ಆಟಿ ( ಆಷಾಢ ) ತಿಂಗಳು ಬಂತೆಂದರೆ ಕರ್ನಾಟಕದ ಕರಾವಳಿಯಲ್ಲಿ ಏನೋ ಒಂದು ರೀತಿಯ ಹೊಸ ವಾತಾವರಣವೇ ಸೃಷ್ಟಿಯಾಗುತ್ತದೆ. ವಿಭಿನ್ನ ಆಚರಣೆಗಳು, ತನ್ನದೆ ಆದ ಕಟ್ಟುಪಾಡು, ಊಟ , ತಿಂಡಿ, ಉಪಚಾರದಲ್ಲಿ ವೈಶಿಷ್ಟ್ಯ ಪೂರ್ಣವಾಗಿ ಜನಮನವನ್ನು ಗೆಲ್ಲುತ್ತೆ .ಕರ್ನಾಟಕದ ಬೇರೆಡೆಯಲ್ಲಿ ಕಾಣಸಿಗದ ಆಚರಣೆಗಳು ಕರಾವಳಿಯಲ್ಲಿ ಮಾತ್ರ ” ಆಟಿ ಮಾಸ ” ದಲ್ಲಿ ಕಾಣಸಿಗುತ್ತದೆ. ತಪ್ಪದೆ ಮುಂದೆ ಓದಿ…
ಈ ಸಮಯದಲ್ಲಿ ಕರಾವಳಿಯಲ್ಲಿ ಭಾರೀ ಮಳೆಯಾಗುವುದರಿಂದ ಅಲ್ಲಲ್ಲಿ ರೋಗ ರುಜಿನಗಳು ತಲೆದೋರುತ್ತದೆ. ಹಾಗಾಗಿ ಇದು ಕರಾವಳಿಗರ ಪಾಡಿಗೆ ಸ್ವಲ್ಪ ಕಷ್ಟದ ಸಮಯ ಎಂದರೂ ತಪ್ಪಿಲ್ಲ . ನಮಗೆ ಬಂದೊದಗಿದ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡಲು ‘ಆಟಿ ಕಳಂಜ’ ಬರುತ್ತಾನೆ ಎಂಬ ನಂಬಿಕೆ ತುಳುನಾಡಿನಲ್ಲಿ ಇಂದಿಗೂ ಕೂಡ ಜೀವಂತವಾಗಿದೆ .
ಆಟಿ ತಿಂಗಳು ಎಂದರೆ ಕರ್ಕಾಟಕ ಮಾಸ ಅಥವಾ ಶೂನ್ಯ ಮಾಸ ಎಂದರ್ಥ .ಈ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳು ನಿಷಿದ್ಧ .ಕಷ್ಟ ಕಾರ್ಪಣ್ಯಗಳು ಈ ಸಮಯದಲ್ಲಿ ಹೆಚ್ಚೆಂಬ ಕಾರಣ ಮನೆಯಲ್ಲಿ ಶುಭ ಕಾರ್ಯವನ್ನು ಆಟಿ ಮಾಸದಲ್ಲಿ ಮಾಡುವುದಿಲ್ಲ . ಹಾಗಾಗಿ ಬೇಡ, ಮರ್ದ, ಕನ್ನಿಯಾಪು, ಆಟಿ ಕಳಂಜ ನಂತಹ ದೈವಗಳು ಜನರನ್ನು ರಕ್ಷಿಸಲು ಮನೆ ಮನೆಗೆ ಬರುತ್ತಾನೆ ಎನ್ನುವುದು ಅನಾದಿ ಕಾಲದಿಂದಲೂ ಕೂಡ ನಂಬಿಕೊಂಡು ಬಂದಿರುವ ಸತ್ಯವಾಗಿದೆ.ಈ ಸತ್ಯಕ್ಕೆ ಪುಷ್ಟಿ ಕೊಡಲು ಅನೇಕ ಜನಪದ ಕಥೆಗಳು, ಪಾಡ್ದಾನಗಳು ಸಾಕ್ಷಿಯಾಗಿದೆ.

ತುಳುನಾಡು ಎಂದಾಗ ಮೊದಲಿಗೆ ನಮಗೆ ನೆನಪಾಗುವುದೇ ಭೂತಾರಾಧನೆ. ದೈವಗಳನ್ನು ಕಣ್ಣಿಗೊತ್ತಿಕೊಳ್ಳುವ ಈ ಜನ ” ಆಟಿ ಕಳಂಜ” ನನ್ನು ಮನೆಗೆ ಆಹ್ವಾನಿಸಿ, ತಮ್ಮ ಕಷ್ಟವನ್ನು ದೂರ ಮಾಡೆಂದು ಬೇಡಿಕೊಳ್ಳುವ ಈ ಆಟಿ ತುಳುನಾಡಿನವರಿಗೆ ಅತ್ಯಂತ ಪವಿತ್ರವಾದ ಹಬ್ಬವೆಂದರೆ ತಪ್ಪಿಲ್ಲ.
ಆಟಿ ಕಳಂಜ ಓಲೆ ಕೊಡೆಯನ್ನು ಹಿಡಿದು ಕೈಯಲ್ಲಿ ತೆಂಬರೆ( ಚರ್ಮದ ವಾದ್ಯ)ಯನ್ನು ಬಾರಿಸುತ್ತಾ ಮನೆ ಮನೆಗೆ ಬಂದು ಮನೆಯಂಗಳದಲ್ಲಿ ಕುಣಿದು ಹೋದನೆಂದರೆ ಇನ್ನು ಆ ಮನೆಗೆ ಯಾವುದೇ ರೀತಿಯ ಕಷ್ಟ ಕಾರ್ಪಣ್ಯಗಳು ಬರುವುದಿಲ್ಲ , ಆ ಮನೆಗೆ ದೇವರ ಸಾಕ್ಷಾತ್ಕಾರವಾಗಿದೆ ಎನ್ನುವಷ್ಟು ನಂಬಿಕೆ ಇದೆ.

ಆಟಿಯ ಆಚರಣೆ ಊರಿನಿಂದ ಊರಿಗೆ ವಿಭಿನ್ನವಾಗಿದೆ :
ಮೈಸೂರಿನಲ್ಲಿ ಆಷಾಢದ ಶುಕ್ರವಾರದಂದು ತಾಯಿ ಚಾಮುಂಡೇಶ್ವರಿಗೆ ವಿಶೇಷವಾದ ಪೂಜೆಯನ್ನು ಸಲ್ಲಿಸಿ ದೇವರ ದರ್ಶನವನ್ನು ಪಡೆಯುತ್ತಾರೆ .ಆಷಾಢ ಶುಕ್ರವಾರವೆಂದರೆ ತಾಯಿಯೂ ಕೂಡ ಪುನೀತಳಾಗಿ ಭಕ್ತರನ್ನು ಹರಸಿ ಹಾರೈಸುತ್ತಾಳೆಂಬುವುದು ಜನರ ನಂಬಿಕೆ. ಅಲ್ಲಿನ ಜನ ಆಷಾಢದ ಶುಕ್ರವಾರದ ದಿನ ಮನೆಯಲ್ಲಿ ಪಾಯಸದ ಊಟವನ್ನು ಮಾಡಿ ದೇವರಿಗೆ ನೈವೇದ್ಯವನ್ನು ಅರ್ಪಿಸಿ ಮನೆಯ ಹೆಣ್ಣುಮಕ್ಕಳಿಗೆ ಅರಿಶಿನ, ಕುಂಕುಮ ತಾಂಬೂಲವನ್ನು ಕೊಟ್ಟು ಶ್ರದ್ಧಾ ಭಕ್ತಿಯಿಂದ ಆಷಾಢ ಶುಕ್ರವಾರವನ್ನು ಆಚರಿಸುತ್ತಾರೆ .
ಬಯಲು ಸೀಮೆಯ ಮಂದಿ ಆಷಾಢವನ್ನು ವಿಭಿನ್ನವಾಗಿ ಆಚರಿಸುತ್ತಾರೆ. ಆ ಸಮಯದಲ್ಲಿ ಒಡಹುಟ್ಟಿದ ಅಣ್ಣ ಬಂದು ತಂಗಿಯನ್ನು ತವರು ಮನೆಗೆ ಕರೆತರುತ್ತಾನೆ. ಮದುವೆಯಾದ ಮನೆ ಮಗಳು ತವರಿನಲ್ಲಿದ್ದರೆ ಅವಳಿಗೂ ಖುಷಿ ಎನ್ನುವ ಅರ್ಥದಲ್ಲಿ ‘ತವರಿನ ಸಿರಿ ನೀನಮ್ಮ’ ಎಂದು ಪ್ರೀತಿಯಿಂದ ಬರಮಾಡಿಕೊಳ್ಳುತ್ತಾರೆ. ಆಕೆ ಆಷಾಢವನ್ನು ಮುಗಿಸಿ ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಗಂಡನ ಮನೆಗೆ ತೆರಳುತ್ತಾಳೆ . ಶ್ರಾವಣ ಮಾಸದಲ್ಲಿ ಮನೆಮಗಳಿಗೆ ತವರಿನವರು ಹೊಸ ರೇಷ್ಮೆ ಸೀರೆ, ಹೂವು ,ಬಳೆ ಅರಿಸಿನ ಕುಂಕುಮದ ಬಾಗಿನವನ್ನು ಕೊಟ್ಟು ಖುಷಿ ಖುಷಿಯಾಗಿಯೇ ಗಂಡನ ಮನೆಗೆ ಕಳುಹಿಸಿ ಕೊಡುತ್ತಾರೆ.
ತುಳುನಾಡಿನ ಜಾನಪದ ಸಂಸ್ಕೃತಿಯಲ್ಲಿ ಚೆನ್ನೆಮಣೆಯಾಟ ಬಹಳ ಪ್ರಾಚೀನವಾದುದು.ವರ್ಷವಿಡೀ ಗಂಡನ ಮನೆಯಲ್ಲಿ ಬೆವರು ಸುರಿಸುವ ಹೆಣ್ಣುಮಗಳು, ದೈಹಿಕವಾಗಿ ಹಾಗೂ ಮಾನಸಿಕವಾಗಿ ಚೇತರಿಸಿಕೊಳ್ಳಲು ತವರು ಮನೆಗೆ ಬಂದು, (ಆಟಿ ಕುಲ್ಲುನಿ) ಆಟಿ ಕಳೆಯುವುದಕ್ಕೆ ಈ ಚೆನ್ನೆಮಣಿ ಆಟವನ್ನು ಆಡುವ ಆಚರಣೆ ಪ್ರಚಲಿತವಾಗಿದೆ.
ರೋಗ ನಿರೋಧಕ ಎನ್ನುವ ಕಾರಣಕ್ಕೆ ” ಆಟಿ ” ಯಲ್ಲಿ ಗದ್ದೆಗೆ, ಮೊದಲ ಬೆಳೆಗೆ ‘ಕಾಸರ್ಕನ ಮರ'( ಕಾಸ್ನ ಮರ)ದ ಗೆಲ್ಲನ್ನು ನೆಡುತ್ತಾರೆ. ಗೆಲ್ಲಿನ ಕಹಿಯನ್ನು ಭತ್ತ ಹೀರಿಕೊಂಡಾಗ ಭತ್ತಕ್ಕೆ ಬಂದಿರುವ ರೋಗ ನಿವಾರಣೆಯಾಗುತ್ತದೆ ಎನ್ನುವುದು ಪ್ರತೀತಿ.

ಆಟಿಯ ಆಚರಣೆಯ ಜೊತೆಗೆ ನೆನಪಾಗುವ ಇನ್ನೊಂದು ವಿಶೇಷತೆ ಏನೆಂದರೆ ಅದೇ ಬಾಯಿಯಲ್ಲಿ ನೀರುರಿಸುವ ಬಗೆಬಗೆಯ ಖಾದ್ಯಗಳು. ಆಟಿ ತಿಂಗಳಿನಲ್ಲಿ ಕರಾವಳಿಗರು ಪುರಾತನವಾದ ಔಷಧಿಯ ಖಾದ್ಯಗಳನ್ನು ತಯಾರಿಸಿ ತಿನ್ನುತ್ತಾರೆ. ಮಳೆಗಾಲದಲ್ಲಿ ಮಾತ್ರ ಜಾಸ್ತಿ ಕಾಣ ಸಿಗುವ ಕೆಸುವಿನ ಎಲೆ ,ಮರಗೆಣಸು, ಕೆಸುವಿನ ದಂಟು ,ಒಂದಲಗಾ ,ಹಲಸಿನ ಹಣ್ಣಿನ ಕಡುಬು, ಹಲಸಿನ ಬೀಜದ ಚಟ್ನಿ , ಮಾವಿನಕಾಯಿಯ ಚಟ್ನಿ , ಪತ್ರೊಡೆ ,ಮುಳ್ಕಾ, ಮಣ್ಣಿ ,ಅರಶಿನ ಎಲೆಯ ಕಡುಬು ….ಹೀಗೆ ವಿಭಿನ್ನವಾದ ತಿನಿಸುಗಳನ್ನು ತಯಾರಿಸುತ್ತಾರೆ.
ಇವೆಲ್ಲ ಅಳಿವಿನಂಚಿನಲ್ಲಿರುವುದರಿಂದ ಆ ದಿನದ ಪ್ರಾಮುಖ್ಯತೆ ,ಪುರಾತನ ಖಾದ್ಯಗಳು ಮರೆಯಾಗಬಾರದೆನ್ನುವ ಉದ್ದೇಶದಿಂದ ಈಗೀಗ ಕರಾವಳಿಯಲ್ಲಿ ಜನರೆಲ್ಲರೂ ಸೇರಿ “ಆಟಿಡೊಂಜಿ ” ದಿನ ಎನ್ನುವ ವಿಭಿನ್ನ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದಾರೆ .
ವಿವಿಧ ಸಂಘ-ಸಂಸ್ಥೆಗಳು, ಸಂಘಟನೆಗಳು, ಮಹಿಳಾ ಮಂಡಳಿಗಳು ಈ ಕೈಂಕರ್ಯಕ್ಕೆ ಕೈ ಜೋಡಿಸಿದ್ದಾರೆ . ‘ಹಳೆಯ ಬೇರು ಕಹಿಯಾಗಿದ್ದರೂ ಅದರ ಫಲ ಸಿಹಿ ‘ಎನ್ನುವಂತೆ ಅದು ಮುಂದಿನ ಜನಾಂಗಕ್ಕೆ ಮರೆಯಾಗಿ ಹೋಗಬಾರದೆನ್ನುವ ಉದ್ದೇಶದಿಂದ ಈ ಆಚರಣೆಯನ್ನು ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ಅಗಾಧವಾಗಿ ಸಿಗುವ ಹಸಿರು ತರಕಾರಿಗಳು, ವಿಧವಿಧ ಪಲ್ಯಗಳು, ಚಟ್ನಿ, ಹಲಸು, ಮಾವಿನ ಹಣ್ಣುಗಳಿಂದ ವಿವಿಧ ಖಾದ್ಯವನ್ನು ತಯಾರಿಸಿ ಕಾರ್ಯಕ್ರಮಕ್ಕೆ ಮೆರುಗನ್ನು ತರುತ್ತಿದ್ದಾರೆ.
ತುಳು ಜಾನಪದ ಸಂಸ್ಕೃತಿಯನ್ನು ಹೊಂದಿದ ಕರಾವಳಿಯಲ್ಲಿ ಆಟಿ ತಿಂಗಳಲ್ಲಿ ಈ ವಿಶಿಷ್ಟ ಆಚರಣೆಯನ್ನು ಮಾಡುತ್ತಾರೆ. ಕರಾವಳಿಯಲ್ಲಿ ಆಷಾಢದ ” ಅಮಾವಾಸ್ಯೆ ” ಯನ್ನು “ಆಟಿ ಅಮಾವಾಸ್ಯೆ ” ಎನ್ನುತ್ತಾರೆ. ಇದನ್ನೇ ಮೈಸೂರು ಬೆಂಗಳೂರು ಕಡೆ ” ಭೀಮನ ಅಮಾವಾಸ್ಯೆ ” ಎನ್ನುತ್ತಾರೆ. ಕರಾವಳಿಗರಲ್ಲಿ ಒಂದು ವಿಶೇಷ ಸಂಪ್ರದಾಯವಿದೆ, “ಆಟಿ ಅಮವಾಸ್ಯೆ” ಯ ದಿನ ಸೂರ್ಯೋದಯಕ್ಕೆ ಮೊದಲೇ ಪಾಲೆ ಮರ (ಹಾಲೆ ಮರ)ದ ಸನಿಹ ಹೋಗಿ ಮೋನಚಾದ ಕಲ್ಲಿನಿಂದ ಆ ಮರದ ತೊಗಟೆಯನ್ನು ಜಜ್ಜಿ ತರುತ್ತಾರೆ. ಮರಕ್ಕೆ ಯಾವುದೇ ಕಬ್ಬಿಣದ ಸಲಕರಣೆಗಳನ್ನು ತಾಗಿಸಬಾರದು. ಹಾಲೆ ಮರದಲ್ಲಿರುವ ರೋಗನಿರೋಧಕ ಶಕ್ತಿಯೇ ಕಷಾಯ ಸೇವನೆಗೆ ಕಾರಣ. ಹಾಲೆ ಮರದ ತೊಗಟೆಯನ್ನು ತಂದು ಚೆನ್ನಾಗಿ ತೊಳೆದು ರುಬ್ಬುವ ಕಲ್ಲಿನಲ್ಲಿ ಹಾಕಿ ರುಬ್ಬಿ ಸ್ವಲ್ಪ ನೀರು ಸೇರಿಸಿ ಸೋಸಿ ಹಸಿ ಕಷಾಯ ಸೇವಿಸುವುದು ಕರಾವಳಿಯ ವಿಶೇಷ, ಆಬಾಲಾ ವೃದ್ಧರಾಗಿ ಮನೇ ಮಂದಿಯೆಲ್ಲ ಅವತ್ತು ಈ ಕಹಿ ಕಷಾಯ ಸೇವಿಸುತ್ತಾರೆ…ಹಾಗಂತ ಬೇರೆ ಕಷಾಯ ದ ಹಾಗೆ ಒಂದು ಗ್ಲಾಸ್ ತುಂಬಾ ಕುಡಿಯುವುದಿಲ್ಲಾ..ಒಂದೆರಡು ಸ್ಪೂನ್ ಅಷ್ಟೇ ಕುಡಿಯುವುದು.ವರ್ಷಕ್ಕೊಮ್ಮೆ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು ಎಂಬ ಪ್ರತೀತಿ.
- ಶಕುಂತಲಾ ಸವಿ
