ಸೂಳೆಕೆರೆ ಸುಮಾರು ಇಪ್ಪತ್ತೆಂಟು ಹಳ್ಳಿಗಳಿಗೆ ನೀರಿನ ಸೌಲಭ್ಯ ಮತ್ತು ಚಿತ್ರದುರ್ಗ ನಗರದ ಬಾಯಾರಿಕೆಯನ್ನು ನೀಗಿಸುತ್ತಿದೆ. ಸೂಳೆಕೆರೆ ಕತೆಯ ಕುರಿತು ಕೇಳಿದಾಗ ಮತ್ತು ನೇರವಾಗಿ ನೋಡಿದಾಗ ಈಗ ಬರೆಯುವಾಗಲೂ ನನ್ನ ಕಣ್ಣಾಲಿಗಳು ತುಂಬಿವೆ. ಪತ್ರಕರ್ತರಾದ ವೈ ಜಿ ಅಶೋಕ್ ಕುಮಾರ್ ಅವರು ಪಾಪುಗುರು ಅವರ ಶಾಂತಾದೇವಿ ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಶಾಂತಾದೇವಿ
ಲೇಖಕರು : ಪಾಪುಗುರು
ಪ್ರಕಾರ : ಐತಿಹಾಸಿಕ ಕಾದಂಬರಿ
ಪ್ರಕಾಶನ : ಉಷಾ ಪ್ರಕಾಶನ
ಪಟೇಲರು ಹೇಳಿದ “ಸೂಳೆಕೆರೆ”ಕಥೆ ಸೂಳೆ ಕೆರೆಯನ್ನು ಕಣ್ಣಾರೆ ಕಂಡಾಗ…
ಸಮಾಜವಾದಿ ನಾಯಕ ಜಯದೇವಪ್ಪ ಹಾಲಪ್ಪ ಪಟೇಲರು ಪ್ರತಿನಿಧಿಸುತ್ತಿದ್ದ ಚನ್ನಗಿರಿಯ ಏಷ್ಯಾದಲ್ಲೇ ಅತೀ ದೊಡ್ಡ ಎರಡನೇ ಕೆರೆಯಾಗಿರುವ ಶಾಂತಿ ಸಾಗರ ಕೆರೆಯ ಹಿನ್ನೆಲೆಯ ಕುರಿತು ಒಂದು ಪ್ರೇಮ ಮತ್ತು ತ್ಯಾಗದ ಕಥೆ ಹೇಳಿದ್ದರು. ನಾವು ತುಂಬಾ ಸರಳವಾಗಿ ಭಾವಿಸಿದ್ದ ಈ ಕೆರೆಯನ್ನು ಕಟ್ಟಿಸಿದ್ದು 11 ನೇ ಶತಮಾನದಲ್ಲಿ ಶಾಂತಲಾದೇವಿ ಎಂಬ ರಾಣಿ !
ಚಿತ್ರದುರ್ಗ ನಗರಕ್ಕೆ ಕುಡಿಯುವ ನೀರಿನ ವ್ಯವಸ್ಥೆಯೂ ಸೇರಿದಂತೆ ಸುಮಾರು ಇಪ್ಪತ್ತೆಂಟು ಗ್ರಾಮಗಳಿಗೆ ಸಮಗ್ರ ನೀರನ್ನು ಒದಗಿಸುವ ಶಾಂತಿಸಾಗರ ಕೆರೆಗೆ ‘ಸೂಳೆ ಕೆರೆ’ ಎಂಬ ಹೆಸರು ಜನಜನಿತವಾಗಿದೆ. ಇಲ್ಲಿ ಹನ್ನೊಂದನೇ ಶತಮಾನದಲ್ಲಿ ಸ್ವರ್ಗಾವತಿ ಎಂಬ ಪಟ್ಟಣಕ್ಕೆ ವಿಕ್ರಮನೆಂಬ ರಾಜನಿದ್ದ. ಬಹುಕಾಲದ ನಂತರ ಜನಿಸಿದ ಏಕೈಕ ಮಗಳಾದ ಶಾಂತಲಾದೇವಿಯನ್ನು ರಾಜ ದಂಪತಿಗಳು ಮತ್ತು ಪಟ್ಟಣದ ಜನರು ಬಹು ಪ್ರೀತಿ ಹಾಗೂ ಗೌರವದಿಂದ ಕಾಣುತ್ತಿದ್ದರು. ಯೌವನಾವಸ್ಥೆಗೆ ಕಾಲಿರಿಸಿದ ಚೆಲುವೆ ಶಾಂತಲಾ ರಾಜಮನೆತನಕ್ಕೆ ಒಲ್ಲದ ಸಿದ್ದೇಶ್ವರನನ್ನು ಪ್ರೇಮಿಸಿ ವಿವಾಹ ವಾಗುತ್ತಾಳೆ.

ವಿಕ್ರಮರಾಜ ಮತ್ತು ಪುರ ಜನರು ಇಂತಹ ಪ್ರೇಮ ವಿವಾಹವನ್ನು ಒಪ್ಪದೇ ಸಾಮಾನ್ಯ ವ್ಯಕ್ತಿ ಸಿದ್ದೇಶ್ವರನನ್ನು ಪ್ರೀತಿಸಿ ವರಿಸಿದ್ದಕ್ಕೆ ಆಕೆ ಯುವರಾಣಿಯಲ್ಲ ‘ಸೂಳೆ ‘ಎಂದು ನಿಂದಿಸಲಾರಂಭಿಸುತ್ತಾರೆ. ಹೆತ್ತ ತಂದೆಯ ಕಠಿಣವಾದ ತಿರಸ್ಕಾರದ ಮಾತುಗಳು ಶಾಂತಲೆಯ ಹೃದಯವನ್ನು ಚುಚ್ಚುತ್ತದೆ.ಆಗಲೇ ಪ್ರಾಣ ಕಳೆದುಕೊಳ್ಳಲು ನಿರ್ಧರಿಸಿದರೂ ತನ್ನ ಕಳಂಕವನ್ನು ತೊಡೆದುಹಾಕಲು ಏನಾದರೂ ಸಾಧಿಸಬೇಕೆಂದು ನಿಶ್ಚಯಿಸುತ್ತಾಳೆ. ಪಟ್ಟಣದ ಜನರ ಕುಹಕಗಳನ್ನು ಸಹನೆಯಿಂದ ಸಹಿಸಿಕೊಂಡ ಶಾಂತಲಾದೇವಿ ಇದರಿಂದ ಆಚೆ ಬರಲು ಪ್ರಯತ್ನ ಪಡುತ್ತಿದ್ದಾಗ ಆಕೆಯ ಕನಸಿನಲ್ಲಿ ಬೃಹದಾಕಾರದ ನೀರು ತುಂಬಿದ ಕೆರೆಯೊಂದು ಕಾಣಿಸುತ್ತದೆ.
ನೀರಿಗಾಗಿ ಪರಿತಪಿಸುತ್ತಿದ್ದ ಪಟ್ಟಣದ ಬಾಯಾರಿಕೆ ನಿವಾರಿಸಲು ಕೆರೆಯೊಂದನ್ನು ಕಟ್ಟಿಸುವ ದೃಡ ಸಂಕಲ್ಪ ತೊಟ್ಟು ಅದಕ್ಕಾಗಿ ಪಟ್ಟಣದಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಸೂಳೆಕೇರಿಯ ಸೂಳೆಯರನ್ನು ಕಂಡು ಸೂಳೆಯರೇ ವಾಸಿಸುತ್ತಿದ್ದ ಆ ಜಾಗವನ್ನು ಕೆರೆ ನಿರ್ಮಾಣಕ್ಕೆ ಬಿಟ್ಟು ಕೊಡಬೇಕೆಂದು ಮನವಿ ಮಾಡುತ್ತಾಳೆ. ಯುವರಾಣಿ ಪ್ರೇಮಿಸಿ ಮದುವೆಯಾದ ಏಕೈಕ ಕಾರಣದಿಂದ ಆಕೆಯನ್ನು ಸೂಳೆ ಎಂದು ಜರಿದಿದ್ದಕ್ಕೆ ನಿಜವಾದ ಸೂಳೆಯರು ಕಣ್ಣೀರುಗರೆದು ಕೆರೆ ನಿರ್ಮಾಣಕ್ಕೆ ಸ್ಥಳ ಬಿಟ್ಟು ಕೊಡಲು ಒಪ್ಪುತ್ತಾರೆ.ಆದರೆ ನಿರ್ಮಾಣಗೊಳ್ಳುವ ಕೆರೆಗೆ ತಮ್ಮ ಕಸುಬಿನ ಹೆಸರನ್ನೇ ಇಡಬೇಕೆಂದು ಆಗ್ರಹಿಸುತ್ತಾರೆ.ಶಾಂತಲಾದೇವಿ ದಂಪತಿಗಳು ಕಟ್ಟಿಸಿದ ಆ ಬೃಹತ್ ನೀರಿನ ಸಂಗ್ರಹಣಾ ವಲಯಕ್ಕೆ “ಸೂಳೆ ಕೆರೆ” ಎಂದು ಅಧಿಕೃತವಾಗಿ ಹೆಸರಿಡುತ್ತಾಳೆ.
ಪ್ರೇಮಿಸಿ ಮದುವೆಯಾಗಿದ್ದಕ್ಕೆ ಸೂಳೆ ಎಂಬ ನಿಂದನೆಗೆ ಒಳಗಾಗಿ ನೊಂದಿದ್ದ ರಾಣಿ ಶಾಂತಲಾದೇವಿ ಅದೇ ಸೂಳೆ ಕೆರೆಗೆ ಹಾರಿ ಪ್ರಾಣಾರ್ಪಣೆ ಮಾಡಿಕೊಳ್ಳುತ್ತಾಳೆ. ತನ್ನ ಪ್ರಿಯ ಮಡದಿ ಕಟ್ಟಿಸಿದ ಕೆರೆಗೆ ಪ್ರಾಣಾರ್ಪಣೆ ಮಾಡಿಕೊಂಡದ್ದನ್ನು ಸಹಿಸಲಾಗದ ಪತಿ ಸಿದ್ದೇಶ್ವರ ಕೆರೆಯ ಪಕ್ಕದ ಬೆಟ್ಟದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಸೂಳೆಯರು ಸೇರಿದಂತೆ ಇಡೀ ಪಟ್ಟಣದ ಹೆಣ್ಣು ಮಕ್ಕಳು ಮಮ್ಮಲ ಮರುಗುತ್ತಾರೆ.

ಸೂಳೆಕೆರೆ ಹೆಸರನ್ನು ಬದಲಾಯಿಸುವ ನಿರ್ಣಯ ಕೈಗೊಂಡಾಗ ಪಟೇಲರು ಅದನ್ನು ವಿರೋಧಿಸುತ್ತಾರೆ. ಇಂತಹ ಸಾಧನೆಯ ಕಥೆ ಮುಂದಿನ ಪೀಳಿಗೆಗೆ ಜೀವಂತವಾಗಿಡಲು ಅದನ್ನು ಸೂಳೆ ಕೆರೆ ಎಂದೇ ಕರೆಯಬೇಕು ಆಗ ಜನರ ಮನಸಿನಲ್ಲಿ ಕುತೂಹಲ ಮೂಡಿ ಅದರ ಹಿನ್ನೆಲೆಯನ್ನು ಅರಿಯಲು ಪ್ರಯತ್ನಿಸುತ್ತಾರೆ ಎಂಬುದು ಪಟೇಲರ ಕಾಳಜಿಯಾಗಿತ್ತು. ಶಾಂತಿಸಾಗರ ಎಂದು ಹೆಸರು ಬದಲಾಯಿಸಿದಾಗ ಸೂಳೆ ಕೆರೆ ಹೆಸರನ್ನೇ ಉಳಿಸಬೇಕೆಂದು ಒತ್ತಾಯಿಸಿದ್ದ ಡಾ.ಚಿದಾನಂದ ಮೂರ್ತಿಯರನ್ನೂ ನೆನಪಿಸಿಕೊಳ್ಳೋಣ.
ಹರಿದ್ರಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಈ ಕೆರೆ ವಿಸ್ತೀರ್ಣ 5550 ಎಕರೆ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದು ಸಿದ್ಧನಾಲೆ ಬಸವನಾಲೆ ಎಂಬ ಎರಡು ಬೃಹತ್ ನಾಲೆಗಳನ್ನು ಹೊಂದಿದೆ.ಸುಮಾರು ಇಪ್ಪತ್ತೆಂಟು ಹಳ್ಳಿಗಳಿಗೆ ನೀರಿನ ಸೌಲಭ್ಯ ಮತ್ತು ಚಿತ್ರದುರ್ಗ ನಗರದ ಬಾಯಾರಿಕೆಯನ್ನು ಸೂಳೆಕೆರೆ ನೀಗಿಸುತ್ತಿದೆ. ಈ ಕಥೆ ಕೇಳಿದಾಗ ಮತ್ತು ನೇರವಾಗಿ ನೋಡಿದಾಗ ಈಗ ಬರೆಯುವಾಗಲೂ ನನ್ನ ಕಣ್ಣಾಲಿಗಳು ತುಂಬಿವೆ.
- ವೈ ಜಿ ಅಶೋಕ್ ಕುಮಾರ್ – ಪತ್ರಕರ್ತರು, ಲೇಖಕರು
