‘ಉರುಸು (ಕತೆಗಳು)’ ಕೃತಿ ಪರಿಚಯ

ಕತೆಗಾರರಾದ ಆನಂದ ಭೋವಿ ಎದುರಿಸುತ್ತಿರುವ ಬಿಕ್ಕಟ್ಟುಗಳು ಬೇರೆ ಅಲ್ಲ ಎನ್ನುವುದು ಅವರ ‘ಉರುಸು’ ಕಥಾ ಸಂಕಲನದ ಕತೆಗಳನ್ನು ಓದಿದಾಗ ತಿಳಿಯುತ್ತದೆ.ಪುಸ್ತಕಕ್ಕೆ ಜಿ. ಪಿ. ಬಸವರಾಜು ಅವರು ಮುನ್ನುಡಿಯನ್ನು ಬರೆದಿದ್ದಾರೆ, ತಪ್ಪದೆ ಮುಂದೆ ಓದಿ…

ಲೇಖಕರು : ಆನಂದ ಭೋವಿ
ಪ್ರಕಾಶನ: ಸಂಗಾತ ಪುಸ್ತಕ
ಬೆಲೆ: ₹ 120
ಸಂಪರ್ಕ: 8431113501

ದೇಶದ್ರೋಹ ಎಂಬ ಪದ ಈಗಲೂ ನಮ್ಮ ದೇಶದಲ್ಲಿ ಚಲಾವಣೆಯಲ್ಲಿದೆ. ಬ್ರಿಟಿಷರ ಜೊತೆಗೇ ದೇಶಬಿಟ್ಟು ತೊಲಗಬೇಕಾಗಿದ್ದ ಈ ಪದ ಯಾಕೆ ಈಗಲೂ ಉಳಿದುಕೊಂಡಿದೆ? ಅಷ್ಟೇ ಅಲ್ಲ, ದೇಶದ್ರೋಹದ ಆಪಾದನೆಯನ್ನು ಹೊರಿಸಿ ಯಾರನ್ನೂ ಜೈಲಿಗೆ ಅಟ್ಟುವ, ಅಟ್ಟಿದ ಹಲವಾರು ಪ್ರಕರಣಗಳು ನಮ್ಮ ಕಣ್ಮುಂದಿವೆ. ಕವಿ ವರವರ ರಾವ್, ಸಾಮಾಜಿಕ ಕಾರ್ಯಕರ್ತೆ ಸುಧಾ ಭಾರದ್ವಾಜ್, ಆನಂದ ತೇಲ್ತುಂಬೆ… ಹೀಗೆ ಹಲವರು ಜೈಲು ಕಂಡದ್ದು ಈ ಆಪಾದನೆಯ ಮೇಲೆಯೇ, ಸುಪ್ರೀಂ ಕೋರ್ಟ್ ಕೂಡ ದೇಶದ್ರೋಹ ಆಪಾದನೆಯ ಬಗ್ಗೆ ದನಿ ಎತ್ತಿತ್ತು. ಈ ಆಪಾದನೆಯನ್ನು, ಕಾನೂನನ್ನು ಬಹಳ ಎಚ್ಚರಿಕೆಯಿಂದ ಬಳಸಲು ಸೂಚ್ಯವಾಗಿ ಹೇಳಿತ್ತು.

ಇವತ್ತಿನ ರಾಜಕೀಯ ಸ್ಥಿತಿ ಬಿಚ್ಚುಮನಸ್ಸಿನ ಮಾತುಕತೆಗೆ, ಅಭಿಪ್ರಾಯಕ್ಕೆ, ಬರಹಗಳಿಗೆ ಅನುಕೂಲಕರವಾಗಿಲ್ಲ. ಆತಂಕದಲ್ಲಿಯೇ ಕಲಾವಿದರು, ಬರಹಗಾರರು, ಚಿಂತಕರು, ಬುದ್ದಿಜೀವಿಗಳು ತೂಗಿ ತೂಗಿ ನೋಡಬೇಕಾದ, ತಮ್ಮ ಕೃತಿಗಳನ್ನು ರೂಪಿಸಬೇಕಾದ, ಮಾತುಗಳನ್ನು ಆಡಬೇಕಾದ ಸನ್ನಿವೇಶ ಎದುರಾಗಿದೆ.

ಕತೆಗಾರರಾದ ಆನಂದ ಭೋವಿ ಎದುರಿಸುತ್ತಿರುವ ಬಿಕ್ಕಟ್ಟುಗಳು ಬೇರೆ ಅಲ್ಲ ಎನ್ನುವುದು ಅವರ ‘ಉರುಸು’ ಕಥಾ ಸಂಕಲನದ ಕತೆಗಳನ್ನು ಓದಿದಾಗ ತಿಳಿಯುತ್ತದೆ. ಇಲ್ಲಿರುವ ‘ಜೈಲು’ ಎನ್ನುವ ಕತೆಯನ್ನೇ ಉದಾಹರಣೆಗೆ ತೆಗೆದುಕೊಂಡರೆ: ಖಜಾನೆ ಖಾಲಿಯಾಗಿದೆ; ರಾಜ್ಯ ದಿವಾಳಿ ಎದ್ದಿದೆ; ಜನ ತೆರಿಗೆಯ ಹೊರೆಯನ್ನು ಹೊರಲಾರದೆ ಕಂಗಾಲಾಗಿದ್ದಾರೆ. ಅದು ಜನ ದಂಗೆ ಏಳುವ ಸನ್ನಿವೇಶ. ರಾಜ ಕಂಗಾಲಾಗಿದ್ದಾನೆ. ಅರ್ಥಮಂತ್ರಿ, ‘ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಸಲಹೆ ಮಾಡುತ್ತಾನೆ. ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾಕೆನ್ನುವ’ ರಾಜ ಎಂಥ ನಿರ್ಧಾರಕ್ಕೂ ಸಿದ್ಧನೇ. ಅದೇ ಹೊತ್ತಿಗೆ ಬರುವ ಸೇನಾಧಿಪತಿ, ‘ಉತ್ತರದ ಗಡಿಯಲ್ಲಿ ಶತ್ರುಗಳ ಹಾವಳಿ ಹೆಚ್ಚಾಗಿದೆ. ಅವರು ಗಡಿದಾಟುವ ಸಾಹಸ ಮಾಡುತ್ತಿದ್ದಾರೆ’ ಎನ್ನುತ್ತಾನೆ. ಹೀಗೆ ಸಾಗುತ್ತದೆ ಕತೆ.

ಪ್ರಜೆಗಳಲ್ಲಿ ಅಭದ್ರತೆಯ ವಾತಾವರಣ ಹುಟ್ಟುಹಾಕಲು ರಾಜನ ಅನುಮತಿ ಪಡೆದ ಸೇನಾಧಿಪತಿ, ತಮ್ಮದೇ ಸೈನಿಕರಿಗೆ ಶತ್ರು ಸೈನಿಕರ ವೇಷ ತೊಡಿಸಿ ತಮ್ಮವೇ ಒಂದೆರಡು ಹಳ್ಳಿಗಳನ್ನು ಕೊಳ್ಳೆ ಹೊಡೆಸುತ್ತಾನೆ. ರಾಜನ ಮೇಲಿದ್ದ ಪ್ರಜೆಗಳ ಸಿಟ್ಟು ಶತ್ರುಗಳ ಕಡೆಗೆ ತಿರುಗುತ್ತದೆ. ಶತ್ರುಗಳು ಗಡಿದಾಟಿ ಬರುತ್ತಿದ್ದಾರೆ, ರಾಜ ಸ್ವತಃ ಯುದ್ಧರಂಗಕ್ಕೆ ತೆರಳಿ ಶತ್ರುಗಳ ಜೊತೆಯಲ್ಲಿ ಕಾದುತ್ತಿದ್ದಾನೆ. ಮಂತ್ರಿಗಳು, ಸೇನಾಧಿಪತಿಗಳು, ರಾಜ ಪರಿವಾರ ಎಲ್ಲರೂ ತಮ್ಮ ಸಂಪತ್ತನ್ನೆಲ್ಲ ರಾಜ್ಯದ ಬೊಕ್ಕಸಕ್ಕೆ ದಾನವಾಗಿ ನೀಡುತ್ತಿದ್ದಾರೆ. ರಾಣಿಯೂ ತನ್ನೆಲ್ಲ ಆಭರಣಗಳನ್ನು ರಾಜ್ಯ ಬೊಕ್ಕಸಕ್ಕೆ ನೀಡಿದ್ದಾಳೆ-ಇಂಥ ಸುಳ್ಳುಗಳನ್ನು ಹಬ್ಬಿಸಿ ಪ್ರಜೆಗಳನ್ನು ದಿಕ್ಕುತಪ್ಪಿಸಲಾಗುತ್ತಿದೆ.

ನಿಧಾನಕ್ಕೆ ಈ ಪರದೆಯೂ ಸರಿದು, ನಿಜ ಸಂಗತಿ ಬಯಲಾದಾಗ ಮತ್ತೆ ಪ್ರಜೆಗಳು ದಂಗೆ ಏಳುವ ಸೂಚನೆಗಳು ಕಾಣಿಸುತ್ತವೆ. ಆಗ ರಾಜ ಆಪ್ತರ ಜೊತೆ ಸಮಾಲೋಚನೆ ಮಾಡುತ್ತಾನೆ. ‘ನಾವು ಪ್ರಜೆಗಳ ಜಾತಿ, ಧರ್ಮ, ಭಾಷೆ, ಊರು, ಕೇರಿ, ಬಟ್ಟೆ, ಊಟ, ಯುದ್ಧ, ಭಾವನೆ, ದೇವರು ಇವುಗಳ ಪ್ರಯೋಗ ಮಾಡಿ ಮುಗಿಸಿದ್ದಾಯ್ತು. ಇನ್ನು ಏನು ಉಳಿದಿದೆ’ ಎಂದು ಮಂತ್ರಿ ಹತಾಶೆಯ ಸ್ವರ ಎತ್ತುತ್ತಾನೆ. ಆ ಹೊತ್ತಿನಲ್ಲಿ ನೆರವಿಗೆ ಬರುವವನು ಸೇನಾಧಿಪತಿಯೇ. ಸ್ಮಾರಕ ಕಟ್ಟಿಸಿ ಎಂದು ಸಲಹೆ ಕೊಡುತ್ತಾನೆ. ಈ ಸ್ಮಾರಕ ಬೇರೇನೂ ಅಲ್ಲ. ಬೃಹತ್ ಜೈಲನ್ನು ಕಟ್ಟಿ ಎಂದು ಈತ ಸಲಹೆ ಕೊಡುತ್ತಾನೆ. ತನ್ನ ಮಾತಿನ ಅರ್ಥವನ್ನು ಸೇನಾಧಿಪತಿ ವಿವರಿಸುತ್ತಾನೆ: ‘ಭಯ ಮೂಡಿಸಿ ಸಾಮ್ರಾಜ್ಯ ಉಳಿಸಬೇಕಿದೆ. ಗಲ್ಲಿಗಲ್ಲಿಗಳಲ್ಲಿ ರಾಜನೀತಿ ಟೀಕಿಸುವ ಜನ ಹೆಚ್ಚಾಗುತ್ತಿದ್ದಾರೆ. ರಾಜನ ಆಡಳಿತದ ಬಗ್ಗೆ ವ್ಯಂಗ್ಯವಾಡುತ್ತಿದ್ದಾರೆ. ಪ್ರತಿಭಟನೆ, ಸತ್ಯಾಗ್ರಹ ನಡೆಸುತ್ತಿದ್ದಾರೆ.’ ರಾಜ ಈ ಸಲಹೆಯನ್ನು ಮೆಚ್ಚುತ್ತಾನೆ. ಡಂಗುರ ಬಡಿದುಕೊಳ್ಳುತ್ತದೆ: ‘ರಾಜದ್ರೋಹಿಗಳಿಗೆ ಶಿಕ್ಷೆ, ಸಾರ್ವಭೌಮತ್ವ ಟೀಕಿಸುವವರಿಗೆ ಶಿಕ್ಷೆ, ರಾಜನಿಗೆ ಜೈಕಾರ ಹಾಕದವರಿಗೆ ಶಿಕ್ಷೆ.’

ತನ್ನ ಕಾಲಕ್ಕೆ, ವಿದ್ಯಮಾನಗಳಿಗೆ, ಸೂಕ್ತಗಳಿಗೆ, ಜನರ ನೋವಿಗೆ ತೆರೆದುಕೊಂಡ ಲೇಖಕ ಇಂಥ ಕತೆ ಬರೆಯಲು ಸಾಧ್ಯ. ಇದೊಂದು ‘ಅಲಿಗರಿ’. ನೇರವಾಗಿ ಹೇಳಲು, ಟೀಕಿಸಲು ಸಾಧ್ಯವಾಗದ ಸನ್ನಿವೇಶದಲ್ಲಿ ಬರಹಗಾರರು ಅನುಸರಿಸುವ ವಿಧಾನ. ಹೇಳುವ ಸಂಗತಿಗಳು ಬೇರೆ; ಅವುಗಳಿಂದ ಹೊಮ್ಮುವ ಧ್ವನಿ ಬೇರೆ. ಈ ಧ್ವನಿಯ ಮೂಲಕ ಬರಹಗಾರ, ಕಲಾವಿದ ತನ್ನ ಗುರಿಯನ್ನು ತಲುಪುತ್ತಾನೆ. ಸರ್ವಾಧಿಕಾರಿಗಳು ಎಲ್ಲೆಲ್ಲಿ ಬಂದು ಹೋಗಿದ್ದಾರೊ, ಅಲ್ಲೆಲ್ಲ ಇಂಥ ಬರಹಗಳೂ ಬಂದಿವೆ. ಕತೆ, ಕವಿತೆ, ಕಾದಂಬರಿ, ಚಲನಚಿತ್ರ, ನಾಟಕ ಹೀಗೆ ಸೂಕ್ಷ್ಮ ಓದುಗರಿಗೆ ಕತೆ ಯಾವುದರ ಕಡೆಗೆ ಬೆಟ್ಟುಮಾಡಿ ತೋರಿಸುತ್ತದೆ ಎಂಬುದು ತಿಳಿಯುತ್ತದೆ. ಯಾವುದೇ ಸೃಜನಶೀಲ ಕೃತಿಯ ಸಾರ್ಥಕತೆ ಇರುವುದು ಇಂಥ ಓದಿನಲ್ಲಿಯೇ.
ಆನಂದ ಭೋವಿ ತಮ್ಮದೇ ನೆಲದಲ್ಲಿ ನಿಂತವರು. ಈ ನೆಲದ ಭಾಷೆಯನ್ನು, ಸಂಸ್ಕೃತಿಯನ್ನು, ಜನಜೀವನವನ್ನು, ಜನಪದದ ಮಿಡಿತವನ್ನು ಬಲ್ಲವರು. ಜನರ ನಂಬಿಕೆಗಳು, ಆಚರಣೆಗಳು, ಅವುಗಳ ಹಿಂದಿರುವ ಆಶಯಗಳು, ನೋವುಗಳು, ಸಂಕಷ್ಟಗಳು ಎಲ್ಲವನ್ನೂ ಸಮಚಿತ್ತದಿಂದ, ಜೀವಪರ ನಿಲುವಿನಿಂದ ನೋಡಿದವರು. ಅವುಗಳಲ್ಲಿ ಇರಬಹುದಾದ ಅರ್ಥಕ್ಕೆ ಕೈಚಾಚಿದವರು. ಸೊಬಗಿಗೆ, ಸೊಗಡಿಗೆ ಮಾರುಹೋದವರು. ಹಾಗಾಗಿಯೇ ಈ ಕತೆಗಳಿಗೆ ಬೇರೆಯದೇ ಆದ ಬಣ್ಣ, ಹೊಳಪು ಲಭಿಸಿದೆ. ಇಲ್ಲಿರುವ ಎಲ್ಲ ಕತೆಗಳೂ ಒಂದಕ್ಕಿಂತ ಒಂದು ಭಿನ್ನ. ಆದರೆ ಇವುಗಳ ಕೇಂದ್ರ ಮಾತ್ರ ಒಂದೇ. ಅದು ಬದುಕಿನ ಕೇಂದ್ರ; ಸಮಾಜಮುಖಿಯಾದ ಕೇಂದ್ರ.

‘ಹೋಳಿ ಹುಣ್ಣಿಮೆ’ ಎನ್ನುವ ಕತೆಯ ಕ್ಯಾನ್‌ವಾಸ್ ಚಿಕ್ಕದು. ಒಂದು ಹಳ್ಳಿಗೆ, ಅಲ್ಲಿನ ರಾಜಕೀಯಕ್ಕೆ ಸೀಮಿತವಾದದ್ದು. ದಲಿತ ಮುಗ್ಧನೊಬ್ಬನ ನೋವನ್ನು, ಚುನಾವಣೆಯ ಮೂಲಕ ಅವನು ಪಡೆದುಕೊಳ್ಳುವ ಸ್ಥಾನವನ್ನು ಚಿತ್ರಿಸುತ್ತದೆ. ಅದು ಊರಿನ ಪಾರಂಪರಿಕ ಗೌಡನನ್ನು ಸಿಟ್ಟಿಗೇಳಿಸುವುದು, ಅವನ ಸೇಡಿನ ರಾಜಕೀಯ ಈ ದಲಿತನ ಸಾವಿನೊಂದಿಗೆ ಕೊನೆಯಾಗುವುದು; ಇದರ ಜೊತೆಗೆ ದಲಿತನ ಹೆಂಡತಿಯ ಪ್ರತಿಸೇಡು ಗೌಡನನ್ನು ಕೊಲ್ಲುವುದು… ಹೀಗೆ ಕತೆ ಬೆಳೆಯುತ್ತದೆ. ಈ ಕತೆಯ ಸೊಬಗು ಇರುವುದು ಹೋಳಿ ಹುಣ್ಣಿಮೆಯ ಜಾನಪದ ತ್ರಿಪದಿಗಳ ಬಳಕೆಯಲ್ಲಿ. ಜಾನಪದ ಗೀತೆಯ ಕಲಾತ್ಮಕ ಸ್ಪರ್ಶ ಇದನ್ನೊಂದು ಜಾನಪದ ಕತೆಯಂತೆ ಹೇಳುತ್ತಲೇ ವರ್ತಮಾನದ ಹಳ್ಳಿ ರಾಜಕೀಯದ ಮೇಲೆ ಬೆಳಕು ಚೆಲ್ಲುತ್ತದೆ. ಇದು ಆನಂದ ಅವರ ಪ್ರತಿಭೆಯನ್ನು ಅನಾವರಣ ಮಾಡುವ ಕತೆಯಾಗಿದೆ.

ಸಾಕ್ಷ್ಯವನ್ನಷ್ಟೆ ಕೇಳುವ ಕಾನೂನು, ಪೊಲೀಸ್ ವ್ಯವಸ್ಥೆ ಮತ್ತು ನ್ಯಾಯಾಂಗ ಇರುವಲ್ಲಿ ಮುಗ್ಧರು ಕಟ್ಟುವ ಕನಸುಗಳೂ ಹೇಗೆ ಅವರ ಕೊರಳಿಗೆ ಉರುಳಾಗುತ್ತವೆ ಎಂಬುದನ್ನು ‘ಆರಾಮ ಕುರ್ಚಿ’ ಎನ್ನುವ ಕತೆ ತೋರಿಸಿಕೊಡುತ್ತದೆ.

ವರ್ತಮಾನದ ಸಂಗತಿಗಳ ಮೇಲೆ ಕಣ್ಣಿಟ್ಟು ಬರೆಯುವ ಲೇಖಕನಿಗೆ ಅನೇಕ ಸವಾಲುಗಳು ಎದುರಾಗುತ್ತವೆ. ಪತ್ರಿಕೆಗಳು, ಟಿವಿ ಚಾನಲ್‌ಗಳು, ಬ್ಲಾಗ್, ಫೇಸ್‌ಬುಕ್‌ಗಳಲ್ಲಿ ತಕ್ಷಣ ಇಂಥ ಸಂಗತಿಗಳು ರೋಚಕವಾಗಿಯೇ ಪ್ರಕಟವಾಗಿರುತ್ತವೆ. ಸೃಜನಶೀಲ ಬರಹಗಾರರು ಇಂಥವೇ ಘಟನೆಗಳನ್ನು ಎತ್ತಿಕೊಂಡು ಬರೆಯುವುದು, ಅವು ಘಟನೆಗಳ ಮಜಲನ್ನು ದಾಟಿ ಸೃಜನಶೀಲ ಕೃತಿಗಳಾಗಿ ಬದಲಾಗುವುದನ್ನು ಕಂಡುಕೊಳ್ಳುವುದು ಸುಲಭದ ಸಂಗತಿಯಲ್ಲ. ಅದಕ್ಕೆ ಪ್ರತಿಭಾ ಸಾಮರ್ಥ್ಯ ಬೇಕೇ ಬೇಕಾಗುತ್ತದೆ. ಕೊರೋನಾ ಕಾಲದ ಸಂಗತಿಗಳು, ಕಸಾಯಿಖಾನೆಗಳಿಗೆ ದನಗಳನ್ನು ಸಾಗಿಸುವುದನ್ನು ರಾಜಕೀಯ ಅಸ್ತ್ರ ಮಾಡಿಕೊಂಡ ಹುನ್ನಾರಗಳು, ಹಳ್ಳಿಗಳಲ್ಲಿ ದಲಿತರಿಗೆ ಸುಡುಗಾಡೂ ಇಲ್ಲದಂತೆ ಮಾಡಿದ ಮೇಲ್ಪಾತಿಗಳ ದೌರ್ಜನ್ಯ -ಇಂಥವೆಲ್ಲ ಈ ಸಂಕಲನದಲ್ಲಿ ಕತೆಗಳಾಗಿರುವುದು ಆನಂದ್ ಅವರ ಪ್ರತಿಭೆಯನ್ನು ತೋರಿಸುತ್ತವೆ.


  • ಜಿ. ಪಿ. ಬಸವರಾಜು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading