ಗಾಂಧೀಜಿಯವರು ಜನವರಿ ೧೯೧೫ ರಂದು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿ ಬಂದ ನಂತರ ತಮ್ಮ ರಾಜಕೀಯ ಗುರುಗಳಾದ ಗೋಪಾಲಕೃಷ್ಣ ಗೋಖಲೆಯವರ ಸಲಹೆಯಂತೆ ದೇಶ ಪರ್ಯಟನೆ ಆರಂಭಿಸಿದರು. ಇಂತಹ ಸಂದರ್ಭದಲ್ಲಿ ಸಾಹಿತಿ ಡಿ.ವಿ.ಗುಂಡಪ್ಪನವರು ಕರ್ನಾಟಕಕ್ಕೆ ಬರುವಂತೆ ಗಾಂಧೀಜಿಯವರನ್ನು ಆಗಾಗ್ಗೆ ಒತ್ತಾಯ ಮಾಡುತ್ತಲೇ ಇದ್ದರು.
ಫೆಬ್ರವರಿ ೧೯ , ೧೯೧೫ ರಂದು ಗೋಖಲೆಯವರು ಮರಣ ಹೊಂದಿದ ಕಾರಣದಿಂದ ಬೆಂಗಳೂರಿನಲ್ಲಿ ಗೋಖಲೆಯವರ ಭಾವಚಿತ್ರ ಅನಾವರಣ ಮಾಡುವ ಸಲುವಾಗಿ ಗಾಂಧೀಜಿಯವರು ೧೯೧೫ ರ ಮೇ ೮ ರಂದು ಗುಜರಾತಿನ ಕಾಥೇವಾಡಿ ರೈತನ ಧಿರಿಸಿನಲ್ಲಿ ಪ್ರಥಮ ಬಾರಿಗೆ ಬೆಂಗಳೂರು ರೈಲು ನಿಲ್ದಾಣದಲ್ಲಿ ಬಂದಿಳಿದರು. ಅವರ ವಾಸ್ತವ್ಯಕ್ಕೆ ವ್ಯವಸ್ಥೆಯನ್ನು ಆನಂದರವ್ ಸರ್ಕಲ್ ಬಳಿಯ ಶೇಷಾದ್ರಿ ರಸ್ತೆಯಲ್ಲಿದ್ದ ಜಿಲ್ಲಾ ನ್ಯಾಯಾಧೀಶ ಬಿ.ಎಸ್.ಕೃಷ್ಣಸ್ವಾಮಿ ಅಯ್ಯಂಗಾರ್ ರವರ ಮನೆಯಲ್ಲಿ ಮಾಡಲಾಗಿತ್ತು. ಹೀಗಾಗಿ ಅಲ್ಲಿಗೆ ತೆರಳಲು ಅವರಿಗಾಗಿ ಕುದುರೆ ಸಾರೋಟನ್ನು ಸಿದ್ಧಗೊಳಿಸಲಾಗಿತ್ತು. ಆದರೆ ಅಲ್ಲಿ ನೆರೆದಿದ್ದ ವಿಧ್ಯಾರ್ಥಿಗಳು ಅಭಿಮಾನದಿಂದ ನಾವೇ ಗಾಡಿಯನ್ನು ಎಳೆಯುತ್ತೇವೆ ಎಂದು ಕುದುರೆಗಳನ್ನು ಬಿಚ್ಚಿದರು. ವಿದ್ಯಾರ್ಥಿಗಳು ಗಾಡಿ ಎಳೆಯುವುದನ್ನು ಒಪ್ಪದ ಗಾಂಧೀಜಿಯವರು ಮನುಷ್ಯರು ಗಾಡಿ ಎಳೆಯುವುದು ಅಮಾನವೀಯವಾದದ್ದೆಂದು ಕೊನೆಗೆ ಕುದುರೆ ಸಾರೋಟನ್ನೂ ನಿರಾಕರಿಸಿ ಕಾಲ್ನಡಿಗೆಯಲ್ಲಿಯೇ ತಮ್ಮ ವಾಸಸ್ಥಳ ತಲುಪುತ್ತಾರೆ. ನಂತರ ಗೌರ್ಮೆಂಟ್ ಹೈಸ್ಕೂಲ್ ಸಭಾಭವನಕ್ಕೆ ತೆರಳುತ್ತಾರೆ. (ಅದು ಈಗ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು ಆಗಿದೆ). ಡಿ.ವಿ. ಗುಂಡಪ್ಪನವರ ಸೋಷಿಯಲ್ ಕ್ಲಬ್ ಕಾರ್ಯಕ್ರಮದಲ್ಲಿ ಭಾಷಣ ಮಾಡಿ, ಗೋಖಲೆ ಅವರ ಭಾವಚಿತ್ರ ಅನಾವರಣ ಮಾಡಿ ನಂತರ ಲಾಲ್‌ಬಾಗ್‌ನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಭಾಗವಹಿಸುತ್ತಾರೆ.

ಫೋಟೋ ಕೃಪೆ : The Hindu
- ಬೆಂಗಳೂರು ಭೇಟಿಯ ನಂತರದ ಸ್ವಲ್ಪ ದಿನಗಳಲ್ಲೇ ಗಾಂಧೀಜಿಯವರು ಕರ್ನಾಟಕಕ್ಕೆ ಎರಡನೆಯ ಭಾರಿಗೆ ಮಗ ರಾಮದಾಸನೊಡನೆ ಆಗಮಿಸಿ ಬೆಳಗಾವಿಯಲ್ಲಿ ಮುಂಬಯಿ ಪ್ರಾಂತೀಯ ಪರಿಷತ್ತು ಸಮಾವೇಶದಲ್ಲಿ ಪಾಲ್ಗೊಂಡು ಹಿಂದಿಯಲ್ಲಿ ಮಾತನಾಡಿದ್ದರು.
- ೧೯೧೮ ನೇ ಇಸವಿ ಮೊದಲ ಜಾಗತಿಕ ಯುದ್ಧದ ಸಮಯ. ಕಾಂಗ್ರೆಸ್ ರಾಜ್ಯದ ಎಲ್ಲೆಡೆ ಸಮಾವೇಶವನ್ನು ಆಯೋಜಿಸಿತ್ತು. ೧೭ ನೇ ಸಮಾವೇಶ ೧೯೧೮ ರ ಮೇ ೫ ವಿಜಯಪುರದಲ್ಲಿ ಏರ್ಪಾಡಾಗಿತ್ತು. ಈ ಸಮಾವೇಶದಲ್ಲಿ ಪಾಲ್ಗೊಳ್ಳಲು ಗಾಂಧೀಜಿ ವಿಜಯಪುರಕ್ಕೆ ಆಗಮಿಸಿದ್ದರು.
- ವಿಜಯಪುರದ ಸ್ಮಾರಕಗಳ ಬಗ್ಗೆ ಕೇಳಿ ಉತ್ಸುಕರಾಗಿದ್ದ ಗಾಂಧೀಜಿಯವರು ಸಭೆಯ ನಂತರ ತಮ್ಮ ಪತ್ನಿ ಕಸ್ತೂರ್ ಬಾ, ಸರ್ದಾರ್ ವಲ್ಲಭಭಾಯ್ ಪಟೇಲ್ ಸಹೋದರ ವಿಠ್ಠಲಭಾಯ್ ಪಟೇಲ್, ಸರೋಜಿನಿ ನಾಯ್ಡು ಜೊತೆ ಐತಿಹಾಸಿಕ ಗೋಳಗುಮ್ಮಟವನ್ನು ವೀಕ್ಷಿಸಿದರು.
- ಆಗಸ್ಟ್ ೧೯, ೧೯೨೦ ರಂದು ರಾಜ್ಯ ಪ್ರವಾಸಕ್ಕಾಗಿ ಮೊದಲು ಬೆಂಗಳೂರಿಗೆ ಆಗಮಿಸಿ ನಂತರ ಅಸಹಕಾರ ಆಂದೋಲನ ಮತ್ತು ಅಸ್ಪ್ರಶ್ಯತಾ ನಿವಾರಣಾ ಸಂದೇಶವನ್ನು ಸಾರಲು ಮಂಗಳೂರು, ಕಾಸರಗೋಡಿಗೆ ಭೇಟಿ ಕೊಡುತ್ತಾರೆ.
- ನವೆಂಬರ್ ೮, ೧೯೨೦ ರಂದು ಬೆಳಗಾವಿ ಜಿಲ್ಲೆಯ ನಿಪ್ಪಾಣಿಯ ಬಹಿರಂಗ ಸಭೆಯಲ್ಲಿ ಜಾತಿ ಪದ್ಧತಿ ಕುರಿತು ಸಂವಾದ ನಡೆಸುವ ಗಾಂಧೀಜಿಯವರು ಅಂದೇ ಬೆಳಗಾವಿಯ ಕೋಟೆ ಬಯಲಿನಲ್ಲಿ ಬಹಿರಂಗ ಸಭೆ ನಡೆಸಿ ನಂತರ ಮಾರುತಿ ಗುಡಿಯಲ್ಲಿ ಮಹಿಳೆಯರ ಸಭೆ ನಡೆಸಿ ಮಹಿಳೆಯರಿಂದ ನಿಧಿ ಸಂಗ್ರಹಣೆ ಮಾಡಿ ಚಿಕ್ಕೋಡಿ, ಧಾರವಾಡ, ಹುಬ್ಬಳ್ಳಿ, ಗದಗಕ್ಕೂ ಭೇಟಿ ನೀಡುತ್ತಾರೆ.
- ೧೯೨೧ ಮೇ ೨೮ ರಂದು ವಿಜಯಪುರಕ್ಕೆ ಎರಡನೇ ಬಾರಿ ನೀಡಿದಾಗ ಸಂಜೆಯಾಗಿತ್ತು. ಮೊದಲು ಮಹಿಳೆಯರ ಸಭೆಯಲ್ಲಿ ಪಾಲ್ಗೊಂಡು ನಂತರ ತಾಸ್‌ಬಾವಡಿ ಮೈದಾನದಲ್ಲಿ ಸಾರ್ವಜನಿಕ ಸಭೆಯಲ್ಲಿ ಅಂಗಳದಲ್ಲಿ ಮುಸ್ಸಂಜೆ ನೆರೆದಿದ್ದ೧೨೦೦೦ ಜನರನ್ನು ಉದ್ದೇಶಿಸಿ ಮಾತನಾಡುತ್ತಾರೆ.
- ಮಾರನೇ ದಿನ ಬಾಗಲಕೋಟೆಗೆ ಭೇಟಿ ನೀಡಿ ತಿಲಕರ ಸ್ವರಾಜ್ಯ ನಿಧಿಗೆ ೧೦೦೦ ರೂಪಾಯಿ ದೇಣಿಗೆ ಸಂಗ್ರಹಿಸಿಕೊಟ್ಟು ಕಾರಿನಲ್ಲಿ ಮತ್ತೆ ವಿಜಯಪುರಕ್ಕೆ ಪಯಣಿಸುತ್ತಾರೆ.
- ಆಗಸ್ಟ್ ೨೧, ೧೯೨೧ ರಂದು ಬೆಂಗಳೂರಿಗೆ ಆಗಮಿಸಿದ ಗಾಂಧೀಜಿಯವರು ಈದ್ಗಾ ಮೈದಾನ, ಬೆನ್ಸನ್ ಟೌನ್‌ಗಳಲ್ಲಿ ಅಸಹಕಾರ ಚಳವಳಿ ಕುರಿತು ಭಾಷಣ ಮಾಡುತ್ತಾರೆ.
- ಮಹಾತ್ಮಾ ಗಾಂಧೀಜಿಯವರು ಅಕ್ಟೋಬರ್ 10, 1921ರಂದು ಬಳ್ಳಾರಿಗೆ ‘ಅಸಹಕಾರ ಚಳವಳಿಯ ಪ್ರಚಾರಕ್ಕೆಂದು ಭೇಟಿ ನೀಡಿದ್ದರು.

ಫೋಟೋ ಕೃಪೆ : The Hindu
ಗಾಂಧೀಜಿ ಬಳ್ಳಾರಿಗೆ ಬಂದ ಸಂದರ್ಭದಲ್ಲಿ ಅಸ್ತಿತ್ವದಲ್ಲಿದ್ದ ಎರಡು ಜಿಲ್ಲಾ ಕಾಂಗ್ರೆಸ್ ಸಮಿತಿಗಳ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಗಾಂಧೀಜಿಯವರನ್ನು ಸ್ವಾಗತಿಸಲು ಯಾರೂ ಹೋಗಲೇ ಇಲ್ಲ. ಪ್ರಚಾರ ಭಾಷಣದ ಬಳಿಕ ವಾಪಸ್ ತೆರಳಲು ಅವರಿಗೆ ಟಿಕೆಟ್ ವ್ಯವಸ್ಥೆಯೂ ಆಗಿರಲಿಲ್ಲ. ಹೀಗಾಗಿ ಗಾಂಧೀಜಿಯವರು ಖಾದಿ ಶಾಲು ಹಾಸಿಕೊಂಡು ಅಂದು ಪ್ಲಾಟ್‌ಫಾರಂನಲ್ಲೇ ಮಲಗಿ ಮುಂಜಾನೆ ತಮ್ಮ ಟಿಕೆಟ್ಟನ್ನು ತಾವೇ ಖರೀದಿಸಿ ಪ್ರಯಾಣ ಮಾಡಬೇಕಾಯಿತು.
ಡಿಸೆಂಬರ್ ೨೬, ೧೯೨೪ ರಲ್ಲಿ ಕಾಂಗ್ರೆಸ್‌ನ ೩೯ ನೇ ಅಧಿವೇಶನ ಬೆಳಗಾವಿಯಲ್ಲಿ ಎರಡು ದಿನಗಳ ಕಾಲ ನಡೆಯಿತು. ಈ ಅಧಿವೇಶನದ ಅಧ್ಯಕ್ಷರಾಗಿ ಗಾಂಧೀಜಿಯವರು ಆಗಮಿಸಿದ್ದರು. ಸಮ್ಮೇಳನದಲ್ಲಿ ವೇದಿಕೆಯಿಂದ ಇಳಿದ ಗಾಂಧೀಜಿಯವರು ಸಾರ್ವಜನಿಕರ ಎದುರು ನಿಂತು ಹಿಂದಿಯಲ್ಲಿ ಭಾಷಣ ಮಾಡಿ ಅಧಿವೇಶನದ ನೆನಪಿಗಾಗಿ ಬೆಳಕವಾಡಿಯಲ್ಲಿ ಪಂಪಾ ಸರೋವರಕ್ಕೆ ಅಡಿಗಲ್ಲನ್ನು ಇಟ್ಟರು.
ಅಹಿಂಸಾ ಮಾರ್ಗದಲ್ಲಿಯೇ ಸ್ವಾತಂತ್ರ್ಯ ಹೋರಾಟ ಮುಂದುವರಿಸಬೇಕು. ಹಿಂಸೆಗೆ ಅವಕಾಶ ಮಾಡಿಕೊಡಬಾರದು. ಅಸಹಕಾರ ಮಾಡುವ ಮೂಲಕ ಬ್ರಿಟಿಷರೇ ದೇಶ ಬಿಟ್ಟುಹೋಗುವಂತೆ ಮಾಡಬೇಕು’ ಎಂದು ಮಹಾತ್ಮ ಗಾಂಧೀಜಿಯವರು ಅಧಿವೇಶನದಲ್ಲಿ ಕರೆ ನೀಡಿದ್ದರು. ಅಸಹಕಾರ ಆಂದೋಲನದ ಬೀಜ ಮೊದಲು ಬಿತ್ತಿದ್ದೇ ಬೆಳಗಾವಿಯಲ್ಲಿ ಎಂದು ಹೇಳಲಾಗುತ್ತದೆ. ಈ ಅಧಿವೇಶನದಲ್ಲಿ ಜವಾಹರಲಾಲ್ ನೆಹರೂ, ಪಟ್ಟಾಭಿರಾಮ ಸೀತಾರಾಮಯ್ಯ, ಸರೋಜಿನಿ ನಾಯ್ಡು, ಅನಿ ಬೆಸೆಂಟ್, ಮೌಲನಾ ಮೊಹಮ್ಮದ್ ಅಲಿ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.
ಅಧಿವೇಶನಕ್ಕೆ ಒಂದು ವಾರ ಮೊದಲೇ ಗಾಂಧೀಜಿಯವರು ಬೆಳಗಾವಿಗೆ ಆಗಮಿಸಿದ್ದರು. ಮುಖಂಡರುಗಳು ಎಷ್ಟೇ ಒತ್ತಾಯ ಮಾಡಿದ್ದರೂ ಯಾರ ಮನೆಯಲ್ಲೂ ಗಾಂಧೀಜಿಯವರು ವಾಸ್ತವ್ಯ ಮಾಡಲು ಇಚ್ಛಿಸಲಿಲ್ಲ. ಅಧಿವೇಶನ ಸ್ಥಳದ ಸಮೀಪದ ವ್ಯಾಕ್ಸಿನ್ ಡಿಪೊ ಮೈದಾನದಲ್ಲಿ ಟೆಂಟ್ ನಿರ್ಮಿಸಿಕೊಂಡು ಇದ್ದರು.

೧೯೨೭ ಫೆಬ್ರವರಿ ೨೨ ರಂದು ಗುಲ್ಬಾರ್ಗಕ್ಕೆ ರೈಲಿನಲ್ಲಿ ಆಗಮಿಸಿದ ಗಾಂಧೀಜಿಯವರು ಮರು ದಿನ ಶರಣ ಬಸಪ್ಪ ದೇವಸ್ಥಾನದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಭಾಷಣ ಮಾಡುತ್ತಾರೆ.
೧೯೨೭ ರ ಏಪ್ರಿಲ್ ತಿಂಗಳಲ್ಲಿ ಅಂಬೋಲಿಯಲ್ಲಿದ್ದ ಗಾಂಧೀಜಿಯವರಿಗೆ ಅಲ್ಲಿನ ಹವಾಗುಣ ಸರಿ ಹೊಂದದ ಕಾರಣ ತಮ್ಮ ಸಬರಮತಿ ಆಶ್ರಮಕ್ಕೆ ಹೊರಡಲು ತೀರ್ಮಾನಿಸುತ್ತಾರೆ. ಆದರೆ ಅವರ ಜತೆಯಲ್ಲಿದ್ದವರು ’ಈಗ ಅಲ್ಲಿ ಬಿಸಿಲು ಜಾಸ್ತಿ ಇರುವುದರಿಂದ ಹೋಗುವುದು ಬೇಡ’ ಎಂದು ಸಲಹೆ ನೀಡುತ್ತಾರೆ. ಇದೇ ಸಂದರ್ಭದಲ್ಲಿ ಸಿ.ರಾಜಗೋಪಾಲಾಚಾರಿಯವರು ಮುಂದಿನ ಖಾದಿ ಪ್ರಚಾರದ ಪ್ರವಾಸ ಮೈಸೂರು ಸಂಸ್ಥಾನದಲ್ಲಿದೆ. ಅಲ್ಲಿನ ಕೋಲಾರ ಜಿಲ್ಲೆಯ ನಂದಿ ಗಿರಿಧಾಮ ಗಾಂಧೀಜಿಯವರ ವಿಶ್ರಾಂತಿಗೆ ಪ್ರಶಸ್ತವಾದ ಸ್ಥಳವಾಗಿದೆ ಎಂದು ತಿಳಿಸಿದಾಗ ಗಾಂಧೀಜಿಯವರು ತಮ್ಮ ಒಪ್ಪಿಗೆಯನ್ನು ಸೂಚಿಸುತ್ತಾರೆ.
ಗಾಂಧೀಜಿಯವರ ವಾಸ್ತವ್ಯದ ಪೂರ್ವ ಸಿದ್ಧತೆಗಾಗಿ ಹಲವು ಧುರೀಣರು ಮುಂಚಿತವಾಗಿ ಏಪ್ರಿಲ್ ಎರಡನೇ ವಾರದಲ್ಲಿ ಬೆಂಗಳೂರಿಗೆ ಬಂದು, ಸಂಸ್ಥಾನದ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರ ಮೂಲಕ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಈ ಸುದ್ದಿ ತಿಳಿಸುತ್ತಾರೆ. ಬಳಿಕ ಮಹಾರಾಜರು ನಂದಿ ಗಿರಿಧಾಮದಲ್ಲಿದ್ದ ಕನ್ನಿಂಗ್ ಹ್ಯಾಮ್ ಭವನದಲ್ಲಿ ಗಾಂಧೀಜಿ ಅವರ ವಾಸ್ತವ್ಯಕ್ಕೆ ಸಕಲ ಏರ್ಪಾಡು ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುತ್ತಾರೆ.

ಅಂಬೋಲಿಯಿಂದ ಗಾಂಧೀಜಿ ಅವರು ರೈಲಿನಲ್ಲಿ ಏಪ್ರಿಲ್ ೨೦ ರಂದು ತಮ್ಮ ಪರಿವಾರದವರೊಂದಿಗೆ ಆಗಮಿಸಿ ಚಿಕ್ಕಬಳ್ಳಾಪುರ ಸಮೀಪದ ನಂದಿ ಬೆಟ್ಟದಲ್ಲಿ ತಂಗುತ್ತಾರೆ. ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದರಿಂದ ಜೂನ್ ೫ ರಂದು ನಂದಿ ಬೆಟ್ಟದಿಂದ ಹೊರಟ ಗಾಂಧೀಜಿಯವರು ಚಿಕ್ಕಬಳ್ಳಾಪುರದ ಪ್ರೌಢಶಾಲಾ ಆವರಣದಲ್ಲಿ ನಡೆದ ನಾಲ್ವಡಿ ಕೃಷ್ಣರಾಜರ ರಜತಮೋಹತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ ನಂತರ ಬೆಂಗಳೂರಿಗೆ ತೆರಳುತ್ತಾರೆ.
- ಜೂನ್ ೫, ೧೯೨೭ ರಿಂದ ಆಗಸ್ಟ್ ೩೦ ರವರೆಗೆ ಒಟ್ಟು ೮೭ ದಿನಗಳ ಕಾಲ ಬೆಂಗಳೂರಿನ ಕುಮಾರ ಕೃಪದಲ್ಲಿ ಇದ್ದುಕೊಂಡೇ ದಕ್ಷಿಣ ಕರ್ನಾಟಕದ ಪ್ರವಾಸವನ್ನು ಮಾಡುತ್ತಾರೆ. ಕುಮಾರ ಕೃಪ ಆವರಣದಲ್ಲೇ ಇದ್ದ ಬೃಹತ್ತಾದ ಆಲದ ಮರದಡಿ ಪ್ರತಿ ದಿನ ಸಂಜೆ ಪ್ರಾರ್ಥನಾ ಸಭೆ ನಡೆಸುತ್ತಿದ್ದರು. ಈಗ ಈ ಸ್ಥಳ ಅಶೋಕ ಹೊಟೆಲ್ ಆವರಣದಲ್ಲಿದ್ದು, ಗಾಂಧೀ ನೆನಪಿಗಾಗಿ ಒಂದು ಸ್ಮಾರಕವನ್ನು ನಿರ್ಮಿಸಲಾಗಿದೆ. ಪ್ರಾರ್ಥನಾ ಸಭೆ ನಡೆಯುತ್ತಿದ್ದ ಸ್ಥಳದಲ್ಲೀಗ ಕಾರ್ಪೋರೇಟ್ ಸಭೆಗಳು, ಪಾರ್ಟಿಗಳು ನಡೆಯುತ್ತವೆ.
- ಜುಲೈ ೯, ೧೯೨೭ ರಂದು ಮೈಸೂರು ಅಮೆಚ್ಯೂರ್ ಡ್ರಾಮಾಟಿಕ್ ಅಸೋಸಿಯೇಷನ್‌ಗೆ ಭೇಟಿ ನೀಡಿ ಖಾದಿ ನಿಧಿ ಸಂಗ್ರಹಕ್ಕಾಗಿ ಏರ್ಪಡಿಸಿದ್ದ ಈ ನಾಟಕವನ್ನು ಗಾಂಧೀಜಿಯವರು ವೀಕ್ಷಿಸುತ್ತಾರೆ.
- ೧೯೨೭ ಜುಲೈ ೧೦ ರಿಂದ ೧೩ ನೇ ತಾರೀಖಿನವರೆಗೆ ಬೆಂಗಳೂರು ಹಿಂದಿ ಸಮಾವೇಶ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಮತ್ತು ಮಹಿಳಾ ಸಮಾಜಗಳಲ್ಲಿ ಭಾಗವಹಿಸಿ ಭಾಷಣ ಮಾಡುತ್ತಾರೆ.
- ಜುಲೈ ೧೪, ೧೯೨೭ ರಂದು ತುಮಕೂರು ನಗರಸಭೆ ಉದ್ದೇಶಿಸಿ ಭಾಷಣ ಮಾಡುವ ಗಾಂಧೀಜಿಯವರು ನಂತರ ಪಂಚಮ ವಸತಿ ಶಾಲೆ, ಪ್ರಾಣಿ ದಯಾಸಂಘಕ್ಕೆ ಭೇಟಿ ನೀಡುತ್ತಾರೆ.
- ೧೯೨೭ ಜುಲೈ ೧೫, ಮಧುಗಿರಿಯಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಭಾಷಣ ಮಾಡಿ ಖಾದಿ ಕುರಿತು ಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡುತ್ತಾರೆ.
- ೧೯೨೭ ಜುಲೈ ೧೯ ರಿಂದ ೨೩ ರವರೆಗೆ ಮೈಸೂರು ಶೇಷಾದ್ರಿ ಅಯ್ಯರ್ ಅವರ ಗೃಹದಲ್ಲಿ ವಾಸ್ತವ್ಯ ಮಾಡುತ್ತಾರೆ. ಈ ಗೃಹ ಈಗ ವಾಣಿಜ್ಯ ತೆರಿಗೆ ಇಲಾಖೆಯ ಪ್ರಧಾನ ಕಛೇರಿಯಾಗಿದೆ.
ಗಾಂಧೀಜಿಯವರು ಮೊದಲ ಬಾರಿಗೆ ಮೈಸೂರಿಗೆ ಭೇಟಿಕೊಟ್ಟಿದ್ದು ೧೯೨೭ ರಲ್ಲಿ. ಪುರಭವದಲ್ಲಿ ಮೊದಲ ಭಾಷಣ ಮಾಡಿ ನಂತರ ಕೃಷ್ಣರಾಜೇಂದ್ರ ಬಟ್ಟೆ ಗಿರಣಿ ಉದ್ಘಾಟನೆ ಮಾಡುತ್ತಾರೆ. ಜಗನ್ಮೋಹನ ಅರಮನೆಯಲ್ಲಿ ಮಹಿಳೆಯರನ್ನು ಉದ್ದೇಶಿಸಿ ಮಾತನಾಡುತ್ತಾರೆ.
ಅರಮನೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಭೇಟಿ ಮಾಡಿ ಮಹಾರಾಜರಿಗೆ ಚರಕವನ್ನು ಉಡುಗೊರೆಯಾಗಿ ನೀಡುತ್ತಾರೆ. ಹಿಂದುಳಿದವರ ಕಲ್ಯಾಣಕ್ಕಾಗಿ ಮಹಾರಾಜರು ಹಲವು ಕಾರ್ಯಕ್ರಮ ಜಾರಿಗೆ ತಂದಿದ್ದರು. ಅದಕ್ಕಾಗಿ ಅವರನ್ನು ‘ರಾಜರ್ಷಿ’ ಎಂದು ಸಂಬೋಧಿಸುತ್ತಾರೆ.

ಗಾಂಧೀಜಿಯವರು ಈ ಸಂದರ್ಭದಲ್ಲಿ ನಂಜನಗೂಡು ಜಿಲ್ಲೆಯ ಬದನವಾಳು ಗ್ರಾಮಕ್ಕೆ ಭೇಟಿ ನೀಡುತ್ತಾರೆ. ಈ ಭೇಟಿಯ ನೆನಪಿಗಾಗಿ ‘೧೯೨೭’ ಮತ್ತು ‘ಚರಕ’ ಚಿಹ್ನೆ ಒಳಗೊಂಡ ಶಾಸನವೊಂದನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ಆದರೆ ಸಂರಕ್ಷಣೆ ನೆಪದಲ್ಲಿ ಅದಕ್ಕೆ ಸುಣ್ಣ ಬಣ್ಣ ಬಳಿದಿದ್ದಾರೆ.
ನಂತರ ಗಾಂಧೀಜಿಯವರು ಕನಕಪುರಕ್ಕೆ ಭೇಟಿ ಕೊಟ್ಟರು.
- ೧೯೨೭ ಆಗಸ್ಟ್ ೩ರಂದು ಹಾಸನ ಟೌನ್ ಹಾಲ್‌ನಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಭಾಷಣ ಮಾಡಿದರು.
- ೧೯೨೭, ಆಗಸ್ಟ್ ೧೧ ದಾವಣಗೆರೆ ಮಹಿಳಾ ಸಭೆಯಲ್ಲಿ ಪಾಲ್ಗೊಂಡರು ಮತ್ತು ಬಹಿರಂಗ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು.
- ಆಗಸ್ಟ್ ೧೨, ೧೯೨೭ ರಂದು ದಾವಣಗೆರೆಯಲ್ಲಿ ಖಾದಿ ಪ್ರಚಾರ ಆಂದೋಲನ ನಡೆಸಿ ಅಲ್ಲಿಯೇ ರಾತ್ರಿ ತಂಗಿದ್ದರು.
- ಆಗಸ್ಟ್ ೧೩ ರಂದು ಹರಿಹರಕ್ಕೆ ಹೋಗಿ ಹರಿಹರೇಶ್ವರ ದೇವಸ್ಥಾನದ ಮುಂದೆ ಮುಖಂಡರನ್ನು ಕುರಿತು ಭಾಷಣ ಮಾಡಿ ಮಧ್ಯಾಹ್ನ ಹೊನ್ನಾಳಿಗೆ ತೆರಳಿ ತುಂಗಭದ್ರಾ ನದಿಯ ದಡದಲ್ಲಿ೧೮೬೨ ರಲ್ಲಿ ಬ್ರಿಟಿಷರು ಕಟ್ಟಿಸಿರುವ ಪ್ರವಾಸ ಮಂದಿರದ ಕಟ್ಟಡದಲ್ಲಿ ತಂಗಿದ್ದರು.
- ೧೯೨೭ ಆಗಸ್ಟ್ರ ೧೪ ರಲ್ಲಿ ಶಿವಮೊಗ್ಗ ತಲುಪವ ಗಾಂಧೀಜಿ ಅಲ್ಲಿನ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡಿದ್ದರು.
- ೧೯೨೭ ಆಗಸ್ಟ್ ೧೮ ರಂದು ಭದ್ರಾವತಿಯಲ್ಲಿ ಕಬ್ಬಿಣದ ಅದಿರಿನ ಕಾರ್ಖಾನೆಯಲ್ಲಿ ದುಡಿಯುವ ಕಾರ್ಮಿಕರು ಮತ್ತು ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿ ನಂತರ ಸಾಗರಕ್ಕೆ ತೆರಳಿದರು.
- ಚಿಕ್ಕಮಗಳೂರು ಪ್ರವಾಸದ ನಂತರ ಆಗಸ್ಟ್ ೨೦ ರಂದು ಬೇಲೂರಿನ ದೇವಾಲಯಕ್ಕೆ ಗಾಂಧಿ ಪರಿವಾರ ಭೇಟಿ ನೀಡಿದ್ದಲ್ಲದೇ ನಂತರ ಗಾಂಧೀಜಿಯವರು ಚಿತ್ರದುರ್ಗಕ್ಕೆ ತೆರಳಿದರು.
- ೧೯೨೭ ಆಗಸ್ಟ್ ೨೮ ರಂದು ಬೆಂಗಳೂರಿನಿಂದ ತೆರಳಲು ಇನ್ನೆರಡು ದಿನಗಳು ಬಾಕಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಐದು ಬಹಿರಂಗ ಸಭೆಗಳಲ್ಲಿ ಮಾತನಾಡುತ್ತಾರೆ.
- ೧೯೩೪ ರಲ್ಲಿ ಮತ್ತೊಮ್ಮೆ ಗಾಂಧೀಜಿ ಎರಡನೇ ಬಾರಿಗೆ ಮೈಸೂರಿಗೆ ಬಂದಿದ್ದರು. ಎರಡು ಬಾರಿ ಭೇಟಿ ನೀಡಿದಾಗಲೂ ಅವರು ಶೇಷಾದ್ರಿ ಅಯ್ಯರ್ ರಸ್ತೆಯ ಶೇಷಾದ್ರಿ ಹೌಸ್ ನಲ್ಲಿ ತಂಗಿದ್ದರು. ಅವತ್ತಿನ ಶೇಷಾದ್ರಿ ಹೌಸ್ ಇಂದು ವಾಣಿಜ್ಯ ತೆರಿಗೆ ಇಲಾಖೆ ಕಚೇರಿ.
ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನಲ್ಲಿದ್ದ ಗಾಂಧಿವಾದಿ ತಗಡೂರು ರಾಮಚಂದ್ರರಾವ್ ಮನೆಗೆ ಭೇಟಿ ನೀಡಿದ್ದರು. ಅಲ್ಲಿಂದ ೧೦ ಕಿ.ಮಿ ದೂರದಲ್ಲಿರುವ ಬದನವಾಳು ಗ್ರಾಮಕ್ಕೆ ಗಾಂಧೀಜಿ ೨ ಬಾರಿ ಭೇಟಿ ಕೊಟ್ಟಿದ್ದರು.
೧೯೩೪ ರಲ್ಲಿ ಬದನವಾಳು ನೋಡಿದ ನಂತರ ಪ್ಲೇಗ್ ಪೀಡಿತವಾಗಿದ್ದ ಸಮೀಪದ ತಗಡೂರಿಗೆ ಗಾಂಧೀಜಿ ಭೇಟಿ ನೀಡಿದ್ದರು. ಆಗ ಇಲ್ಲಿನ ಸತ್ಯಾಗ್ರಹ ಆಶ್ರಮದಲ್ಲಿ ತಂಗಿದ್ದರು.
೧೯೩೪ ರ ಫೆಬ್ರುವರಿ ೨ ರಂದು ಶಿರಸಿಗೆ ಬಂದಿದ್ದ ಗಾಂಧೀಜಿಯವರನ್ನು ಸನ್ಮಾನಿಸಲಾಗಿತ್ತು.
ಫೆಬ್ರುವರಿ ೨೨ , ೧೯೩೪ ರಂದು ಮಹಾತ್ಮ ಗಾಂಧಿ ಕೊಡಗಿನ ಪೊನ್ನಂಪೇಟೆಗೆ ಆಗಮಿಸಿದ್ದರು. ಇಲ್ಲಿನ ರಾಮಕೃಷ್ಣ ಆಶ್ರಮದಲ್ಲಿ ಒಂದು ರಾತ್ರಿ ತಂಗಿದ್ದರು.
೧೯೩೪ ರ ಮಾರ್ಚ್ ೨ ರಂದು ಮಹಾತ್ಮ ಗಾಂಧೀಜಿ ದಾವಣಗೆರೆಗೆ ಬಂದರು. ಅಂದು ಭಾಷಣ ಮಾಡಿ, ಹೋರಾಟಗಾರರಲ್ಲಿ ಸ್ಫೂರ್ತಿ ತುಂಬಿದರು. ಊರಿನ ಜನ ಹುರುಪು–ಉತ್ಸಾಹಗಳಿಂದ ಅವರನ್ನು ಸುತ್ತುವರಿದರು. ಒಂದು ದಿನಕ್ಕಾಗಿ ಬಂದಿದ್ದ ಗಾಂಧೀಜಿಗೆ ಇನ್ನೊಂದು ದಿನ ಇರಲೇಬೇಕೆಂಬ ಪ್ರೀತಿಯ ಒತ್ತಾಯ ಹಾಕಿದರು. ಆದರೆ, ಇದಕ್ಕೆ ಗಾಂಧೀಜಿ ಒಪ್ಪಲಿಲ್ಲ. ಜನರೂ ತಮ್ಮ ಛಲ ಬಿಡಲಿಲ್ಲ.
ದಾವಣಗೆರೆ ಕಾರ್ಯಕ್ರಮ ಮುಗಿಸಿ ಬಳ್ಳಾರಿಗೆ ಪ್ರಯಾಣಿಸುವ ಮಾರ್ಗ ಮಧ್ಯೆ ಹರಪನಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ (ಆಗ ಶಾಲೆ) ಒಂದು ಕೊಠಡಿಯಲ್ಲಿ ಗಾಂಧೀಜಿ ವಾಸ್ತವ್ಯ ಹೂಡಿದ್ದರು. ಇದನ್ನು ಗಾಂಧಿ ಮೆಮೋರಿಯಲ್ ಹಾಲ್ ಎಂದೇ ಈಗ ಕರೆಯಲಾಗುತ್ತದೆ. ಇಲ್ಲಿ ಗಾಂಧಿ ಪ್ರತಿಮೆ ಸ್ಥಾಪಿಸಲಾಗಿದೆ. ಬ್ರಿಟಿಷರ ಕಾಲದ ಕಟ್ಟಡವಾಗಿದ್ದರಿಂದ ಅದರ ಮೂಲರೂಪಕ್ಕೆ ಧಕ್ಕೆ ಬರದಂತೆ ಹೊಸ ರೂಪ ನೀಡಲಾಗಿದೆ.
೧೯೩೪ ರ ಮಾರ್ಚ್ ೧ ರ ಸಂಜೆ ಮಹಾತ್ಮ ಗಾಂಧೀಜಿ ಹಾಗೂ ಚಿತ್ರದುರ್ಗ ಮುರುಘರಾಜೇಂದ್ರ ಮಠದ ೧೭ನೇ ಪೀಠಾಧಿಪತಿ ಜಯದೇವ ಮುರುಘರಾಜೇಂದ್ರ ಶರಣರು ನಗರದ ಹೊಂಡದ ಮಠದಲ್ಲಿ ಭೇಟಿಯಾಗಿದ್ದರು.
– ಮುಂದೊರೆಯುವುದು…
- ಬಾಹುಬಲಿ ಜಯರಾಜ್, ಚಾಮರಾಜನಗರ
