ಕೈ ಮದ್ದು, ಆಯುರ್ವೇದದಲ್ಲಿ ವಿಶ್ಲೇಷಣೆ – ಡಾ. ಶಿಲ್ಪಾ ಎಲ್. ಎಸ್




‘ಹುಟ್ಟುವುದಕ್ಕೆ ನವಮಾಸ ಬೇಕು, ಸಾಯುವುದಕ್ಕೆ ಕ್ಷಣಮಾತ್ರ ಸಾಕು’ ಎನ್ನವ ಗಾದೆಮಾತುಂಟು. ಆದರೆ ಈ ಮಾತು “ಗರವಿಷ” ವಿಷಯದಲ್ಲಿ ಸುಳ್ಳಾಗುವುದು. ಆಯುರ್ವೇದ ವೈದ್ಯಶಾಸ್ತ್ರವು ಹಲವಾರು ವಿಷಯಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದೆ. ಅದರಲ್ಲಿ ಈ ಗರವಿಷವು ಒಂದು. “ಗರವಿಷ”ದ ಬಗ್ಗೆ ಚರಕ ಸಂಹಿತೆ, ಸುಶ್ರುತ ಸಂಹಿತೆ, ಅಷ್ಟಾಂಗ ಹೃದಯ ಮುಂತಾದ ಹಲವು ಗ್ರಂಥಗಳಲ್ಲಿ ವಿವರಿಸಿದ್ದಾರೆ. ಹಾಗಾದರೆ ಆಯುರ್ವೇದದ ಚರಕ ಸಂಹಿತೆಯಲ್ಲಿ ವಿವರಿಸಿದಂತೆ “ಗರವಿಷ”ದ ಬಗ್ಗೆ ಅರಿಯುವ ಪ್ರಯತ್ನ ಮಾಡೋಣ.

  • ಏನಿದು ಗರವಿಷ ?
  • ಹೇಗೆ ಪ್ರಯೋಗ ಮಾಡುತ್ತಾರೆ ?
  • ಲಕ್ಷಣಗಳು ಏನು?
  • ಪರಿಹಾರ ಅಥವಾ ಚಿಕಿತ್ಸೆ ಏನು? ಇವೆಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಈ ಲೇಖನದಲ್ಲಿ ಹುಡುಕುವ.

ಫೋಟೋ ಕೃಪೆ : youtube (ಸಾಂದರ್ಭಿಕ ಚಿತ್ರ)

ಗರವಿಷ (ಸಂಯೋಗಜ ವಿಷ) :

ವಿಷ ಎಂಬ ಪದದ ಅರ್ಥ ಎಲ್ಲರಿಗೂ ಗೊತ್ತಿರುವಂಥದ್ದು. ಯಾವ ವಸ್ತು ದೇಹವನ್ನು ಪ್ರವೇಶ ಮಾಡುತ್ತಿದ್ದಂತೆ ದೇಹದೊಳಗಿನ ಒಂದೊಂದೆ ಅಂಗಗಳನ್ನು, ಆರೋಗ್ಯದ ಅಂಶಗಳನ್ನು ಕೊಲ್ಲುತ್ತಾ ಕೊನೆಗೆ ಪ್ರಾಣಕ್ಕೆ ಸಂಚಕಾರ ತರುವುದೋ ಅದೇ ವಿಷ.

ಗರವಿಷವು ಕೂಡ ಒಂದು ರೀತಿಯ ವಿಷವೇ ಆದರೆ ಸ್ವಲ್ಪ ಭಿನ್ನ, ಇದಕ್ಕೆ “ಸಂಯೋಗಜ ವಿಷ” ಎಂದು ಕೂಡ ಕರೆಯುತ್ತಾರೆ. ಏಕೆಂದರೆ ಇದರಲ್ಲಿ ಹಲವು ವಿಷದ ವಸ್ತುಗಳನ್ನು ಒಂದು ವಿಭಿನ್ನವಾದ ಪ್ರಮಾಣದಲ್ಲಿ ಮಿಶ್ರಿತಗೊಳಿಸುತ್ತಾರೆ. ಮನುಷ್ಯನ ಕ್ರೂರತೆಯ ಬುದ್ದಿಯು ಮತ್ತೊಬ್ಬ ವ್ಯಕ್ತಿಯ ಮೇಲೆ ಕೋಪಗೊಂಡಾಗ, ಮತ್ಸರದಿಂದ ಇದನ್ನು ಪ್ರಯೋಗಿಸುತ್ತಾನೆ. ಅದನ್ನೆ “ಕೈಮದ್ದು”, “ಕೈ ವಿಷ” ಎಂದು ಕರೆಯುವುದು.

ಗರವಿಷ ತಯಾರಿಸಲು ಈ ಕೆಳಗಿನ ವಸ್ತುಗಳನ್ನು ನಿರ್ದಾಷ್ಟ್ಯವಾಗಿ ಬಳಸುತ್ತಾರೆ.

  •  ಹಲವು ವಿಷಪ್ರಾಣಿಗಳ ವಿಷ ಶೇಖರಿಸಿ ಇಟ್ಟುಕೊಂಡಿರುವ ಅಂಗಗಳು ಉದಾ. ಕಪ್ಪೆಯ ತ್ವಚ್ಛೆಯ ಗ್ರಂಥಿ, ಚೇಳಿನ ಕೊಂಡಿ, ಹಾವಿನ ಹಲ್ಲು ಮತ್ತು ಹಲವು ವಿಷಜೀವಿಗಳ ಉಗುರು, ಮೂತ್ರ, ಮಲ, ಮೂಳೆ, ಪಿತ್ತ, ಲಾಲಾರಸ, ಶವ ಏನಾದರೂ ಆಗಿರಬಹುದು.
  • ವಿರುದ್ಧ ಪದಾರ್ಥಗಳ ಮಿಶ್ರಣ.(ಔಷಧಿಗಳು)
    ವಿರುದ್ಧ ಅಂದರೇ ಸೇವಿಬಾರದು ಅಂಥಹುದನ್ನು ಸೇವಿಸುವುದು. ಉದಾಹರಣೆಗೆ ಹಾಲಿನ ಜೊತೆ ಮೊಸರು ಸೇರಿಸುವುದು, ಬಿಸಿ ನೀರಿಗೆ ಜೆನು ತುಪ್ಪ ಸೇರಿಸುವುದು, ಕೆಲವು ವಿರುದ್ಧ ಔಷಧಿಗಳ ಸೇವನೆ ಮುಂತಾದವು.
  • ಕೆಲ ಭಸ್ಮಗಳು ಮತ್ತು ವಿಷ ಪದಾರ್ಥಗಳ ಮಿಶ್ರಣ ವಿಶೇಷವಾಗಿ ಅಲ್ಪ ವಿರ್ಯ ಇರುವಂಥದ್ದು(ಕಡಿಮೆ ಶಕ್ತಿ ಇರುವ ಪದಾರ್ಥಗಳು).

ಇವೇಲ್ಲವುಗಳ ವಿಭಿನ್ನ ಪ್ರಮಾಣದ ಮಿಶ್ರಣವೇ “ಗರವಿಷ”

ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಒಂದು ಕೆಟ್ಟ ಕೊಳಕು ವಿಷಪೂರಿತ ಮಿಶ್ರಣವನ್ನು ಆಹಾರದ ಮೂಲಕ ದೇಹಕ್ಕೆ ಸೇರಿಸಿ, ಸಂಪೂರ್ಣ ದೇಹದ ಆರೋಗ್ಯವನ್ನು ಅಂದರೇ ದೇಹದೊಳಗಿನ ಅಂಗಗಳ ಆರೋಗ್ಯಕ್ಕೆ ಕುತ್ತು ತರುವುದೇ “ಗರವಿಷ”. ನಿಧಾನ ವಿಷದಂತೆ (Slow poison) ಗರವಿಷ ಕೆಲಸ ಮಾಡುವುದು.

ಚರಕ ಸಂಹಿತೆಯ ಚಿಕಿತ್ಸಾ ಸ್ಥಾನದಲ್ಲಿ ವಿವರಿಸಿದಂತೆ…

ಕಾಲಾಂತರವಿಪಾಕಿತ್ವನ್ನ ತದಾಶು ಹರತ್ವಶುನ|| ಚ.ಚಿ ೨೩ /೧೪

ಗರವಿಷವು ಕಾಲಾಂತರ ವಿಪಾಕ (ಕಾಲ+ಅಂತರ) ಅಂದರೇ ತನ್ನ ಕಾರ್ಯವನ್ನು ಶುರು ಮಾಡುವುದು ನಿಧಾನ ಅಂದರೇ ಲಕ್ಷಣಗಳನ್ನು ತೋರ್ಪಡಿಸುವುದು ನಿಧಾನ. ವಿಷದ ದ್ರವ್ಯ ಸಂಪೂರ್ಣ ಜೀರ್ಣವಾಗಿ ತನ್ನ ಕಾರ್ಯ ಶುರುಮಾಡುವುದು ನಿಧಾನವಾದರೂ ಮುಂದೊಂದು ದಿನ ವ್ಯಕ್ತಿಯ ಪ್ರಾಣ ಹರಣ ಮಾಡುವುದು ಮಾತ್ರ ಖಂಡಿತ.

ಫೋಟೋ ಕೃಪೆ : youtube (ಸಾಂದರ್ಭಿಕ ಚಿತ್ರ)

ಪ್ರಯೋಗಿಸುವ ವಿಧಾನ :

ಹಿಂದಿನ ಕಾಲದಲ್ಲಿ ಹೆಂಗಸರು ತನ್ನ ಗಂಡನನ್ನು ಅಥವಾ ಪರಪುರಷನನ್ನು ವಶೀಕರಣಗೊಳಿಸಲು ತಮ್ಮ ದೇಹದ ಬೆವರು, ರಜಸ್ರಾವ ಮುಂತಾದ ಅಲ್ಪ ವಿಷಕಾರಿ ವರ್ಜೀತ ದ್ರವ್ಯಗಳನ್ನ ಆಹಾರದಲ್ಲಿ ಮಿಶ್ರಣಮಾಡುತ್ತಿದ್ದರು ಎನ್ನುವ ಉಲ್ಲೇಖವನ್ನು ಗ್ರಂಥಗಳಿಂದ ತಿಳಿಯಬಹುದು. ಹಾಗೇಯೇ ಶತ್ರುಗಳನ್ನು ಯುದ್ದ ಮಾಡದೇ ಕೊಲ್ಲಲು ಸಹ ಈ ವಿಧಾನವನ್ನು ಬಳಸುತ್ತಿದ್ದರಂತೆ.

ಇದೆ ಮುಂದೆ ಪ್ರಚಲಿತವಾಗಿ ಆಹಾರದ ಜೊತೆ ಬಳಸುವುದು ರೂಢಿಯಾಗಿದೆ. ಒಬ್ಬ ವ್ಯಕ್ತಿಗೆ ಗೊತ್ತಾಗದ ಹಾಗೆ ವಿಷವನ್ನು ಆತನಿಗೆ ರವಾನಿಸುವ ಮಾರ್ಗ ಆಹಾರದ ಜೊತೆ ಎಂಬುದನ್ನು ಕಂಡುಕೊಂಡಿದ್ದಾರೆ. ಆದರೆ ಇಂತದ್ದೊಂದು ಕಾರ್ಯವು ಈಗಲೂ ಸಮಾಜದಲ್ಲಿ ಚಾಲ್ತಿಯಲ್ಲಿರುವುದು ದುರಂತ ಮತ್ತು ಮತ್ಸರದ ಧ್ಯೂತಕ. ಅನಿಷ್ಠ ಪದ್ಧತಿಯಾಗಿ ಹಲವು ಮನೆತನಗಳಲ್ಲಿ ಜಾರಿಯಲ್ಲಿರುವುದು ದುರಂತವೇ ಸರಿ.

ಗರವಿಷದ_ಲಕ್ಷಣಗಳು :
ಈ ಗರವಿಷ ಸೇವನೆಯ ಪ್ರಕರಣವು ಬೆಳಕಿಗೆ ಬರುವುದು ನಿಶ್ಚಿತವಾದರೂ ಸ್ವಲ್ಪ ಸಮಯ ಹಿಡಿಯುವುದು ಖಚಿತ.

  • ಪಾಂಡುತ್ವ (ರಕ್ತಹೀನತೆ)
  • ದುರ್ಬಲತೆ
  • ಅಲ್ಪಾಗ್ನಿ (ಅಜೀರ್ಣ ಸಮಸ್ಯೆ)
  • ಗ್ರಹಣಿದೋಷ (ಹೊಟ್ಟೆಯ ಸಮಸ್ಯೆಗಳು)
  • ಜ್ವರ.

ಇನ್ನೂ ಹಲವಾರು ಲಕ್ಷಣಗಳು ಈ ಪಟ್ಟಿಯಲ್ಲಿ ಸೇರಿವೆ. ಮೇಲ್ನೋಟಕ್ಕೆ ಇದು ಒಂದು ಕಾಯಿಲೆ ಎಂದೇನಿಸಿದರೂ ಕೂಡ ನಮ್ಮ ದೇಹದಲ್ಲಿರುವ ಸಪ್ತ ಧಾತುಗಳಲ್ಲಿ ಈ ವಿಷದ ಕುತಂತ್ರ ಕಾರ್ಯ ನಿಧಾನವಾಗಿ ನಡೆಯುತ್ತಾ ಮುನ್ನುಗ್ಗುತ್ತಿರುತ್ತದೆ.

ಫೋಟೋ ಕೃಪೆ : insider

ಉದಾಹರಣೆಗೆ ಈ ವಿಷ ಮೊದಲು ಕದಡುವುದು ರಸಧಾತುವನ್ನು ಆಗಲೇ ಮಂದಾಗ್ನಿ, ಜ್ವರ ಲಕ್ಷಣಗಳು ನಿಧಾನವಾಗಿ ಪದೆ ಪದೆ ಕಾಣಿಸಿಕೊಳ್ಳುವುದು. ನಂತರ ರಕ್ತ ಧಾತುವಿನಲ್ಲಿ ಕಾರ್ಯ ಆರಂಭಿಸಿದಾಗ ಪಾಂಡುತ್ವ ಕಾಣಿಸಿಕೊಳ್ಳುತ್ತೆ. ಹೀಗೆಯೇ ..ಮಾಂಸಧಾತು….ಮೇಧ..ಅಸ್ತಿ..ಮಜ್ಜಾ..ಶುಕ್ರಧಾತು ಮುಂತಾದ ಸಪ್ತಧಾತುಗಳನ್ನು ಬಲಹೀನ, ರೋಗಕಾರಕ ಮಾಡುತ್ತಿರತ್ತೆ.

ಪದೆ ಪದೆ ಬೀಳುವ ಕನಸಿನಲ್ಲಿ ಬೆಕ್ಕು, ಮಂಗ, ನರಿ ಹೀಗೆ ಹಲವು ಪ್ರಾಣಿಗಳು ಕಾಣುವುದು. ಒಣಗಿದ ನದಿ ಮತ್ತು ಒಣಗಿ ಬೋಳಾದ ಮರಗಳು ಕಾಣಿಸುವುದು, ತನ್ನನ್ನೆ ತಾನು ಕಿವಿ ಮತ್ತು ಮೂಗು ಇಲ್ಲದಂತೆ ನೋಡಿಕೊಳ್ಳುವುದು. ದೈಹಿಕ ಅನಾರೋಗ್ಯದ ಜೊತೆ ಈ ತರಹದ ಕನಸುಗಳು ಎಡೆಬಿಡದೆ ಕಾಡುತ್ತಿದ್ದರೆ “ಗರವಿಷ” ದೇಹವನ್ನು ಇಂಚಿಂಚು ತಿನ್ನುತ್ತಿರುವುದು ಖಚಿತ ಎಂಬುದರಲ್ಲಿ ಸಂದೇಹವಿಲ್ಲ.
ಹಾಗಾದರೆ ದೈಹಿಕವಾಗಿ ಅಷ್ಟೇ ಅಲ್ಲದೆ ಮಾನಸಿಕ ಸ್ಥರದಲ್ಲಿಯೂ ಸಹ “ಗರವಿಷ” ತನ್ನ ವಿಷಕಾರಿ ಕಬಂಧ ಬಾಹು ಚಾಚಿರೋದು ಭಾಸವಾಗುತ್ತೆ.

ಗರವಿಷ ತನ್ನ ಕೆಲಸ ಶುರುಮಾಡುವುದೇ ೧೫ ದಿನದಿಂದ ೩೦ ದಿನಗಳ ಅವಧಿಯ ನಂತರವೇ. ಆದರೆ ಯಾವುದೇ ಆಧುನಿಕ ಪರೀಕ್ಷೆಗಳಿಂದ “ಗರವಿಷ” ಪತ್ತೆ ಹಚ್ಚಲಾಗುವುದಿಲ್ಲ ಎಂಬುದು ನಗ್ನ ಸತ್ಯ.

ಗರವಿಷಕ್ಕೆ ಪರಿಹಾರ :
ಯಾವಾಗ? ಎಲ್ಲಿ? ಯಾರ ಜೊತೆ? ಏನು ಸೇವಿಸಿದ್ದರು? ಎಂಬುದನ್ನು ಮೊದಲು ಪತ್ತೆ ಹಚ್ಚುವ ಕೆಲಸ ಮಾಡಬೇಕು. ನಂತರ ವಮನ(ವಾಂತಿ) ಮಾಡಿಸುವ ಪ್ರಕ್ರಿಯೆ.

ದೇಹದಲ್ಲಿರುವ “ಗರವಿಷ” ಹೊರಬಂದ ಮೇಲೆಯೆ ಅದು ದೇಹದೊಳಗೆ ಮಾಡಿರುವ ಜಖಂ ಅಥವಾ ಅಸ್ತವ್ಯಸ್ತತೆ ಸರಿಪಡಿಸಬಹುದು. ಹಾಗಾಗಿ ವಮನ ಮಾಡುವ ಮೂಲಕ ದೇಹ ಶುದ್ಧಿ ಮಾಡುವುದು ಅನಿವಾರ್ಯ.
ನಂತರ ತಾಮ್ರಭಸ್ಮ ಮತ್ತು ಜೇನುತುಪ್ಪವನ್ನು ಸೇವಿಸಬೇಕು ಇದರಿಂದ ಹೃದಯ ಶೋಧನವಾಗುತ್ತದೆ.



ಹೇಮಪ್ರಾಶನ :
ಈ ಹೇಮಪ್ರಾಶನ ಅಥವಾ ಸ್ವರ್ಣಪ್ರಾಶನ ಮಕ್ಕಳಿಗೆ ಮಾತ್ರ ಎಂಬ ನಂಬಿಕೆ ಹಲವರಲ್ಲಿದೆ.
ಆದರೆ ತಾಮ್ರಪ್ರಾಶನದ ನಂತರ ಈ ಸ್ವರ್ಣಪ್ರಾಶನ ಅಂದರೇ ಸ್ವರ್ಣಭಸ್ಮವನ್ನು ಜೇನುತುಪ್ಪದ ಜೊತೆ ಸೇವಿಸಬೇಕು. ಆವಾಗ ಹೇಗೆ ಕಮಲದ ಎಲೆಯ ಮೇಲೆ ನೀರಿನ ಹನಿ ಅಂಟುವುದಲ್ಲವೋ ಹಾಗೇಯೆ ವಿಷವು ಕೂಡ ನಮ್ಮ ದೇಹದೊಳಗೆ ಯಾವ ಅಂಗ, ಧಾತುವಿನ ಜೊತೆ ಬೆರೆಯುವುದಿಲ್ಲವಂತೆ. ಇಷ್ಟೇ ಅಲ್ಲದೆ ಹಲವು ಗ್ರಂಥಗಳಲ್ಲಿ ಕೆಲವು ಔಷಧಿಗಳ ಪ್ರಯೋಗಗಳ ಉಲ್ಲೇಖವಿದೆ.
ನಾಗದಂತ್ಯಾದಿ ಘೃತ, ಅಮೃತ ಘೃತ ಇತ್ಯಾದಿ ಔಷಧಗಳುಂಟು.

ಸಂಪೂರ್ಣ ಪರೀಕ್ಷೆ, ಪರಿಹಾರಕ್ಕಾಗಿ ಹತ್ತಿರದ ಆಯುರ್ವೇದ ಆಸ್ಪತ್ರೆ ಅಥವಾ ನುರಿತ ಆಯುರ್ವೇದ ವೈದರನ್ನು ಭೇಟಿಯಾಗಿ. ಗರವಿಷ ನಮ್ಮನ್ನು ಕೊರೆಯುವ ಮುನ್ನ ಜಾಗ್ರತೆ ವಹಿಸುವುದು ಅನಿವಾರ್ಯ. ಕಾಲ ಮಿಂಚಿ ಹೋಗುವ ಮುನ್ನ ಎಚ್ಚರವಾಗುವುದು ಜಾಣತನ.


  • ಡಾ. ಶಿಲ್ಪಾ ಎಲ್. ಎಸ್. M.D(Ayu)
    ಸಹಾಯಕ ಪ್ರಾಧ್ಯಾಪಕರು.
    ಟಿ.ಎಮ್.ಎ.ಇ ಆಯುರ್ವೇದ ಮೆಡಿಕಲ್ ಕಾಲೇಜು.
    ಭದ್ರಾವತಿ.

1 1 vote
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW