ನವಿಲೇನು ಕುಣಿಬೇಕು ಕೋಗಿಲೆಯು ಹಾಡಬೇಕು…ಅದಲು ಬದಲಾದರೆ ಕಲ್ಲಿನ ಕೋಳಿ ಕೂಗುತ್ತದೆ ಲೋಕಕ್ಕೆ ಪ್ರಳಯವಾಗುತ್ತದೆಯೋ ಗಟ್ಟಿಮೇಳ ಸಿನಿಮಾದ ಈ ಹಾಡು ಎಷ್ಟು ಅರ್ಥಪೂರ್ಣವಾಗಿದೆ ಅಲ್ವಾ. ಹಾಗೆ ಸಹಜ ಬದುಕಿನಲ್ಲಿ ವ್ಯಥೆಯವಾದರೆ ಬದುಕು ಹೇಗಾಗುತ್ತದೆ. ಲೇಖಕರಾದ ದೇವರಾಜ ಚಾರ್ ಅವರು ವಾಸ್ತವ ಸ್ಥಿತಿಯ ಕುರಿತು ಬರೆದ ಈ ಲೇಖನವನ್ನು ತಪ್ಪದೆ ಓದಿ…
- ಜನರಿಂದ ಆರಿಸಲ್ಪಟ್ಟ ವ್ಯಕ್ತಿ ಆಡಳಿತಗಾರನಾಗಿ, ವಿಶೇಷ ವ್ಯಕ್ತಿಯಾಗಿ, ದೇವರ ಗರ್ಭಗುಡಿಯಲ್ಲಿ ಕುಟುಂಬ ಸಮೇತ ಗಂಟೆಗೂ ಹೆಚ್ಚು ಧ್ಯಾನಿಸುವ, ಪೂಜಿಸುವ ಅವಕಾಶ ತನ್ನದಾಗಿಸಿಕೊಳ್ಳು ವುದು ಒಂದು ಕಡೆ. ಅದರಲ್ಲೂ ವರ್ಷಕ್ಕೊಮ್ಮೆ ತೆರೆಯುವ ದೇವಸ್ಥಾನದಲ್ಲಿ. ಇದು ಒಂದು ಕಡೆಯಾದರೆ ಜನಸಾಮಾನ್ಯನಾದವನು ಗಂಟೆಗಟ್ಟಲೆ ಸರದಿಯಲ್ಲಿ ನಿಂತು ದೇವರ ದರ್ಶನ ಇನ್ನೊಂದು ಕಡೆ.
- ಶ್ರೀಮಂತ ವ್ಯಕ್ತಿಯಿಂದ ತಿರುಪತಿ ತಿಮ್ಮಪ್ಪನಿಗೆ 121 ಕೆಜಿ ತೂಕದ ಚಿನ್ನಾಭರಣ, ಅಂದರೆ ಸುಮಾರು ನೂರ ಅರವತ್ತು ಕೋಟಿ ಬೆಲೆ ಬಾಳುವಂತಹದ್ದು. ಇನ್ನೊಂದು ಕಡೆ ಜನಸಾಮಾನ್ಯನೊಬ್ಬ ಇದೇ ತಿಮ್ಮಪ್ಪನ ದರ್ಶನಕ್ಕೆ ಹರಸಹಾಸ ಪಡಬೇಕು.
- ಇತ್ತೀಚಿಗೆ ಒಂದು ದೇವಸ್ಥಾನಕ್ಕೆ ಭೇಟಿಗೊಟ್ಟಾಗ ಅಲ್ಲಿಯ ಭಕ್ತರು ಬೆಲ್ಲದ ಅಚ್ಚುಗಳು ಮತ್ತು ಉಪ್ಪನ್ನು ದೇವರಿಗೆ ಕೈಮುಗಿದು ಹತ್ತಿರದಲ್ಲಿ ಹರಿಯುವ ತೊರೆಗೆ ಆ ಬೆಲ್ಲ ಮತ್ತು ಉಪ್ಪನ್ನು ಸಮರ್ಪಿಸಿ ಕೃತಾರ್ಥರಾದದ್ದು ಒಂದು ಕಡೆ. ಇದೆ ಬೆಲ್ಲ , ಉಪ್ಪು ಕರಗಿ ನೀರಾಗಿ ನದಿಯನ್ನು ಸೇರುತ್ತಿದ್ದದ್ದು ಇನ್ನೊಂದು ಕಡೆ. ಇದು ದೋಷ ಪರಿಹಾರಕ್ಕಾಗಿ ಈ ಅರ್ಪಣೆ ಎಂದು ಭಕ್ತರಿಂದ ತಿಳಿಯಿತು. ಮತ್ತೊಂದೆಡೆ ಪುಣ್ಯಕ್ಷೇತ್ರದಲ್ಲಿ ಹರಿಯುವ ನದಿಗಳ ಹತ್ತಿರ ಬಟ್ಟೆಗಳ ಸಮರ್ಪಣೆ.
- ಆಶಾ ಕಾರ್ಯಕರ್ತೆಯರು ತಮ್ಮ ವೇತನ ಹೆಚ್ಚಿಸಿಕೊಳ್ಳುವ ಸಲುವಾಗಿ ಚಳಿ, ಗಾಳಿ, ಮಳೆ ಲೆಕ್ಕಿಸದೆ ಮುಷ್ಕರ. ಈ ಮುಷ್ಕರ ಒಂದು ಕಡೆಯಾದರೆ, ಆಡಳಿತಗಾರರು ಈ ಮುಷ್ಕರವನ್ನು ಬೇರೆ ಬೇರೆ ರೀತಿ ವ್ಯಾಖ್ಯಾನ ಮಾಡುತ್ತಾರೆ. ಸರ್ಕಾರಕ್ಕೆ ಧಮ್ಕಿ ಹಾಕಬಾರದು, ನಮಗ್ ಬಿಡಿ ನಾವು ಏನಾದರೂ ಒಂದು ಮಾಡ್ತೀವಿ ಅನ್ನುವ ಭರವಸೆ. ಒತ್ತಡ ಹೇರಬೇಡಿ. ನೀವು ಇಲ್ಲಿ ಮುಷ್ಕರ ನಿರಂತರವಾಗಿದ್ದರೆ, ಯಾವ ಕೆಲಸವು ನಿಲ್ಲುವುದಿಲ್ಲ.ಅದರ ಪಾಡಿಗೆ ಅದು ಆಗ್ತಾ ಇರುತ್ತೆ.
- ಮದುವೆಯಾಗಿ ಗಂಡಿನ ಮನೆಯಲ್ಲಿ ಅಡಿಗೆ ಮಾಡಿಕೊಂಡು ಗಂಡ, ಮಕ್ಕಳು, ಅತ್ತೆ – ಮಾವರ ಸೇವೆ ಮಾಡಿಕೊಂಡು ಏಕೆ ಇರಬೇಕು. ಮದುವೆ ಆಗದೆ ತಂದೆ ತಾಯಿಗಳ ಜೊತೆ ಇದ್ದು ದೇಶ ಸುತ್ತಿ ಆರಾಮವಾಗಿರಬಹುದು ಎನ್ನುವ ಆಲೋಚನೆ ಇಂದಿನ ಮಹಿಳೆಯರಿಗೆ.
- ಸಾಲ ಮಾಡಿಯಾದರೂ ತುಪ್ಪ ತಿನ್ನೋ ಎನ್ನುವ ಗಾದೇ ಅಂತೆ. ದೇಶ ಸಾಲ ಮಾಡುವುದಕ್ಕೆ ಎದುರುವುದಿಲ್ಲ.
- ಅದ್ದೂರಿ ಮದುವೆ ಸಮಾರಂಭಗಳಿಂದ, ಹಲವಾರು ಕೈಗಳಿಗೆ ಕೆಲಸ ಸಿಗುವುದು ಸತ್ಯ. ಅದೇ ರೀತಿ ತಿನ್ನಿಸುಗಳು ಊಟದ ಎಲೆಗಳಲ್ಲಿ ಉಳಿಯುವುದು ಸತ್ಯ.
- ಲೋಕಾಯುಕ್ತದವರು ತಮ್ಮ ಸಂಪಾದನೆಗೂ ಮೀರಿದ ಆಸ್ತಿ ಮಾಡಿದವರನ್ನು ಹಿಡಿದು ಅವರಲ್ಲಿರುವ ಆಸ್ತಿ, ಹಣ, ಚಿನ್ನದ ಲೆಕ್ಕ ಕೊಡುತ್ತಾರೆ. ವರದಿ ನೋಡುವುದಕ್ಕೆ, ಕೇಳುವುದಕ್ಕಷ್ಟೇ ಚೆಂದ. ನಂತರದ ಕಥೆ ಪ್ರಚಾರವಾಗುವುದಿಲ್ಲ.
- ದಿನಕ್ಕೊಂದು ಹೇಳಿಕೆ ಕೊಡುವ ರಾಜಕಾರಣಿಗಳು ಒಂದು ಕಡೆ, ಅದನ್ನು ವೈಭವದಿಂದ ಪ್ರಚಾರ ಮಾಡುವ ವರದಿಗಾರರು ಇನ್ನೊಂದು ಕಡೆ. ರಾಜಕಾರಣಿಗಳ ಹೇಳಿಕೆ ಅಸಂಬದ್ಧವಾಗಿ ಇದ್ದರೆ, ಸಾಮಾನ್ಯ ಜನರು ಪ್ರತಿಕ್ರಿಯೆಸಿದರೆ, ಅದೇ ರಾಜಕಾರಣಿಗಳು ಹೇಳುವುದು ಒಂದೇ ಕಾರಣ, ನಾನೇನು ಹೇಳಿದೆ. ಅವರು ಬೇರೆ ರೀತಿ ಪದಬಳಕೆ ಮಾಡಿದರೆ, ತಿರುಚಿ ಬರೆದರೆ ನಾನೇನು ಮಾಡಲಿ ಅಂತ ಮುಖ ತಿರುಗಿಸುತ್ತಾರೆ. ವಿಪರ್ಯಾಸ ಅಂದರೆ ಆ ವರದಿಗಾರರು ಅದನ್ನು ಸಹ ಪ್ರಚಾರ ಮಾಡುತ್ತಾರೆ. ಇಲ್ಲ ನೀವು ಈ ರೀತಿ ಹೇಳಿದ್ದೀರಿ ಅಂತ ಕನ್ನಡಿ ಹಿಡಿಯುವ ವರದಿಗಾರ ಇನ್ನೂ ಹುಟ್ಟಿಲ್ಲ.
- ಒಂದು ದುರ್ಘಟನೆಗೆ ಸಾಕ್ಷಿಯಾಗಿ ಕೆಲವರನ್ನು ಹಿಡಿದಿಟ್ಟುಕೊಳ್ಳುತ್ತಾರೆ. ಕೋರ್ಟ್ ನಲ್ಲಿ ವಾದವಿವಾದ ಆಗುವಾಗ ಇದೇ ಸಾಕ್ಷಿಗಳು ಮೊದಲು ನುಡಿದಿದ್ದನ್ನೇ ಮತ್ತೆ ನುಡಿಯುತ್ತಾರ? ಈ ವಿಷಯದಲ್ಲಿ ಇತ್ತೀಚಿಗೆ ಗೊಂದಲಗಳು ಶುರುವಾಗಿದೆ. ಇತ್ತೀಚಿನ ದಿನಗಳಲ್ಲಿ ಸಾಕ್ಷಿಗಳು ಬದಲಾಗಿ ಮಾಫಿ ಸಾಕ್ಷಿದಾರರಾಗಿ ಬದಲಾಗುತ್ತಾರೆ. ಆದರೆ ವಿಚಾರಣೆ ನಡೆಯುವಾಗ ತಮ್ಮ ಮೊದಲಿನ ಹೇಳಿಕೆಯನ್ನು ಬದಲಾಯಿಸಿಕೊಳ್ಳುತ್ತಾರೆ. ಈ ದ್ವಂದ್ವ ನಿಲುವಿಗೆ ಯಾರು ಹೊಣೆ ಗೊತ್ತಿಲ್ಲ.
- ದೇವರಾಜ ಚಾರ್, ಕೆಪಿಸಿಎಲ್ ನಿವೃತ್ತ ಅಧಿಕಾರಿಗಳು, ಮೈಸೂರು.
