ತಂಡ : ಅಮ್ಮ ಕಲಾವಿದೆರ್
ರಚನೆ : ಸೋಮನಾಥ ಶೆಟ್ಟಿ ಮಂಗಲ್ಪಾಡಿ
ನಿರ್ದೇಶನ : ರಂಗ್ ದ ರಾಜೆ, ಸುಂದರ ರೈ ಮಂದಾರ
ಸಹಬಾಳ್ವೆಯೇ ಕುಟುಂಬ ವ್ಯವಸ್ಥೆಯ ಮೂಲ ಮಂತ್ರ. ಬಾಲ್ಯದಲ್ಲಿ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುವ ಹಿರಿಯರನ್ನು ವೃದ್ಧಾಪ್ಯದಲ್ಲಿ ಕಡೆಗಣಿಸುವ ಇಂದಿನ ಜನಾಂಗಕ್ಕೆ ಕುಟುಂಬ ಮಹತ್ವವನ್ನು ತಿಳಿಸಿ ಕೊಡುವ ಒಂದು ಸುಂದರ ಕಥಾ ಹಂದರವಿರುವ ನಾಟಕ ಪರಕೆ ಪೂವಕ್ಕೆ.

ಒಂದೇ ಮನೆಯಲ್ಲಿ ಕಚ್ಚಾಡುವ ಅತ್ತೆ ಸೊಸೆಯನ್ನು ನೋಡಿರುವ ನಮಗೆ ಅತ್ತೆಯನ್ನು ಹೆತ್ತಮ್ಮನಂತೆ ಪ್ರೀತಿಸುವ ,ತನ್ನ ಪ್ರೀತಿಯ ಅತ್ತೆ ಗಾಗಿ ಹೆತ್ತ ಮಕ್ಕಳಿಗೆ ಎದುರು ನಿಲ್ಲುವ ಸೊಸೆ, ಈ ನಾಟಕದ ವೈಶಿಷ್ಟ.
ಮಾನವೀಯತೆ ಮರೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ನಾಟಕದುದ್ದಕ್ಕೂ ನಕ್ಕು ನಗಿಸುವ ಹಾಸ್ಯ ಪಾತ್ರಧಾರಿಗಳು ಒಂದು ಕಡೆ ಮಾನವೀಯತೆಯನ್ನು ಪ್ರದರ್ಶಿಸುವ ರೀತಿ ಅನನ್ಯ. ಪೂವಕ್ಕೆಯನ್ನು ಮೊಮ್ಮಕ್ಕಳು ಮನೆಯಿಂದ ಹೊರಹಾಕಿದಾಗ ನೆರೆ ಮನೆಯವರಾದ ಮನೋಹರ ದಂಪತಿಗಳು ಅವರಿಗೆ ಆಶ್ರಯ ನೀಡುವುದು, ಮೂಡಬಿದ್ರೆ ದೇವಸ್ಥಾನದಲ್ಲಿ ಹರಕೆ ಸಲ್ಲಿಸಿ ಹಿಂದಿರುಗುವಾಗ ಪೂವಕ್ಕೆ ಗೆ ಯಾವುದೇ ವಾಹನ ಸಿಗದಾದಾಗ ಬೊಮ್ಮಯ್ಯ ಬೊಂಬೆ ಬಳಗದ ಯಾದವ ತನ್ನ ವಾಹನದಲ್ಲಿ ಮನೆತನಕ ಆಕೆಯನ್ನು ಸುರಕ್ಷಿತವಾಗಿ ತಲುಪಿಸುವುದು, ಇವೆಲ್ಲವೂ ಹಾಸ್ಯದ ಹೊನಲಿನಲ್ಲಿ ಮೂಡಿಬರುವ ಸೂಕ್ಷ್ಮ ಮಿಡಿತಗಳು.


ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಗಸು ಅನ್ನುವಂತೆ ಹೊಸಚಿಗುರು ಗಳಿಗೆ ಮಾರ್ಗದರ್ಶಿಯಾಗಲು ಹಳೇ ಬೇರೊಂದು ಮನೆಯಲ್ಲಿ ಇರಬೇಕು. ಅವರ ಅಪಾರವಾದ ಅನುಭವದ ಸಂಪತ್ತು ಕಿರಿಯರಿಗೆ ಖರ್ಚಾಗದ ಬೊಕ್ಕಸದಂತೆ.
ನಿಷ್ಕಲ್ಮಶ ಹೃದಯದ ಪೂವಕ್ಕೆ ಎಲ್ಲರ ಒಳಿತನ್ನು ಬಯಸುವವರು. ಅದಕ್ಕಾಗಿ ಆಕೆ ಇಳಿಯುವ ದಾರಿ ದೇವರಿಗೆ ಹರಕೆಯನ್ನು ಹೇಳುವುದು, ಹೇಳಿದ ಪ್ರಕಾರ ಆ ಹರಕೆಯನ್ನು ತೀರಿಸುವುದು. ಒಟ್ಟಾರೆಯಾಗಿ ಮಾನವೀಯ ಮೌಲ್ಯಗಳ ಜೊತೆಜೊತೆಗೆ ಕೂಡುಕುಟುಂಬದ ಸುಂದರ ಚಿತ್ರಣ ನೀಡುವ” ಪರಕೆ ಪೂರ್ವಕ್ಕೆ “ನಾಟಕ ಉತ್ತಮ ಸಂದೇಶವನ್ನು ನೋಡುಗರಿಗೆ ನೀಡುತ್ತದೆ.
ಶಿವಾನಂದ ಶೆಟ್ಟಿ ಮಂಗಲ್ಪಾಡಿ ಸಾರಥ್ಯದ ಅಮ್ಮ ಕಲಾವಿದೆರ್ ತಂಡದ ನಾಟಕವಿದು. ಸೋಮನಾಥ ಶೆಟ್ಟಿ ಮಂಗಲ್ಪಾಡಿ ಯುವ ಬರಹಗಾರರ ಸಾಲಿಗೆ ಸೇರಿರುವ ಇನ್ನೊಂದು ಪ್ರತಿಭೆ . ನಟನೆಯನ್ನೇ ಜೀವಾಳವನ್ನಾಗಿಸಿಕೊಂಡ ಪೂವಕ್ಕೆಯ ಪಾತ್ರಧಾರಿ ಸುಂದರ ರೈ, ಮಂದಾರರ ನಿರ್ದೇಶನ ಈ ನಾಟಕಕ್ಕಿದೆ.
ಪೂವಕ್ಕೆ ದೀರ್ಘಾಯುಷಿ ಆಗಲೆಂದು ದೇವರಿಗೆ ನಮ್ಮ ಮನದಾಳದ ಹರಕೆ.
- ರತನ್ ರೈ ಕೆದಂಬಾಡಿ.