ಸಾವಿನ ಸುದ್ದಿಯ ಸುತ್ತ



ವಿಜಯ್ ಅವರ ಆತ್ಮಕ್ಕೆ ಶಾಂತಿ ಕೋರುತ್ತಾ ,ಅವರ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಕೊಡಲೆಂದು ಹಾರೈಸುತ್ತೇನೆ.

ಸಾವಿನ ಸುದ್ದಿ ಬಿತ್ತರಿಸಲು ನಾ ಮುಂದು ತಾ ಮುಂದು ಎಂದು ಮುಗಿಬೀಳುವ ಖಾಸಗಿ ವಾಹಿನಿಗಳು ,ಸಾವನ್ನೂ ಸಹ ಬ್ರೇಕಿಂಗ್ ನ್ಯೂಸ್ ಆಗಿ ಬಿತ್ತರಿಸಬೇಕು ಎನ್ನುವ ಧಾವಂತ . ಅದರಿಂದ ಅವರಿಗೆ ಏನು ಸಿಗುತ್ತೋ ಗೊತ್ತಿಲ್ಲ . ಅವಾರ್ಡ್ ಸಿಗಬಹುದು ಅಷ್ಟೆ .ಈ ವಿಚಾರ ಅಪಘಾತಕ್ಕೆ ಒಳಗಾದ ಒಬ್ಬ ಮಾನವೀಯತೆ ಯುಳ್ಳ ,ಪ್ರಬುದ್ಧ ಕಲಾವಿದರ ಸಾವಿನ ಸುದ್ದಿಯ ವೃತ್ತಾಂತ . “ಸಂಚಾರಿ ವಿಜಯ್ “ಒಬ್ಬ ಪ್ರತಿಭಾನ್ವಿತ ನಟ ,ರಾಷ್ಟ್ರ ಪ್ರಶಸ್ತಿ ವಿಜೇತ ಹಾಗೂ ಇಂಜಿನಿಯರ್ ಪದವೀಧರ .ಅವರ ಒಂದೆರಡು ಸಿನಿಮಾ ನೋಡಿದರೆ ಸಾಕು. ಅವರಲ್ಲಿನ ಮಾನವೀಯತೆ, ಕಳಕಳಿ ,ವೃತ್ತಿಗೌರವ ಗೊತ್ತಾಗುತ್ತೆ.

“ನಾನು ಅವನಲ್ಲ ಅವಳು “ಎನ್ನುವ ಸಿನೆಮಾಕ್ಕೆ ರಾಷ್ಟ ಪ್ರಶಸ್ತಿ ಪುರಸ್ಕೃತರಾಗಿದ್ದರು.” ಹರಿವು” ಎನ್ನುವ ಸಿನಿಮಾ ನೋಡಿದರೆ, ನಾವು ಕಣ್ಣು ತುಂಬಿಕೊಳ್ಳುವುದು ಸತ್ಯ . ದಿನಾಂಕ ಹನ್ನೆರಡರ ರಾತ್ರಿ ಸುಮಾರು ಹನ್ನೊಂದು ಮೂವತ್ತು ಗಂಟೆಗೆ ಅಪಘಾತಕ್ಕೆ ಒಳಗಾಗುತ್ತಾರೆ .ಬೈಕ್ ನ ಹಿಂಬದಿಯಲ್ಲಿ ಕೂತ ಇವರು ತಲೆಗೆ ಪೆಟ್ಟುಬಿದ್ದು ಪ್ರಜ್ಞಾಹೀನರಾಗುತ್ತಾರೆ. ಬೈಕ್ ಓಡಿಸುತ್ತಿದ್ದ ಇವರ ಸ್ನೇಹಿತನಿಗೂ ಪೆಟ್ಟಾಗಿದ್ದರೂ ಸಹ ಸ್ನೇಹಿತರಿಗೆ ಫೋನ್ ಮಾಡಿ ವಿಚಾರ ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ಸಂಚಾರಿ ವಿಜಯ್ ಅವರ ಬ್ರೈನ್ ಗೆ ಪೆಟ್ಟಾಗಿದ್ದರಿಂದ ಶಸ್ತ್ರಚಿಕಿತ್ಸೆ ಮಾಡಿ ತೀವ್ರ ನಿಗಾ ಘಟಕದಲ್ಲಿ ಇಡುತ್ತಾರೆ. ಮೂವತ್ತಾರು ಘಂಟಿಯವರಿಗೆ ಏನೂ ಹೇಳಲಾಗುವುದಿಲ್ಲ ಅಂತ ಕುಟುಂಬದವರಿಗೆ ತಿಳಿಸಿರುತ್ತಾರೆ.

ಫೋಟೋ ಕೃಪೆ : Filmibeat

೩೬  ಗಂಟೆಯ ನಂತರ , ಮೆದುಳು ಬಿಟ್ಟು ಉಳಿದ ಅಂಗಗಳು ಸುಸ್ಥಿತಿಯಲ್ಲಿದ್ದ ರಿಂದ, ಮೆದುಳನ್ನು ಟೆಸ್ಟ್ಗಗೆ ಅಳವಡಿಸುತ್ತಾರೆ . ಅದರಲ್ಲಿ ಮೆದುಳು ನಿಷ್ಕ್ರಿಯವಾಗಿರುವುದು ತಿಳಿದಾಗ, ಡಾಕ್ಟರ್ ದಿನಾಂಕ ಹದಿನಾಲ್ಕರಂದು ಸುಮಾರು 1ಗಂಟೆಗೆ ಮಿದುಳು ನಿಷ್ಕ್ರಿಯವಾಗಿರುವದಾಗಿ ತಿಳಿಸುತ್ತಾರೆ .ಮಿದುಳು ,dead , ಅಲ್ಲ ‘Failure ,ಆಗಿರುವುದಾಗಿ ತಿಳಿಸುತ್ತಾರೆ . ಉಳಿದ ಅಂಗಗಳು ಕೆಲಸ ಮಾಡುತ್ತಿವೆ ಅಂತ ತಿಳಿಸಿ, ಮುಂದಿನ 6ಗಂಟೆ ಕಳೆದ ನಂತರ ಮತ್ತೊಂದು ಟೆಸ್ಟ್ ಮಾಡುವುದಾಗಿ ತಿಳಿಸುತ್ತಾರೆ .

ಈ ವಿಷಯ ತಿಳಿದ ತಕ್ಷಣ ಸಾಮಾಜಿಕ ಜಾಲತಾಣದಲ್ಲಿ ಸಂಚಾರಿ ವಿಜಯ್ ಅವರ ಫೋಟೋ ಹಾಕಿ ಶ್ರದ್ಧಾಂಜಲಿ ಅರ್ಪಿಸಿಯಿ ಬಿಡುತ್ತಾರೆ . ಇನ್ನೂ ಖಾಸಗಿ ಸುದ್ದಿವಾಹಿನಿಗಳ ಕೇಳಬೇಕಾ? ಒಂದೆರಡು ವಾಹಿನಿಗಳು ನಿಧನರಾದರು ಅಂತ ಸುದ್ದಿ ಬಿತ್ತರಿಸಿಯಿ ಬಿಡುತ್ತಾರೆ. ಇದನ್ನು ನೋಡಿದ ವಿಜಯ ಅವರ ಸ್ನೇಹಿತ ಸುದ್ದಿವಾಹಿನಿಗೆ ಫೋನ್ ಮಾಡಿ ಅವರು ಇನ್ನೂ ಉಸಿರಾಡುತ್ತಿದ್ದಾರೆ ಅಂತ ತಿಳಿಸಿ, ದಯವಿಟ್ಟು ಸತ್ತಿದ್ದಾರೆ ಅಂತ ಬಿತ್ತರಿಸಬೇಡಿ ಅಂತ ಹೇಳುತ್ತಾರೆ .



ಇದು ಹೋಗಲಿ ಅಂದರೆ, ಒಬ್ಬರು ಖಾಸಗಿ ಸುದ್ದಿ ವಾಹಿನಿಯವರು ,ಆಸ್ಪತ್ರೆ ಆವರಣದಲ್ಲಿ ನಿಂತಿದ್ದ ಒಬ್ಬ ಹೆಸರಾಂತ ನಿರ್ದೇಶಕರಿಗೆ ಮೈಕ್ ಹಿಡಿದು ಕೇಳ್ತಾರೆ ,ನೀವು ವಿಜಯ್ ಅವರ ಬಗ್ಗೆ ನಿಮ್ಮ ನೆನಪುಗಳನ್ನು ತಿಳಿಸುತ್ತೀರಾ ಅಂತ ಕೇಳ್ತಾರೆ! ಆವಾಗ ಅವ್ರು ಅವರಿನ್ನೂ ‘ಉಸಿರಾಡುತ್ತಿದ್ದಾರೆ “ಅವರ ಬಗ್ಗೆ ನಾನೇನು ಹೇಳಲಿ ಅಂತ ಕಣ್ಣು ತುಂಬಿಕೊಳ್ಳುತ್ತಾರೆ .

ನಂತರದಲ್ಲಿ ವಾಹಿನಿಗಳು ವಿಜಯ್ ಉಸಿರಾಡುತ್ತಿದ್ದಾರೆ ಅಂತ ಪ್ರಕಟಿಸುತ್ತಾರೆ . ಸುಮಾರು ಸಂಜೆ 7ಗಂಟೆಗೆ ಡಾಕ್ಟರ್ ಹೇಳುತ್ತಾರೆ ‘ಎರಡನೇ ಟೆಸ್ಟ್ ಸಹ ಪಾಸಿಟಿವ್ ಬಂದಿದೆ .ಆದ್ದರಿಂದ ಅವರ ಮಿದುಳು ನಿಷ್ಕ್ರಿಯ ವಾಗಿರುತ್ತದೆ. ಬ್ರೇನ್ ‘dead’ ಅಂತ ಹೇಳಿ ,ಉಳಿದ ಅಂಗಾಂಗಗಳು ಈಗಲೂ ಸಹ ಕೆಲಸ ಮಾಡುತ್ತಿವೆ. ಕುಟುಂಬದವರು ಒಪ್ಪಿದರೆ ಅವರ ಅಂಗಾಂಗಗಳನ್ನು ದಾನ ಮಾಡಬಹುದು ಆ ಕ್ರಿಯೆ ಈಗಲೇ ಆಗಬೇಕು ಅಂತ ಹೇಳುತ್ತಾರೆ .ಅಂಗಾಂಗ ತೆಗೆಯುವ ಪ್ರಕ್ರಿಯೆಗಿಳಿದರೆ ಅವರು ನಿಧನರಾದರು ಅಂತ ಅರ್ಥ . ಆ ಪ್ರಕ್ರಿಯೆ ನಡೆಯದಿದ್ದರೆ ಅವರು ಜೀವಂತ ಅಂತ ಅರ್ಥ . ಉಸಿರು ನಿಲ್ಲುವವರೆಗೂ ನಾವು ಕಾಯಬೇಕಾಗುತ್ತದೆ ಅಂತ ಹೇಳುತ್ತಾರೆ .ನಂತರದಲ್ಲಿ ಕುಟುಂಬದವರು ಅಂಗಾಂಗ ದಾನ ಮಾಡಲು ಒಪ್ಪಿಗೆ ಕೊಡುತ್ತಾರೆ. ಅಂಗಾಂಗ ತೆಗೆಯುವ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಅಂದರೆ ವಿಜಯ್ ಅವರು ಸುಮಾರು ರಾತ್ರಿ ಒಂಭತ್ತೂವರೆಗೆ ನಿಧನರಾದರು ಅಂತ ತಿಳಿಯಬೇಕಾಗುತ್ತದೆ. ಅಷ್ಟರಲ್ಲಾಗಲೇ ಕೆಲವು ಗಣ್ಯರು ಸಂತಾಪ ಸೂಚಿಸಿ ಬಿಟ್ಟಿರುತ್ತಾರೆ.ಸಾವು ಅಂತಿಮ ಘಟ್ಟ ಆ ಸುದ್ದಿಯನ್ನು ಬಿತ್ತರಿಸುವಾಗ ತಾಳ್ಮೆ ಇರಬೇಕಾಗುತ್ತದೆ .

ಏನೇ ಆಗಲಿ ಇಂತಹ ಸಂದಿಗ್ದ ಪರಿಸ್ಥಿತಿಯಲ್ಲೂ ಅವರ ಕುಟುಂಬದವರು ಅಂಗಾಂಗಗಳನ್ನು ದಾನ ಮಾಡಲು ಒಪ್ಪಿಗೆ ಕೊಟ್ಟು, ವಿಜಯ್ ಅವರನ್ನು ಇನ್ನೂ ಹೆಚ್ಚಿನ ಗೌರವಕ್ಕೆ ತಂದು ನಿಲ್ಲಿಸುತ್ತಾರೆ.


  • ದೇವರಾಜಾಚಾರ್ , ಮೈಸೂರು

One thought on “ಸಾವಿನ ಸುದ್ದಿಯ ಸುತ್ತ”

  1. ಲೇಖನ ಪ್ರಕಟಿಸಿದ್ದಕ್ಕೆ ಧನ್ಯವಾದಗಳು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading