ವೆಂಕುವಿನ ನಿದ್ದೆಗೆಡಿಸಿದ ಫೋನ್ – ಪ್ರೊ. ರೂಪೇಶ್ ಪುತ್ತೂರು



ವೆಂಕು ನಿದ್ದೆ ಪ್ರಿಯ. ಅವನ ನಿದ್ದೆಗೆ ಭಂಗ ತಂದವರ್ಯಾರು? ವೆಂಕುನ ಪಾಡು ಏನಾಯಿತು…ಪ್ರೊ. ರೂಪೇಶ್ ಪುತ್ತೂರು ಅವರ ಹಾಸ್ಯಭರಿತ ಸಣ್ಣ ಕತೆ ಓದುಗರಿಗಾಗಿ….

ನಾವು ಸ್ನಾತಕೋತ್ತರ ಮಾಡಿದ ವಿಶ್ವವಿದ್ಯಾಲಯದ, ಸ್ನಾತಕ ವಿಭಾಗದ ಒಬ್ಬ ಪ್ರಯೋಗಲಾಯ ಸ್ಟೋರಿನ ಗುಮಾಸ್ತನಾಗಿದ್ದ- ವೆಂಕು. ಅವನಿಗೆ ಪದವಿಯ ತರಗತಿ ಪ್ರಾರಂಭವಾದ ಮೊದಲ ಎರಡು ವಾರ ಮಾತ್ರ ಕೆಲಸ… ವಿಜ್ಞಾನ ವಿಭಾಗಗಳಿಗೆ ಪ್ರಾಯೋಗಿಕ ತರಗತಿಗೆ ಬೇಕಾದ ಸಲಕರಣೆ ಒದಗಿಸುವುದು.

ನಂತರದ ದಿನಗಳಲ್ಲಿ ಅವನು ಆ ಕೊಠಡಿಯೊಳಗೆ ಬೆಳಿಗ್ಗೆ ಬರುವುದು, ಬಾಗಿಲು ಒಂದು ಚೂರು ಒರಗಿ ಇಡುವುದು. ತನ್ನ ಟಂಗೀಸ್ ನೈದ ಕುರ್ಚಿಯಲ್ಲಿ ಸುಗಮವಾಗಿ, ಮೇಜಿನ ಮೇಲೆ ತಲೆ ಇಟ್ಟು ನಿದ್ರಿಸುತ್ತಿದ್ದ. ಪಕ್ಕದಲ್ಲೇ ವಿಶ್ವವಿದ್ಯಾಲಯ ಕ್ಯಾಂಟೀನಿನ ಘಮ ಘಮ ಪರಿಮಳ ಅವನಿಗೆ ಜೋಗುಳವಾಗಿತ್ತು!!!!

ಒಂದು ದಿನ ನಾನೂ ಸಂಜೀವ, ಚೆಂಗಪ್ಪ,ಅರುಣ ಚಹಾ ಕುಡಿಯುತ್ತಾ …. ಸಂಜೀವನ ಏನೋ ಹಾಸ್ಯ ಚಟಾಕಿಗೆ ಚೆಂಗಪ್ಪ , ನಾನು , ಅರುಣಾ ಬಿದ್ದು ಬಿದ್ದು ನಕ್ಕೆವು. ಅರುಣನ ಸ್ವರ ತುಂಬಾ ಜೋರಾಗಿ, ಪಕ್ಕದ ಕಟ್ಟಡದೊಳಗಿನ ವೆಂಕಿಗೆ ನಿದ್ರಾಭಂಗವಾಗಿ, ಬಂದು ನಮ್ಮನ್ನು ಚೆನ್ನಾಗಿ ಬೈದುದಲ್ಲದೆ. ನಮ್ಮ ಹೆಸರು , ಯಾವ ವಿಷಯ(department) ಕಲಿಯೋದು ?ಎಂದು ಕೇಳಿ ಒಂದು ಪುಸ್ತಕದಲ್ಲಿ ಬರೆದು , ಕುಲಪತಿಗೆ ದೂರು ಕೊಡುವುದಾಗಿ ಹೇಳಿದ.

ನಾವೂ… ಭಲೇ ಜೋಡಿಗಳು…. ಯಾರದೋ ಹೆಸರು ಯಾವುದೋ ಡಿಪಾರ್ಟ್ಮೆಂಟ್ ಹೇಳಿ ಅಲ್ಲಿಂದ , ವೆಂಕಿಯನ್ನು ವಿನಂಮೃತೆಯಿಂದ ಅಮಾಯಕರಂತೆ ನೋಡುತ್ತಾ ಜಾಗೆ ಖಾಲಿ ಮಾಡಿದೆವು.
ವೆಂಕಿ ನಮ್ಮನ್ನು ಸುಮ್ಮನೆ ಭಯಪಡಿಸಿದ್ದಾಗಿತ್ತು. ಅವನು ಕುಲಪತಿಗೆ ಏನೂ ನಮ್ಮ ಬಗ್ಗೆ ದೂರಲಿಲ್ಲ. ಆದರೆ ಅದರ ನಂತರದ ದಿನ ನಾವು ಹಾಸ್ಟೆಲಿನಿಂದ, ವಿಶ್ವವಿದ್ಯಾಲಯದ ತರಗತಿಗೆ ಹೋಗುವ ದಾರಿಯಲ್ಲಿ ವೆಂಕಿಯ ಕೊಠಡಿ ಶೃದ್ದಿಸತೊಡಗಿದೆವು. ಯಾವುದೇ ಹೊತ್ತಿನಲ್ಲಿ ಅದರೊಳಗೆ ಇಣುಕಿ ನೋಡಿದರೂ, ವೆಂಕಿ ಮಾಡುವುದು ಬರೇ ನಿದ್ರೆ…ನಿದ್ರೆ…..ನಿದ್ರೆ.

ಫೋಟೋ ಕೃಪೆ : theindiantrumpet

ಅಲ್ಲಿ ಆ ಕೊಠಡಿಯೊಳಗೆ ಇಣುಕಿದರೆ ಅಲ್ಮಾರಾದಲ್ಲಿ ಕೆಲವು ಪುಸ್ತಕ ಮತ್ತು ಕಡತಗಳು, ನಿಧಾನ ತಿರುಗುವ ಬ್ರಿಟೀಷರ ಕಾಲದ ಫ್ಯಾನು, ಒಂದು ಕಪ್ಪು ಬಣ್ಣದ ಫೋನು, ಕೆಲವೊಮ್ಮೆ ಓಡಾಡುವ ಗುಬ್ಬಚ್ಚಿ, ಚಿಟ್ಟೆ, ಜೇನುನೊಣ ಜೊತೆಗೆ ತನ್ನ ಟೇಬಲಿನ ಮೇಲಿನ ಕ್ಯಾಮಲಿನ್ ಅಂಟಿನ ಬಾಟಲಿಯ ಪಕ್ಕದಲ್ಲಿ, ಜೊಲ್ಲು ಸುರಿಸುತ್ತಾ ಸುಖ ಲೊಲುಪತೆಯಲ್ಲಿ ನಿದ್ರಿಸುವ ವೆಂಕಿ!!!!!
ಹಾಸ್ಟೆಲಿನ ಲೇವಾದೇವಿ ಬರೆಯುವ ಶ್ರೀನಿವಾಸರು

” ಇಲ್ಲಿ ಇಂದು ಕೊನೆ, ನನಗೆ ವರ್ಗಾವಣೆಯಾಯಿತು. ವೆಂಕು ಇಪ್ಪತ್ತೈದು ವರುಷವಾಯಿತು. ಆ ಸೆಕ್ಷನಿನಲ್ಲಿ, ತನ್ನ ಪ್ರಭಾವದಿಂದ ಎಲ್ಲೂ ವರ್ಗಾವಣೆ ಆಗಿಲ್ಲ.” ಎಂದು ಹಾಸ್ಟೆಲ್ ಫೀಸು ಕಟ್ಟುವಾಗ ಯಾರಲ್ಲೋ ಹೇಳುವುದು ನಾವು ಕೇಳಿಸಿದ್ದೆವು.

ಆ ಒಂದು ದಿನ ಕಂಪ್ಯೂಟರು ಪದವಿಯವರಿಗೆ ಹೊಸಾ ಕಂಪ್ಯೂಟರ್ ಮೂರನೇ ಮಹಡಿಗೆ ಹೊತ್ತುಕೊಂಡು ಹೋಗಲು ಯಾರೂ ಇಲ್ಲವಾಗಿತ್ತು. ವೆಂಕಿಯ ಕೊಠಡಿಯಿಂದ ಹೊತ್ತು ಕೊಂಡುಹೋಗಲು ನನ್ನ ರೂಂಮೀಟ್ ಕಂಪ್ಯೂಟರ್ ಪ್ರಕಾಶ್ – ನನ್ನ, ಅರುಣ್, ಕೃಷ್ಣ, ಸಂಜೀವ್, ತುಕಾರಾಮನನ್ನು ನೆರವಿಗೆ ಕರೆದ. ಅಂದು ವೆಂಕಿಯ ಸ್ಟೋರಿನೊಳಗಿನ ವಿಶಾಲ ಕೊಠಡಿ ನಾವು ನೋಡಿದೆವು.

ಐದಾರು ತಿಂಗಳು ಕಳೆದಿತ್ತು ವಾರ್ಷಿಕ ಪರೀಕ್ಷೆಗೆ ಹೋಗುವಾಗ ವೆಂಕಿಯ ಕೊಠಡಿ ಬೀಗ ಹಾಕಿತ್ತು. ಫೋನು ರಿಂಗ್ ಆಗುತ್ತಿತ್ತು. ಕ್ಯಾಂಟೀನು ನಡೆಸುವ ರಾಮಣ್ಣ ಶಾಮಣ್ಣರಲ್ಲಿ ” … ಅಣ್ಣಾ ವೆಂಕಿ ಇಲ್ವಾ ? ಪಡ್ಚ ಆದ್ನಾ?”

ಫೋಟೋ ಕೃಪೆ : commons.wikimedia

” ಅಯ್ಯೋ…. ಅವನಿಗೆ ಎರಡ್ಮೂರು ತಿಂಗಳಿಂದ ಫೋನಿನ ಉಪದ್ರವಾಗಿ ಈವಾಗ ಲೈಬ್ರರಿಗೆ ವರ್ಗಾವಣೆ ಕೇಳಿ ಪಡೆದು ಹೋದ”ಅಂದ್ರು.

” ಭೂತದ ಉಪದ್ರ ಅಂತ‌ ಕೇಳಿದ್ದೆ….. ಇದೇನು ಫೋನಿನ ಉಪದ್ರ?”ಎಂದೆ ನಾನು.

” ನೋಡು… ಈಗಲೂ ರಿಂಗ್ ಆಗ್ತಿದೆ.

ಎಲ್ಲಿಂದಲ್ಲೋ ಕಾಲ್ ಬರುತ್ತೆ…

ಕೇರಳ , ಗೋವಾ, ಬೊಂಬೆ , ತಮಿಳುನಾಡು…..” ಎಂದು ನಗ ತೊಡಗಿದರು ರಾಮಣ್ಣ.

” …ಯಾಕೆ? ಏನು …. ಏನಾಯ್ತು? ”

” … ಅಯ್ಯೋ …

ಜೋಕಟ್ಟೆ ಜಯಮಾಲಾನಾ ?

ಜೋಕಟ್ಟೆ ಜಯಮಾಲಾ ಹೇ?

ಜೋಕಟ್ಟೆ ಜಯಮಾಲಾ ಎಂಗೆ ಕೂಪುಡ್ ?

ಜೋಕಟ್ಟೆ ಜಯಮಾಲಾ ಆಣೋ?…ಅಂತ ಫೋನಿನಲ್ಲಿ ಬರೋಕೆ ಹೇಳ್ತಾರಂತೆ.

ಫೋನು ವಯರು ಎರಡು ದಿನ ತೆಗೆದು ಇಟ್ಟ.



ಆವತ್ತು ಯುನಿವರ್ಸಿಟಿ ರಿಜಿಸ್ಟ್ರಾರ್ ಆಫೀಸಿನಿಂದ ಕಾಲ್ ಮಾಡಿದ್ರೆ ಇವನು ಎತ್ತಲಿಲ್ಲ. ಅವರು ಇಲ್ಲಿ ಬಂದು ನೋಡಿದರೆ … ಫೋನು ವಯರು ಡಿಸ್ಕನೆಕ್ಟ್ ಮಾಡಿ ನಿದ್ರೆ…. ಸಿಕ್ತು ಮೇಮೋ…ಮತ್ತೂ ಒಂದು ತಿಂಗಳು ಹೆಂಗೋ ದೂಡಿದ ಜೋಕಟ್ಟೆ ಜಯಮಾಲಾನ ಅಭಿಮಾನಿಗಳಿಂದ ಸೋತು ಸುಣ್ಣವಾಗಿ …. ಕೊನೆಗೆ ಕಾಡಿ ಬೇಡಿ ವರ್ಗಾವಣೆಯಾದ. ಮುಂದಿನ ಶೈಕ್ಷಣಿಕ ವರ್ಷದಿಂದ ಬೇರೆಯಾರಾದರು ಬರಬಹುದು” ಎಂದರು ಶಾಮಣ್ಣ.

ಯಾವತ್ತೂ ನಾವು ಬೈಟು ಚಹಾ ಕುಡಿಯುತ್ತಿದ್ದು, ಅಂದು ಸಂಜೀವನ ವತಿಯಿಂದ ಫುಲ್ ಚಹಾ!!!!! ಕಾರಣ ಕೇಳಿದರೆ ” ಸುಮಾರು ಸಲ ನಾನು ಓಡಾಡುವ ಟ್ರೈನಿನ ಐದಾರು ಭೋಗಿಯ ಶೌಚಾಲಯದಲ್ಲಿ ವೆಂಕುವಿನ ನಂಬರ್ ಬರೆದು, ಕೆಳಗೆ : Contact me , for you always Jokatte Jayamala.……. (ಸಂಪರ್ಕಿಸಿ: ನಿಮಗಾಗಿ ಎಂದೆಂದೂ ಜೋಕಟ್ಟೆ ಜಯಮಾಲಾ:;) ”

” ಏಯ್ ವೆಂಕು ನಂಬರ್ ಎಲ್ಲಿ ಸಿಕ್ತು?”

” ಅಂದು ಕಂಪ್ಯೂಟರ್ ಮೂರನೇ ಮಹಡಿಗೆ ಹೊತ್ತುಕೊಂಡು ಹೋಗಲು ವೆಂಕಿಯ ಸ್ಟೋರಿನೊಳಗಿನ ಹೋದಾಗ ಅಲ್ಲಿನ ಫೋನಿನ ಮೇಲೆ ನಮೂದಿಸಿದ ನಂಬ್ರ ಬರೆದಿಟ್ಟೆ…..”

ನಿಮ್ಮವ ನಲ್ಲ
ರೂಪು


  • ಪ್ರೊ. ರೂಪೇಶ್ ಪುತ್ತೂರು (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು, ಬೆಂಗಳೂರು)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading