ್ರಪಂಚ.

ಬಾಲ್ಯದಲ್ಲಿ ಗುಬ್ಬಚ್ಚಿಗಳ ಗೂಡನ್ನು ನಾವು ಕೂತೂಹಲದಿಂದ ಹಲವು ಬಾರಿ ಇಣುಕಿ ನೋಡಿದ್ದಿದೆ. ನಾಲ್ಕು ಗೋಲಿ ಗಾತ್ರದ ಕಂದು ಬಣ್ಣದ ಚುಕ್ಕೆಯ ಮೊಟ್ಟೆಗಳು, ಮೊಟ್ಟೆಯಿಂದ ಹೊರಬಂದ ಪುಕ್ಕವಿಲ್ಲದ ಮರಿ, ಅವುಗಳ ಬಾಯಿಗೆ ಬಾಯಿಂದ ತುತ್ತಿಡುವ ತಂದೆ, ತಾಯಿ ಹಕ್ಕಿ. ಅವುಗಳೆಲ್ಲವನ್ನು ಬಡಿದು ಬಾಯಿಗೆ ಹಾಕಿಕ್ಕೊಳ್ಳಲು ಹೊಂಚು ಹಾಕುತ್ತಿದ್ದ ಕಳ್ಳ ಬೆಕ್ಕು…

“ತೀರಿ ಹೋದ ನಮ್ಮ ಹಿರಿಯರು ಗುಬ್ಬಿಗಳಾಗಿ ನಮ್ಮ ಮನೆಗೆ ಬರುವುದು..!!!” ಅಂತ ನಮಗೆ ತಿಳಿಹೇಳುತ್ತಿದ್ದ ಅಜ್ಜ ಹಿಡಿ ಅಕ್ಕಿ, ಜೋಳ, ಅನ್ನ ಹಾಕಿಸುತ್ತಿದ್ದ. ಮುಂದೆ ಅಪ್ಪ- ಅವ್ವನದು ಇದೇ ಮಾತು. ಇವೆಲ್ಲವು ಮೆದುಳಿನಲ್ಲಿ ಹೆಪ್ಪುಗಟ್ಟಿದ ನೆನಪುಗಳು.

ಮೊದಲ್ಲಿದ್ಧ ಹಂಚಿನ ಮನೆ ಕಾಂಕ್ರೀಟ್ ಹೊತ್ತು ನಿಂತಿದೆ. ಫೋಟೋ ಗೋಡೆಗೆ ಮುಂಬಾಗಿ ಜೊತೆ ಬೀಳದೆ ಅಂಟಿಕೊಂಡಿವೆ. ರಾಶಿಯಲ್ಲಿದ್ದ ಗುಬ್ಬಚ್ಚಿಗಳು ಅಪರೂಪ, ಕಂಡರೇ ಅದೃಷ್ಟ ಅನ್ನೋ ಕಾಲ.
ನನ್ನ ಯಾವಾಗಲೂ ಕಾಡುವ ಪ್ರಶ್ನೆ “ಹಿರಿಯರು ನಮ್ಮನ್ನು ತೊರೆದರೆ” ಅಥವಾ ನಾವು ಅವರನ್ನು ಮರೆತವಾ?

ಫೋಟೋ ಕೃಪೆ : ED times

ಗುಬ್ಬಚ್ಚಿಗಳು ನಮ್ಮ ಮುಂದಿನ ತಲೆಮಾರಿಗೆ ಕಾಣೆಯಾಗುವವಾ? ಅನ್ನೋ ಆತಂಕ. ಆಹಾರ ಸರಪಳಿಯ ಭಾಗವಾದ ಗುಬ್ಬಚ್ಚಿಗಳು ಅವಸಾನದ ಅಂಚಿಗೆ ಬಂದು ಅಳಿದುಳಿದವುಗಳು ನಮ್ಮ ಒಡನಾಟ ಬಿಟ್ಟು ದೂರ ಸರಿದಿವೆ.

  • ಗೂಡು ಕಟ್ಟಲು ಮುಳ್ಳುಕಂಟಿಗಳಿಲ್ಲ, ಗಿಡಮರಗಳಿಲ್ಲ,
  • ಹಂಚಿನ ಮನೆಯಿಲ್ಲ. ಕಾಂಕ್ರೀಟ್ ಮನೆಯಲ್ಲಿ ಕಟ್ಟು ಹಾಕಿದ ಫೋಟೋಗಳಿಲ್ಲ. ಸಿಮೆಂಟ್ ಗೋಡೆಗಳಲ್ಲಿ ಸಂದುಗೊಂದಿಲ್ಲ.
  • ಹೊಲಗಳಿಗೆ ದಾಳಿಯಿಟ್ಟು ತೆನೆತಿಂದ ಪಕ್ಷಿಗಳು ದಾರುಣವಾಗಿ ಸಾಯುತ್ತಿವೆ ಕಾರಣ “ರಾಸಾಯನಿಕ ಸಿಂಪರಣೆ”
  • ಪೆಟ್ರೋಲ್ ಸುರಿದ ಗಾಡಿಗಳು ಉಗುಳುವ ಹೊಗೆಯಲ್ಲಿನ “ಮಿಥೈಲ್ ನೈಟ್ರೇಟ್” ರಾಸಾಯನಿಕದಿಂದ ಹಲವು ಕೀಟಗಳು ಸತ್ತು ಬೀಳುತಿವೆ, ಅವುಗಳನ್ನೆ ಕುಕ್ಕಿ ಹೆಕ್ಕುವ ಗುಬ್ಬಚ್ಚಿಗಳು ಹರೋಹರ‌.
  • ಯಥೇಚ್ಚ ಮೊಬೈಲ್ ಟವರ್ ವಿಕಿರಣಗಳು “ಗುಬ್ಬಚ್ಚಿ”ಗಳಂತ ಹಲವು ಪಕ್ಷಿಗಳ ಜೀವಗಳಿಗೆ ಮಾರಕ.
  • ಮನೆಮುಂದೆ ಅಗುಳು ಕಾಳು ಹಾಕದ ನಮ್ಮ ಜಿಪುಣತನ
  • ಪ್ಲಾಸ್ಟಿಕ್ ಪ್ಯಾಕೆಟಗಳಲ್ಲಿ ಅವಿತು ಬರುವ ಕಾಳುಗಳು. ಹಸನ ಮಾಡುವುದು ತೀರಾ ವಿರಳ.

ಪರಿಸರದ ಮೇಲೆ ನಮ್ಮಗಳ ಅತೀ ಆಕ್ರಮಣಕಾರಿ ಜೀವನ ಶೈಲಿ ಹದಗೆಟ್ಟು ಹುಳ ಬಿದ್ದು ಹೋಗುತ್ತಿದೆ. ದೇಹ- ಮನಸ್ಸು ರೋಗಗಳ ಗೂಡಾಗುತ್ತಿದೆ. “ಕೊರೋನಾ” ಬರದೇ ಇನ್ನೇನಾದೀತು.?

ವಾರದ ಹಿಂದೆ “ನಮ್ಮ ಪೂರ್ವಜ” ದಂಪತಿಗಳು ಮನೆ ಹೊರಗೆ “ಗೂಡು ಕಟ್ಟು”ವುದು ಕಣ್ಣಿಗೆ ಬಿತ್ತು. ಪೂಜೆ ಮಾಡಿ ಕಟ್ಟಿದ ಕುಂಬಳಕಾಯಿ ಮೇಲೆ ಗೂಡು ಕಟ್ಟಲು ಹೆಣಗಾಡುತ್ತಿರುವ ದಂಪತಿ ಗುಬ್ಬಕ್ಕಗಳು. ಮತ್ತೆ ಮತ್ತೆ ಬೀಳುತ್ತಿದ್ದ ಹುಲ್ಲುಕಡ್ಡಿಗಳು, ಛಲದಂಕಮಲ್ಲನಂತೆ ಮತ್ತೆ ಪೇರಿಸಲು ಕೊಕ್ಕಿನಲ್ಲಿ ಹೆಕ್ಕುತ್ತಿದ್ದವು.

ಫೋಟೋ ಕೃಪೆ : ED times

ನನಗೆ ರೆಕ್ಕೆ ಬಂದಷ್ಟೇ ಖುಷಿ ಚಿಮ್ಮಿತು. ಹಿಡಿ ಅಕ್ಕಿ ಕಾಳು ಚೆಲ್ಲಿ, ನೀರಿಟ್ಟೆ. ದಂಪತಿ ಗುಬ್ಬಚ್ಚಿಗಳು ಜಿಗಜಿಗಿದು ಅಕ್ಕಿ ಹೆಕ್ಕಿ ನೀರು ಗುಟುಕರಿಸಿದವು. ಕಿಟಕಿ ಹಿಂದಿನಿಂದ ಇಣುಕಿ ನೋಡುತ್ತಿದ್ದವನಿಗೆ ಎಲ್ಲಿಲ್ಲದ ಖುಷಿಗೆ ಪಾರವಿರಲಿಲ್ಲ.

ರವಿವಾರ “ಕ್ಲಿನಿಕ್” ರಜೆ ಮಾಡುತ್ತಿದ್ದರಿಂದ‌, ಹಾವೇರಿಗೆ ಹೋಗುವ ಪ್ಲ್ಯಾನ್ ಬಿಟ್ಟು, ಮನೆಯಲ್ಲಿದ್ದ ಹೊಸಹಳೆಯ ರಟ್ಟಿನ ಬಾಕ್ಸುಗಳು, ರಟ್ಟಿನ ತುಣುಕುಗಳನ್ನ ಗುಡ್ಡೆ ಹಾಕಿಕೊಂಡೆ. ಕೆಲವು ಬಳಸದೇ ಇದ್ದ ರಟ್ಟಿನ ಬಾಕ್ಸುಗಳು ಸಿಕ್ಕವು.



ಒಂದು ಕತ್ತರಿ, ಅಂಟುಪಟ್ಟಿ ಹಿಡಿದು ಟೆರೆಸ್ ಹತ್ತಿ “ಶಿಲ್ಪಿ”ಯಂತೆ ಕೂತುಬಿಟ್ಟು. ರಟ್ಟುಗಳನ್ನ ಅಂದಾಜಿನ ಅಳತೆಯಂತೆ ಕತ್ತರಿಸಿ, ರಟ್ಟಿನ ಬಾಕ್ಸ್ ಗಳ ಮೇಲೆ ತಂಗಿಯ “ಬಳೆ” ಇಟ್ಟು ಗೆರೆ ಕೊಯ್ದು, ತೂತು ಮಾಡಿದೆ.
ಕತ್ತರಿಸಿದ ರಟ್ಟಿನ ತುಂಡುಗಳನ್ನ ಅಲ್ಲಲ್ಲಿ ಟೇಪಿನಿಂದ ಅಂಟಿಸಿ, “ಸ್ಕ್ರ್ಯೂ ಡ್ರೈವನಿಂದ” ತೂತಾಕಿ, ಅಜ್ಜಿಯ ಹರಿದ ಸೀರೆಯ ಚುಂಗು ತುಂಡರಿಸಿ.. ಬಳಸಿಕೊಂಡೆ. ಚಂದದ “ಗುಬ್ಬಿ ಗೂಡು” ತಯಾರಾಗಿಯೇ ಬಿಟ್ಟಿತು.

ನಾ ತಯಾರಿಸಿದ ಜೀವನದ ಮೊದಲ ಗುಬ್ಬಿ ಗೂಡಿದು. ಗುಬ್ಬಚ್ಚಿಗಳು ಗೂಡು ಕಟ್ಟಲು ಹೆಣಗಾಡುತ್ತಿದ್ದ ಕುಂಬಳಕಾಯಿ ಪಕ್ಕ ಕಟ್ಟಿಬಿಟ್ಟೆ ನೋಡಿ. ಮತ್ತೊಂದಿಷ್ಟು “ಗುಬ್ಬಿ ಗೂಡು” ತಯಾರಿಸಿ ಮನೆಯ ಸುತ್ತಲಿರುವ, ಕಿಟಕಿಯ ಹೊರ ಮೈ ಮೇಲಿನ “ಸಜ್ಜಾ” ಮೇಲೆ ಇಟ್ಟು ಬಂದೇ. ಅಬ್ಬಾ!! “ಸಂಡೇ ಸಾರ್ಥಕ”ವಾಯಿತು.

ಮನೆ ಸುತ್ತ, ಟೆರೇಸ್ ಮೇಲೆ ಹಳೇಯ ಪ್ಲಾಸ್ಟಿಕ್ ಬಕೆಟ್, ಬಟ್ಟಲುಗಳಲ್ಲಿ ನೀರು ಶೇಖರಸಿ ಇಟ್ಟಾಗಿದೆ, ಅಲ್ಲಲ್ಲಿ ರಾಗಿ, ಜೋಳ, ಅಕ್ಕಿ, ಅನ್ನದ ಅಗುಳು ಚೆಲ್ಲುವ ಕಾರ್ಯ ನಡೆದಿದೆ.

ನಾ ಕಟ್ಟಿದ ಗೂಡಿನತ್ತ ದಂಪತಿ ಗುಬ್ಬಚ್ಚಿಗಳು ಬರದೇ ದೂರದಿಂದ ಗೂಢಾಚಾರಕರಂತೆ ಕಣ್ಣಿಟ್ಟಿವೆ. ಪುಣ್ಯಕ್ಕೆ ಇವತ್ತಿನಿಂದ ಗಿರಕಿ ಹಾಕಿ ಸುಳಿಯುತ್ತಿವೆ. ಅವುಗಳಿಗೆ ಅಪಾಯವಿದೆಯಾ? ಅನ್ನೋ ಸಂಶಯ.

ನಮ್ಮನ್ನು ಮನ್ನಿಸಿ ಒಮ್ಮೇ ಬಂದುಬಿಡಿ…

ಇಂತಿ,

  • ಡಾ.ಪ್ರಕಾಶ ಬಾರ್ಕಿ (ಕಾಗಿನೆಲೆ)

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading