ಅಯ್ಯಾ ಮನುಜ, ಅನ್ಯಾಯ ಮಾಡಿದೆ ನೀನು ನನಗೆ



ಮನುಷ್ಯರನ್ನೆಲ್ಲಾ ಸಮನಾಗಿ ಸೃಷ್ಟಿಸಿದ ನನಗೇ ಮೋಸಮಾಡಿ ಬೇರೆ ಬೇರೆ ಧರ್ಮ, ಜಾತಿ ಸೃಷ್ಟಿಸಿ ಮನಸ್ಸುಗಳನ್ನೇ ಹೊಡೆದೆ. ಅಯ್ಯಾ ಮನುಜ, ಅನ್ಯಾಯ ಮಾಡಿದೆ ಎಂದು ಭೂತಾಯಿ, ಆ ಭಗವಂತ ಕೊರಗುತ್ತಿರುವುದನ್ನು ಮನುಜನಿಗೆ ನಾಟುವಂತೆ ಖ್ಯಾತ ಚಿಂತನಕಾರ ವಿವೇಕಾನಂದ ಎಚ್ ಕೆ  ಅವರು ಈ ಲೇಖನವನ್ನು ಬರೆದಿದ್ದಾರೆ.ಓದಿ…

ಅಯ್ಯಾ ಮನುಜ, ಎಷ್ಟೊಂದು ಅನ್ಯಾಯ ಮಾಡಿದೆ ನೀನು ನನಗೆ,

ಸೃಷ್ಟಿಸಿದ ನನಗೇ ನೀನು ದ್ರೋಹ ಬಗೆದೆಯಲ್ಲಾ,

ನೀನು ನಿಂತಿರುವ ನೆಲವೇ ನನ್ನದು,

ನೀನು ಉಸಿರಾಡುವ ಗಾಳಿ, ಕುಡಿಯುವ ನೀರು, ಅಷ್ಟೇ ಏಕೆ, ನಿನ್ನ ಇಡೀ ದೇಹ, ಆತ್ಮಗಳೇ ನನ್ನದು,

ನಿನ್ನ ಅನುಕೂಲಕ್ಕಾಗಿಯೇ ಮಳೆ, ಚಳಿ, ಬಿಸಿಲನ್ನು ಸೃಷ್ಟಿಸಿದೆ,

ನಿನ್ನ ಸುಖಕ್ಕಾಗಿ ಗಿಡ ಮರ, ಪ್ರಾಣಿ ಪಕ್ಷಿಗಳನ್ನು ನೀಡಿದೆ,

ನಿನ್ನ ದೇಹದ ಪ್ರತಿ ಅಂಗಗಳನ್ನು ಅತ್ಯಂತ ಜಾಗರೂಕವಾಗಿ ರೂಪಿಸಿದೆ,

ನಿನ್ನ ಸಂತೋಷಕ್ಕಾಗಿ ಗಂಡು ಹೆಣ್ಣುಗಳೆಂಬ ಭಿನ್ನತೆ ಸೃಷ್ಟಿಸಿದ್ದೂ ನಾನೇ

ನಿನ್ನ ಭಾವನೆ, ಆಕಾರ, ರೂಪಗಳನ್ನು ನಾನೇ ಕಷ್ಟಪಟ್ಟು ರಚಿಸಿದೆ,

ಹೋಗಲಿ ಮಜಾ ಮಾಡು ಎಂದು ನೂರು ವರ್ಷಗಳ ಆಯಸ್ಸು ನೀಡಿದೆ,

ಆದರೆ, ಪಾಪಿ ನೀನು ಮಾಡಿದ್ದಾದರೂ ಏನು,

ನನ್ನನೇ ಬಗೆದು ನಿನಗೆ ಇಷ್ಟ ಬಂದಂತೆ ಬಂಗಲೆ ನಿರ್ಮಿಸಿಕೊಂಡೆ,



ನಡೆದಾಡಲು ಬಲಿಷ್ಠ ಕಾಲುಗಳನ್ನು ಕೊಟ್ಟಿದ್ದರೂ, ಸೋಮಾರಿಯಾಗಿ ಅಲೆದಾಡಲು ವಾಹನಗಳನ್ನು ನಿರ್ಮಿಸಿ ನನ್ನ ಉಸಿರನ್ನೇ ಮಲಿನಗೊಳಿಸಿದೆ, ನಿನಗೋಸ್ಕರ ಎಷ್ಟೊಂದು ಬಗೆಯ ಹಣ್ಣು, ತರಕಾರಿ, ಸೊಪ್ಪು, ಬೇಳೆಗಳನ್ನು ಕೊಟ್ಟೆ. ಆದರೆ ದುರಾಸೆಯಿಂದ ರಸಾಯನಿಕಗಳೆಂಬ ವಿಷ ಬೆರೆಸಿ ನಿನಗಿಷ್ಟವಾದ ರುಚಿಗಾಗಿ ನನ್ನನ್ನು ಹಾಳು ಮಾಡಿದೆ.

ಸೃಷ್ಟಿಸುವಾಗ ಇತರೆ ಎಲ್ಲಾ ಜೀವಿಗಳನ್ನೂ ನಿರ್ಲಕ್ಷಿಸಿ ನಿನಗೆ ಮಾತ್ರ ಅತಿ ಹೆಚ್ಚು ಬುದ್ದಿ ನೀಡಿದೆ. ಏನೋ ಮನುಷ್ಯ ಪಾಪ ಚೆನ್ನಾಗಿರಲಿ ಎಂದು, ಅದೇ ದೊಡ್ಡ ಸಮಸ್ಯೆಯಾಗಿ ಮುಂದೆ ಇಷ್ಟೊಂದು ಅನಾಹುತಕಾರಿಯಾಗುತ್ತದೆಂದು ಸೃಷ್ಟಿಸಿದ ನಾನೇ ಊಹಿಸದಾದೆ, ಮನುಷ್ಯನ ಅಲೋಚನೆ ಇಷ್ಟೊಂದು ಕ್ರೂರವಾಗಿರುತ್ತದೆ ಎಂದು ಅಂದಾಜಿಸಲು ವಿಫಲನಾದೆ, ಮನುಷ್ಯರನ್ನೆಲ್ಲಾ ಸಮನಾಗಿ ಸೃಷ್ಟಿಸಿದ ನನಗೇ ಮೋಸಮಾಡಿ ಬೇರೆ ಬೇರೆ ಧರ್ಮ, ಜಾತಿ ಸೃಷ್ಟಿಸಿ ಮನಸ್ಸುಗಳನ್ನೇ ಹೊಡೆದೆ.

ಇಡೀ ಭೂ ಪ್ರದೇಶವನ್ನೇ ತುಂಡು ತುಂಡಾಗಿ ಬೌಂಡರಿ ನಿರ್ಮಿಸಿ ಇಭ್ಭಾಗ ಮಾಡಿ ನನ್ನ ಮಾನವನ್ನೇ ಹರಾಜಾಕಿದೆ, ನನ್ನೆಲ್ಲಾ ಅದ್ಭುತ ಕ್ರಿಯೆಗಳನ್ನು ನಿನ್ನ ತೆವಲಿಗಾಗಿ ಉಪಯೋಗಿಸಿಕೊಂಡು ಕೊನೆಗೆ, ನನ್ನನ್ನೇ ಈ ಸೃಷ್ಟಿಕರ್ತನನ್ನೇ ನಾಶಮಾಡಲು ಹೊರಟಿರುವೆ.

ಆದರೆ ಮುಠ್ಠಾಳ, ಅವಿವೇಕಿ ನೆನಪಿಟ್ಟುಕೋ, ನನ್ನನ್ನು ದುರುಪಯೋಗ ಪಡಿಸಿಕೊಂಡು ನೀನು ನಿರ್ಮಿಸಿದ #ಬಂದೂಕು ಬಾಂಬುಗಳೇ ನಿನ್ನನ್ನು ಕೊಲ್ಲುತ್ತವೆ.

ಎಲ್ಲಾ ಸುಖಗಳಿದ್ದರೂ ಅದನ್ನು ಅನುಭವಿಸಲಾಗದೆ ರಕ್ತ ಕಾರುವ ಸ್ಥಿತಿ ನಿನ್ನದಾಗುತ್ತದೆ.

ನಾಶವಾಗುವುದು ನೀನೇ ಹೊರತು ನಾನಲ್ಲ.

ನಾನು ಅಮರ…..ಶಾಶ್ವತ……

ಬೆನ್ನಿಗೂ ….ಹೃದಯಕ್ಕೂ ….ಒಟ್ಟಿಗೆ ಚೂರಿ ಹಾಕಿದ ದ್ರೋಹಿ ನೀನು.

ನಿನಗೆ ಕ್ಷಮೆ ಇಲ್ಲ………..
****************

342 ನೆಯ ದಿನ ನಮ್ಮ ಜ್ಞಾನ ಭಿಕ್ಷಾ ಪಾದಯಾತ್ರೆ  ಮುಂದೆ ಚಿಕ್ಕಬಳ್ಳಾಪುರ ನಗರ….. ನಂತರ ನಂದಿ ಬೆಟ್ಟ… ಆಸಕ್ತರು ಭಾಗವಹಿಸಬಹುದು.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ,


  • ವಿವೇಕಾನಂದ ಎಚ್ ಕೆ (ಖ್ಯಾತ ಬರಹಗಾರರು, ಚಿಂತಕರು)

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW