ಮಲ್ಲಿಕಾರ್ಜುನ ಕಡಕೋಳ ಅವರ ‘ಪರಿಮಳದ ಹಾದಿಯ ಪಯಣಿಗರು’ ಪುಸ್ತಕದ ಕುರಿತು ಖ್ಯಾತ ರಂಗಕರ್ಮಿ ಗುಂಡಣ್ಣ ಚಿಕ್ಕಮಗಳೂರು ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಪರಿಮಳದ ಹಾದಿಯ ಪಯಣಿಗರು
ಲೇಖಕರು : ಮಲ್ಲಿಕಾರ್ಜುನ ಕಡಕೋಳ
ಪ್ರಕಾಶನ : ಅಭಿವ್ಯಕ್ತಿ ಪ್ರಕಾಶನ
ಪುಟಗಳು : ೨೫೦.೦೦
ಪುಟಗಳು : ೨೩೨
ಆತ್ಮೀಯ ಕಡಕೋಳ ಸರ್….ನಿಮ್ಮ ಪುಸ್ತಕ ಓದಿ ಮುಗಿಸಿದೆ.
ಬಹಳ ಅತ್ಯುತ್ತಮ ಬರವಣಿಗೆ ಕಡಕೋಳ್…ನಿಮ್ಮ ಪಯಣದ ಹಾದಿಯ ಸಾಕಷ್ಟು ಜನ ನನಗೂ ಆತ್ಮೀಯರೆ… ಅವರ ಮತ್ತೊಂದು ಮಗ್ಗುಲನ್ನು ನೋಡಿದ ಹಾಗಾಯಿತು ನನಗೆ.
ನಿಮ್ಮ ಭಾಷಾ ವೈವಿಧ್ಯತೆ ಬಗ್ಗೆ ಒಂದು ದೊಡ್ಡ ಸಲಾಮ್. ಹಲವಾರು ಪದಗಳನ್ನು ಬರೆದಿಟ್ಟುಕೊಂಡಿದ್ದೇನೆ. ಅವುಗಳ ಅರ್ಥ ಬೇಕಾಗಿದೆ. ಅಷ್ಟು ದೇಸಿ ಜವ಼ಾರಿ ಭಾಷೆಯನ್ನು ಬಳಸಿದ್ದೀರಿ.

ಮಾನ್ಪಡೆ, ಹೆಚ್.ಕೆ.ಆರ್, ವಿ.ಗೀತಾ, ಲಂಕೇಶ್, ತಿಪ್ಪೇಸ್ವಾಮಿ, ಸೊಲಬಕ್ಕನವರ್, ರೇಷ್ಮಾ,ಸುಜಾತ, ಜೇವರ್ಗಿ ರಾಜಣ್ಣ, ನಿಮ್ಮ ಅಕ್ಕ ಸಂಜೀವಕ್ಕ, ಶಾರದ ಮಂದಿರದ ಹರಿಶಂಕರ್, ಮುಲ್ಲಾ ಅಲ್ಲೀಸಾಬ. ಹೀಗೆ ಪಟ್ಟಿ ಮಾಡುತ್ತಾ ಹೋದರೆ ಇಡೀ ಪುಸ್ತಕದಲ್ಲಿ ಹೆಸರಿಸಿರುವ ಹೆಸರುಗಳನ್ನೇ ಪಟ್ಟಿ ಮಾಡಬೇಕಾಗುತ್ತದೆ. ಸಕಾಲದಲ್ಲಿ ನೆರವಾದವರ, ಹೃದಯವಂತಿಕೆಯ ಸಹೃದಯರನ್ನ ನೆನೆಯದ ಗೆಳೆತನ, ಬಂಧುತ್ವ ಪ್ರಯೋಜನವಿಲ್ಲದ್ದು ಎಂಬುದು ಈ ಪುಸ್ತಕ ಓದಿದವರಿಗೆ ಅನ್ನಿಸುವುದು ಸಹಜ. ಆ ಭಾವನೆಯಿಂದ ನಾನೂ ಹೊರತಲ್ಲ.
ನಿಮಗೆ ಪರಿಚಯವಿರುವವರ ಕುರಿತು ನೀವು ಒಂದು ಬೀಸಿನಲ್ಲಿ ಬರೆದ ಲೇಖನಗಳು ಇವುಗಳಲ್ಲ. ಪ್ರತಿಯೊಬ್ಬರನ್ನೂ ಸೂಕ್ಷವಾಗಿ ಗಮನಿಸಿ, ಅವರ ದೈಹಿಕ ಚಲನೆ ಮತ್ತು ಬೌಧಿಕ ಚಿಂತನೆಗಳನ್ನು ಬಹುಕಾಲ ನಿಮ್ಮ ನೆನಪಿನ ಅಂಗಳದಲ್ಲಿ ಇಟ್ಟುಕೊಂಡು, ವಿಶ್ಲೇಷಿಸಿ ಅತ್ಯಂತ ಗಾಡವಾಗಿ ಪ್ರಭಾವ ಬೀರಿದವರನ್ನು ಹೆಕ್ಕಿ ಅವರುಗಳ ಛಾಪನ್ನು ಅಕ್ಷರಗಳ ಮುಖಾಂತರ ಕಟ್ಟಿಕೊಡುವ ಪ್ರಯತ್ನ ಇದಾಗಿದೆ. ಈ ದುಸ್ಸಾಹಸಕ್ಕೆ ಪ್ರಯತ್ನಿಸಿ, ಯಶಸ್ವಿಯಾಗಿರುವ ತಮಗೆ ನನ್ನ ಲಾಲ್ ಸಲಾಮ್.
ಹೆಸರು ತೆಗೆದುಕೊಳ್ಳದಿದ್ದರೂ, ತಾವು ನಡೆಸಿರುವ ವಿಮರ್ಶಾತ್ಮಕ ವಿಶ್ಲೇಷಣೆಯ ಅಧ್ಯಯನ ಅವರುಗಳು ಯಾರು ಎಂಬ ರಹಸ್ಯವನ್ನು ಭೇದಿಸಿ ನಮಗೆ ನೇರ ಪರಿಚಯ ಮಾಡಿಸುವಂತಹ ತುಲನಾತ್ಮಕ ಬರಹಗಳೂ ಈ ಪರಿಮಳದ ಹಾದಿಯಲ್ಲಿ ಅಲ್ಲಲ್ಲಿ ಕಂಪು ಸೂಸುತ್ತಾ ಇವೆ.

ಲಕ್ಷೀಪತಿ ಕೋಲಾರ… ಇವರಿಗಿಂತ ಸೂಕ್ತ ಆಯ್ಕೆ ಮುನ್ನುಡಿಗೋ, ಪುಸ್ತಕದ ಪರಿಚಯಕ್ಕೋ ಅಥವಾ ನಿಮ್ಮ ಬರವಣಿಗೆಯ ವಿಶೇಷತೆಗಳನ್ನು ಸಾಮಾನ್ಯರ ಅರಿವಿಗೆ ತರುವ ಪ್ರಯತ್ನಕ್ಕೋ…ಅದು ಯಾವ ಕಾರಣಕ್ಕೇ ಇರಲಿ, ಅಂತಹ ಆಯ್ಕೆ ಅತ್ಯಂತ ಸಮರ್ಥನೀಯವಾಗಿದೆ ಮಲ್ಲಿಕಾರ್ಜುನ ಸರ್. ಪುಸ್ತಕದ ಆಯಾಮ ಮತ್ತು ಗಾಂಭೀರ್ಯವನ್ನು ಲಕ್ಷೀಪತಿ ಅವರ ಲೇಖನ ಇನ್ನಷ್ಟು ದೊಡ್ಡದು ಮಾಡಿದೆ.
ಒಂದು ಉತ್ತಮ ಪುಸ್ತಕವನ್ನು ಪರಿಚಯಿಸಿದ್ದಕ್ಕಾಗಿ ತಮಗೆ ಅನಂತ ವಂದನೆಗಳು… ಇದು ಇಷ್ಟಕ್ಕೇ ನಿಲ್ಲದಿರಲಿ. ನಿಮ್ಮ ಜೋಳಿಗೆಯ ಒಳಗೆ ಅವಿತು ಕುಳಿತಿರುವ ಇನ್ನಷ್ಟು ಜನರನ್ನು ಹೊರಕ್ಕೆ ತನ್ನಿ….
ಸಾಗರದ ಒಡಲು ಎಂದಿಗೂ ಬತ್ತದು..
ಪ್ರೀತಿಯಿಂದ,
- ಗುಂಡಣ್ಣ ಚಿಕ್ಕಮಗಳೂರು
