ದೀಪಾ ಜೋಶಿ ಅವರ ‘ತತ್ರಾಣಿ’ ಕಾದಂಬರಿಯಲ್ಲಿ ಹಿಂದಿನ ತಲೆಮಾರಿನ ಆ ಅಪರೂಪದ ನೈಜ ಘಟನೆಗಳು ಹೀಗೆ ಯಥಾವತ್ತಾಗಿ ವರ್ಗಾವಣೆಯಾಗದೇ, ಇದು ಪೂರ್ತಿ ದೀಪಾ ಅವರದೇ ಕಲ್ಪನೆ, ಅನುಭವ ಮತ್ತು ಅನುಭಾವಗಳಿಂದ ಮೂಡಿದ ಕಾದಂಬರಿಯಾಗಿದ್ದಾರೆ. ಸಂಗೀತಾ ಚಚಡಿ ಅವರು ಈ ಕಾದಂಬರಿಯ ಕುರಿತು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ :ತತ್ರಾಣಿ
ಲೇಖಕರು : ದೀಪಾ ಜೋಶಿ
ಪ್ರಕಾಶನ : ಅಂಕಿತಾ ಪ್ರಕಾಶನ
ಪ್ರಕಾರ : ಕಾದಂಬರಿ
“ಬದುಕಿನ ಮೊದಲ ಹಂತವನ್ನು ಯಾವುದೇ ಐಹಿಕ ಅನುಕೂಲಗಳ ಹಂಗಿಲ್ಲದೆಯೂ ಸುಖವಾಗಿ ಕಳೆದು , ಎರಡನೆಯ ಹಂತದಲ್ಲಿ ಅನೇಕ ಸವಲತ್ತು ಮತ್ತು ಐಷಾರಾಮಿ ಸಾಧನಗಳೊಟ್ಟಿಗೆ ತುಸು ಅತೃಪ್ತಿಯಿಂದಲೇ ಬದುಕುತ್ತಿರುವ… “ ಎಂದು ದೀಪಾ ತಮ್ಮ ಬದುಕಿನ ಎರಡು ಹಂತಗಳನ್ನು ಪಾರದರ್ಶಕವಾಗಿ ಓದುಗರ ಮುಂದೆ ತೆರೆದಿಟ್ಟು ಕಾದಂಬರಿ ಶುರು ಮಾಡಿದ್ದಾರೆ.
ಹೆಚ್ಚೂ ಕಡಿಮೆ ಇದೇ ಹಂತಗಳು ನನ್ನವೂ ಆಗಿದ್ದರಿಂದಲೋ ಏನೋ ಅವರ ಪ್ರತಿ ಬರಹಕ್ಕೂ ನಾನು ಬಹಳ ಬೇಗ ಕನೆಕ್ಟ್ ಆಗಿ ಬಿಡುವೆ. ಆದರೆ ಇಲ್ಲಿರುವದು ಅದಕ್ಕೂ ಹಿಂದಿನ ಹಂತದ , ಅವರ ಹಿರಿಯರು ಯಥಾಪೂರ್ವಕ ವರ್ಗಾಯಿಸಿದ ಘಟನಾವಳಿಗಳು ಮತ್ತು ಅವುಗಳೊಂದಿಗೆ ಸೇರಿದ ದೀಪಾ ಅವರ ಈ ಎರಡೂ ಹಂತಗಳಲ್ಲಿನ ಅನುಭವಗಳು, ಆ ಅನುಭವಗಳಿಂದಾಗಿ ಮೂಡಿದ ಕಲ್ಪನೆಗಳು ಮತ್ತು ಅವರ ತೀರ್ಥರೂಪರಿಂದ ಕಣ್ಣ ಮುಂದೆ ಕಟ್ಟುವಂತೆ ಕಟ್ಟಿ ಕೊಟ್ಟ ಸಂದರ್ಭಗಳು.

ಇವೆಲ್ಲವೂ ಸೇರಿ ಹೊರಹೊಮ್ಮಿದ ಈ “ತತ್ರಾಣಿ “ ಕಾದಂಬರಿ ಭೈರಪ್ಪನವರ ಕಾದಂಬರಿ ಓದಿಸಿಕೊಂಡಂತೆ ನನ್ನನ್ನು ಓದಿಸಿಕೊಳ್ಳುತ್ತಿದೆ. ಬೇಕಿದ್ದರೆ ಉತ್ರೇಕ್ಷೆ ಎಂದುಕೊಳ್ಳಿ , ತಪ್ಪೇನಿಲ್ಲ . ಆದರೆ ಓದುತ್ತಿದ್ದಂತೆ ನಿಮಗೂ ಖಂಡಿತ ಆ ಅನುಭವ ಆಗೇ ಆಗುತ್ತದೆ.
ಹಿಂದಿನ ತಲೆಮಾರಿನ ಆ ಅಪರೂಪದ ನೈಜ ಘಟನೆಗಳು ಹೀಗೆ ಯಥಾವತ್ತಾಗಿ ವರ್ಗಾವಣೆಯಾಗದೇ, ಇದು ಪೂರ್ತಿ ದೀಪಾ ಅವರದೇ ಕಲ್ಪನೆ, ಅನುಭವ ಮತ್ತು ಅನುಭಾವಗಳಿಂದ ಮೂಡಿದ ಕಾದಂಬರಿಯಾಗಿದ್ದರೆ, ನಾನು ಈ ಮಾತನ್ನು ಹೇಳುವ ಮೊದಲು ಇನ್ನೊಮ್ಮೆ ಖಂಡಿತ ಯೋಚಿಸುತ್ತಿದ್ದೆ. ಆದರೆ ಇಲ್ಲಿ ಮೊದಲ ಪುಟ ಓದುವಾಗಲೇ ಓದುಗ ಕ್ಲೀನ್ ಬೋಲ್ಡ್. ಮುಂದೇನಾಯಿತು ?ಮತ್ತೇನಾಯಿತು ? ಎಂಬ ಕುತೂಹಲ ಮೂಡಿಸುತ್ತಾ , ಬಿಟ್ಟ ಬಾಯಿ ಬಿಟ್ಟಂತೆ ಓದಿಸಿಕೊಳ್ಳುತ್ತಾ ಹೋಗುವ ಈ ಕಾದಂಬರಿಯ ಪೂರ್ತಿ ಸ್ವಾದವನ್ನು ನಾನು ಯಾವುದೇ ಅಡಚಣೆಗಳಿಲ್ಲದೆ , ನಿಧಾನವಾಗಿ ಆಸ್ವಾದಿಸಿಕೊಳ್ಳೋಣ ಎಂದುಕೊಂಡಿರುವೆ. ಹಾಗಾಗಬೇಕೆಂದರೆ ಇದನ್ನು ಓದಿ ಮುಗಿಸಲು ನನಗೆ ಇನ್ನಾರು ತಿಂಗಳು ಕನಿಷ್ಟ ಬೇಕು.

ಅಷ್ಟರಲ್ಲಿ ನನ್ನ ಜೊತೆ ಈ ಓದುವಿಕೆಯ ಪಯಣದಲ್ಲಿ ಇನ್ನಷ್ಟು ಮತ್ತಷ್ಟು ಓದುಗರು ಸೇರಿಕೊಳ್ಳಲಿ ಎಂಬುದು ಈ ಪೋಸ್ಟ್ ನ ಉದ್ದೇಶ. ಕಾದಂಬರಿ ಪೂರ್ತಿ ಓದಿದ ಮೇಲೂ, ಅದರ ಬಗ್ಗೆ ಏನಾದರೂ ಬರೆಯಬಲ್ಲೆನೇ? ಎಂಬ ಸಂಶಯ ನನ್ನಲ್ಲಿ ಖಂಡಿತಾ ಇದೆ. ಅಷ್ಟೊಂದು ಗಹನವಾದ ವಿಷಯಗಳುಳ್ಳ ವಿಶಿಷ್ಟ ಕಾದಂಬರಿ ಇದು. ಪ್ರಶಸ್ತಿಗಳ ಸುರಿಮಳೆಯಂತೂ ಖಂಡಿತ ಸುರಿಯಲಿದೆ.
ಪೂರ್ತಿ ಕುಟುಂಬವೇ ಅವರ ಬೆಂಬಲಕ್ಕೆ ಇರುತಿರಲು, ಪ್ರೀತಿಸುವ ಸ್ನೇಹ ಬಳಗವಿರುತಿರಲು, ದೀಪಾ ಅವರು ಇಂತಹ ಇನ್ನೂ ಹಲವಾರು ಕಾದಂಬರಿಗಳನ್ನು ಬರೆಯಲಿ ಮತ್ತು ಆ ಕ್ಷಮತೆ ಖಂಡಿತಾ ಅವರಲ್ಲಿದೆ ಎನ್ನುತ್ತಾ ಮುಂದಿನ ಪುಟಗಳಲ್ಲಿ ಕಳೆದು ಹೋಗುವ ಮುನ್ನ ಈ ಪೋಸ್ಟ್ ನ್ನು ಹಾಕುತ್ತಿರುವೆ.
- ಸಂಗೀತಾ ಚಚಡಿ
