ಬನ್ನಿ ಕನಸುಗಳೇ ನದಿಯಾಗಿ ನನ್ನೆಡೆಗೆ ಹರಿದು ಬನ್ನಿ…ಎಚ್.ಮಂಜುಳಾ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಬನ್ನಿ ಕನಸುಗಳೇ ನೀವೆಲ್ಲಾ
ನನ್ನೆಡೆಗೆ ಹರಿದು ಬನ್ನಿ
ಅರಿತು ನನ್ನ ಭಾವನೆಗಳ
ಬೆರೆತು ಒಂದಾಗಲು ಬನ್ನಿ.॥
ತಾಯಿಯ ಪ್ರೀತಿ ತೋರಿ
ತಂದೆಯ ಮಮತೆ ಬೀರಿ
ಅಣ್ಣನ ಅಕ್ಕರೆಯೂ ಸೇರಿ
ಬನ್ನಿ ಕನಸುಗಳೇ ನದಿಯಾಗಿ
ನನ್ನೆಡೆಗೆ ಹರಿದು ಬನ್ನಿ.॥
ನೋವ ಕಳೆದು ಹರುಷ ಸುರಿದು
ಅಳಲು ಹೋಗಿ ಕೊರಳು ತೂಗಿ
ನಿಶೆ ಸರಿದು ಉಷೆ ಬೆಳಗುವಂತೆ
ಹೊಂಗಿರಣಗಳ ಚೆಲ್ಲಿ ಬನ್ನಿ ಕನಸುಗಳೇ
ನೀವೆಲ್ಲಾ ನನ್ನೆಡೆಗೆ ಹರಿದು ಬನ್ನಿ.॥
ನಗುವಲ್ಲೇ ನಾನು ಕರಗಿ
ನನ್ನೆಲ್ಲಾ ತಾಪಗಳು ಸೊರಗಿ
ಮಂಜುಹನಿಯಲಿ ಮಿಂದು
ಹೊಳೆಯುವ ಮಲ್ಲಿಗೆಯ ತೆರದಿ_
ಯನ್ನ ಹೃದಯಕೆ ಹೊಳಪು ನೀಡಲು
ಬನ್ನಿ ಕನಸುಗಳೇ ಸಾಗಿ ನನ್ನಡೆಗೆ ಬನ್ನಿ.॥
- ಎಚ್.ಮಂಜುಳಾ, ಹರಿಹರ.
