ಭಾರತದ ಶ್ರೇಷ್ಠ ಗಣಿತಜ್ಞ ಶ್ರೀನಿವಾಸ್ ರಾಮಾನುಜನ್




“ಯಾವುದೇ ಸಂಖ್ಯೆಯನ್ನು ಅದೇ ಸಂಖ್ಯೆಯಿಂದ ಭಾಗಿಸಿದಾಗ ಒಂದು ಬರುತ್ತದೆ ” ಎಂದ ಮೇಷ್ಟ್ರಿಗೆ ” ಸೊನ್ನೆಯನ್ನು ಸೊನ್ನೆಯಿಂದ ಭಾಗಿಸಿದಾಗ ಏನು ಬರತ್ತದೆ ?” ಎಂದು ಕೇಳಿದ ಆ ಹುಡುಗ ಭಾರತದ ಶ್ರೇಷ್ಠ ಗಣಿತಜ್ಞ ಶ್ರೀನಿವಾಸ್ ರಾಮಾನುಜನ್.

ಶ್ರೀನಿವಾಸ ಅಯ್ಯಂಗಾರ್, ರಾಮಾನುಜನ್ ಅಯ್ಯಂಗಾರ್ ಅಥವಾ ಜನಪ್ರಿಯವಾಗಿ ಶ್ರೀನಿವಾಸ ರಾಮಾನುಜನ್ ಎಂದು ಹೆಸರುವಾಸಿಯಾದ ಇವರು ೧೮೮೭ರ ಡಿಸೆಂಬರ್ ೨೨ರಂದು ತಮಿಳುನಾಡಿನ ಈರೋಡಿನಲ್ಲಿದ್ದ ತಮ್ಮ ತಾತನ ಮನೆಯಲ್ಲಿ ಜನ್ಮ ತಳೆದರು. ರಾಮಾನುಜನ್ನರ ತಂದೆ ಬಟ್ಟೆ ಅಂಗಡಿಯಲ್ಲಿ ಒಬ್ಬ ಗುಮಾಸ್ತರಾಗಿದ್ದರು. ತಾಯಿ ಅಪಾರ ದೈವ ಶ್ರದ್ಧಾಭಕ್ತಿಗಳಿದ್ದ ಮಹಿಳೆ.

ಫೋಟೋ ಕೃಪೆ : colorlibrary.blogspot.in  (ಪಾಲಕರೊಂದಿಗೆ ರಾಮಾನುಜನ್ ಅಯ್ಯಂಗಾರ್ )

ಬಾಲ್ಯದಲ್ಲಿ ರಾಮಾನುಜನ್ನರು ಶಾಂತ ಮತ್ತು ಆಲೋಚನಾಸಕ್ತ ಸ್ವಭಾವದವರಾಗಿದ್ದರು. ತನ್ನ ತಾಯಿಯಿಂದ ದೇವರನಾಮ ಮತ್ತು ಭಕ್ತಿಗೀತೆಗಳನ್ನೂ ಕಲಿತ ಅವರು ಅಧ್ಯಾತ್ಮಿಕ ವಿಚಾರಗಳಲ್ಲಿ ಆಸಕ್ತಿ ತಳೆದರು. ಅವರು ಬೆಳೆದಂತೆ ಧಾರ್ಮಿಕ ಉದ್ಗ್ರಂಥಗಳನ್ನು ಮತ್ತು ಭಕ್ತಿಸಾಹಿತ್ಯವನ್ನು ಓದಿ ಅದರಲ್ಲಿ ಹೆಚ್ಚಿನದನ್ನು ಕಂಠಪಾಠ ಮಾಡಿದ್ದರು. ಅವರು ವೇದ, ಉಪನಿಷತ್ತು, ತಿರುಕ್ಕುರುಳ್ ಮುಂತಾದ ಶಾಸ್ತ್ರಗ್ರಂಥಗಳಿಂದ ಋಕ್ಕು ಮತ್ತು ಶ್ಲೋಕಗಳನ್ನೂ, ಹಾಗೆಯೇ ಸಂತರ ಮತ್ತು ಜ್ಞಾನಿಗಳ ನುಡಿಗಳನ್ನು ತಮಿಳು ಕೃತಿಗಳಿಂದ ನಿರರ್ಗಳವಾಗಿ ಹೇಳಬಲ್ಲವರಾಗಿದ್ದರು. ಐದನೆಯ ವಯಸ್ಸಿಗೆ ಶಾಲೆಗೆ ಸೇರಿದ ಅವರಿಗೆ ಪ್ರತಿಯೊಂದರಲ್ಲೂ ಕಲಿಕೆಯ ಕುತೂಹಲವಿತ್ತು. ೧೯೦೩ರಲ್ಲಿ ಅವರು ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದರು

ಫೋಟೋ ಕೃಪೆ : Hello travel

ರಾಮಾನುಜನ್ ಅವರು ಎಫ್. ಎ ತರಗತಿಗಳಿಗೆ ಸೇರಿದಾಗ ಅವರಿಗೆ ಗಣಿತದ ಹೊರತಾಗಿ ಇನ್ನ್ಯಾವುದೇ ವಿಷಯಗಳ ಕುರಿತಾಗಿ ಕಿಂಚಿತ್ತೂ ಆಸಕ್ತಿ ಹುಟ್ಟಲಿಲ್ಲ. ಈ ನಿರಾಸಕ್ತಿ ಮತ್ತು ನಿರಂತರ ಅವರ ಜೊತೆಗೂಡಿದ್ದ ಅನಾರೋಗ್ಯಗಳು ಅವರ ಓದನ್ನು ಅಲ್ಲಿಗೇ ಮೊಟಕುಗೊಳಿಸಿಬಿಟ್ಟವು. ಇದೇ ನೆಪವಾಗಿ ಅವರು ಯಾವಾಗಲೂ ಗಣಿತದಲ್ಲೇ ಮುಳುಗಿಬಿಟ್ಟರು. ಇದು ಮನೆಯವರಿಗೆ ಇಷ್ಟವಾಗಲಿಲ್ಲ. ಜೀವನದ ದಾರಿ ಬದಲಾಗಲಿ ಎಂದು ವಿವಾಹ ಏರ್ಪಡಿಸಿದರು.

(ಪತ್ನಿ ಜಾನಕಿಯವರೊಂದಿಗೆ ರಾಮಾನುಜನ್ ಅಯ್ಯಂಗಾರ್ )

ಮದುವೆ ಒಂದು ಬದಲಾವಣೆಯನ್ನು ತಂದಿತು. ಇನ್ನು ಮುಂದೆ ತಾನು ಹೆತ್ತವರಿಗೆ ಹೊರೆಯಾಗಬಾರದೆಂದು ರಾಮಾನುಜನ್ನರು ನಿರ್ಧರಿಸಿದರು. ಇವರ ಮೇಧಾವಿತನದ ಕುರಿತಾದ ಅಭಿಮಾನವುಳ್ಳ ಹಿರಿಯರ ಶಿಫಾರಸ್ಸಿನಿಂದ ಮದ್ರಾಸಿನಲ್ಲಿ ಅಕೌಂಟೆಂಟ್ ಜನರಲ್ ಕಚೇರಿಯಲ್ಲಿ ಅವರಿಗೆ ಕೆಲಸ ದೊರೆಯಿತಾದರೂ ಅದು ಕೇವಲ ಎರಡು ತಿಂಗಳಮಟ್ಟಿಗೆ ಮಾತ್ರ ಇತ್ತು. ಪುನಃ ಹಸಿದ ಹೊಟ್ಟೆಯ ಬಡತನ, ಅನಾರೋಗ್ಯ ಅವರಿಗೆದುರಾಯಿತು. ಸ್ವಲ್ಪ ದಿನ ಮನೆಯ ಪಾಠಮಾಡಿದರು. ಈ ನಡುವೆ ತಮ್ಮ ಗಣಿತದ ಕುರಿತಾದ ಆಲೋಚನೆಗಳನ್ನು ದಾಖಲಿಸುವ ಕೆಲಸವನ್ನು ಮಾತ್ರ ನಿಲ್ಲಿಸಲಿಲ್ಲ.

೧೯೧೦ರಲ್ಲಿ ಅವರು ದಿವಾನ್ ಬಹದ್ದೂರರನ್ನು ಕಂಡಾಗ ಬಹದ್ದೂರರು ತಮಗೇನು ಬೇಕೆಂದು ಕೇಳಿದಾಗ “ಸಂಶೋಧನೆ ಮುದುವರಿಸಿಕೊಂಡು ಹೋಗುವಷ್ಟರಮಟ್ಟಿಗೆ ಬದುಕಿರಲು ಸಾಕಾಗುವಷ್ಟು ಅನ್ನ” ಎಂದರು ರಾಮಾನುಜನ್. ಬಹದ್ದೂರರು ತಾವೇ ಸ್ವತಃ ಇಪ್ಪತ್ತೈದು ರೂಪಾಯಿಗಳ ಮಾಸಿಕ ಧನಸಹಾಯ ಮಾಡಲಾರಂಭಿಸಿದರು. ಆದರೆ ರಾಮಾನುಜನ್ ಅವರಿಗೆ ಹೀಗೆ ಹಣ ಪಡೆಯುವ ಮನಸ್ಸಿರಲಿಲ್ಲ. ಮತ್ತೆ ಅವರ ಅಭಿಮಾನವುಳ್ಳ ಹಿರಿಯರ ಶಿಫಾರಸ್ಸಿನಿಂದ ಅವರು ಮದ್ರಾಸಿನ ಪೋರ್ಟ್ ಟ್ರಸ್ಟ್ ಕಚೇರಿಯಲ್ಲಿ ಗುಮಾಸ್ತರಾಗಿ ಕೆಲಸ ಮಾಡಲು ಆರಂಭಿಸಿದರು.



ಏತನ್ಮಧ್ಯೆ ಶ್ರೀನಿವಾಸ ರಾಮಾನುಜನ್ ಅವರ ಬೆಂಗಾವಲಾಗಿದ್ದ ಪ್ರೊ. ಪಿ. ವಿ. ಶೇಷು ಅಯ್ಯರ್ ಅವರಿಂದ ಕಳುಹಿಸಲ್ಪಟ್ಟ ಪ್ರಶ್ನೋತ್ತರಗಳ ರೂಪದಲ್ಲಿ ಇಂಡಿಯನ್ ಮ್ಯಾಥಮೆಟಿಕಲ್ ಸೊಸೈಟಿಯ ನಿಯತಕಾಲಿಕ ೧೯೧೧ರಲ್ಲಿ ಪ್ರಕಟವಾಯಿತು. ಈ ಸಂಪುಟದ ಒಂದು ಸಂಚಿಕೆಯಲ್ಲಿ ರಾಮಾನುಜನ್ನರ ‘ಬರ್ನೌಲಿ ಸಂಖ್ಯೆಗಳ ಕೆಲವು ಲಕ್ಷಣಗಳು” ಪ್ರಕಟಗೊಂಡಿತು. ೧೯೧೨ರಲ್ಲಿ ಇನ್ನೆರಡು ಪ್ರಬಂಧಗಳು ಬಂದವು. ಮದ್ರಾಸ್ ಪೋರ್ಟ್ ಟ್ರಸ್ಟಿನ ಅಧ್ಯಕ್ಷ ಸರ ಫ್ರಾನ್ಸಿಸ್ ಸ್ಪ್ರಿಂಗ್ ರಾಮಾನುಜನ್ ಅವರಲ್ಲಿ ಆಸಕ್ತಿ ತಳೆದು ಅವರ ಪ್ರಗತಿಯನ್ನು ವೀಕ್ಷಿಸುತ್ತಿದ್ದರು. ಒಂದು ದಿನ ಅವರ ಸಹಿಗಾಗಿ ಒಂದು ಕಡತ ಬಂತು. ಅದನ್ನು ಪರಾಂಬರಿಸುತ್ತಿದ್ದಾಗ ಎಲಿಪ್ಟಿಕ್ ಅನುಕಲನಾಂಕಗಳಿಗೆ ಸಂಬಂಧಿಸಿದ ಕೆಲವು ಫಲಿತಗಳನ್ನೊಳಗೊಂಡ ಬಿಳಿ ಹಾಳೆಗಳನ್ನು ಕಂಡರು. ಸ್ವಯಂ ಗಣಿತದಲ್ಲಿ ಆಸಕ್ತರಾಗಿದ್ದ ಅವರಿಗೆ ಅದು ರಾಮಾನುಜನ್ ಅವರ ಕೆಲಸವೆಂದು ತಿಳಿದು ಸಂತೋಷವಾಯಿತು.

ಫೋಟೋ ಕೃಪೆ : colorlibrary.blogspot.in  (ಮಧ್ಯ) ಟ್ರಿನಿಟಿ ಕಾಲೇಜು

ರಾಯಲ್ ಸೊಸೈಟಿಯ ಫೆಲೋ ಆಗಿ ಗೌರವ :

ಕೆಂಬ್ರಿಡ್ಜ್ನಲ್ಲಿ ಅಪ್ರತಿಮ ಪ್ರತಿಭಾವಂತರಾಗಿ ತಮ್ಮ ಸಂಶೋಧನೆಗಳನ್ನು ನಿರೂಪಿಸಿದ ರಾಮಾನುಜನ್ ಐದು ವರ್ಷಗಳ ನಂತರ ಭಾರತಕ್ಕೆ ಹಿಂದಿರುಗಿ ವಿದ್ವಾಂಸರಿಂದ ಅಭೂತಪೂರ್ವ ಮೆಚ್ಚುಗೆ ಮತ್ತು ಸ್ವಾಗತಗಳನ್ನು ಪಡೆದರು. ಆದರೆ ದುರದೃಷ್ಟವಶಾತ್ ಅವರ ಆರೋಗ್ಯ ಕ್ಷೀಣಿಸುತ್ತಿತ್ತು. ಉತ್ತಮ ವೈದ್ಯಕೀಯ ಸೌಲಭ್ಯ ಹಾಗೂ ಬಹು ನಾಜೂಕಾದ ಉಪಚಾರ ಮತ್ತು ಮೇಲ್ವಿಚಾರಣೆ ಇದ್ದರೂ ಅವರು ಏಪ್ರಿಲ್ ೨೬, ೧೯೨೦ರಂದು ೩೨ ವರ್ಷ, ೪ ತಿಂಗಳು, ೪ ದಿವಸಗಳ ತರುಣ ವಯಸ್ಸಿನಲ್ಲೇ ತೀರಿಕೊಂಡರು. ಭರತಖಂಡ ಹಾಗೂ ಜಗತ್ತು ಮತ್ತೆ ಅಂದಿನವರೆಗೆ ಕಂಡಿಲ್ಲದಂಥ ಮಹಾನ್ ಗಣಿತ ಪ್ರತಿಭೆಯನ್ನು ಕಳೆದುಕೊಂಡಿತು.

ಫೋಟೋ ಕೃಪೆ : opc.mfo

ಪ್ರೊ. ಹಾರ್ಡಿ ಹೇಳುತ್ತಾರೆ, “ರಾಮಾನುಜನ್ ಅವರಲ್ಲಿ ಪರಮಾದ್ಭುತವಾದುದೆಂದರೆ ಬೀಜಗಣಿತದ ಸೂತ್ರಗಳು, ಅನಂತ ಶ್ರೇಣಿಗಳ ಪರಿವರ್ತನೆ ಮುಂತಾದವುಗಳಲ್ಲಿದ್ದ ಅವರ ಅಂತರ್ದೃಷ್ಟಿ. ಈ ವಿಷಯಗಳಲ್ಲಿ ಅವರಿಗೆ ಸಮನಾದವರನ್ನು ಖಂಡಿತವಾಗಿಯೂ ನಾನು ಕಂಡಿಲ್ಲ. ಅವರನ್ನು ಅಯ್ಳರ್ ಅಥವಾ ಜುಕೊಬಿಯಂತಹ ಸಾರ್ವಕಾಲಿಕ ಶ್ರೇಷ್ಠರೊಂದಿಗೆ ಮಾತ್ರ ಹೋಲಿಸಲು ಸಾಧ್ಯ. ರಾಮಾನುಜನ್ ಅವರ ಸ್ಮರಣ ಶಕ್ತಿ, ಸಹನೆ, ಗಣಿಸುವ ಸಾಮರ್ಥ್ಯಗಳೊಂದಿಗೆ ಸಾರ್ವತ್ರೀಕರಣ ಶಕ್ತಿ, ಸ್ವರೂಪ ಜ್ಞಾನ, ಆಧಾರ ಭಾವನೆಗಳನ್ನು ಕ್ಷಿಪ್ರವಾಗಿ ಬದಲಾಯಿಸುವ ಚಾಕಚಕ್ಯತೆ ಇವು ಅನೇಕ ವೇಳೆ ದಂಗುಬಡಿಸುತ್ತಿದ್ದವು. ರಾಮಾನುಜನ್ ಅವರದೇ ಆದ ಈ ಕ್ಷೇತ್ರದಲ್ಲಿ ಆ ಕಾಲದಲ್ಲಿ ಅವರಿಗೆ ಸರಿಸಾಟಿಗಳಿಲ್ಲದಂತೆ ಮಾಡಿದವು”.


  • ಶಿವಕುಮಾರ್ ಬಾಣಾವರ, (ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಕೆಪಿಸಿಲ್ ) ಶಿವಮೊಗ್ಗ.

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW