JRD ಯವರೇ ಖುದ್ದಾಗಿ ನಿಂತು ಏರೋಪ್ಲೇನುಗಳ ಅಂದಚೆಂದ, ಪೈಲಟ್ಟುಗಳು ಮತ್ತು ಗಗನಸಖಿಯರ ಧಿರಿಸುಗಳನ್ನು ಪರಿಶೀಲಿಸುತ್ತಿದ್ದರಂತೆ. ಅಷ್ಟು ಪ್ರೀತಿಯಿಂದ ಸಾಕಿದ ಏರ್ಲೈನನ್ನು 1953 ರಲ್ಲಿ ನೆಹರೂ ಸರ್ಕಾರ ರಾಷ್ಟ್ರೀಕರಣಗೊಳಿಸಿಬಿಟ್ಟಿತ್ತು.ಮುಂದೇನಾಯಿತು ಖ್ಯಾತ ಲೇಖಕ ವಿಂಗ್ ಕಮಾಂಡರ್ ಸುದರ್ಶನ್ ಅವರ ಲೇಖನಿಯಲ್ಲಿ…
“ನನ್ನ ಸ್ನೇಹಿತ ನೆಹರೂನೇ ನನ್ನ ಬೆನ್ನಿಗೆ ಚೂರಿ ಹಾಕಿದ… ”
ಹೀಗೆ ತಮ್ಮ ಅಳಲನ್ನು ತೋಡಿಕೊಂಡಿದ್ದು ಯಾರೋ ಸಣ್ಣ ಪುಟ್ಟ ವ್ಯಕ್ತಿಯಲ್ಲ, ಪರಂಪರಾಗತವಾಗಿ ಭಾರತದ ಕೈಗಾರಿಕಾ ಕ್ಷೇತ್ರದಲ್ಲಿ ಕ್ರಾಂತಿಯನ್ನು ತಂದ ಟಾಟಾ ವಂಶದ ಉದ್ಯಮಿ #ಜಹಂಗೀರ್_ರತನ್ಜಿ_ದಾದಾಭಾಯ್_ಟಾಟಾ, JRD ಎಂದು ಪರಿಚಿತರಾದ ಈ ಸಜ್ಜನ ವ್ಯಕ್ತಿಯು ನೋವಿನಿಂದ ಯಾಕೆ ಹೀಗೆ ಹೇಳಿದರು ಎಂದರೆ ಅವರೇ ಕಟ್ಟಿ ಬೆಳಸಿದ ಕನಸಿನ ಕೂಸು, ಟಾಟಾ ಏರ್ಲೈನ್ಸ್.

ಫೋಟೋ ಕೃಪೆ : indian times
ರಾತ್ರೋರಾತ್ರಿ ರಾಷ್ಟ್ರೀಕರಣದ ಸೋಗಿನಲ್ಲಿ ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಂಡು ಬಿಟ್ಟಿತು. 1932 ರಲ್ಲಿ ಕರಾಚಿಯಿಂದ ಅಹಮದಾಬಾದ್ ಮಾರ್ಗವಾಗಿ ಮುಂಬೈಗೆ ವಿಮಾನವನ್ನು ಸ್ವತಃ ಹಾರಿಸಿಕೊಂಡು ಬಂದು ತನ್ನ ವಿಮಾನಯಾನ ಸಂಸ್ಥೆಯನ್ನು ಉದ್ಘಾಟಿಸಿದ ಈ ವೈಮಾನಿಕ ಬ್ರಿಟಿಷರೇ ಹುಬ್ಬೇರಿಸಿಕೊಂಡು ನೋಡುವಂತಹ ಚಮತ್ಕಾರ ಮಾಡಿದ್ದರು. ಕೆಲವೇ ತಿಂಗಳುಗಳಲ್ಲಿ ಮುಂಬೈ, ಹೈದರಾಬಾದ್, ಬಳ್ಳಾರಿ, ಮದ್ರಾಸ್ ಮತ್ತು ಶ್ರೀಲಂಕಾದ ಕೊಲಂಬೋದವರೆಗೂ ತಮ್ಮ ಏರ್ಲೈನ್ಸ್ ವ್ಯಾಪ್ತಿಯನ್ನು ವಿಸ್ತರಿಸಿ ಮೊದಲನೇ ವರ್ಷವೇ ಅರವತ್ತು ಸಾವಿರ ರೂಪಾಯಿಗಳ ಲಾಭಗಳಿಸಿದ್ದರು.

ಅಂದಿನ ಮಟ್ಟಕ್ಕೆ ಅದು ದೊಡ್ಡ ಪ್ರಮಾಣದ ಮೊತ್ತ. ಐದು ವರ್ಷಗಳ ನಂತರ ಈ ಏರ್ಲೈನ್ಸ್ ಸುಮಾರು ಆರು ಲಕ್ಷಗಳಷ್ಟು ಲಾಭಗಳಿಸಿತು. 1937 ರಲ್ಲಿ ಬೊಂಬಾಯಿಯಿಂದ ಲಂಡನ್ನಿನವರೆಗೂ ವಿಸ್ತರಿಸಿ ದಾಖಲೆ ಸೃಷ್ಟಿಸಿದರು. ಪುಣೆಯಲ್ಲಿ ವಿಮಾನ ನಿರ್ಮಾಣ ಮಾಡುವ ಅವರ ಯೋಜನೆಗೆ ಬ್ರಿಟಿಷ್ ಸರ್ಕಾರದ ಸಮ್ಮತಿ ದೊರೆತಿತ್ತು ಆದರೆ ಅಷ್ಟೊತ್ತಿಗೆ ಎರಡನೇ ವಿಶ್ವಯುದ್ಧ ಪ್ರಾರಂಭವಾಗಿ ಆ ಯೋಜನೆಯನ್ನು ಕೈಬಿಡಲಾಯಿತು. ಮುಂದೆ ಯುದ್ಧ ಮುಗಿದು, ದೇಶಕ್ಕೆ ಸ್ವಾತಂತ್ರ್ಯ ಬಂದು ಪರಿಸ್ಥಿತಿ ಸುಧಾರಿಸಿದ ನಂತರ 8 ಜೂನ್ 1948 ರಂದು ಮಹರಾಜ ಲಾಂಛನದಲ್ಲಿ ಏರ್ ಇಂಡಿಯಾ ಇಂಟರ್ ನ್ಯಾಷನಲ್ ಹೆಸರಿನಲ್ಲಿ ಯೂರೋಪಿಗೆ ಪ್ರವೇಶ ಮಾಡಿತು. ಎರಡನೇ ವಿಶ್ವಯುದ್ಧ ಮುಗಿದ ನಂತರ ಬ್ರಿಟಿಷ್ ಮತ್ತು ಅಮೆರಿಕನ್ನರು ಅಳಿದುಳಿದ ವಿಮಾನಗಳನ್ನು ಅಗ್ಗದ ದರದಲ್ಲಿ ಮಾರಾಟ ಮಾಡಿ ಹೊರಟು ಹೋದರು. ಹಾಗಾಗಿ ದೇಶದಲ್ಲಿ ಹಲವಾರು ವೈಮಾನಿಕ ಸಂಸ್ಥೆಗಳು ಹುಟ್ಟಿಕೊಂಡವು. ಆದರೆ ಅವು ಯಾವುವೂ ಟಾಟಾರವರ ಸಮ ಬರಲಿಲ್ಲ.

ಫೋಟೋ ಕೃಪೆ : businesstoday
#JRD ಯವರೇ ಖುದ್ದಾಗಿ ನಿಂತು ಏರೋಪ್ಲೇನುಗಳ ಅಂದಚೆಂದವಾಗಿ ಕಾಣುವಂತೆ ಗಮನ ವಹಿಸುತ್ತಿದ್ದರಂತೆ. ಪೈಲಟ್ಟುಗಳು ಮತ್ತು ಗಗನಸಖಿಯರ ದಿರಿಸುಗಳನ್ನು ಪರಿಶೀಲಿಸುತ್ತಿದ್ದರಂತೆ. ಅಷ್ಟು ಪ್ರೀತಿಯಿಂದ ಸಾಕಿದ ಏರ್ಲೈನನ್ನು 1953 ರಲ್ಲಿ ನೆಹರೂ ಸರ್ಕಾರ ರಾಷ್ಟ್ರೀಕರಣಗೊಳಿಸಿಬಿಟ್ಟಿತ್ತು. ದೇಶದ ಹಿತಾಸಕ್ತಿಯನ್ನು ಅರಿತಿದ್ದ ಟಾಟಾರಿಗೆ ಬೇಜಾರಾಗಿದ್ದು ಏಕೆಂದರೆ ಇಂತಹ ಮಹತ್ತರ ನಿರ್ಧಾರದ ಬಗ್ಗೆ ನೆಹರೂವಾಗಲೀ ಇತರೆ ಮಂತ್ರಿಗಳಾಗಲೀ ತಮ್ಮೊಂದಿಗೆ ಚರ್ಚಿಸಲೇ ಇಲ್ಲ ಎಂಬುದು. ಹಾಗೆ ಕಸಿದುಕೊಂಡ ಸುಸಜ್ಜಿತವಾದ ಏರ್ಲೈನ್ಸ್ ಈಗ ರಾಜಕಾರಣಿಗಳ, ಬಾಬುಗಳ ದುರಾಸೆಗೆ ಬಲಿಯಾಗಿ, ಛಿದ್ರಗೊಂಡು ಎಪ್ಪತ್ತು ಸಾವಿರ ಕೋಟಿಗೂ ಹೆಚ್ಚು ಸಾಲವನ್ನು ಮೈ ಮೇಲೆ ಹೊತ್ತುಕೊಂಡು ಪುನಃ ಟಾಟಾರವರ ಕುಟುಂಬಕ್ಕೆ ಮರಳಿ ಬರುತ್ತಿದೆಯಂತೆ.ಇದಕ್ಕೆ ಸಂತೋಷಪಡಬೇಕೋ, ವಿಷಾದಿಸಬೇಕೋ ಗೊತ್ತಿಲ್ಲ.
- ವಿಂಗ್ ಕಮಾಂಡರ್ ಸುದರ್ಶನ್ (ಇಪ್ಪತ್ತೈದು ವರ್ಷಗಳ ವಾಯುಸೇನೆಯ ಸೇವೆಯಿಂದ ನಿವೃತ್ತಿ ಪಡೆದ ನಂತರ ಇಂಡಿಗೋ ಏರ್ಲೈನ್ ನಿನಲ್ಲಿ ಏರ್ ಬಸ್ ವಿಮಾನಗಳ ವೈಮಾನಿಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿಡುವಿನ ಸಮಯದಲ್ಲಿ ಪುಸ್ತಕಗಳನ್ನು ಓದುವ ಹಾಗು ಬರೆಯುವ ಹವ್ಯಾಸವನ್ನು ಇಟ್ಟುಕೊಂಡಿರುವ ಲೇಖಕರು, ‘ಹಸಿರು ಹಂಪೆ’ ಮತ್ತು ‘ಯೋಧ ನಮನ’ ಎನ್ನುವ ಎರಡು ಪುಸ್ತಕವನ್ನು ಬರೆದಿದ್ದಾರೆ).
