‘ಆಷಾಢ’ ಕವನ – ಎಚ್.ಮಂಜುಳಾ

ಆಷಾಢದ ವಿರಹದ ಗೀತೆ…ಎಚ್.ಮಂಜುಳಾ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…

ಇದೇಕೆ ಬಂದಿತೋ ಆಷಾಢ
ಮನಸ್ಸೆಲ್ಲಾ ಕವಿದ ಕಾರ್ಮೋಡ ॥

ಹೆ: ತವರವರು ಬಂದಾರೆ ಕರೆಯಲು
ನಿಮ್ಮ ಮನಕ್ಕೊಪ್ಪಿಗೆಯೇ ನಾ ಹೊರಡಲು
ತೋಚದು ನನಗೇನೂ ಮಾಡಲು
ಮುಂದಡಿಯಿಡಲೇಕೋ ಹಿಗ್ಗಾಲು ಮುಗ್ಗಾಲು!!

ಗಂ: ನನ್ನವಳಾಗಿ ಮೂರು ದಿನ ಕಳೆದಿಲ್ಲ
ಇದನ್ನಾರು ಮಾಡಿದರೋ ನಮಗಿದು ಸಲ್ಲ
ನಿನ್ನನ್ನು ಅಗಲಿರಲು ನನಗೆ ಮನಸ್ಸಿಲ್ಲ
ಈ ಮನಗಳನ್ನು ಇವರೇಕೆ ಅರಿತಿಲ್ಲ.?!

ಹೆ: ಬಿರಿದ ಭುವಿಗೆ ಸುರಿದಿದೆ ವರ್ಷಧಾರೆ
ಒಣಗಿದ ಲತೆಗೆ ಹರಿದಿದೆ ಹರ್ಷಧಾರೆ
ನಲಿದು ದುಂಬಿಯೊಡಗೂಡಿದೆ ಸುಮಸಿರಿ
ಇದ ನೋಡುತ ನಿನ್ನನಗಲಿ ನಾ ಹೇಗೆ ಇರಲಿ?!

ಗಂ: ನೀನಿಲ್ಲದೇ ಸುಳಿಯುವ ಗಾಳಿಯೂ ಬಿರುಸು
ನೀ ಮುಡಿಯದ ಪುಷ್ಪದ ಸುಗಂಧವೂ ಹಳಸು
ಚಂದಿರನ ಶೀತಲತೆಯೂ ಸುಡುವ ಬಗೆ
ಮುಂಗಾರು ಮಳೆಯ ಸಿಂಚನವೂ ಧಗೆ !

ಹೆ: ನಾ ಹೊರಟ ಗಳಿಗೆಯಲಿ ಓ ಮೋಡ ಬಾ ಕವಿದು
ನಾ ಹೊರಟ ದಾರಿಯಲಿ ಓ ಮಳೆಯೇ ನೀ ಸುರಿದು
ಕೆರೆ ಕಟ್ಟೆಗಳೇ ಒಡೆದು ನನ್ನ ದಾರಿಗೆ ಅಡ್ಡವಾಗಿ
ಪಯಣವ ನಿಲ್ಲಿಸಿ ಉಳಿಯಲು ಸಹಕಾರಿಯಾಗಿ !


  • ಎಚ್.ಮಂಜುಳಾ, ಹರಿಹರ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading