ಹೆಣ್ಣು ಮಕ್ಕಳೇಕೆ ಗುಪ್ತಗಾಮಿನಿಯರಾಗುತ್ತಾರೆ? ಎನ್ನುವುದಕ್ಕೆ ಉತ್ತರ – ಹೆಣ್ಣೊಬ್ಬಳು ಸತ್ಯವನ್ನು ಹೇಳಿದರೂ ನಂಬುವವರಿಲ್ಲದಿದ್ದಾಗ, ಹೆಣ್ಣೊಬ್ಬಳು ಮತ್ತೊಬ್ಬಳು ಹೆಣ್ಣೊಬ್ಬಳ ಜೊತೆ ನಿಲ್ಲಲು ಹೆದರುವಂಥ ಸ್ಥಿತಿ ಬಂದಾಗ ಗುಪ್ತಗಾಮಿನಿಯರಾಗದೆ ಮತ್ತೇನಾಗಲು ಸಾಧ್ಯ???… ಲೇಖಕಿ ಎಂ ಆರ್ ಕಮಲಾ ಅವರ ಲೇಖನ ಓದಿ, ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ…
ಕೆಲವು ತಿಂಗಳುಗಳ ಹಿಂದೆ ನಾನು ‘ಪ್ರಯಾಗ’ಕ್ಕೆ ಹೋಗಿದ್ದೆನಲ್ಲ! ಗಂಗೆ, ಯಮುನೆ ಮತ್ತು ಸರಸ್ವತಿಯರು ಸೇರುವ ‘ಸಂಗಮ’ದಲ್ಲಿ ಎಲ್ಲರೂ ಮೀಯುತ್ತಿದ್ದುದನ್ನು ನೋಡಿ ನನಗೂ ಒಮ್ಮೆ ಮುಳುಗಿ ಆ ಅನುಭವವನ್ನು ಪಡೆದುಕೊಳ್ಳಬೇಕೆನ್ನಿಸಿತು. ‘ಗಂಗೆ ಯಮುನೆ ಕೂಡಿ ಹರಿದು, ಸಂಗಮ ಜಲ ಬಿಳಿದು ಕರಿದು’ ಎಂಬ ಬೇಂದ್ರೆಯವರ ಕವಿತೆಯ ಸಾಲುಗಳು ನೆನಪಿಗೆ ಬಂತು. ‘ಗುಂಡು ಮುಳುಕನ ಹಕ್ಕಿಯಂತೆ ಕಂಡ ಕಂಡ ನೀರಿನಲ್ಲಿ ಮುಳುಗುವೆ, ಎಳ್ಳು ಕಾಳಿನಷ್ಟು ಭಕ್ತಿ ನನ್ನೊಳಗಿಲ್ಲ’ ಎಂಬ ಕನಕದಾಸರ ಕೀರ್ತನೆಯ ಸಾಲುಗಳು ಕೂಡ ನೆನಪಾಯಿತು.

ಫೋಟೋ ಕೃಪೆ : GOOGLE
ತೀರಾ ಪುಟ್ಟ ಹುಡುಗಿಯಾಗಿದ್ದಾಗ ಅಮ್ಮ ಒಮ್ಮೆ ನನ್ನನ್ನು ಕಾವೇರಿ ನದಿಯಲ್ಲಿ ಮುಳುಗಿಸಿದ್ದಳು. ಯೌವನದಲ್ಲೊಮ್ಮೆ ‘ಪ್ರಾಣವು ನೀನೇ, ದೇಹವು ನಾನೇ, ಈ ತಾಯಿ ಕಾವೇರಿ ಆಣೆ’ ಎಂಬ ರೊಮ್ಯಾಂಟಿಕ್ ಭಾವದಲ್ಲಿ, ಜೊತೆಯಲ್ಲಿ ಯಾರಿಲ್ಲದಿದ್ದರೂ, ಪ್ರವಾಸ ಹೋಗಿದ್ದಾಗ ಕಾವೇರಿ ಉಗಮ ಸ್ಥಾನದಲ್ಲಿ ಮುಳುಗಿದ್ದೆ. ಮತ್ತೆಂದೂ ಈ ನದಿಯಲ್ಲಿ ಸ್ನಾನ ಮಾಡಿ, ದೇವಸ್ಥಾನಕ್ಕೆ ಹೋಗುವ ರೂಢಿಯೇ ಇಲ್ಲದ ನಾನು ಪ್ರಯಾಗದ ಸಂಗಮದಲ್ಲಿ ಮುಳುಗಿದ್ದೇಕೆ ಎಂಬ ಪ್ರಶ್ನೆಗೆ ಉತ್ತರ ಹುಡುಕಿದೆ. ಬಹುಶಃ ನನ್ನೊಳಗಿನ ಗುಪ್ತಗಾಮಿನಿ ಸರಸ್ವತಿಯನ್ನು ಒಮ್ಮೆ ಮುಟ್ಟಿ ನೋಡಿಬಿಡೋಣ ಎನ್ನಿಸಿದ್ದು ನಿಜ. ಈ ಗುಪ್ತಗಾಮಿನಿಯರು ಕಾಡಿದಂತೆ ಕಣ್ಣಿಗೆ ಕಾಣುವ ನದಿಗಳು ಕಾಡುವುದಿಲ್ಲವೇನೋ? ಚಂದ್ರಶೇಖರ ಪಾಟೀಲರ ‘ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು, ಜೀವ ಹಿಂಡಿ, ಹಿಪ್ಪೆ ಮಾಡಿ ಒಳಗೊಳಗೇ ಹರಿಯುವ ಶಾಲ್ಮಲೆ ಎನ್ನುವ ಗುಪ್ತಗಾಮಿನಿ, ತಪ್ತ ಮೋಹಿನಿ’ ನಿರಂತರವಾಗಿ ಕಾಡಿದ ಹಾಗೆ!
ಈ ಗುಪ್ತಗಾಮಿನಿಯರ ಸಂಕಟವಾದರೂ ಏನು ಎಂದು ಹಲವಷ್ಟು ಬಾರಿ ಯೋಚಿಸಿದ್ದೇನೆ. ಊರಿಲ್ಲ, ಹೆಸರು ಕೂಗಿದರೂ ಕೇಳುವುದಿಲ್ಲ, ಭೋರ್ಗರೆದು ಬರಸೆಳೆವ ಸಮುದ್ರರಾಜನ ಮೊರೆತವಿಲ್ಲ. ಕಟ್ಟಿ ಹಿಡಿದು, ಗುಟ್ಟಾಗಿ ಪ್ರೀತಿಸುವ ದಂಡೆಗಳಿಲ್ಲ. ಉಕ್ಕಿ ಹರಿವ ಉನ್ಮಾದಕ್ಕೆ ಅಣೆಕಟ್ಟಿಲ್ಲ. ಕೆಟ್ಟ ಕೈಗಳಿಗೆ ಸಿಕ್ಕಿ ಬೀಳುವ ಆತಂಕವೂ ಇಲ್ಲ. ಇವಳೆದೆಯನ್ನು ಮಕ್ಕಳು ತಬ್ಬುವುದಿಲ್ಲ, ನೀರಿನಂತೆ ನಗೆ ಚಿಮ್ಮುವುದಿಲ್ಲ, ಬೆಸ್ತರ ಹಾಡು ನಾಲಗೆಯಲ್ಲಿ ದೋಣಿಹಾಡು ಕೇಳುವುದಿಲ್ಲ. ಸಾಹಸಿಗರು ಮೈ ಜುಮ್ಮೆನಿಸುವುದಿಲ್ಲ. ಅರಿವೆ ಒಗೆಯುತ್ತ ಊರ ಸುದ್ದಿಯನ್ನು ಯಾರೆಂದರೆ ಯಾರೂ ಇವಳಿಗೆ ಹೇಳುವುದಿಲ್ಲ. ಅಶ್ರು ತರ್ಪಣವಿಲ್ಲ, ಮೋಕ್ಷಕ್ಕೆ ಸೋಪಾನ ಅಲ್ಲವೇ ಅಲ್ಲ. ಇಲ್ಲಿ ಹೊಲಸಿಲ್ಲ, ಕೊಳೆತು ನಾರುವ ಹೆಣವಿಲ್ಲ. ಮನೆ ಮಠಗಳ ಉರುಳಿಸಿ ಮಸಣವಾಗಿಸುವ ಪ್ರಳಯವಿಲಾಸಿನಿಯ ದೌರ್ಭಾಗ್ಯವಿಲ್ಲ. ಮರಮರಗಳ ಮರ್ಮರಕ್ಕೆ ಕಿವಿಯಾಗಿ ನಲ್ಲನಿಗೆ ಬೆಲ್ಲವಾಗುವ ಸೌಭಾಗ್ಯವೂ ಇಲ್ಲ. ಹಾಗಾದರೆ ಇವಳೇನು? ಸಾವಾದ ಬದುಕೇ? ಬದುಕಾದ ಸಾವೇ? ಸರಸ್ವತಿ ನನ್ನ ಅಂತರಂಗವನ್ನು ಕಲಕಿದ ಹಾಗೆ ಗಂಗೆ, ಯಮುನೆಯರು ಕಲಕಲಿಲ್ಲ. ಮನಸ್ಸು ಇದೇ ಯೋಚನೆಯಲ್ಲಿ ‘ಗಯಾ’ಗೆ ಹೋದಾಗ ಅಲ್ಲೊಂದು ಅಸ್ಪಷ್ಟ ಉತ್ತರ ನನಗೆ ಸಿಕ್ಕಿತು.

ಫೋಟೋ ಕೃಪೆ : twitter
ನಮ್ಮ ಟೂರ್ ಮ್ಯಾನೇಜರ್ ಮೋಹನ್ ಪ್ರಭು ಅವರು ಗಯಾದಲ್ಲಿರುವ ಫಲ್ಗುಣಿ ನದಿ ಬತ್ತಿರುವುದಕ್ಕೆ ಒಂದು ಕಥೆಯನ್ನು ಹೇಳಿದರು. ಅದು ನನ್ನ ಮನಸ್ಸಿನಲ್ಲಿ ವಿಚಿತ್ರ ನೋವು, ಸಂಕಟವನ್ನು ತುಂಬಿತು. ದಶರಥ ಸತ್ತಿರುವ ವಿಷಯವನ್ನು ವನವಾಸದಲ್ಲಿದ್ದ ರಾಮ ಲಕ್ಷ್ಮಣರು ತಿಳಿದು, ಪಿಂಡ ತರ್ಪಣ ನೀಡಲು ಫಲ್ಗುಣಿ ಹೊಳೆಯ ದಂಡೆಯಲ್ಲಿ ತಯಾರಿ ನಡೆಸಿ ಮೀಯಲೆಂದು ಸೀತೆಯನ್ನು ಅಲ್ಲಿಯೇ ಬಿಟ್ಟು ಹೋಗುತ್ತಾರೆ. ನದಿಯಿಂದ ದಶರಥನ ಕೈ ಹೊರಗೆ ಬಂದು ತಾನು ಹಸಿದಿರುವುದಾಗಿ, ಪಿಂಡ ತರ್ಪಣವನ್ನು ನೀಡಬೇಕೆಂದು ಸೀತೆಯನ್ನು ಬೇಡುತ್ತದೆ. ರಾಮ ಲಕ್ಷ್ಮಣರು ಮೀಯಲು ಹೋಗಿದ್ದಾರೆಂಬ ವಿಷಯವನ್ನು ಸೀತೆ ತಿಳಿಸಿದರೂ ದಶರಥನಿಗೆ ಕಾಯಲು ಅಸಾಧ್ಯವಾದಾಗ ಸೀತೆಯೇ ತನ್ನ ಕೈಯಾರೆ ಪಿಂಡವನ್ನು ನೀಡುತ್ತಾಳೆ. ಸ್ನಾನ ಮಾಡಿ ಬಂದ ರಾಮ ಲಕ್ಷ್ಮಣರು ಸೀತೆಯ ಮಾತನ್ನು ನಂಬದೆ ಒಂದು ಹಸು, ತುಳಸಿ, ವಟವೃಕ್ಷ, ಫಲ್ಗುಣಿ ನದಿ, ಬ್ರಾಹ್ಮಣನನ್ನು ಸಾಕ್ಷಿ ಕೇಳುತ್ತಾರೆ! ವಟವೃಕ್ಷವೊಂದನ್ನು ಬಿಟ್ಟು ಉಳಿದವರು ಸೀತೆಯ ಸತ್ಯದ ಜೊತೆ ನಿಲ್ಲಲಿಲ್ಲ. ಸೀತೆ ನೊಂದು ಆ ಜಾಗದಲ್ಲಿ ತುಳಸಿಗಿಡವೇ ಇಲ್ಲದಂತಾಗಲಿ, ಶ್ರಾದ್ಧ ಕಾರ್ಯವನ್ನು ಮಾಡುವಾಗ ಬ್ರಾಹ್ಮಣರು ತುಳಸಿಗಾಗಿ ಪರದಾಡಲಿ, ಅಲ್ಲಿರುವ ಹಸುಗಳು ಅಳಿದುಳಿದದ್ದನ್ನು ತಿನ್ನಲಿ, ಫಲ್ಗುಣಿ ನದಿ ಬತ್ತಿ ಹೋಗಲಿ, ವಟವೃಕ್ಷಕ್ಕೆ ಮಾತ್ರ ಸದಾ ಕಾಲ ಪೂಜೆ ಸಲ್ಲಲಿ’ ಎಂದು ಶಾಪ ಮತ್ತು ವರವನ್ನು ಕೊಡುತ್ತಾಳೆ.
ಹೆಣ್ಣೊಬ್ಬಳು ಸತ್ಯವನ್ನು ಹೇಳಿದರೂ ನಂಬುವವರಿಲ್ಲದಿದ್ದಾಗ ಗುಪ್ತಗಾಮಿನಿಯರಾಗದೆ ಮತ್ತೇನಾಗಲು ಸಾಧ್ಯ ಅನ್ನಿಸಿಬಿಟ್ಟಿತು. ಬತ್ತಿಹೋದ ಫಲ್ಗುಣಿಯನ್ನು ನೋಡುವಾಗ ಇವಳೂ ಹೇಳಲಾಗದ ನೋವಿನಲ್ಲಿ ಒಳಗೊಳಗೇ ಹರಿಯುತ್ತಿರಬಹುದು ಎಂದುಕೊಂಡೆ. ಹೆಣ್ಣೊಬ್ಬಳು ಮತ್ತೊಬ್ಬಳು ಹೆಣ್ಣೊಬ್ಬಳ ಜೊತೆ ನಿಲ್ಲಲು ಹೆದರುವಂಥ ಸ್ಥಿತಿ ಬಂದಿತಲ್ಲ ಎಂದು ಕಸಿವಿಸಿಯಾಯಿತು. ಅದೇಕೋ ಸತ್ಯವನ್ನು ಹೇಳಲಾಗದ ಫಲ್ಗುಣಿ ಕೂಡ ನನ್ನನ್ನು ಇನ್ನಿಲ್ಲದ ಹಾಗೆ ಕಾಡಿದಳು.

ಫೋಟೋ ಕೃಪೆ : islamic-relief.org
ತೀರಾ ಇತ್ತೀಚೆಗೆ ತಮ್ಮ ಮೇಲೆ ನಡೆದ ದೌರ್ಜನ್ಯಗಳ ಬಗ್ಗೆ ಹೇಳುತ್ತೇವೆ ಎಂದು ಹೊರಟ ಹೆಣ್ಣುಮಕ್ಕಳ ಪಾಡೇನಾಯಿತು ಎಂದು ನೀವೆಲ್ಲ ಬಲ್ಲಿರಿ. ಅದರ ಸತ್ಯಾಸತ್ಯತೆಗಳು ಪರೀಕ್ಷೆಗೆ ಒಳಪಡಬೇಕಾಗಿದ್ದರೂ, ಹೆಣ್ಣೊಬ್ಬಳು ಮಾತನಾಡುತ್ತಿದ್ದಾಳೆ ಎನ್ನುವುದೇ ಮುಖ್ಯವಾಗಿತ್ತು. ಆದರೆ ಅನೇಕ ಹೆಣ್ಣುಮಕ್ಕಳೇ ಹೆಣ್ಣುಮಕ್ಕಳ ಪರವಾಗಿ ನಿಲ್ಲದೆ ಗಂಡಿನ ಮಾತನ್ನು ನುಡಿಯುತ್ತಿದ್ದರು. ಅದು ಅತ್ಯಂತ ಆಘಾತಕಾರಿಯಾಗಿತ್ತು. ತುಂಬಿದ ಸಭೆಯಲ್ಲಿ ‘ಸ್ತ್ರೀ ಮತವನ್ನು ಉತ್ತರಿಸಲಾರಿರಾ?’ ಎಂದು ದ್ರೌಪದಿ ಪ್ರಶ್ನೆ ಕೇಳಿದಾಗ ಅಧಿಕಾರಕ್ಕೆ ತಲೆಬಾಗಿದ್ದ ದೊಡ್ಡವರು ತಲೆತಗ್ಗಿಸಿ ಕೂತಂಥ ಮೌನ ಕೂಡ ಅಲ್ಲಿರಲಿಲ್ಲ. ಸತ್ಯ ಏನು ಎಂದು ತಿಳಿಯುವ ಮುನ್ನವೇ ಪುರುಷರ ಪರ ಮಾತಾಡಲು ನಿಂತ ಹೆಣ್ಣುಗಳ ದಂಡನ್ನು ನೋಡಿ ನಿಬ್ಬೆರಗಾಗಿ ಹೋದೆ.
ಅಧಿಕಾರ, ಅಂತಸ್ತು, ಹಣ ಎಲ್ಲವೂ ಹೇಗೆ ನುಡಿವ ಸತ್ಯವನ್ನು ಮಟ್ಟ ಹಾಕಿಬಿಡುತ್ತದೆ ಎಂದು ತಳಮಳಿಸಿದೆ. ಮತ್ತೆ ಗಯಾದ ಕತೆಗೆ ಬರುವುದಾದರೆ ಸೀತೆಯೇನೋ ಸಿಟ್ಟಿನಿಂದ ಶಾಪ ಕೊಟ್ಟಳು. ಸತ್ಯದ ಪರ ನಿಂತ ವಟವೃಕ್ಷವನ್ನು ಮೆಚ್ಚಿಕೊಂಡಳು. ತಾನು ಸತ್ಯವನ್ನೇ ಹೇಳಿದ್ದೇನೆ ಎಂದು ಸಾಧಿಸಿ ತೋರಿದಳು. ಅವಳಿಗೊಂದು ಅಧಿಕಾರವಿತ್ತು, ರಾಮನ ಪತ್ನಿಯಾಗಿದ್ದಳು. ಆದರೆ ತನ್ನಂತೆ ನೋವುಂಡ ಮತ್ತೊಬ್ಬ ಹೆಣ್ಣಿನ ಪರ ಮಾತನಾಡಲು ಹೆದರಿ ಮೌನ ತಳೆದ ಹೆಣ್ಣುಗಳಾದ ತುಳಸಿ, ಹಸು, ಫಲ್ಗುಣಿಯ ಸ್ಥಿತಿಯೇನಾಗಿರಬಹುದು ಎಂದು ಒಂದು ಕ್ಷಣ ಆಲೋಚಿಸಿದಳೆ? ಬಹುಶಃ ಹಾಗೆ ಯೋಚಿಸಿದ್ದರೆ ಈ ಗುಪ್ತಗಾಮಿನಿಯರ ದನಿ ಅವಳಿಗೆ ಕೇಳಿಸುತ್ತಿತ್ತು. ದನಿಯಿರದ ಫಲ್ಗುಣಿ, ತುಳಸಿ, ಹಸು ಈ ಎಲ್ಲ ಹೆಣ್ಣುಗಳನ್ನು ಅವಳು ಮತ್ತೊಂದು ಸ್ತರದಲ್ಲಿಯೇ ಅರ್ಥಮಾಡಿಕೊಳ್ಳುತ್ತಿದ್ದಳು ಎನ್ನಿಸುತ್ತದೆ. ಇನ್ನೆಷ್ಟು ದಿನ ಹೆಣ್ಣುಮಕ್ಕಳು ಗುಪ್ತಗಾಮಿನಿಯರಾಗಬೇಕು ಎಂದು ಸದ್ಯ ಯೋಚಿಸುತ್ತಿದ್ದೇನೆ!
(ಕಸೂತಿಯಾದ ನೆನಪು ಪುಸ್ತಕದಿಂದ, ಎರಡು ವರ್ಷಗಳ ಹಿಂದೆ ಇದೇ ದಿನ ಫಲ್ಗುಣಿ ನದಿಯ ದಡದಲ್ಲಿ ನಿಂತಿದ್ದೆ..ಅಲ್ಲಿಂದ ಬಂದ ಮೇಲೆ ಬರೆದಿದ್ದು)
- ಎಂ ಆರ್ ಕಮಲಾ (ನಿವೃತ್ತ ಪ್ರಾಶುಪಾಲರು, ಬರಹಗಾರರು)
