ಕರ್ನಾಟಕದ ಹೆಮ್ಮೆಯ ಕ್ರಿಕೆಟ್ ಮಾಂತ್ರಿಕ : ಶಂಕರ ಸಜ್ಜನ್

ನಿಮ್ಮಂತವರಿಗಲ್ಲ ಕ್ರಿಕೆಟ್ ಅಲ್ಲ ಎಂದವರಿಗೆ ಹಠ ಬಿಡದೆ, ಶ್ರದ್ದೆ, ಶ್ರಮದಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರನಾಗಿ ನಿಂತ ಶಂಕರ್ ಸಜ್ಜನ್ ಅವರ ಕತೆ ವ್ಯಥೆಯ ಸಂದರ್ಶನ ಆಕೃತಿಕನ್ನಡದಲ್ಲಿದೆ, ಅವರು ನಡೆದು ಬಂದ ಹಾದಿಯನ್ನು ತಪ್ಪದೆ ಮುಂದೆ ಓದಿ….

ಎಷ್ಟೋ ಕ್ರಿಕೆಟ್ ಆಟಗಾರರ ದಂತಕಥೆಗಳನ್ನು ಕೇಳಿದ್ದೇವೆ ಮತ್ತು ಅದರಿಂದ ಸ್ಫೂರ್ತಿಗೊಂಡಿದ್ದೇವೆ. ಜೇಸ್ವಾಲ್ ಎನ್ನುವ ಪಾನಿಪುರಿ ಮಾರುವ ಹುಡುಗ ಕ್ರಿಕೆಟ್ ನಲ್ಲಿ ತನ್ನದೇ ಛಾಪು ಮೂಡಿಸುತ್ತಾನೆ ಎಂದರೆ ಅದು ಅವರು ಪಟ್ಟ ಕಷ್ಟಗಳಿಗೆ ಸಿಕ್ಕ ಪ್ರತಿಫಲ. ಪ್ರತಿಯೊಬ್ಬ ಸಾಧಕ ನಡೆದು ಬಂದ ದಾರಿ ಸಾಮಾನ್ಯದಾಗಿರುವುದಿಲ್ಲ. ಆದರೆ ಅವರು ಅಂದುಕೊಂಡದ್ದನ್ನು ಸಾಧಿಸಿದಾಗ ಸಿಗುವ ಸಂತೃಪ್ತಿ ಬೇರೊಂದು ಇಲ್ಲಾ. ಇದು ದೇಶ ಕಂಡ ಸಾಧಕರ ಕೆಲವು ಉದಾಹರಣೆಗಳಾದರೆ ಇನ್ನೂ ನಮ್ಮ ರಾಜ್ಯಕ್ಕೆ ಬಂದರೆ ನಮ್ಮಲ್ಲಿಯೂ ಹಲವಾರು ಕ್ರಿಕೆಟ್ ನಲ್ಲಿ ಸಾಧನೆ ಮಾಡಿದ್ದವರಿದ್ದಾರೆ, ಆದರೆ ವಿಪರ್ಯಾಸವೆಂದರೆ ಎಲ್ಲರೂ ಜೇಸ್ವಾಲ್ ರಂತೆ ಬೆಳಕಿಗೆ ಬಾರದೆ ಎಲೆ ಮರೆಯ ಕಾಯಿಯಂತೆ ಮರೆಯಾಗಿದ್ದಾರೆ.

ಅಂತವರಲ್ಲಿ ವಿಜಾಪುರ ಜಿಲ್ಲೆಯ ಯಾಳಗಿರಿಯವರಾದ ಶಂಕರ್ ಸಜ್ಜನ ಕೂಡಾ ಅಪ್ರತಿಮ ಕ್ರಿಕೆಟ್ ಆಟಗಾರ. ಚಿಕ್ಕ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡ ಅವರು ಅಪ್ಪನ ಅಕ್ಕರೆಯಲ್ಲಿ ಬೆಳೆದರು. ವಿಶೇಷಚೇತನರಾಗಿ ಹುಟ್ಟಿದ ಇವರಿಗೆ ಬಾಲ್ಯದಿಂದಲೂ ಕ್ರಿಕೆಟ್ ಎಂದರೆ ಎಲ್ಲಿಲ್ಲದ ಪ್ರೀತಿ. ಮಕ್ಕಳೆಲ್ಲ ಗಲ್ಲಿಯಲ್ಲಿ ಕ್ರಿಕೆಟ್ ಆಡುವಾಗ, ಸಚಿನ್ ತಂಡೂಲ್ಕರ್ ಟಿವಿಯಲ್ಲಿ ನೋಡುವಾಗ ನಾನು ಕೂಡಾ ಇವರಂತೆ ಆಡಬೇಕು ಎನ್ನುವ ಆಸೆ ಚಿಗುರೊಡೆಯಿತು. ತಮ್ಮ ಆಸೆಯನ್ನು ಸ್ನೇಹಿತರಲ್ಲಿ, ಸಂಬಂಧಿಕರಲ್ಲಿ ವ್ಯಕ್ತ ಪಡಿಸಿದಾಗ ಎಲ್ಲರೂ ಇವರನ್ನು ವಾರೆಗಣ್ಣಿನಿಂದ ನೋಡಿದವರೇ ಹೆಚ್ಚು, ಏಕೆಂದರೆ ಪುಟ್ಟದಾದ ಕೈ, ನಾಲ್ಕು ಬೆರಳುಗಳಲ್ಲಿ ಚoಡನ್ನು ಹಿಡಿಯುವುದೇ ಕಷ್ಟ ಇನ್ನೂ ಲೆದರ್ ಚಂಡಿನಲ್ಲಿ ಕ್ರಿಕೆಟ್ ಆಡುತ್ತಾರೆ ಎಂದರೆ ಎಲ್ಲರಿಗೂ ಅಸಾಧ್ಯ ಎನಿಸಿ ಮೂಗು ಮುರಿದಿದ್ದರು.ಆ ಸಂದರ್ಭದಲ್ಲಿ ಮಗನ ಮೇಲೆ ನಂಬಿಕೆ ಇಟ್ಟು ಬೆನ್ನು ತಟ್ಟಿದ್ದು ಶಂಕರ್ ಅವರ ತಂದೆ ಗುತ್ತಪ್ಪಾ ಸಜ್ಜನ್ , ಸರ್ಕಾರಿ ಉದ್ಯೋಗಿಯಾಗಿದ್ದ ಅವರು ಮಗನ ಆಸೆಗೆ ಬೆನ್ನೆಲುಬಾಗಿ ನಿಂತರು. ಅಪ್ಪ ಕೊಟ್ಟ ಪ್ರೋತ್ಸಾಹದಿಂದ ಕ್ರಿಕೆಟ್ ಆಟವನ್ನು ತಮ್ಮ ಹತ್ತನೇ ವಯಸ್ಸಿನಲ್ಲಿ ಶುರು ಮಾಡಿದರು. ಶಂಕರ್ ಅವರು ತರಬೇತಿಯಲ್ಲಿ ಚಂಡು ಹಿಡಿದು ನಿಂತಾಗ ಇವರನ್ನು ನೋಡಿ ನಕ್ಕವರೆಷ್ಟೋ ಜನ. ಆದರೆ ಶಂಕರ್ ಅದ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳಲಿಲ್ಲ. ಅವರಿಗೆ ತಮ್ಮ ಮೇಲೆ ಅಪಾರವಾದ ಆತ್ಮವಿಶ್ವಾಸವಿತ್ತು. ತಾನು ಒಂದು ದಿನ ಅತ್ಯುತ್ತಮ ಕ್ರಿಕೆಟ್ ಆಟಗಾರನಾಗಿ ಎಲ್ಲರ ಮುಂದೆ ನಿಂತು ಎಲ್ಲರ ಬಾಯಿ ಮುಚ್ಚಿಸುತ್ತೇನೆ ಎನ್ನುವ ಧೃಡ ನಿರ್ಧಾರದಿಂದ ಮುಂದೆ ಸಾಗಿದ್ದು ಬೆಂಗಳೂರಿನತ್ತ.

ಬೆಂಗಳೂರಿನಲ್ಲಿ ಹೆಸರಾಂತ ಕ್ರಿಕೆಟ್ ಕ್ಲಬ್ ಗಳಲ್ಲಿ ಬ್ರಿಜೇಶ್ ಪಟೇಲ್ ಕ್ರಿಕೆಟ್ ಅಕಾಡೆಮಿ ಕೂಡಾ ಒಂದು. ಅಲ್ಲಿ ಹತ್ತು ದಿನ ಕ್ರಿಕೆಟ್ ತರಬೇತಿಯ ಶಿಬಿರಕ್ಕೆ ಸೇರಿಕೊಂಡರು. ಕ್ರಿಕೆಟ್ ಧೃವತಾರೆ ಅನಿಲ್ ಕುಂಬ್ಳೆ ಅವರು ಈ ತರಬೇತಿಯಲ್ಲಿ ತರಬೇತಿದಾರರಾಗಿದ್ದರು. ಅನಿಲ್ ಕುಂಬ್ಳೆ ಅವರ ಜೊತೆ ನಿಂತು ಫೋಟೋ ತಗೆಸಿಕೊಳ್ಳುವುದೆಂದರೆ ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿಗಳ ಕನಸ್ಸು, ಇನ್ನೂ ಅವರ ಗರಡಿಯಲ್ಲಿ ಪಳಗುವುದೆಂದರೆ ಅದು ಶಂಕರ್ ಅವರ ಪಾಲಿಗೆ ಬಂದ ಸೌಭಾಗ್ಯವೇ ಎನ್ನಬಹುದು. ಅನಿಲ್ ಕುಂಬ್ಳೆ ಅವರ ಮಾರ್ಗದರ್ಶನದಲ್ಲಿ ಶಂಕರ್ ಅವರು ಶ್ರದ್ದೆಯಿಂದ ಕಲಿತದ್ದಷ್ಟೇ ಅಲ್ಲ, ಅವರ ಮೆಚ್ಚಿನ ಶಿಷ್ಯರಾದರು. ಲೆದರ್ ಚಂಡು ಹಿಡಿಯವುದಷ್ಟೇ ಅಲ್ಲ ಅದನ್ನು ತಿರುಗಿಸಿ ಎಸೆಯುತ್ತಿದ್ದರೆ ಎದುರಾಳಿ ತಂಡದವರು ಗಾಬರಿಯಾಗುತ್ತಿದ್ದರು. ಇವರು ವಿಶೇಷ ಚೇತನ ಆಟಗಾರರ ಜೊತೆ ಸ್ಪರ್ಧೆಗೆ ಇಳಿದಿದ್ದರೆ ಅದು ವಿಶೇಷವಾಗಿರುತ್ತಿರಲಿಲ್ಲ, ಕೈ ಕಾಲು ಗಟ್ಟಿ ಇರುವ ಪ್ರಬಲ ಆಟಗಾರ ಮಧ್ಯೆ ನಿಂತು ಮಧ್ಯದ ಲೇಗ್ ಸ್ಪೀನರ್ ಆಗಿ ಆಡಿದಾಗ ದೊಡ್ಡ ದೊಡ್ಡ ಆಟಗಾರರು ಇವರ ಆಟವನ್ನು ನೋಡಿ ಬೆರಗಾದರು.

ಶಿಬಿರ ಮುಗಿದ ಮೇಲೆ ಮೊದಲ ಬಾರಿಗೆ ದುಬೈಯಲ್ಲಿ ಟೂರ್ನಮೆಂಟ್ ಆಡಿ ಎಲ್ಲರ ಗಮನ ಸೆಳೆದರು. ಅನಂತರ ಡೆಲ್ಲಿ ಬುಲ್ಸ್ ತಂಡದಲ್ಲಿ ಒಬ್ಬರಾಗಿ,ಝಹೀರ್ ಖಾನ್ ಅವರ ತರಬೇತಿಯಲ್ಲಿ ಅಫ್ಘಾನಿಸ್ತಾನದಲ್ಲಿ ನಡೆದ ಟಿ 10 ಆಡಿ ಟ್ರೊಫಿ ಗೆದ್ದರು. ಆ ತಂಡದಲ್ಲಿ ಕ್ರಿಕೆಟ್ ನ ಘಟಾನುಗಟಿಗಳ ಜೊತೆ ಆಡಿದ್ದು ಶಂಕರ್ ಅವರು ಎಂದೂ ಮರೆಯದ ಕ್ಷಣಗಳು. ಹೀಗೆ ಒಂದಾದ ಮೇಲೊಂದು ಆಟಗಳನ್ನು ಆಡುವುದರ ಜೊತೆಗೆ ಯುವ ಆಟಗಾರರಿಗೆ ತರಬೇತಿ ನೀಡಿ ಎಷ್ಟೋ ಯುವ ಕ್ರಿಕೆಟ್ ಆಟಗಾರರಿಗೆ ಗುರುವಾದರು. ಶಂಕರ್ ಸಜ್ಜನ ಅವರ ಶ್ರಮ, ಪ್ರತಿಭೆ ಕುರಿತು ಖ್ಯಾತ ಕ್ರಿಕೆಟ್ ದಿಗ್ಗಜರಾದ ವಿರಾಟ್ ಕೊಯ್ಲಿ , ಜಹಿರ್ ಖಾನ್ ಸೇರಿದಂತೆ ಕ್ರಿಕೆಟ್ ನ ಹಲವಾರು ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರು ಪ್ರಶಂಸಿದ್ದಾರೆ.

ಶಂಕರ್ ಸಜ್ಜನ್ ಅವರು ಆಕೃತಿ ಕನ್ನಡ ಪತ್ರಿಕೆಗೆ ಮಾತಿಗೆ ಸಿಕ್ಕಾಗ ಕೇಳಿದ ಪ್ರಶ್ನೆಗೆ ಸಿಕ್ಕ ಉತ್ತರಗಳು…

  • ಕ್ರಿಕೆಟ್ ಆಟ ಇದೊಂದು ಫ್ಯಾನ್ಸಿ ಆಟ, ಎಲ್ಲರಿಗೂ ಕೈಗೆ ನಿಲುಕದ ನಕ್ಷತ್ರದಂತೆ ದುಬಾರಿ, ಆಟದ ಹುಚ್ಚು ಮಕ್ಕಳ ಭವಿಷ್ಯ ಹಾಳು ಮಾಡಬಹುದಲ್ಲವೇ?

ಯಾವ ಆಟವೂ ಯಾರ ಭವಿಷ್ಯವನ್ನು ಹಾಳು ಮಾಡುವುದಿಲ್ಲ, ಬದಲಾಗಿ ಉತ್ತಮ ಬದುಕನ್ನು ಕಟ್ಟಿಕೊಡುತ್ತದೆ. ಈಗಿನ ಮಕ್ಳು ಮೊಬೈಲ್ ನಲ್ಲಿ ಮುಳುಗಿ ಹೋಗಿದ್ದಾರೆ. ಕೂತ್ರು ನಿಂತ್ರು ಮೊಬೈಲ್ ಬೇಕು. ಆ ಮೊಬೈಲ್ ನಿಂದ ದೂರ ಮಾಡಲು ಆಟ ಸಹಾಯ ಮಾಡುತ್ತದೆ. ಬೇಗ ಏಳುತ್ತಾರೆ, ಶಿಸ್ತುಬದ್ದವಾಗಿ ಆಹಾರ ಸೇವಿಸುತ್ತಾರೆ. ಇನ್ನೂ ಕ್ರಿಕೆಟ್ ಆಟ ದುಬಾರಿ ಎನ್ನುವ ಬಗ್ಗೆ ಹೇಳುವುದಾದರೆ ಆರಂಭದಲ್ಲಿ ಅತಿಯಾಗಿ ಖರ್ಚು ಮಾಡುವ ಪ್ರಸಂಗಬರುವುದಿಲ್ಲ. ಒಂದು ಹಂತಕ್ಕೆ ಬಂದಾಗ ಕ್ರಿಕೆಟ್ ಬ್ಯಾಟ್, ಪ್ಯಾಡು ಬೇಕಾಗುತ್ತದೆ. ಆ ಹಂತಕ್ಕೆ ಬಂದಾಗ ಆಟಗಾರರು ಎಲ್ಲರ ಗಮನ ಸೆಳೆದಿರುತ್ತಾರೆ. ಆಗ ಪ್ರತಿಭೆಯನ್ನು ಬೆಳೆಸುವ ಕೈಗಳ ಸಹಕಾರ ಸಿಕ್ಕೆ ಸಿಗುತ್ತದೆ. ಆದರೆ ಆಟಗಾರರಲ್ಲಿ ಶ್ರದ್ದೆ, ಪರಿಶ್ರಮ ಇರಬೇಕಷ್ಟೇ.

  • ಇತ್ತೀಚಿಗೆ ಡಯಟ್ ಹೆಸರಿನಲ್ಲಿ ಕಾರ್ಬೋಹೈಡ್ರೆಟ್, ಪ್ರೊಟೀನ್ ಅಂತೇಲ್ಲ ತೂಕ ಮಾಡಿ ತಿನ್ನುವುದರ ಬಗ್ಗೆ ಏನ ಹೇಳುತ್ತೀರಾ?

ಹಾ… ಹಾ… ನಿಜ. ಈ ಕಾರ್ಬೋಹೈಡ್ರೆಟ್, ಪ್ರೊಟೀನ್ ಅಂತ ನೋಡಿ ತಿನ್ನೋದು ಇತ್ತೀಚಿಗೆ ಹೆಚ್ಚಾಗಿದೆ. ಮನುಷ್ಯ ಹಸಿದಾಗ ಯಾವುದರಲ್ಲಿ ಏನಿದೆ ಅಂತ ನೋಡೋಲ್ಲ. ಆ ಸಮಯದಲ್ಲಿ ಹೊಟ್ಟೆ ತುಂಬಾ ಊಟ ಬೇಕಷ್ಟೆ. ಹಾರ್ದಿಕ್ ಪಾಂಡ್ಯ ಸರ್ ಮ್ಯಾಗಿ ತಿಂದು ಕ್ರಿಕೆಟ್ ತರಬೇತಿಗೆ ಹೋಗುತ್ತಿದ್ದರಂತೆ. ಅವರಿಗೆ ಅದೇ ಹಸಿವೆ ನಿಗಿಸುತ್ತಿತ್ತು. ಹಾಗಂತ ಮ್ಯಾಗಿ, ಜಂಕ್ ಆಹಾರ ಸರಿ ಅಂತ ಹೇಳೋಲ್ಲ. ಹಸಿದಾಗ ಊಟ ಬೇಕು ಆದರೆ ಅದು ಪೌಷ್ಠಿಕ ಆಹಾರ ಆದರೆ ಸಾಕು.

This slideshow requires JavaScript.

  • ಆಹಾರ ತಜ್ಞರು ಆಟಗಾರರಿಗೆ ಹೆಚ್ಚಾಗಿ ಡ್ರೈಫ್ರೂಟ್ಸ್, ನ್ಯೂಟ್ರಿಯೆಂಟ್ಸ್ ತಗೋಳೋಕೆ ಹೇಳುತ್ತಾರೆ. ಅಂತವರಿಗೆ ಏನ್ ಹೇಳ್ತೀರಾ?

ಹೌದು, ಎಲ್ಲರಿಗೂ ಅತಿಯಾದ ಬೆಲೆ ಕೊಟ್ಟು ಪೌಷ್ಠಿಕ ಆಹಾರ ತಗೆದುಕೊಳ್ಳಲು ಸಾಧ್ಯವಿಲ್ಲ. ಆದರೆ ಒಬ್ಬ ಆಟಗಾರನಿಗೆ ಒಂದು ಬಾಳೆಹಣ್ಣು, ಮೊಟ್ಟೆ ತಗೆದುಕೊಳ್ಳುವಷ್ಟು ಬಡತನವಂತೂ ಇರೋದಿಲ್ಲ. ಅವರು ತಮಗೆ ಎಟಕುವ ಬೆಲೆಯಲ್ಲಿ ಆಹಾರವನ್ನು ಸೇವಿಸಬಹುದು. ಒಮ್ಮೆ ತಾವು ಬೆಳೆದಮೇಲೆ ದೇಹಕ್ಕೆ ಬೇಕಾದನ್ನು ನೀಡಿ ಹುರಿಗೊಳಿಸಬಹುದು.

  • ಒಬ್ಬ ಯಶಸ್ವಿ ಕ್ರಿಕೆಟ್ ಆಟಗಾರರಾಗಿ ಎಲ್ಲಾ ರೀತಿಯಲ್ಲಿಯೂ ಸಂತೋಷವಾಗಿದ್ದೀರಾ?

ಸಾಮಾನ್ಯ ಕ್ರಿಕೆಟ್ ಆಟಗಾರರಿಗೆ ಸಿಕ್ಕಷ್ಟು ಬೆಂಬಲ ನನಗೆ ಸಿಗಲಿಲ್ಲವೆಂದರೂ ಆಟದಿಂದ ಸಂತೋಷ ಸಿಕ್ಕಿದೆ. ಆಟ ನನ್ನ ಬಲ. ಅದು ಇಲ್ಲಾದ್ರೆ ನಾನು ಉಸಿರಾಡೋದೆ ಕಷ್ಟವಾಗುತ್ತಿತ್ತೇನೋ.

  • ಸರ್ಕಾರದಿಂದ ನಿಮಗೆ ಆರ್ಥಿಕವಾಗಿ ಸಹಾಯ ಅಥವಾ ಪ್ರೋತ್ಸಾಹ ಏನಾದರೂ ಸಿಕ್ಕಿದೆಯೇ?

ಹಾ… ಹಾ… ನಾನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದೇನೆ. ಆದರೆ ಸರ್ಕಾರದ ಗಮನ ಸೆಳೆಯುವಲ್ಲಿ ವಿಫಲವಾಗಿದ್ದೇನೆ, ಇದಕ್ಕೆ ಇಷ್ಟೇ ನನ್ನ ಉತ್ತರ.

  • ಅಂತಾರಾಷ್ಟ್ರೀಯ ಆಟಗಾರರಾಗಿ ಸೋಲು, ಗೆಲವನ್ನು ನೋಡಿದ್ದೀರಾ ? ಗೆಲವು ಸಿಕ್ಕಾಗ ಸಂತೋಷ, ಸಂಭ್ರಮ ಇರುತ್ತೆ, ಸೋಲು ಬಂದಾಗ ಆಟಗಾರರಾಗಿ ನಿಮ್ಮ ಮನಸ್ಥಿತಿ ಹಾಗೂ ನೀವು ಎದುರಿಸುವ ರೀತಿ ಹೇಗಿರುತ್ತದೆ?

ಸೋಲು ಮತ್ತು ಗೆಲುವು ನಾಣ್ಯದ ಎರಡು ಮುಖಗಳು. ಆಟಗಾರರು ಎರಡನ್ನು ಸಮವಾಗಿ ಸ್ವೀಕರಿಸಬೇಕು ಅದನ್ನು ಆಟ ಕಲಿಸುತ್ತದೆ. ಗೆದ್ದಾಗ ಹಿಗ್ಗೋಲ್ಲ , ಇನ್ನೂ ಉತ್ತಮ ಕೊಡಲು ತಯಾರಿ ಮಾಡಿಕೊಳ್ಳುತ್ತೇನೆ. ಸೋತಾಗ ಕುಗ್ಗದೆ, ಎಲ್ಲಿ ತಪ್ಪಾಯಿತು ಅಂತ ಆತ್ಮವಲೋಕನ ಮಾಡಿಕೊಂಡು ಅದನ್ನು ಸರಿ ಮಾಡಿಕೊಂಡು ಮುಂದಿನ ಆಟಕ್ಕೆ ಸಿದ್ದನಾಗುತ್ತೇನೆ.

  • ಶಂಕರ್ ಅವರು ತುಂಬಾ ಕುಗ್ಗಿದ್ದು ಯಾವಾಗ?

ಕೋವಿಡ್ ಬಂದಾಗ.  ನನ್ನ ಆಟ ಇಲ್ಲಿಗೆ ಮುಗಿತು ಎನ್ನುವಷ್ಟು ಕುಗ್ಗಿಸಿತು. ಆಟಗಾರನಿಗೆ ಮೈದಾನ ಅಂದ್ರೆ ಜೀವ, ಅಂತದರಲ್ಲಿ ಕೋವಿಡ್ ಬಂದಾಗ ಮನೆಯಲ್ಲಿಯೇ ಇರಬೇಕಾದಾಗ ಹಿಂಸೆ ಆಯಿತು.  ಇನ್ನೊಂದು ಕಡೆ ಕೋವಿಡ್ ನಲ್ಲಿ ನನ್ನ ಸರ್ವಸ್ವವೇ ಆಗಿದ್ದ ನನ್ನ ತಂದೆ ತೀರಿಕೊಂಡರು. ಅದು ತುಂಬಾ ವರ್ಷ ನನ್ನನ್ನು ಮೇಲಕ್ಕೆ ಏಳದಂತೆ ಮಾನಸಿಕವಾಗಿ ಕುಗ್ಗಿಸಿತು. ಅಪ್ಪಾ ಇದ್ದಾಗ ನಾನು ಎಲ್ಲೇ ಹೋಗಲಿ ಊಟ ಆಯ್ತಾ , ತಿಂಡಿ ಆಯ್ತಾ… ಅಂತ ಕೇಳುತ್ತಿದ್ದರು. ಈಗ ನನ್ನನ್ನು ಕಾಳಜಿ ಮಾಡುವ ಅಪ್ಪಾ ಇಲ್ಲಾ…ಎನ್ನುವಾಗ ಶಂಕರ್ ಅವರ ಕಣ್ಣುಗಳಲ್ಲಿ ನೀರಿತ್ತು. ಅದನ್ನು ನೋಡುವಾಗ ಮನಸ್ಸು ಭಾರವಾಯಿತು.

ಶಂಕರ್ ಸಜ್ಜನ ಅವರಂತಹ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ ನಮ್ಮ ನಡುವೆ ಇದ್ದರೂ ನಾವು ಪ್ರತಿಭೆಯನ್ನು ಗುರುತಿಸುವಲ್ಲಿ ವಿಫಲರಾಗಿದ್ದೇವೆ. ಇದು ಪ್ರತಿಭೆಗಳಿಗೆ ನಾವೆಲ್ಲಾ ಕೊಡುತ್ತಿರುವ ಅಗೌರವ. ಸಾಮಾನ್ಯ ಕ್ರಿಕೆಟ್ ಆಟಗಾರರಿಗೆ ಸಿಗುವ ಮನ್ನಣೆ ಇವರಿಗೂ ಸಿಗಲಿ, ರಾಜಕಾರಣಿಗಳು ಶಂಕರ ಸಜ್ಜನ ಅವರತ್ತ ನೋಡಲಿ.

2025 ವರ್ಷದಿಂದ ಶಂಕರ್ ಅವರು ಮತ್ತೆ ಮೈದಾನದಲ್ಲಿ ಇಳಿದು ಇನ್ನಷ್ಟು ಸಾಧನೆ ಮಾಡಲಿ, ದೇಶವೇ ಅವರತ್ತ ನೋಡುವಂತೆ ಆಗಲಿ ಎಂದು ಆಕೃತಿ ಕನ್ನಡದ ಪರವಾಗಿ ಶುಭ ಹಾರೈಸುತ್ತದೆ.


  • ಶಾಲಿನಿ ಹೂಲಿ ಪ್ರದೀಪ್ – ಆಕೃತಿ ಕನ್ನಡ ಪತ್ರಿಕೆಯ ಸಂಪಾದಕಿ 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW