ದುಷ್ಟರನ್ನು ಕಂಡು ದೂರ ಇರಬೇಕು – ನುಡಿಬೆಡಗು

ನಮಗೆ ದುಷ್ಟರಾಗಿ ಕಂಡವರು ಮತ್ತೊಬ್ಬರ ದೃಷ್ಟಿಯಲ್ಲಿ ಒಳ್ಳೆಯರಾಗಿ ಕಾಣುತ್ತಾರೆ. ಮತ್ತೊಬ್ಬರ ದೃಷ್ಟಿಯಲ್ಲಿ ದುಷ್ಟರೆನಿಸಿದವರು ನಮಗೆ ಒಳ್ಳೆಯವರಾಗಿ ಕಾಣುತ್ತಾರೆ. ಯಾರು ಹಿತವರು …ಡಾ. ಯಲ್ಲಮ್ಮ ಕೆ ಅವರ ಒಂದು ಚಿಂತನ ಲೇಖನವನ್ನು ತಪ್ಪದೆ ಮುಂದೆ ಓದಿ…

ಎಳವೆಯಿಂದಲೂ ನಮ್ಮ ಹಿರಿಕರಿಂದ ಕೇಳಿಕೊಂಡು ಬಂದಿರುವ ಹಿತೋಪದೇಶಗಳಲ್ಲಿ ಬಹುಮುಖ್ಯವೆಂದು ಹೇಳಬಹುದಾದ ಮಾತೆಂದರೆ..? ‘ದುಷ್ಟರನ್ನು ಕಂಡು ದೂರ ಇರಬೇಕು’ ಎಂಬ ನುಡಿಬೆಡಗಿನ ಸುತ್ತ ಗಿರಕಿ ಹೊಡೆಯುತ್ತಿದೆ ನನ್ನೀ ಲೇಖನ.

ಜನಪದರು ಕಟ್ಟಿಕೊಟ್ಟಿರುವ ಗಾದೆಮಾತುಗಳು, ನಾಣ್ಣುಡಿ – ಪಡೆನುಡಿಗಳು ಬದುಕಿನ ದಟ್ಟ ಅನುಭವಗಳಿಂದ ಹರಲುಗೊಂಡಂತವುಗಳು ನಾವು ಅವುಗಳನ್ನು ಮೂಲ ಆಶಯದಿ ಅರ್ಥೈಸಿಕೊಳ್ಳುವಲ್ಲಿ ಭಾಗಶಃ ಸೋತಿದ್ದೇವೆ ಎನ್ನುವುದು ನನ್ನ ಅಭಿಪ್ರಾಯವೂ ಇಲ್ಲವೇ ನನ್ನ ಅರಿವಿನ ಮಿತಿಯೂ ಆಗಿರಬಹುದು! ಅರಿವಿನ ಪರಿಧಿಯನ್ನು ವಿಸ್ತಾರಗೊಳಿಸಿಕೊಳ್ಳುವ ಪ್ರಯತ್ನದಿ ಈ ವಿಷಯವನ್ನು ಕೈಗೆತ್ತಿಕೊಂಡು ಲೇಖನ ರೂಪು ನೀಡಿ ನಿಮ್ಮ ಮುಂದಿಟ್ಟಿದ್ದೇನೆ. ಓದಿ, ಅಭಿಪ್ರಾಯ ತಿಳಿಸಿ, ಟೀಕೆ ಟಿಪ್ಪಣಿಗಳನ್ನು ಮನಸಾ ಸ್ವಾಗತಿಸುತ್ತೇನೆ.

ಫೋಟೋ ಕೃಪೆ :google

ಈ ಮೇಲಿನ ನುಡಿಯನ್ನು ನಮ್ಮ ಸುತ್ತಮುತ್ತಲ ಪರಿಸರದಿ: ಮನೆ-ಮಠ, ನೆರೆ-ಹೊರೆ, ಬಂಧು-ಬಳಗ, ವೃತ್ತಿ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ನನಗೆ ನಾನೇ ಹೇಳಿಕೊಂಡರೆ ಹಲವರನ್ನು ದುಷ್ಟರೆಂದು, ಕೆಲವರನ್ನು ಶಿಷ್ಟರೆಂದು ಭಾವಿಸಿ ; ದುಷ್ಟರಿಂದ ಒಂದಿನಿತು ಅಂತರವನ್ನೂ, ಶಿಷ್ಟರಲ್ಲಿ ತುಸು ಹೆಚ್ಚೇ ಎನಿಸುವಷ್ಟು ಸಲುಗೆಯನ್ನು ಬೆಳಸುವೆನಾದರೆ ಈ ಮಾತಿನಲ್ಲಿ ಅಷ್ಟೊಂದು ಸೊಗಸೇನಿದೆ..? ಇದೇ ಮಾತನ್ನು ನೀವು, ಅವರು, ಇವರು ಎಲ್ಲರೂ ಹೀಗೆಯೇ ಭಾವಿಸಿದರೆ, ಭಾವಿಸಿದರು ಎಂದಿಟ್ಟುಕೊಳ್ಳಿ ; ನಾವು ಕೂಡಾ ಹಲವರ ದೃಷ್ಟಿಯಲ್ಲಿ ಕೆಟ್ಟವರಾಗಿ, ಕೆಲವರ ದೃಷ್ಟಿಯಲ್ಲಿ ಒಳ್ಳೆಯವರು ಎನಿಸುವ ಸಾಧ್ಯತೆ ಹೆಚ್ಚಿರುತ್ತದೆ!

ಇನ್ನೂ ಮುಂದುವರೆದು ನೋಡುವುದಾದರೆ ನಮಗೆ ದುಷ್ಟರಾಗಿ ಕಂಡವರು ಮತ್ತೊಬ್ಬರ ದೃಷ್ಟಿಯಲ್ಲಿ ಒಳ್ಳೆಯರಾಗಿರುವ, ಮತ್ತೊಬ್ಬರ ದೃಷ್ಟಿಯಲ್ಲಿ ದುಷ್ಟರೆನಿಸಿದವರು ನಮಗೆ ಒಳ್ಳೆಯವರಾಗಿ ಕಾಣುವ ಸಾಧ್ಯತೆಗಳೂ ದಟ್ಟವಾಗಿವೆ. ಹಾಗಾದರೆ ದುಷ್ಟತನ ಒಳ್ಳೆಯತನ ಎಂಬುದು ನಿಜಕ್ಕೂ ವ್ಯಕ್ತಿಯಲ್ಲಿದೆಯೇ, ನೋಡುಗನ ದೃಷ್ಟಿಯಲ್ಲಿದೆಯೇ? ಯಥಾ ದೃಷ್ಟಿ ತಥಾ ಸೃಷ್ಟಿ [ಯದ್ಭಾವಂ ತದ್ಭವತೆ.!’], ‘ಯಥಾ ರಾಜಾ ತಥಾ ಪ್ರಜಾ!’, ‘ಮನಸ್ಸಿನಂತೆ ಮಾದೇವ’, ಅವರವರ ಭಗವದ್ಭಕ್ತಿಗೆ’ ಬಿಟ್ಟದ್ದು ಎನ್ನುವುದಾದರೆ ನಿಜಕ್ಕೂ ಆ ನುಡಿಯ ಬೆಡಗು ನಮ್ಮ ಕಾಣದಾಗುತ್ತದೆ, ಕಣ್ಣಿದ್ದೂ ಕುರುಡರಂತಾಗುತ್ತೇವೆ! ಹಿರಿಯರ ಮಾತಿನ ಸಹಿತಾರ್ಥ, ನಿಹಿತಾರ್ಥ ಆಳಕ್ಕಿಳಿಯದೇ ಹೋದರೆ.., ಸುಲಭಕ್ಕೆ ಅದು ದಕ್ಕುವುದಿಲ್ಲ, ದಕ್ಕಿಸಿಕೊಳ್ಳದೆ ಬಿಡುವುದು ನನ್ನ ಜಾಯಮಾನವೂ ಅಲ್ಲ, ಹಂಗಂತ ನನ್ನ ಮೇಲೆ ನನಗೆ ಯಾವ ಅಭಿಮಾನವೂ ಇಲ್ಲ, ದುರಭಿಮಾನವೂ ಇಲ್ಲ! ನನ್ನ ಅಭಿಪ್ರಾಯಗಳು ನನ್ನವೇ ಆಗಿದ್ದು, ಮತ್ತೊಬ್ಬರ ಮೇಲೂ ಹೇರುವುದಿಲ್ಲ, ನನ್ನ ಅಭಿಪ್ರಾಯಗಳಿಗೆ ಯಾವತ್ತೂ ನಾನು ಬದ್ದಾಳಾಗಿರುತ್ತೇನೆ ಇದರಲ್ಲಿ ಎರಡು ಮಾತಿಲ್ಲ.

ವಿಷಯ ಅದಲ್ಲ ‘ದುಷ್ಟರನ್ನು ಕಂಡು ದೂರ ಇರಬೇಕು’ ಎಂಬ ಮಾತು ಕಿವಿಗೆ ಬೀಳುತ್ತಲೇ ನಮ್ಮ ಸುತ್ತಲೂ ಇರುವವರಲ್ಲಿ ಯಾರು ಹಿತವರು ಎಂದು ಹುಡುಕಲು ಹವಣಿಸುತ್ತೇವೆ! ದುಷ್ಟತನವೆಂಬುದು ನಮ್ಮೊಳಗೆ ಅವಿತು ಕುಳಿತಿರುವಾಗ, ಹೊರಗಿನ ದುಷ್ಟರಿಗಿಂತ ನಮ್ಮೊಳಗಿನ ದುಷ್ಟತನ ತುಂಬಾ ಅಪಾಯಕಾರಿ ಆದುದು! ನಾವು ದೂರವಿರಬೇಕಾದುದು ನಮ್ಮೊಳಗಿನ ದುಷ್ಟತನದಿಂದ! ಆ ದುಷ್ಟತನದ ದೆಸೆಯಿಂದ ದೃಷ್ಟಿ ದೋಷವು ತಾಗಿ ‘ಒಳ್ಳೆಯವರು ದುಷ್ಟರಾಗಿ, ದುಷ್ಟರು ಒಳ್ಳೆಯವರಾಗಿ ಕಾಣುತ್ತಾರೆ’, ಆಗ ಬುದ್ಧಿ ಮಾತುಗಳಿಂತ, ಕೆಟ್ಟ ವಿಚಾರಗಳೇ ಹಿತವೆನಿಸುತ್ತವೆ. ಮಡಿ ಮೈಲಿಗೆ ಎನ್ನುವುದು ಮೈಗಲ್ಲ ಮನಸ್ಸಿಗೆ! ಮನದ ಹೇಸಿಗೆಯನ್ನು ತೊಳೆಯದೆ ಇದ್ದರೆ ಬದುಕು ಸಹ್ಯವೆನಿಸುವುದಿಲ್ಲ.

ನಮ್ಮ ಹಿರೀಕರ ಮಾತುಗಳು ‘ಅಡ್ಡಗ್ವಾಡಿ ಮ್ಯಾಲ ದೀಪ ಇಟ್ಟಂಗ, ದೀಪದ ಬುಡುಕ ಕತ್ತಲ ಎಂಬ ಮಾತು ಮರಸಂಗ’ ಸುತ್ತಲೂ ಬೆಳಗಸ್ತಾ ಇರತಾವ, ಆ ಕತ್ತಲಿನ ಒಳಗಣ ಬೆಳಕಿನ ಬೆಡಗು ತಿಳಿಯಬೇಕು! ಇದನ್ನೇ ಕಡಕೋಳ ಮಡಿವಾಳಪ್ಪರು ತತ್ವಪದ ಹಾಡಿದ್ದು -“ಮಾತು ಕಲಿಯ ಬೇಕೂ, ಮಾತಿನ.. ಮರ್ಮ ತಿಳೀಬೇಕು ; ಮಾತು ಬಲ್ಲ ಮಹಾ ಜ್ಞಾನಿಯಕೂಡ ಕೋತಿ ಹಾಂಗ.. ಬೆನ್ ಹತ್ತಿರಬೇಕು” ಎಂಬ ಮಾತಿನ ಬೆಡಗಿನ ಸೊಬಗು ತಿಳಿದರೆ ಮಾತು ರುಚಿಸುತ್ತವೆ, ಇಲ್ಲವೇ ತೀರಾ ಸಪ್ಪೆ ಸಪ್ಪೆ ಎನಿಸಿಬಿಡುತ್ತವೆ, ಹತ್ತು ಮಾತಾಡೋದಕ್ಕಿಂತ ಮುತ್ತಿನಂಥ ಒಂದೆರೆಡು ಮಾತಾಡೋದು ಹಿತವಾಗ್ತದೆ, ಮಾತು ಹೆಂಗಿರಬೇಕು ಅಂದರ? ‘ಹೊಟ್ಯಾಗಿನ ಅಳ್ಳು, ತಲ್ಯಾಗಿನ ಮಳ್ಳು ಕರಗುವಂಗಿರಬೇಕು’ ನೀವು ಏನಂತೀರಿ?.


  • ಡಾ. ಯಲ್ಲಮ್ಮ ಕೆ – ಸಹಾಯಕ ಪ್ರಾಧ್ಯಾಪಕರು, ಕನ್ನಡ ಅಧ್ಯಯನ ವಿಭಾಗ ಜಿ.ವಿ.ಪಿ.ಪಿ. ಸರಕಾರಿ ಪ್ರಥಮ ದರ್ಜೆ ಕಾಲೇಜು, ರಾಮನಗರ, ಹಗರಿಬೊಮ್ಮನಹಳ್ಳಿ, ವಿಜಯನಗರ ಜಿಲ್ಲಾ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW