ಲೇಖಕಿ ಪ್ರಸನ್ನಾ ವಿ. ಚಕ್ಕೆಮನೆಯವರ ಕಾದಂಬರಿಯನ್ನು ನಾನು ಇದೇ ಮೊದಲ ಬಾರಿಗೆ ಓದುತ್ತಿದ್ದೇನೆ. ‘ಸಿಂಧೂರ ರೇಖೆಯ ಮಿಂಚು’ ಕಾದಂಬರಿಯಲ್ಲಿ ನಾಲ್ಕು ನೀಳ್ಗತೆಗಳಿವೆ. ಎಲ್ಲವೂ ಹೆಣ್ಣು ಮಕ್ಕಳ ವೈವಾಹಿಕ ಜೀವನದ ಕುರಿತಂತೆ ಬರೆದವಾಗಿದ್ದರೂ ಸೊಗಸಾಗಿದ್ದು ಆಪ್ತವಾಗಿ ಓದಿಸಿಕೊಂಡು ಹೋಗುತ್ತವೆ. ಮಾಲತಿ ರಾಮಕೃಷ್ಣ ಭಟ್ ಕಾದಂಬರಿಯ ಕುರಿತು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ ಹೆಸರು: ಸಿಂಧೂರ ರೇಖೆಯ ಮಿಂಚು.
ಲೇಖಕರು: ಪ್ರಸನ್ನಾ ವಿ. ಚಕ್ಕೆಮನೆ.
ಇಂದಿರಾ ಪ್ರಕಾಶನ ಬೆಂಗಳೂರು.
ಮುದ್ರಣದ ವರ್ಷ: ೨೦೨೧.
ಪುಟಗಳು:೧೮೮.
ಬೆಲೆ: ರೂ. ೧೭೦.
****

೧. ಸಿಂಧೂರ ರೇಖೆಯ ಮಿಂಚು.
ಬಾಲ್ಯದಲ್ಲಿಯೇ ತಂದೆಯನ್ನು ಕಳೆದು ಕೊಂಡ ದೀಪ್ತಿಗೆ ತಾಯಿ ದೇವಕಿಯ ಕಷ್ಟಗಳು ಅರ್ಥವಾಗುತ್ತಿತ್ತು. ತನ್ನಿಬ್ಬರು ತಂಗಿಯರು ಹಾಗೂ ಅಜ್ಜಿಯ ಜವಾಬ್ದಾರಿಯನ್ನು ನಿರ್ವಹಿಸುವುದು ಖಾಸಗಿ ಶಾಲೆಯ ಶಿಕ್ಷಕಿಯಾದ ಅಮ್ಮನಿಗೆ ಕಷ್ಟವೆಂದು ತಾನೂ ಹೊಲಿಗೆ ಹಾಗೂ ಮದುಮಗಳ ಅಲಂಕಾರ ಕಲೆಯಿಂದ ದುಡಿದು ಸಂಸಾರಕ್ಕೆ ನೆರವಾಗುತ್ತಿದ್ದಳು. ಗೆಳತಿಯ ಅಕ್ಕನ ಮದುವೆಗೆ ಅಲಂಕಾರ ಮಾಡಲು ಹೋದವಳನ್ನು ಅವರ ಶ್ರೀಮಂತ ಸಂಬಂಧಿಕರು ತಮ್ಮ ಒಬ್ಬನೇ ಮಗ ಇಂಜನಿಯರ್ ಆಗಿದ್ದ ಶ್ರೇಯಸ್ ಗೆ ಕೇಳಿದ್ದರು.
ಅವಳೊಪ್ಪಿದರೆ ಎರಡೂ ಖರ್ಚು ತಾವೇ ಹಾಕಿ ಮದುವೆ ಮಾಡಿಕೊಳ್ಳುತ್ತೇವೆ ಎಂದಾಗ, ಒಳ್ಳೆಯ ಜನರ ಮನೆಯಲ್ಲಿ ತಮ್ಮ ಮಗಳು ಸುಖವಾಗಿರುತ್ತಾಳೆ ಎನ್ನುವ ಭರವಸೆಯಲ್ಲಿ ದೇವಕಿ ಒಪ್ಪಿ ಕಾರ್ಯ ಮುಂದುವರೆಸಲು ಅನುಮತಿ ನೀಡಿದ್ದಳು.
ಆದರೆ ತಾನು ಶ್ರೇಯಸ್ ನಿಗೆ ಒಲ್ಲದ ಹೆಂಡತಿ ಎಂದು ದೀಪ್ತಿಗೆ ಕೆಲವೇ ದಿನಗಳಲ್ಲಿ ಆ ಮನೆಯಲ್ಲಿ ನಡೆಯುತ್ತಿದ್ದ ಮಾತುಕತೆಯಲ್ಲಿ ಅವನ ವರ್ತನೆಯಲ್ಲಿ ಗೊತ್ತಾಗಿತ್ತು. ಆದರೆ ಅವಳು ತನ್ನ ತವರಿನಲ್ಲಿ ಯಾರಿಗೂ ಇದರ ಬಗ್ಗೆ ತಿಳಿಯದಂತೆ ಎಚ್ಚರ ವಹಿಸಿದಳು. ತನ್ನ ಚುರುಕು ನಡೆ- ನುಡಿಗಳಿಂದ ಅತ್ತೆ -ಮಾವ ಹಾಗೂ ನಾದಿನಿಯ ಮನಗೆದ್ದಳು. ಮುಂದೆ ಓದಲು ನಿರ್ಧರಿಸಿದಳು. ಅದಕ್ಕೆ ಶ್ರೇಯಸ್ ಒಪ್ಪಿದನೆ?…
ಹಾಗಾದರೆ ಶ್ರೇಯಸ್ ಜೀವನದಲ್ಲಿ ನಡೆದ ಯಾವ ಘಟನೆ ಯಿಂದ ಮನೆಯವರು ಬೇಸರ ಗೊಂಡಿದ್ದರು?… ವಿಷಯ ತಿಳಿದ ದೀಪ್ತಿ ಏನು ಮಾಡಿದಳು?… ದೀಪ್ತಿಯನ್ನು ಶ್ರೇಯಸ್ ಪತ್ನಿ ಎಂದು ಸ್ವೀಕರಿಸಿದನೇ?….
****
೨. ಕಡಲಷ್ಟು ಪ್ರೀತಿ.
ಆ ಊರಿಗೆ ಹೊಸದಾಗಿ ಬಂದ ಡಿ. ವೈ ಎಸ್. ಪಿ. ಭರತ್ ಇಂಜನಿಯರಿಂಗ್ ಓದಿದ್ದರೂ ಇಷ್ಟ ಪಟ್ಟು ಈ ವೃತ್ತಿಯನ್ನು ಆಯ್ದು ಕೊಂಡಿದ್ದ.ಗೆಳೆಯನ ಮಗನ ಹುಟ್ಟು ಹಬ್ಬದಲ್ಲಿ ಅಕಸ್ಮಾತ್ತಾಗಿ ಕಂಡ ಸಹಜ ಚೆಲುವೆ ಊರ್ಮಿಳಾ ಅವನ ಮನ ಸೆಳೆದಿದ್ದಳು.
ಭರತ್ ತನ್ನ ತಾಯಿ -ತಂದೆ ಜೊತೆ ಅವರ ಮನೆಗೆ ಹೆಣ್ಣು ಕೇಳಲು ಬಂದಾಗ ಊರ್ಮಿಳಾ ‘ತನಗೆ ಪೊಲೀಸರೆಂದರೆ ಭಯ. ಶಿಕ್ಷಕಿಯಾಗ ಬೆನ್ನುವುದು ತನ್ನ ಕನಸು’ ಎಂದು ಮದುವೆಯನ್ನು ನಿರಾಕರಿಸಿದಾಗ ಭರತ್ ನಿರಾಶನಾಗಿದ್ದ.
ಅವಳ ದಿಟ್ಟ ಮಾತು ಮೆಚ್ಚುಗೆಯಾದರೂ, ಆಕೆ ತನ್ನನ್ನು ಒಪ್ಪದ ಸಣ್ಣ ನೋವಿತ್ತು.
ಒಂದು ವರ್ಷ ಅವಳಿಗಾಗಿ ಕಾಯಲು ಭರತ್ ನಿರ್ಧರಿಸಿದ್ದ. ಊರ್ಮಿಳಾ ಆತ ಪೊಲೀಸ್ ಎಂದು ಭಯಪಟ್ಟು ಹಿಂದೆ ಸರಿದರೆ, ಕಾರ್ಯಕ್ರಮಗಳಲ್ಲಿ ಸುಂದರಾಂಗನಾದ ಅವನ ಭಾಷಣ ಕೇಳಿ, ಅವಳ ಗೆಳತಿಯರು ಹೊಗಳುತ್ತಾ ಆರಾಧಿಸುತ್ತಿದ್ದರು. ಇದರಿಂದ ಅವಳಲ್ಲಿ ಉಂಟಾದ ಬದಲಾವಣೆಗಳೇನು?….
ಕಡೆಗೂ ಭರತ್ ಭಯ ಪಡುವ ಹುಡುಗಿಯ ಭಯವನ್ನು ಕಳೆದಿದ್ದಾದರೂ ಹೇಗೆ?..
***
೩. ನಿನ್ನೊಲುಮೆ ತೋಟದಲಿ.
ಡಾಕ್ಟರ್ ದಂಪತಿಗಳಾದ ರಾಘವೇಂದ್ರ ರಾವ್ ಹಾಗೂ ದೇವಿಕಾ ಅವರ ಹಿರಿಯ ಮಗಳು ವೈಷ್ಣವಿ ಮೆಡಿಕಲ್ ಓದುತ್ತಿದ್ದಳು. ಆದರೆ ಕಿರಿಯವಳು ಜಾಹ್ನವಿ ಬಿ.ಕಾಂ. ಮಾಡುತ್ತಿದ್ದು ಹೆತ್ತವರಿಗೆ ಬೇಸರವಿತ್ತು. ಚೆನ್ನಾಗಿ ಅಡುಗೆ ಕಲಿತು , ಕಸೂತಿ, ಪುಸ್ತಕ- ಹೂತೋಟ ಎಂದು ಕಾಲ ಕಳೆಯುತ್ತಿದ್ದ ಜಾನು ಮನೆಯವರ ಅನಾದರಕ್ಕೆ ತುತ್ತಾಗಿದ್ದಳು. ತಮ್ಮ ಇಬ್ಬರು ಮಕ್ಕಳಲ್ಲಿ ಹೆತ್ತವರೇ ತಾರತಮ್ಯ ಮಾಡುತ್ತಿದ್ದರು.
ತಮ್ಮ ಡಾಕ್ಟರ ಸ್ನೇಹಿತ ಮಾಧವ್ ರಾವ್ ಮಗ ಡಾ. ಶ್ರೀಹರಿ ತಮ್ಮ ಹಿರಿಯ ಮಗಳು ವೈಷ್ಣವಿಯನ್ನು ಮದುವೆಯಾಗಲಿ ಎಂಬಾಸೆ ರಾಘವೇಂದ್ರರಿಗಿತ್ತು. ಆದರೆ ಶ್ರೀಹರಿ ಮೆಚ್ಚಿದ್ದು ಜಾಹ್ನವಿಯನ್ನು!!.
ವೈಷ್ಣವಿಯನ್ನು ಮತ್ತೊಬ್ಬ ಡಾಕ್ಟರ್ ತುಷಾರ್ ಜೊತೆ ಮದುವೆ ಮಾಡಿದ್ದರು. ಇಬ್ಬರೂ ಅಕ್ಕ -ತಂಗಿಯರು ತಮ್ಮ ಮನೆಗಳಲ್ಲಿ ಹೇಗೆ ಸಂಸಾರ ನಡೆಸುತ್ತಾರೆ?… ಜಾಹ್ನವಿಯ ಬಗ್ಗೆ ಹೆತ್ತವರಿಗೆ ಸದಭಿಪ್ರಾಯ ಮೂಡಲು ಕಾರಣವೇನು?… ವೈಷ್ಣವಿಯನ್ನು ಸದಾ ಹೊಗಳುತ್ತಿದ್ದ ಅವರು ಬದಲಾಗಲು ಕಾರಣವೇನು?…
ವಿದ್ಯೆ ಕಲಿತರೆ ಮಾತ್ರ ಸಾಲದು. ವ್ಯಕ್ತಿತ್ವವೂ ಬೆಳೆದರೆ ಮಾತ್ರ ಸುಗಮವಾದ ಬದುಕನ್ನು ಬಾಳ ಬಹುದು. ಎನ್ನುವ ನೀತಿಯುಳ್ಳ ಈ ಕಥೆ ತುಂಬಾ ಇಷ್ಟವಾಯಿತು.

*****
೪. ಒಲವೆಂದರೇನೆಂದು ಹೇಳಲಿಲ್ಲ ನೀನು.
ಪ್ರೀತಿ ಮತ್ತು ಪ್ರೇಮ್ ಶಾಲಾ ದಿನಗಳಿಂದಲೂ ನೋಡಿ ಆಡಿ ಬೆಳೆದವರು. ಮುಂದೆ ಕಾರಣಾಂತರದಿಂದ ಅವರಿಬ್ಬರ ದಾರಿ ಬೇರೆಯಾಗಿತ್ತು. ಬಡವನಾದ ಆತ ಬೇರೆ ಹೆಣ್ಣನ್ನು ವಿವಾಹವಾಗಿ ಸಂಸಾರಸ್ಥನಾಗಿದ್ದ. ಅವಳೂ ಬೆಂಗಳೂರಿಗೆ ಹಾರಿದ್ದಳು. ತಮ್ಮ ನಡುವೆ ಇದ್ದುದು ಕೇವಲ ಸ್ನೇಹವಲ್ಲ. ಅದು ಒಲವು ಎಂದು ತಿಳಿಯಲು ಸಾಕಷ್ಟು ಸಮಯವೇ ಆಗಿತ್ತು! .
ಮದುವೆಯಾದ ಮೇಲೆ ಅವಳು ಕಥೆಗಾರ್ತಿಯಾಗಿ ಹೆಸರು ಮಾಡಿದ್ದಳು. ಅವುಗಳನ್ನು ಓದುತ್ತಾ ಅವನು ಫೋನಲ್ಲಿ ಮಾತಾಡತೊಡಗಿದ್ದ. ಹಾಗಾದರೆ ಇಬ್ಬರ ಜೀವನದಲ್ಲಿ ನಡೆದ ಘಟನೆಗಳೇನು?… ಒಲವು -ಪ್ರೀತಿಯ ಕುರಿತ ಮಾತು ಹಾಗೂ ಕವನವೇ ಹೆಚ್ಚಾಗಿರುವ ಈ ಕಥೆ ಇತ್ತೀಚಿನ ಚಲನ ಚಿತ್ರವೊಂದನ್ನು ನೆನಪಿಸಿತು. ಆದರೂ ಓದುಗನಿಗೆ ಎಲ್ಲೂ ಬೇಸರ ಬರದಂತೆ ಲೇಖಕಿ ಬರೆದ ಉತ್ತಮ ಸಂಭಾಷಣೆ ಹಾಗೂ ನಿರೂಪಿಸಿದ ಭಾಷಾಶೈಲಿ ಮೆಚ್ಚುಗೆಯಾಗುತ್ತದೆ.
ಈ ಲೇಖಕಿಯವರಿಂದ ಇನ್ನಷ್ಟು ಕಥೆಗಳು ಮೂಡಿ ಬರಲಿ…ಸಾಹಿತ್ಯ ಲೋಕದಲ್ಲಿ ಅವರ ಹೆಸರು ಬೆಳಗಲಿ..ಎನ್ನುವ ಆಶಯ.
- ಮಾಲತಿ ರಾಮಕೃಷ್ಣ ಭಟ್
