ಮಂತ್ರಗಳನ್ನು ಪಠಿಸುವದರಿಂದ ಮನಸ್ಸಿನ ಮೇಲೆ ನೆಮ್ಮದಿ ಮತ್ತು ಹಿಡಿತ ಸಾಧಿಸಬಹುದು. ಮಂತ್ರಗಳು ಶಕ್ತಿಯುತ ಕಂಪನಗಳನ್ನು ಹೊಂದಿದ್ದು, ಅವು ಧನಾತ್ಮಕ ಭಾವನೆ, ಕ್ರಿಯೆಗಳ, ಅಭಿವ್ಯಕ್ತಿಯ ಅಲೆಯನ್ನು ಸೃಷ್ಟಿಸುತ್ತವೆ. ಮಂತ್ರದ ಶಕ್ತಿಯ ಕುರಿತು ಪುಷ್ಪಾ.ರಾಠೋಡ ಅವರು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…
ಮಂತ್ರವೆಂದರೆ ಒಂದು ಶಬ್ಧ. ಒಂದು ನಿರ್ದಿಷ್ಟ ಉಚ್ಛಾರಣೆ ಅಥವಾ ಒಂದು ಅಕ್ಷರ. ಇಂದು, ಆಧುನಿಕತೆಯು ಇಡೀ ಅಸ್ತಿತ್ವವನ್ನು ಶಕ್ತಿಯ ಮಾರ್ದನಿಯಂತೆ ವಿವಿಧ ಮಟ್ಟದ ಕಂಪನಗಳಂತೆ ನೋಡುತ್ತದೆ. ಎಲ್ಲಿ ಕಂಪನವಿರುತ್ತದೆಯೋ ಅಲ್ಲಿ ಶಬ್ಧವಿರಲೇಬೇಕು. ಇದರ ಅರ್ಥ ಸಂಪೂರ್ಣ ಅಸ್ತಿತ್ವವು ಒಂದು ರೀತಿಯಾದ ಶಬ್ಧ ಅಥವಾ ಶಬ್ಧದ ಸಂಕೀರ್ಣ ಸಂಯೋಜನೆಯಾಗಿದೆ. ಇಡೀ ಅಸ್ತಿತ್ವವು ಅನೇಕ ಮಂತ್ರಗಳನ್ನೊಳಗೊಂಡ ಸಮ್ಮಿಲನವಾಗಿದೆ. ಇವುಗಳ ಪೈಕಿ ಕೀಲಿ ಕೈಗಳಂತೆ ಕೆಲಸ ಮಾಡಬಹುದಾದ ಕೆಲವು ಮಂತ್ರ ಅಥವಾ ಶಬ್ಧಗಳನ್ನು ಗುರುತಿಸಲಾಗಿದೆ. ಅವುಗಳನ್ನು ನೀವು ನಿರ್ದಿಷ್ಟ ರೀತಿಯಲ್ಲಿ ಉಪಯೋಗಿಸಿದರೆ, ಆ ಮಂತ್ರಗಳು ನಿಮ್ಮೊಳಗೆ ಜೀವನದ ವಿಭಿನ್ನವಾದ ಆಯಾಮ ಮತ್ತು ಅನುಭವವನ್ನು ತೆರೆಯುವ ಕೀಲಿಕೈಗಳಾಗುತ್ತವೆ.
- ಸದ್ಗುರು.
ಯೋಗ ಪುರಾಣ ಸಂಗ್ರಹದಲ್ಲಿ ಒಂದು ಅದ್ಭುತವಾದ ಕಥೆಯಿದೆ. ಒಂದು ದಿನ ಒಬ್ಬ ಮಹಾನ್ ಯೋಗಿ ಒಬ್ಬರು ಶಿವನ ಬಳಿ ಬಂದು, “ಏಕೆ? ನಿನ್ನ ಭಕ್ತರೆಲ್ಲ ಮಂತ್ರವನ್ನು ನಿಲ್ಲದೇ ಒದರುತ್ತಿದ್ದಾರೆ? ಅವರು ಮಾಡುತ್ತಿರುವುದಾದರೂ ಎನು? ಈ ಅಸಂಬದ್ಧವನ್ನು ನಿಲ್ಲಿಸಲು ನೀನಾದರೂ ಏಕೆ ಹೇಳಬಾರದು?ಎಂದು ಕೇಳುತ್ತಾನೆ. ಶಿವ ಅವನನ್ನು ನೋಡಿ “ನೀನು ಒಂದು ಕೆಲಸ ಮಾಡು, ಆ ನೆಲದ ಮೇಲೆ ತೆವಳುತ್ತಿದ್ದ ಹುಳದ ಬಳಿ ಹೋಗಿ, ಶಿವ ಶಂಭೋ ಮಂತ್ರವನ್ನು ಹೇಳು ಎನ್ನುತ್ತಾನೆ. ಆ ಯೋಗಿಯು ಅಸಡ್ಡೆಯಿಂದ ಸರಿ ಎಂದು ಮಂತ್ರವನ್ನು ಹೇಳುತ್ತಾನೆ. ಆಗ ಆ ಹುಳ ಅಲ್ಲಿಯೇ ಸತ್ತು ಬೀಳುತ್ತದೆ. ಯೋಗಿಯು ಆಶ್ಚರ್ಯದಿಂದ ಇದೇಕೆ ಹೀಗಾಯ್ತು ಮಂತ್ರ ಉಚ್ಛಾರಣೆಯಿಂದ ಹುಳು ಸತ್ತಿತಲ್ಲ ಎನ್ನುತ್ತಾನೆ. ಆಗ ಶಿವ ಹಾರುತ್ತಿರುವ ಚಿಟ್ಟೆಯನ್ನು ತೋರಿಸಿ,”ಆ ಚಿಟ್ಟೆಯಲ್ಲಿ ಗಮನವಿರಿಸಿ “ಶಿವ ಶಂಭೋ” ಮಂತ್ರವನ್ನು ಹೇಳು ಎನ್ನುತ್ತಾನೆ. ಇಲ್ಲ ನನಗೆ ಚಿಟ್ಟೆಯನ್ನು ಸಾಯಿಸಲು ಆಗದು ಎಂದಾಗ ಶಿವನು “ಪ್ರಯತ್ನಿಸು” ಎಂದ. ಅದರ ಬಳಿಗೆ ಹೋಗಿ ಮಂತ್ರ ಹೇಳಿದಾಗ ಅದೂ ಸತ್ತು ಬಿದ್ದಿತ್ತು. ಈ ಮಂತ್ರದ ಫಲಿತಾಂಶ ಇದಾದರೆ ಇದನ್ನು ಹೇಳಲು ಯಾರಾದರೂ ಏಕೆ ಪ್ರಯತ್ನಿಸುವರು ಎಂದ ಯೋಗಿ.ಆಗ ಶಿವನು ಕಾಡಿನಲ್ಲಿ ಓಡುವ ಜಿಂಕೆಯನ್ನು ತೋರಿಸಿ ಅದರ ಬಳಿ ಹೋಗಿ ಮಂತ್ರವನ್ನು ಹೇಳು ಎನ್ನುತ್ತಾನೆ.”ಇಲ್ಲ ಜಿಂಕೆಯನ್ನು ಕೊಲ್ಲುವುದು ನನಗಿಷ್ಟವಿಲ್ಲ”ಎಂದ. ಆಗ ಶಿವನು “ಪರವಾಗಿಲ್ಲ ಹೇಳು”ಎಂದ. ಆ ಜ್ಞಾನಯೋಗಿಯು “ಶಿವಶಂಭೋ” ಎಂದ. ಆಗ ಆ ಜಿಂಕೆಯು ಸತ್ತು ಬಿದ್ದಿತು. ಯೋಗಿಯು ಸಂಪೂರ್ಣ ವ್ಯಾಕುಲಿತನಾಗಿ,ಈ ಮಂತ್ರದ ಉದ್ದೇಶವೇನು ಇದು ಎಲ್ಲರನ್ನು ಕೊಲ್ಲುತ್ತಿದೆ ಅಷ್ಟೇ ಎಂದನು.

ಫೋಟೋ ಕೃಪೆ : google
ಅದೇ ಸಮಯದಲ್ಲಿ ಒಬ್ಬ ತಾಯಿಯು ತನ್ನ ಮಗುವಿನೊಂದಿಗೆ, ಆಶೀರ್ವಾದ ಪಡೆಯಲು ಅಲ್ಲಿಗೆ ಬಂದಳು. ಶಿವನು “ಈ ಮಗುವಿಗಾಗಿ ಈ ಮಂತ್ರವನ್ನು ಹೇಳು ಎಂದ.”ಇಲ್ಲ ನನಗೆ ಆಗುವುದಿಲ್ಲ, ಮಗುವನ್ನು ಕೊಲ್ಲಲು ಇಷ್ಟವಿಲ್ಲ ಎಂದ. ಶಿವನ ಒತ್ತಾಯದ ಮೇರೆಗೆ ಯೋಗಿಯೂ “ಶಿವ ಶಂಭೋ”ಎಂದ. ಆಗ ಆ ಮಗು ಎದ್ದು ಕುಳಿತಿತು. ಮಗು ಹೇಳಿತು,”ನಾನು ಒಂದು ಹುಳುವಾಗಿದ್ದೆ, ಈ ಮಂತ್ರದಿಂದ ನನ್ನನ್ನು ಹಾರುವ ಚಿಟ್ಟೆಯಾಗಿ ಮಾಡಿದೆ. ಇನ್ನೊಂದು ಮಂತ್ರದಿಂದ ನನ್ನನ್ನು ಜಿಂಕೆಯಾಗಿ ಮಾಡಿದೆ. ನಂತರ ಮತ್ತೊಂದು ಮಂತ್ರದಿಂದ ನನ್ನನ್ನು ಮನುಷ್ಯನಾಗಿ ಮಾಡಿದೆ. ಇನ್ನೊಂದು ಬಾರಿ “ಶಿವ ಶಂಭೋ”ಮಂತ್ರವನ್ನು ಹೇಳು ನಾನು ದೈವತ್ವ ಪಡೆಯಬೇಕು”ಎಂದು ಹೇಳಿತು. ಮಂತ್ರಕ್ಕೆ ಎಷ್ಟೆಲ್ಲಾ ಶಕ್ತಿ ಇರುತ್ತದೆ. ಮಂತ್ರಗಳು ಮಾನವ ಜೀವನದಿಂದ ಮುಕ್ತಿಯೆಡೆಗೆ ಕರೆದೊಯ್ಯುವ ಮಾರ್ಗಗಳು ಎಂದು ಈ ಕಥೆ ಹೇಳುತ್ತದೆ. ಮಂತ್ರಗಳು ಶಕ್ತಿಯುತ ಕಂಪನಗಳನ್ನು ಹೊಂದಿದ್ದು, ಅವು ಧನಾತ್ಮಕ ಭಾವನೆ, ಕ್ರಿಯೆಗಳ, ಅಭಿವ್ಯಕ್ತಿಯ ಅಲೆಯನ್ನು ಸೃಷ್ಟಿಸುತ್ತವೆ. ಮಂತ್ರಗಳನ್ನು ಪಠಿಸುವದರಿಂದ ಮನಸ್ಸಿನ ಮೇಲೆ ನೆಮ್ಮದಿ ಮತ್ತು ಹಿಡಿತ ಸಾಧಿಸಬಹುದು.ಮಂತ್ರಗಳು ಮನಸ್ಸು, ದೇಹ, ಭಾವನಾತ್ಮಕ ಸ್ಥಿತಿಯನ್ನು ಗುಣಪಡಿಸುತ್ತದೆ.ಮಂತ್ರಗಳ ನಿರ್ದಿಷ್ಟ ಉಚ್ಛಾರಣೆಯಿಂದ ಒಳ್ಳೆಯ ಫಲಿತಾಂಶ ಪಡಯಬಹುದು. ಸರ್ವೇಸಾಮಾನ್ಯವಾದ ಗಾಯತ್ರಿ ಮಂತ್ರದ ತಪ್ಪಾದ ಉಚ್ಛಾರಣೆಯಿಂದ ತಮಗೆ ತಾವೇ ಅಪಾಯವನ್ನು ತಂದುಕೊಂಡಂತಹ ಜನರ ಉದಾಹರಣೆಗಳು ಇವೆ. ಕೇವಲ ಶಬ್ಧವನ್ನು ಹೇಳದೇ ಪ್ರಜ್ಞಾಪೂರ್ವಕವಾಗಿ ಮಂತ್ರಗಳನ್ನು ಪಠಿಸಬೇಕು. ಮಂತ್ರಗಳು ಅಸ್ತಿತ್ವವನ್ನು ಅರಿಯುವ ಕಡೆಗೆ ಅತ್ಯುತ್ತಮವಾದ ಪೂರ್ವ ಸಿದ್ಧತಾ ಹೆಜ್ಜೆಗಳಾಗಬಹುದು. ಕೇವಲ ಒಂದು ಮಂತ್ರ ಜನರ ಮೇಲೆ ಅದ್ಭುತವಾದ ಪರಿಣಾಮ ಬೀರಬಹುದು.
- ಪುಷ್ಪಾ.ರಾಠೋಡ
